ಮಡಿಕೇರಿ-ಸುಳ್ಯ ಮಿನಿ ಬಸ್‌ಗೆ 50 ರೂ. ಪ್ರಯಾಣ ದರ ನಿಗದಿ
ಮಡಿಕೇರಿ, ಆಗಸ್ಟ್ 26 : 'ಮಡಿಕೇರಿ-ಮಂಗಳೂರು ಮಾರ್ಗದ ರಸ್ತೆ ಸಂಪರ್ಕ ಕಡಿದು ಹೋಗಿದೆ. ಮಡಿಕೇರಿ, ಭಾಗಮಂಡಲ, ಕರಿಕೆ ಮಾರ್ಗದ ಮೂಲಕ ಸುಳ್ಯಕ್ಕೆ ಬಸ್ ಸಂಚಾರ ನಡೆಸುತ್ತಿದ್ದು, ಹಿಂದಿನಂತೆ 50 ರೂ. ದರ ನಿಗದಿ ಮಾಡಲಾಗಿದೆ' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಶನಿವಾರ ಸಚಿವರು ಮಡಿಕೇರಿಯಲ್ಲಿ ಆದ ಮಳೆ ಹಾನಿ ಪರಿಶೀಲನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ಮಡಿಕೇರಿ, ಭಾಗಮಂಡಲ, ಕರಿಕೆ ಮಾರ್ಗ 56 ಕಿ.ಮೀ ಹೆಚ್ಚುವರಿಯಾಗಲಿದೆ. ಇದರಿಂದ 90 ರೂ ನಿಗದಿ ಮಾಡಲಾಗಿತ್ತು. ಇದನ್ನು ಹಿಂಪಡೆದು ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಈ ಹಿಂದಿನ ದರದಲ್ಲಿಯೇ ಬಸ್ ಓಡಿಸಲಾಗತ್ತಿದೆ' ಎಂದರು.
ಸುಳ್ಯದಿಂದ ಮಡಿಕೇರಿಗೆ ಬಸ್ ಸಂಚಾರ ಆರಂಭ
'ಈಗಾಗಲೇ 7 ಮಿನಿ ಬಸ್‍ಗಳನ್ನು ಓಡಿಸಲಾಗುತ್ತಿದೆ. ಇನ್ನೂ 10 ಮಿನಿ ಬಸ್‍ಗಳನ್ನು ಮೂರು ನಾಲ್ಕು ದಿನದಲ್ಲಿ ಒದಗಿಸಲಾಗುವುದು. ಈಗಾಗಲೇ ಹಲವು ಕಡೆಗಳಲ್ಲಿ ಮಿನಿ ಬಸ್‍ಗಳು ಓಡಾಡುತ್ತಿವೆ' ಎಂದು ಸಾರಿಗೆ ಸಚಿವರು ಮಾಹಿತಿ ನೀಡಿದರು.
ಒಂದು ದಿನದ ಸಂಬಳ ಕೊಡಗಿಗೆ ನೀಡಿದ ಕೆಎಸ್ಆರ್ಟಿಸಿ ಸಿಬ್ಬಂದಿ
'ಪ್ರಕೃತಿ ವಿಕೋಪ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣವೇ ಸ್ಪಂದಿಸಲಾಗುವುದು. ಸಾರಿಗೆ ಇಲಾಖೆ ಹಾಗೂ ಅಸೋಷಿಯೇಷನ್ ಸೇರಿದಂತೆ ಒಟ್ಟು 12.80 ಕೋಟಿ ರೂ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗುವುದು' ಎಂದು ತಿಳಿಸಿದರು.
'ಕೊಡಗು ಮತ್ತು ಮಂಡ್ಯ ಜಿಲ್ಲೆಗೆ ಅವಿನಾಭಾವ ಸಂಬಂಧವಿದ್ದು, ಕಾವೇರಿ ನೀರು ಕುಡಿಯುವ ಜನತೆ ಕೊಡಗು ಜಿಲ್ಲೆಯ ಜನತೆಯೊಂದಿಗೆ ಸದಾ ಕೈಜೋಡಿಸಲಿದ್ದಾರೆ' ಎಂದು ಸಚಿವರು ಹೇಳಿದರು.
ಕೊಡಗಿನಲ್ಲಿ ಆದ ನಷ್ಟದ ಅಂದಾಜು ಅಂಕಿ-ಅಂಶಗಳು
ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಮಾತನಾಡಿ, 'ಪ್ರಕೃತಿ ವಿಕೋಪದಿಂದ ಜಿಲ್ಲೆಗೆ 2 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ. ಕೂಲಿ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ತೋಟವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆ, ಅಂಗನವಾಡಿ, ರಸ್ತೆ ಮತ್ತಿತ್ತರ ಮೂಲ ಸೌಲಭ್ಯವು ಅತ್ಯಗತ್ಯವಾಗಿ ಬೇಕಿದೆ' ಎಂದರು.
ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ 12 ಮಂದಿ ಮೃತ ಪಟ್ಟಿದ್ದಾರೆ. 7 ಮಂದಿ ಕಾಣೆಯಾಗಿದ್ದಾರೆ ಎಂದು ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.