ಶಾಸಕ ಜಮೀರ್ ಅಹ್ಮದ್ ರನ್ನೇ ಗೂಂಡಾ ಕಾಯ್ದೆಯಡಿ ಬಂಧಿಸಿ ಎಂದ ಬೋಪಯ್ಯ
ಮಡಿಕೇರಿ, ಏಪ್ರಿಲ್.20: ಕೊರೊನಾ ವೈರಸ್ ವಾರಿಯರ್ಸ್ ಮೇಲೆ ದಾಂಧಲೆ ನಡೆಸಿದ ಬೆಂಗಳೂರಿ ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಮೊದಲು ಶಾಸಕ ಜಮೀರ್ ಅಹ್ಮದ್ ಖಾನ್ ರನ್ನು ಬಂಧಿಸಬೇಕು ಎಂದು ಮಡಿಕೇರಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿತರನ್ನು ರಕ್ಷಿಸಲು ಪಣ ತೊಟ್ಟಿರುವ ವೈದ್ಯರು ಮತ್ತು ಅಧಿಕಾರಿಗಳ ಮೇಲೆ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಕುಮ್ಮಕ್ಕು ನೀಡಿದ್ದು, ಗೂಂಡಾ ಕಾಯ್ದೆಯಡಿ ಅವರನ್ನೂ ಬಂಧಿಸಬೇಕು ಎಂದು ಬೋಪಯ್ಯ ಕಿಡಿ ಕಾರಿದ್ದಾರೆ.
ರಾಜ್ಯವೇ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಪೊಲೀಸರು ಸಂಯಮದಿಂದ ವರ್ತಿಸುತ್ತಿರುವುದಕ್ಕೆ ಕಿಡಿಗೇಡಿಗಳು ಈ ರೀತಿ ದುಷ್ಕೃತ್ಯವನ್ನು ಎಸಗುತ್ತಿದ್ದಾರೆ. ಅಂಥ ತಪ್ಪಿತಸ್ಥರ ವಿರುದ್ಧ ಸರ್ಕಾರವು ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ಎಂದ ಬೋಪಯ್ಯ:
ರಾಜ್ಯದಲ್ಲಿ ಪೊಲೀಸರು ಸಂಯಮದಿಂದ ವರ್ತಿಸುತ್ತಿರುವುದನ್ನೇ ಕಿಡಿಗೇಡಿಗಳು ದೌರ್ಬಲ್ಯ ಎಂದು ತಿಳಿದುಕೊಂಡಿದ್ದಾರೆ. ಇಂಥ ಕಿಡಿಗೇಡಿಗಳನ್ನು ಮಟ್ಟ ಹಾಕುವುದಕ್ಕಾಗಿ ರಾಜ್ಯ ಸರ್ಕಾರವು ಪೊಲೀಸರಿಗೆ ಮುಕ್ತ ಅಧಿಕಾರವನ್ನು ನೀಡಬೇಕು. ಅಂದಾಗ ಮಾತ್ರ ಕಟ್ಟುನಿಟ್ಟಿನ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕಿಡಿಗೇಡಿಗಳ ಹುಟ್ಟಡಗಿಸಲು ಪೊಲೀಸರಿಗೆ ಅನುಮತಿ ನೀಡಿದಂತೆ ಆಗುತ್ತದೆ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.












Click it and Unblock the Notifications