ಮಂಡ್ಯದಲ್ಲಿ ಜೂನ್ 7ರಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯ, ಫೆಬ್ರವರಿ 04: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನು ಮುಂದೂಡಿಕೆ ಮಾಡಲಾಗಿತ್ತು.
2024ರ ಜೂನ್ 7, 8 ಮತ್ತು 9ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಪಿ. ಎಂ. ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳಿಂದ ಸಭೆ; 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಪೂರ್ವಭಾವಿ ಸಭೆಯನ್ನು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ನಡೆಸಿದರು. "ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನತೆಯ ಸಹಕಾರ ಮುಖ್ಯ ಆದ್ದರಿಂದ ಪ್ರತಿಯೊಬ್ಬರು ಸಹ ಭಾಗವಹಿಸಿ ಸಹಕಾರ ನೀಡಿ" ಎಂದು ತಿಳಿಸಿದರು.
"ಸಮ್ಮೇಳನ ಯಶಸ್ವಿಯಾಗಿ ನಡೆಸಲು ಜಿಲ್ಲೆಯ ಹಿರಿಯ ಸಾಹಿತಿಗಳು, ಕನ್ನಡ ಅಭಿಮಾನಿಗಳು, ಸಾಹಿತ್ಯ ಪ್ರೇಮಿಗಳು, ಜನಪ್ರತಿನಿಧಿಗಳು, ಹಿರಿಯ ಸಾಹಿತ್ಯಾಸಕ್ತರ ಪಾಲ್ಗೊಳ್ಳುವಿಕೆ ಅಮೂಲ್ಯವಾಗಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ಸಾಹಿತ್ಯ ಪರಿಷತ್ತಿನ ಸಲಹೆಗಳೊಂದಿಗೆ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರನ್ನೂ ಒಳಗೊಂಡಂತೆ 25 ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ" ಎಂದರು.
"ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಉತ್ತಮವಾದ ಸ್ಥಳವನ್ನು ಸದ್ಯದಲ್ಲೇ ನಿಗದಿಮಾಡಿ ತಿಳಿಸುತ್ತೇವೆ. ಹಿರಿಯ ಸಾಹಿತ್ಯ ದಿಗ್ಗಜರಿಗೆಲ್ಲ ಆಹ್ವಾನ ನೀಡಬೇಕು. ನಗರದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ನಗರವನ್ನು ಸ್ವಚ್ಚವಾಗಿಸಬೇಕು ಸಮ್ಮೇಳನಕ್ಕೆ ಬಂದ ಪ್ರತಿಯೊಬ್ಬರಿಗೂ ಸಹ ಯಾವುದೇ ಲೋಪದೋಷವಾಗದಂತೆ ನೋಡಿಕೊಳ್ಳುತ್ತೇವೆ. ಆದ್ದರಿಂದ ಜನತೆಯ ಸಹಕಾರ ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರು ಸಹ ಭಾಗವಹಿಸಿ" ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜ್ ಮಾತನಾಡಿ, "ಪ್ರತಿಯೊಬ್ಬರಿಗೂ ಸಮನಾಂತರ ವೇದಿಕೆ ಕಲ್ಪಿಸಿ ಕೊಡಬೇಕು. ಮಂಡ್ಯ ಜಿಲ್ಲೆ ಮಾತ್ರವಲ್ಲದೆ ಬೇರೆ ಬೇರೆ ಕಡೆಯ ಸಾಹಿತ್ಯ ದಿಗ್ಗಜರು ಭಾಗವಹಿಸುತ್ತಾರೆ. ಖಾಸಗಿ ಸಂಘಟನೆಗಳು ಮಾತ್ರವಲ್ಲದೆ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನೆಲ್ಲಾ ಕರೆಯಬೇಕು, ಸಂಸ್ಕೃತಿ, ಸಂಪ್ರದಾಯಕ್ಕೆ ಯಾವುದೇ ತರಹ ಧಕ್ಕೆ ಉಂಟಾಗದಂತೆ ಹಾಗೂ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲವಾಗದಂತೆ ಸಮ್ಮೇಳನ ನಡೆಸುತ್ತೇವೆ" ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಎನ್ನುವುದಕ್ಕಿಂತ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಜಿಲ್ಲಾಡಳಿತದ ಸಹಕಾರದೊಂದಿಗೆ ಸಮ್ಮೇಳನ ಆಯೋಜಿಸಬೇಕು ಹಾಗೂ ಕನ್ನಡ ಸಂಘಟನೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಚರ್ಚೆ ನಡೆದಿತ್ತು.
ಜೂನ್ ಮೊದಲನೇ ವಾರದಲ್ಲಿ ಸಮ್ಮೇಳನ ಆಯೋಜಿಸಬೇಕು, ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಹಿರಿಯರು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದವರನ್ನು ಪರಿಗಣಿಸಬೇಕು ಎಂದು ಚರ್ಚೆಯಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 30 ಕೋಟಿ ರೂ.ಗಳ ಅನುದಾನ ಒದಗಿಸಲು ಪರಿಷತ್ ಅಧ್ಯಕ್ಷರು ಮನವಿ ಸಲ್ಲಿಸಿದ್ದರು.
ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ದಿನಾಂಕವನ್ನು ನಿಗದಿ ಮಾಡಿರಲಿಲ್ಲ. 20222ರ ಸೆಪ್ಟೆಂಬರ್‌ನಲ್ಲಿ ಸಮ್ಮೇಳನ ನಡೆಸಲು ಮೊದಲು ಅಂದಾಜು ದಿನಾಂಕ ನಿಗದಿ ಮಾಡಲಾಯಿತು. ಬಳಿಕ ರಾಜ್ಯದಲ್ಲಿನ ಬರ ಪರಿಸ್ಥಿತಿ ಕಾರಣ ಅದನ್ನು ಮುಂದೂಡಿಕೆ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, "ರೈತ ಸಂಕಟದಲ್ಲಿ ಇರುವಾಗ ಸಂತಸ ಆಚರಿಸುವ ಸಮ್ಮೇಳನಕ್ಕೆ ಅರ್ಥವೇ ಇಲ್ಲ. ರಾಜ್ಯದಲ್ಲಿ ಭೂಮಿ ನೀರಿಲ್ಲದೇ ಬಾಯ್ದೆರೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಅಕ್ಷರ ಜಾತ್ರೆಯನ್ನು ನಡೆಸುವುದು ಸಮರ್ಪಕವಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳನ್ನು ಬರಗಾಲ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಬರಗಾಲದಲ್ಲಿ ಅದ್ದೂರಿ ಸಮ್ಮೇಳನಗಳನ್ನು ಮಾಡುವ ಅವಶ್ಯಕತೆ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ" ಎಂದು ಹೇಳಿದ್ದರು.












Click it and Unblock the Notifications