ಈ ಬಾರಿ ಸಚಿವ ಸಂಪುಟ ಕೊಡಗು ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದೆ- ಸಚಿವ ಶರಣ್ ಪ್ರಕಾಶ್ ಪಾಟೀಲ್
ಮಡಿಕೇರಿ, ಸೆಪ್ಟೆಂಬರ್ 30: ಕೊಡಗು ಜಿಲ್ಲೆಯನ್ನು ತಾವು ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸಚಿವ ಸಂಪುಟವೇ ಗಂಭೀರವಾಗಿ ಪರಿಗಣಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಕೊಡಗಿನ ಜನರಿಗೆ ಸ್ಪಷ್ಟಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಜನತೆಯ ಬಹುಕಾಲದ ಆಶಯಗಳಲ್ಲಿ ಒಂದಾಗಿದ್ದ ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅತ್ಯಂತ ಕ್ರಿಯಾಶೀಲರಾಗಿ ಕೆಲಸಮಾಡುತ್ತಿರುವ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಅವರ ಮೇಲೆ ಅಪಾರ ಭರವಸೆಯನ್ನು ಸಂಪೂರ್ಣ ಮಂತ್ರಿಮಂಡಲವೇ ಹೊಂದಿದೆ. ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಮಾಡುವುದಾಗಿ ಭರವಸೆ ನೀಡಿದರು. ತಕ್ಷಣವೇ ತಜ್ಞ ವೈದ್ಯರ ಮತ್ತು ತಾಂತ್ರಿಕ ಸಿಬ್ಬಂದಿಯ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾರ್ಚ್ ತಿಂಗಳಿನಲ್ಲಿ ಬೇರೆ ಜಿಲ್ಲೆಗೆ ಒದಗಿಸಲು ನಿರ್ಧರಿಸಲಾಗಿದ್ದ ಎಂ.ಆರ್.ಐ ಘಟಕವನ್ನು ಶಾಸಕರಾದ ಡಾ ಮಂತರ್ ಗೌಡ ರವರ ಒತ್ತಾಯ ಹಾಗೂ ಕೋರಿಕೆಗೆ ಮಣಿದು ಕೊಡಗು ಜಿಲ್ಲೆಗೆ ನೀಡಲಾಯಿತು ಎಂದು ಮಾಹಿತಿ ನೀಡಿದ ಅವರು, ಹೊಸ ಕಟ್ಟಡದಲ್ಲಿ ಸೌಲಭ್ಯ ಕಲ್ಪಿಸಲು 60 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ, ನಾವು ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಖಾಸಗಿ ಸಂಸ್ಥೆ ಎಂ.ಆರ್.ಐ ಸೇರಿದಂತೆ ಸುಸಜ್ಜಿತ ತಪಾಸಣೆ ಲ್ಯಾಬ್ ಸ್ಥಾಪನೆಯ ಆಫರ್ ಇಟ್ಟಾಗ ಅದರಿಂದ ಮಧ್ಯಮ ವರ್ಗ ಹಾಗೂ ಬಡವರಿಗೆ ಪ್ರಯೋಜನವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಬರುವಂತೆ ಸರ್ಕಾರಿ ಆಸ್ಪತ್ರೆಗೆ ತರಬೇಕು ಎಂದು ಚಿಂತನೆ ನಡೆಸಿದ್ದೆ. ಈಗ ಆ ಕಾರ್ಯದಲ್ಲಿ ಯಶಸ್ವಿಯಾಗಿರುವುದು ತೃಪ್ತಿ ತಂದಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಸ್ವತಃ ವೈದ್ಯರಾಗಿರುವ ಡಾ ಮಂತರ್ ಗೌಡ ರವರು ಕೊಡಗಿನ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮುತುರ್ವರ್ಜಿಯಿಂದ ಸುಧಾರಣೆ ತರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ ಅಭಿವೃದ್ದಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದು ಎರಡೂ ಕ್ಷೇತ್ರದ ಅಭಿವೃದ್ಧಿ ನಿರೀಕ್ಷೆಗೂ ಮೀರಿ ನಡೆಯಲಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ವೈದ್ಯಕೀಯ ಕಾಲೇಜ್ ನಿರ್ದೇಶಕ ವಿಶಾಲ್, ಮಾಜಿ ಶಾಸಕಿ ವೀಣಾ ಅಚ್ಚಯ್ಯ , ಪ್ರಮುಖರಾದ ಕೆ.ಪಿ.ಚಂದ್ರಕಲಾ, ಹೆಚ್.ಎಸ್.ಚಂದ್ರಮೌಳಿ, ವಿ.ಪಿ.ಶಶಿಧರ್, ರಾಜೇಶ್ ಯಲ್ಲಪ್ಪ, ಹೆಚ್.ಎ.ಹಂಸ, ತೆನ್ನಿರ ಮೈನಾ, ಚುಮ್ಮಿ ದೇವಯ್ಯ, ನೆರವಂಡ ಉಮೇಶ್, ನಟೇಶ್ ಗೌಡ, ಜನಾರ್ಧನ್, ಅಬ್ದುಲ್ ರಜಾಕ್ ಸೇರಿದಂತೆ ಪ್ರಮುಖರು, ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.












Click it and Unblock the Notifications