ಕೊಡಗಿನ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸಕ್ತಿ ಇದೆಯಾ..? ಇಲ್ಲಿಗೆ ನಿಮಗೆ ಸುವರ್ಣಾವಕಾಶ
ಮಡಿಕೇರಿ, ಜುಲೈ 19: ಕೊಡಗಿನಲ್ಲಿ ಬಿಡುವಿಲ್ಲದ ಮಳೆ ಸುರಿಯುತ್ತಿದೆ. ಇದರ ನಡುವೆಯೇ ಕ್ರೀಡಾ ಪ್ರೇಮಿಗಳು ಮಳೆಗಾಲದ ಕೆಸರುಗದ್ದೆ ಕ್ರೀಡಾಕೂಟಗಳಿಗೆ ಅಣಿಯಾಗುತ್ತಿದ್ದಾರೆ. ಸುರಿಯುವ ಮಳೆಯಲ್ಲಿ ಕೆಸರಿನ ಗದ್ದೆಯಲ್ಲಿ ವಿವಿಧ ಕ್ರೀಡೆಗಳನ್ನಾಡಿ ಕ್ರೀಡಾಪ್ರೇಮ ಮೆರೆಯುವುದು ಇಲ್ಲಿನವರಿಗೆ ರೂಢಿಗತವಾಗಿ ಬಂದಿದೆ. ಅದರಂತೆ ಈ ಬಾರಿ 32ನೇ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದಕ್ಕೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದಾದ್ಯಂತ ಆಸಕ್ತ ಕ್ರೀಡಾಪಟುಗಳಿಗೂ ಅವಕಾಶ ಮಾಡಿಕೊಡಲಾಗುತ್ತಿದೆ.
ಕೆಸರುಗದ್ದೆಯಲ್ಲಿ ಸುರಿಯುವ ಮಳೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ಇಚ್ಚಿಸುವವರು ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಈ ಕ್ರೀಡಾಕೂಟವನ್ನು ಕೊಡಗಿನ ಕೆಸರುಗದ್ದೆ ಒಲಂಪಿಕ್ಸ್ ಎಂದೇ ಕರೆಯಲಾಗುತ್ತಿದೆ. ಈ ಬಾರಿ ಕ್ರೀಡಾಕೂಟವು ಆಗಸ್ಟ್ .10ರಂದು ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮದ ದಿವಂಗತ ಸಿ.ಡಿ.ದೇವಯ್ಯ ಅವರ ಗದ್ದೆಯಲ್ಲಿ ಬೆಳಗ್ಗೆ 9.30 ರಿಂದ ಸಂಜೆ ತನಕ ನಡೆಯಲಿವೆ.

ರಾಜ್ಯಮಟ್ಟದ ಈ ಕ್ರೀಡಾಕೂಟವನ್ನು ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ.
ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು
ಇನ್ನು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಏನೇನು ಸ್ಪರ್ಧೆಗಳಿವೆ ಎಂಬುದನ್ನು ನೋಡುವುದಾದರೆ, ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ (9 ಜನರ ತಂಡ), ಸಾರ್ವಜನಿಕ ಪುರುಷರ ವಾಲಿಬಾಲ್ (4 ಜನರ ತಂಡ), ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್ (6 ಜನರ ತಂಡ), ಪ್ರೌಢ ಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ (6 ಜನರ ತಂಡ), ಬಾಲಕರ ಹಗ್ಗಜಗ್ಗಾಟ ಪಂದ್ಯಾವಳಿ (7 ಜನರ ತಂಡ) ಸ್ಪರ್ಧೆ ನಡೆಯಲಿದ್ದು, ಇದಕ್ಕೆ ತಂಡಗಳಾಗಿ ಭಾಗವಹಿಸಬಹುದಾಗಿದೆ.
ಇದಲ್ಲದೆ, ಮಧ್ಯಾಹ್ನ 1 ಗಂಟೆಗೆ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಲಿದ್ದು, ಕಿರಿಯ ಪಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 50ಮೀ ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 100ಮೀ ಓಟ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ 200 ಮೀ. ಓಟ, ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ 400 ಮೀ. ಓಟ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಯುವಕ, ಯುವತಿಯರಿಗೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ 400 ಮೀ. ಓಟದ ಸ್ಪರ್ಧೆ ನಡೆಯಲಿದೆ.

ದಂಪತಿಗಳಿಗೂ ವಿಶೇಷ ಸ್ಪರ್ಧೆ
ವಿಶೇಷವಾಗಿ ದಂಪತಿಗಳಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ 200 ಮೀ. ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ನಡೆಯಲಿದ್ದು, ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಹಗ್ಗ-ಜಗ್ಗಾಟ ಸಾರ್ವಜನಿಕ ಪುರುಷರ ಹಾಗೂ ಮಹಿಳೆಯರ ವಿಭಾಗಕ್ಕೆ, ವಾಲಿಬಾಲ್ ಮತ್ತು ಥ್ರೋಬಾಲ್ ತಂಡಗಳಿಗೆ ತಲಾ ರೂ. 1,000 ಮೈದಾನ ಶುಲ್ಕ ನಿಗಧಿಪಡಿಸಲಾಗಿದ್ದು, ಆಸಕ್ತರು ಆ.5 ರ ಅಪರಾಹ್ನ 5 ಗಂಟೆಯೊಳಗೆ ತಂಡದ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸುಕುಮಾರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವ ತಂಡಗಳಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಓಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪಾರಿತೋಷಕ ಮತ್ತು ಪ್ರಶಂಸನಾ ಪತ್ರ ನೀಡಲಾಗುತ್ತದೆ. ಪಂದ್ಯಾವಳಿಯ ನೋಂದಾವಣೆ ಮತ್ತು ಮಾಹಿತಿಗಾಗಿ ನವೀನ್ ದೇರಳ- 9740404520 (ಹಗ್ಗ ಜಗ್ಗಾಟ), ಕೆ.ಎಂ.ಮೋಹನ್- 9483008381 (ವಾಲಿಬಾಲ್), ಪಿ.ಪಿ.ಸುಕುಮಾರ್-94812 13920, ಬಾಳಾಡಿ ದಿಲೀಪ್-8618568173, ಕುಂಜಿಲನ ಎಂ.ಮೋಹನ್-9480646382, ಜಯಕುಮಾರ್-9741845950 ಸಂಪರ್ಕಿಸಬಹುದಾಗಿದೆ












Click it and Unblock the Notifications