ನೀತಿ ಸಂಹಿತೆ ಉಲ್ಲಂಘನೆ; ವಾಟ್ಸಪ್ ಗ್ರೂಪ್ ಅಡ್ಮಿನ್‌ಗೆ ನೋಟಿಸ್
ಮಡಿಕೇರಿ, ಏಪ್ರಿಲ್ 02; ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ವೇಳಾಪಟ್ಟಿ ಪ್ರಕಟವಾದ ಬಳಿಕ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 10ರ ಬುಧವಾರ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಮಡಿಕೇರಿ ವಿಧಾನಸಭಾ ಕೇತ್ರದ ಚುನಾವಣಾಧಿಕಾರಿ ಮತ್ತು ಮಡಿಕೇರಿ ವಿಭಾಗದ ಉಪವಿಭಾಗಾಧಿಕಾರಿ ವಾಟ್ಸಪ್ ಗ್ರೂಪ್‌ನ ಅಡ್ಮಿನ್‌ಗೆ ನೋಟಿಸ್ ನೀಡಿದ್ದಾರೆ. 'ನಮ್ಮ ಕುಶಾಲನಗರ' ಎಂಬ ವಾಟ್ಸಪ್ ಗ್ರೂಪ್ ಅಡ್ಮಿನ್ ವಿ. ಪಿ. ಶಶಿಧರ್, 4ನೇ ಬ್ಲಾಕ್, ರಾಧಾಕೃಷ್ಣ ಲೇಔಟ್, ಕುಶಾಲನಗರ ತಾಲೂಕು ಇವರಿಗೆ ನೋಟಿಸ್ ಕೊಡಲಾಗಿದೆ.

ನೋಟಿಸ್‌ನಲ್ಲಿ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ವೇಳಾಪಟ್ಟಿಯನ್ನು ನಿಗದಿಪಡಿಸಿ ಪ್ರಕಟಣೆ ಹೊರಡಿಸಲಾಗಿದ್ದು, ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆಯು ಅನುಷ್ಠಾನಗೊಂಡಿರುತ್ತದೆ. ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುವ ಸಂದರ್ಭ ಪತ್ರಿಕೆ, ಮಾದ್ಯಮ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಮೂಲಗಳಿಂದ ಯಾವುದೇ ರಾಜಕೀಯ ಪ್ರಚಾರ ಮಾಡಬೇಕಾದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೇಮಕ ಮಾಡಲಾಗಿರುವ Media Certification and Monitoring Committe ಇವರಿಂದ ಪೂರ್ವ ಅನುಮತಿ ಪಡೆಯಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.
ನೀವು ಅಡ್ಮಿನ್ ಆಗಿರುವ 'ನಮ್ಮ ಕುಶಾಲನಗರ' ವಾಟ್ಸ್‌ಆಪ್ ಗ್ರೂಪ್ ಮೂಲಕ ಯಾವುದೇ ಪೂರ್ವ ಅನುಮತಿ ಪಡೆಯದೇ ರಾಜಕೀಯ ಪ್ರೇರಿತ ಹೇಳಿಕೆಯ ವಿಡಿಯೋ ತುಣುಕನ್ನು ಹಂಚಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ರೀತ್ಯ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟಿಸ್ ತಲುಪಿದ 24 ಗಂಟೆಯೊಳಗಾಗಿ ಖುದ್ದು ಲಿಖಿತ ಸಮಜಾಯಿಷಿಯನ್ನು ನೀಡಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ನಿಯಮ ಹೇಳುವುದು ಏನು?; ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂದಿಸಿದಂತೆ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದಲ್ಲಿ ಸಂಬಂಧಪಟ್ಟವರ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುತ್ತದೆ.

ಜಾಹೀರಾತುಗಳ ಪ್ರಕಟಣೆ ಬಗ್ಗೆ ಅನುಮತಿ ಪಡೆಯುವ ಕುರಿತಂತೆ, ಜಿಲ್ಲಾ ಎಂಸಿಎಂಸಿ ಸಮಿತಿಗೆ ಜಾಹೀರಾತು ಪ್ರಕಟಣೆ ಕೋರಿ ಲಿಖಿತ ಅರ್ಜಿಯನ್ನು ಸಲ್ಲಿಸಿ, ಅಗತ್ಯ ಅನುಮತಿ ಪಡೆದ ನಂತರವೇ ಜಾಹೀರಾತು ಪ್ರಕಟಿಸಬೇಕು. ಚುನಾವಣಾ ಪ್ರಚಾರಕ್ಕಾಗಿ ಮುದ್ರಿಸುವ ಕರಪತ್ರಗಳ ಮೇಲೆ ಅದನ್ನು ಮುದ್ರಣ ಮಾಡಿದ ಮುದ್ರಕರ ಹೆಸರು, ವಿಳಾಸ ಹಾಗೂ ಪ್ರತಿಗಳ ಸಂಖ್ಯೆ ಸೇರಿದಂತೆ ಮತ್ತಿತರ ವಿಷಯಗಳನ್ನು ಕಡ್ಡಾಯವಾಗಿ ಮುದ್ರಿಸಬೇಕು.
ಮುದ್ರಣ ಕುರಿತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3 ದಿನಗಳ ಒಳಗಾಗಿ ಹಾಗೂ ಸಾಮಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದರ ಉಲ್ಲಂಘನೆಯು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications