ಚರಂಡಿ ಕಾಮಗಾರಿ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಪಿಡಿಒಗೆ 10 ಸಾವಿರ ರೂ ದಂಡ
ಮಂಡ್ಯ, ಮೇ 20: ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸಿದ ಬೂದನೂರು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ 10 ಸಾವಿರ ದಂಡ ವಿಧಿಸಿ ಮಂಡ್ಯ ಜಿಲ್ಲಾ ಪಂಚಾಯತ್ ದೂರು ನಿವಾರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.
ಪ್ರಾಧಿಕಾರದ ಅಧ್ಯಕ್ಷ ಕೆ.ಕರಿಯಪ್ಪ ಅವರು, ಪಿಡಿಒ ವಿನಯ್ ಕುಮಾರ್ ಅವರಿಗೆ ದಂಡ ವಿಧಿಸಿದ್ದು, 30 ದಿನದೊಳಗೆ ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಸೂಚಿಸಿದ್ದಾರೆ.

ತಮ್ಮ ಮನೆ ಬಳಿ ಚರಂಡಿ ಕಾಮಗಾರಿ ಕೈಗೊಂಡಿದ್ದು, ಪೂರ್ಣಗೊಳಿಸದೆ ನೀರು ಸರಾಗವಾಗಿ ಹರಿಯದೇ ನಿಂತು ರೋಗ-ರುಜಿನಗಳಿಗೆ ಕಾರಣವಾಗಿದೆ ಎಂದು ಗ್ರಾಮದ ಬಿ.ಎಸ್.ಚಂದ್ರಶೇಖರ ಎನ್ನುವವರು ದೂರು ಸಲ್ಲಿಸಿದ್ದರು.
ಸದರಿ ವಿಚಾರವಾಗಿ ಮಹಾತ್ಮ ಗಾಂಧಿ ನರೇಗಾ ಹಾಗೂ 13ನೇ ಹಣಕಾಸು ಯೋಜನೆಯಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಸದಸ್ಯರೊಬ್ಬರ ಅಕ್ಷೇಪಣೆ ಮುಂದಿಟ್ಟುಕೊಂಡು ಅನುಪಾಲನಾ ವರದಿಗೆ ತದ್ವಿರುದ್ಧವಾಗಿ ಹಾಗೂ ಉದ್ದೇಶಪೂರ್ವಕವಾಗಿ ಗ್ರಾಪಂ ಸಭೆಗೆ ತಪ್ಪು ಮಾಹಿತಿ ನೀಡಿದ್ದಲ್ಲದೆ ಪ್ರಾಧಿಕಾರದ ನಿರ್ದೇಶನವನ್ನು ನಿರ್ಲಕ್ಷ್ಯ ಮಾಡಿರುವುದಾಗಿ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಪ್ರಕರಣ 296(ಎ)ಯ ಉಪ ಪ್ರಕರಣ (7) ರಡಿಯಲ್ಲಿ ಪಿಡಿಒ ನಿರ್ವಹಿಸಬೇಕಾದ ಕರ್ತವ್ಯವನ್ನು ಕಡೆಗಣಿಸಿರುವುದು ಹಾಗೂ ನಿರಾಕರಿಸಿ, ನಿಗದಿತ ಸಮಯದೊಳಗೆ ಅನುಷ್ಠಾನ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಳಂಬ ಮಾಡಿದ್ದಾರೆ. ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಬೂದನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ್ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, 30 ದಿನಗಳೊಳಗೆ ದಂಡದ ಹಣವನ್ನು ಜಿಲ್ಲಾ ಪಂಚಾಯತ್‌ನ ಲೆಕ್ಕ ಶೀರ್ಷಿಕೆಗೆ ಪಾವತಿ ಮಾಡಬೇಕು ಎಂದು ಪ್ರಾಧಿಕಾರ ಸೂಚನೆ ನೀಡಿದೆ ಎನ್ನಲಾಗಿದೆ.












Click it and Unblock the Notifications