ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಅವೈಜ್ಞಾನಿಕವಾಗಿದೆ, ಸಂಸದೆ ಸುಮಲತಾ ಆರೋಪ
ನವದೆಹಲಿ, ಡಿಸೆಂಬರ್, 22: ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಕಾಮಗಾರಿಯು ಅವೈಜ್ಞಾನಿಕವಾಗಿದೆ. ಮತ್ತು ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಲೋಕಸಭೆಯಲ್ಲಿ ಆರೋಪಿಸಿದ್ದರು.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಮಲತಾ, ಮೈಸೂರು ಮತ್ತು ಬೆಂಗಳೂರು ನಡುವಿನ ಪ್ರಯಾಣದ ಅವಧಿ ಕಡಿತ ಮಾಡುವ ಉದ್ದೇಶದಿಂದ ದಶಪಥ ಹೆದ್ದಾರಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮಂಡ್ಯ ಕ್ಷೇತ್ರದ ಮೂಲಕವೂ ಈ ಹೆದ್ದಾರಿ ಹಾದು ಹೋಗುತ್ತದೆ. ಆದರೆ, ಇತ್ತೀಚೆಗಷ್ಟೇ ಭಾರಿ ಮಳೆ ಸುರಿದ ಕಾರಣ ಸಾಕಷ್ಟು ಅನಾಹುತಗಳು ಸಂಭವಿಸಿದೆ ಎಂದರು. ರಸ್ತೆಗೆ ಹಾಕಲಾಗಿದ್ದ ಡಾಂಬರು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಗುಣಮಟ್ಟದ ರಸ್ತೆಯನ್ನು ನಿರ್ಮಿಸಿಲ್ಲ ಎಂದು ದೂರಿದರು.
ಅವೈಜ್ಞಾನಿಕ ಕಾಮಗಾರಿ, ಸುಮಲತಾ ಆರೋಪ
ಅವೈಜ್ಞಾನಿಕ ವಿಧಾನದಲ್ಲಿ ಕಾಮಗಾರಿಯನ್ನಯ ಕೈಗೊಂಡಿದ್ದಾರೆ. ರಸ್ತೆ ಅಕ್ಕಪಕ್ಕದಲ್ಲಿರುವ ಚರಂಡಿಗಳ ಕಾಮಗಾರಿಯನ್ನೂ ಕೂಡ ಅವೈಜ್ಞಾನಿಕವಾಗಿ ಮಾಡಲಾಗಿದೆ. ಇದರಿಂದ ರೈತರ ಸಾವಿರಾರು ಹೆಕ್ಟೇರ್ ಬೆಳೆಗಳು ನಾಶವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಈ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕೇಂದ್ರದ ಸಚಿವರು ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಂಡ್ಯ ಆಗ್ರಹಿಸಿದರು.

ಜನವರಿ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತ
ಹೊಸದಾಗಿ ನಿರ್ಮಾಣವಾಗಿರುವ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಗೆ ಕಾವೇರಿ ಎಕ್ಸ್‌ಪ್ರೆಸ್ ವೇ ಎಂದು ಹೆಸರಿಸುವಂತೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದರು. ಮೈಸೂರು-ಬೆಂಗಳೂರು 10 ಲೇನ್‌ಗಳ ಎಕ್ಸ್‌ಪ್ರೆಸ್ ಹೆದ್ದಾರಿಗೆ ಕಾವೇರಿ ಎಕ್ಸ್‌ಪ್ರೆಸ್ ವೇ ಎಂದು ಹೆಸರಿಸುವಂತೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ದಶಪಥ ಎಕ್ಸ್‌ಪ್ರೆಸ್ ಹೈವೇ ಜನವರಿ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತವಾಗಲಿದ್ದು, ಮಾರ್ಚ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.
ದಶಪಥ ರಾಷ್ಟ್ರೀಯ ಹೆದ್ದಾರಿಗೆ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಎಂದೇ ಕರೆಯಲಾಗುತ್ತಿದೆ. ಹೀಗಾಗಿ ಇದಕ್ಕೆ ಕಾವೇರಿ ಎಕ್ಸ್‌ಪ್ರೆಸ್ ವೇ ಎಂದು ಹೆಸರಿಸಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಇನ್ನು, ಹೆದ್ದಾರಿ ನಿರ್ಮಾಣ ಕಾರ್ಯದಿಂದಾಗಿ ಎಕ್ಸ್‌ಪ್ರೆಸ್‌ವೇ ಹಾದುಹೋಗುವ ಹಳ್ಳಿಗಳು ಮತ್ತು ನಗರ ಪ್ರದೇಶಗಳೆರಡರಲ್ಲೂ ಆಸ್ತಿಯ ಮೌಲ್ಯ ಹೆಚ್ಚಾಗಿದೆ. ಜೊತೆಗೆ ರಾಮನಗರ, ಚನ್ನಪಟ್ಟಣದಂತಹ ನಗರಗಳಲ್ಲಿ ಬಾಡಿಗೆ ಮೌಲ್ಯವೂ ಹೆಚ್ಚಾಗಿದೆ.

ಎಕ್ಸ್‌ಪ್ರೆಸ್ ವೇ ಕಾಮಗಾರಿಗೆ ತಗಲುವ ವೆಚ್ಚ?
ಮೈಸೂರು - ಬೆಂಗಳೂರಿನ ಎಕ್ಸ್‌ಪ್ರೆಸ್ ವೇ ಯೋಜನೆ ಘೋಷಿಸಿ ಅಂದಾಜು ನಾಲ್ಕು ವರ್ಷ ಕಳೆದಿವೆ. ಕುತೂಹಲ ಕೆರಳಿಸಿದ್ದ ಈ ರಾಷ್ಟ್ರೀಯ ಹೆದ್ದಾರಿ ನವೀಕರಣ ಯೋಜನೆಯನ್ನು ಅಂದಾಜು 2,919 ಕೋಟಿ ರೂಪಾಯಿಯಲ್ಲಿ ಮುಗಿಸಲು ತೀರ್ಮಾನಿಸಿದ್ದು, ಈ ಪೈಕಿ ಈಗಾಗಲೇ 1,939 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಸಂಸತ್ತಿಗೆ ಕೇಂದ್ರ ಸಚಿವರು ವಿವರಿಸಿದ್ದರು. ಈ ಹೆದ್ದಾರಿಯಿಂದಾಗಿ ಮೈಸೂರು - ಬೆಂಗಳೂರು ಮಧ್ಯದ ಸುಮಾರು 140 ಕಿ.ಮೀ. ದೂರದ ಪ್ರಯಾಣ ವ್ಯಾಪ್ತಿಯನ್ನು ಕೇವಲ 90 ನಿಮಿಷದಲ್ಲಿ ಕ್ರಮಿಸಬಹುದಾಗಿದೆ. ಸದ್ಯ ಇವೆರಡು ನಗರದ ನಡುವಿನ ಸಂಚಾರ ಸಮಯ ಮೂರು ಗಂಟೆ ಹಿಡಿಯುತ್ತಿದೆ. ಕಾಮಗಾರಿ ಬಳಿಕ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ ಆಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಈ ಹಿಂದೆ ತಿಳಿಸಿದ್ದರು.












Click it and Unblock the Notifications