ಕೊಡಗಿನಲ್ಲೂ ತಮಿಳು, ಮಲಯಾಳಂ ಶಾಲೆ ಇದೆ ಕಣ್ರೀ...

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಆಗಸ್ಟ್ 13: ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಮಾತ್ರ ಕೇಳಿದವರಿಗೆ ಕೊಡಗಿನಲ್ಲಿ ಮಲಯಾಳಂ ಮತ್ತು ತಮಿಳು ಮಾಧ್ಯಮಗಳ ಶಾಲೆಗಳು ಕೂಡ ಇವೆ ಎಂದರೆ ಅಚ್ಚರಿಯಾಗಬಹುದು! ಆದರೆ ಇದು ನಿಜ.

ಕೊಡಗು ಒಂದು ರೀತಿಯಲ್ಲಿ ಸರ್ವ ಧರ್ಮ, ಸರ್ವ ಜಾತಿ, ಸರ್ವ ಭಾಷೆಗಳ ಸಂಗಮ. ಇಲ್ಲಿ ಎಲ್ಲ ರೀತಿಯ ಜನ ಸಹಬಾಳ್ವೆ ಮಾಡುತ್ತಿದ್ದಾರೆ. ಬೇರೆಡೆಗೆ ಹೋಲಿಸಿದರೆ ವೈಯಕ್ತಿಕ ಕಾರಣಗಳಿಗೆ ನಡೆಯುವ ಜಗಳ, ಆಗೊಮ್ಮೆ ಈಗೊಮ್ಮೆ ನಡೆಯುವ ಸಣ್ಣಪುಟ್ಟ ಘರ್ಷಣೆ ಹೊರತುಪಡಿಸಿದರೆ ಶಾಂತಿಪ್ರಿಯ ಜಿಲ್ಲೆ ಕೊಡಗು. [ಕೊಡಗಿನ ಗದ್ದೆ ಹಬ್ಬ 'ಬೇಲ್ ನಮ್ಮೆ' ವಿಶೇಷ ಗೊತ್ತಾ?]

school 1

ಇಲ್ಲಿನ ಕಾಫಿ ತೋಟಗಳು ಹೊರ ಜಿಲ್ಲೆ, ಹೊರ ರಾಜ್ಯದ ಹಲವು ಮಂದಿಗೆ ಅನ್ನ ನೀಡಿವೆ. ಇವತ್ತಿಗೂ ಕಾಫಿ ತೋಟಗಳಲ್ಲಿ ಕೇರಳ, ತಮಿಳುನಾಡಿನ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಹೊರ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳದಿಂದ ಕೂಲಿ ಕೆಲಸಕ್ಕಾಗಿ ಬಂದು, ಕಾಫಿ ತೋಟಗಳಲ್ಲಿ ಅದರಲ್ಲೂ ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ನೆಲೆ ನಿಂತವರಿಗೆ ಉದ್ಯೋಗ, ವಸತಿ ಕಲ್ಪಿಸಿದೆ.

school 2

ಅಷ್ಟು ಮಾತ್ರವಲ್ಲ, ಅವರ ಮಕ್ಕಳಿಗೆ ಆಯಾ ಭಾಷೆಯಲ್ಲಿ ಶಿಕ್ಷಣ ನೀಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಲು ಮೂರು ದಶಕಗಳ ಹಿಂದೆಯೇ ವೀರಾಜಪೇಟೆ ತಾಲೂಕಿನ ಘಟ್ಟದ್ದಳ್ಳ, ಪಾಲಿಬೆಟ್ಟ(ದುಬಾರೆ), ಇಂಜಿಲೆಗೆರೆ, ಟಿ.ಶೆಟ್ಟಿಗೇರಿ, ಕುಟ್ಟದಲ್ಲಿ ಐದು ತಮಿಳು ಶಾಲೆ ಹಾಗೂ ಸಿದ್ದಾಪುರದಲ್ಲಿ ಒಂದು ಮಲೆಯಾಳಂ ಶಾಲೆ ತೆರೆಯಲಾಗಿತ್ತು. ಆ ದಿನಗಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. [ಕೃಷಿ ಸಚಿವ ಕೃಷ್ಣಬೈರೇಗೌಡ ಭತ್ತ ನಾಟಿ ಮಾಡಿದ್ದೆಲ್ಲಿ?]

ಸರಕಾರ ಪ್ರಾಥಮಿಕ ಶಾಲೆಯನ್ನು ಮಾತ್ರ ಆರಂಭಿಸಿದ್ದರಿಂದ ಪ್ರಾಥಮಿಕ ಶಿಕ್ಷಣ ಮುಗಿಸಿದವರ ಪೈಕಿ ಕೆಲವರು ತಮ್ಮ ಊರುಗಳಿಗೆ ತೆರಳಿ ವಿದ್ಯಾಭ್ಯಾಸ ಮುಂದುವರೆಸಿದರೆ, ಮತ್ತೆ ಕೆಲವರು ವಿದ್ಯಾಭ್ಯಾಸ ಮೊಟಕುಗೊಳಿಸಿ ತೋಟ ಕೆಲಸದಲ್ಲಿ ತೊಡಗಿಸಿಕೊಳ್ಳ ತೊಡಗಿದರು.

ಪ್ರಾಥಮಿಕ ಶಾಲೆಗಳನ್ನು ಮಾತ್ರ ಆರಂಭಿಸಿದ ಸರಕಾರವು ಶಿಕ್ಷಣವನ್ನು ಮುಂದುವರೆಸಲು ಅನುಕೂಲವಾಗುವಂತೆ ಪ್ರೌಢಶಾಲೆಯನ್ನು ನಿರ್ಮಿಸದ ಕಾರಣ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂಬ ಆರೋಪವೂ ಇದೆ.

ಆದರೆ, ಇತ್ತೀಚೆಗಿನ ದಿನಗಳಲ್ಲಿ ಆಂಗ್ಲ ಮಾಧ್ಯಮದ ಗಾಳಿ ಬೀಸಿದ್ದರಿಂದ ಕೆಲವರು ಕಾನ್ವೆಂಟ್ ನತ್ತ ಮುಖ ಮಾಡಿದ್ದರೆ, ಮತ್ತೆ ಕೆಲವರು ಸಮೀಪವಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುತ್ತಿದ್ದಾರೆ. ಹೀಗಾಗಿ ಬೆರಳೆಣಿಯಷ್ಟು ಮಕ್ಕಳು ಮಾತ್ರ ತಮಿಳು ಹಾಗೂ ಮಲಯಾಳಂ ಶಾಲೆಯಲ್ಲಿ ಓದುತ್ತಿದ್ದಾರೆ.

ಅದು ಏನೇ ಇರಲಿ ಚಾಮರಾಜನಗರ ಗಡಿಭಾಗದಲ್ಲಿ ತಮಿಳುನಾಡಿಗೆ ಸೇರಿದ ಗ್ರಾಮಗಳಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ತಮಿಳುನಾಡು ನಡೆಸುತ್ತಿದೆ. ಆದರೆ ಇತ್ತ ಕೊಡಗಿನಲ್ಲಿ ತಮಿಳುಭಾಷೆಯಲ್ಲೇ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗಿದೆ. .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil, Malayalam medium schools are running in Kodagu. Tamilunadu, Kerala people who were migrated to Kodagu coffee estate's for work purpose, send their childers to theese schools
Please Wait while comments are loading...