ಕೊಡಗಿನಲ್ಲಿ ಮಳೆ ಅಬ್ಬರ; ನದಿಗೆ ಜೀವಕಳೆ, ಡ್ಯಾಂಗೆ ಒಳಹರಿವು ಹೆಚ್ಚಳ
ಮಡಿಕೇರಿ, ಮೇ 20: ಬರಗಾಲದಿಂದ ತತ್ತರಿಸಿ ಹೋಗಿದ್ದ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಪೂರ್ವ ಮುಂಗಾರು ಮತ್ತು ಚಂಡಮಾರುತದಿಂದ ಸುರಿಯುತ್ತಿರುವ ಮಳೆ ಜಿಲ್ಲೆಯ ಜನರಲ್ಲಿ ಸಂತಸ ತಂದಿದೆ.
ಬೇಸಿಗೆಯಲ್ಲಿ ಬತ್ತಿ ಹೋಗಿದ್ದ ಕಾವೇರಿ ನದಿಗೆ ಜೀವಕಳೆ ಬಂದಿದೆ. ಕಾವೇರಿ ನದಿ ಹರಿಯುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಹಂಚಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.

ಕೊಡಗು ಜಿಲ್ಲಾಡಳಿತ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಬಗ್ಗೆ ಮಾಹಿತಿ ನೀಡಿದೆ. ತಾಲೂಕುವಾರು ಸುರಿದ ಬಗ್ಗೆ ವಿವರ ನೀಡಿದ್ದು, ನೈಋತ್ಯ ಮುಂಗಾರು ಆಗಮನಕ್ಕೂ ಮೊದಲೇ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತಿವೆ.
ಎಲ್ಲಿ, ಎಷ್ಟು ಮಳೆಯಾಗಿದೆ?: ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಸರಾಸರಿ ಮಳೆ 17.21 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯ ತನಕ ಸುರಿದ ಮಳೆ 198.24 ಮಿ.ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 122.89 ಮಿ. ಮೀ. ಮಳೆಯಾಗಿತ್ತು.
ಜಿಲ್ಲಾಡಳಿತದ ಮಾಹಿತಿ ಪ್ರಕಾರ ಮಡಿಕೇರಿ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 35.25 ಮಿ. ಮೀ. ಆಗಿದೆ. ಜನವರಿಯಿಂದ ಇಲ್ಲಿಯ ತನಕ ಸುರಿದ ಮಳೆ 296.79 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 179.33 ಮಿ. ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಸುರಿದ ಮಳೆ 8.40 ಮಿ. ಮೀ. ಆಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 122.85 ಮಿ. ಮೀ.. ಕಳೆದ ವರ್ಷ ಇದೇ ಅವಧಿಯಲ್ಲಿ 74.11 ಮಿ. ಮೀ. ಮಳೆಯಾಗಿತ್ತು ಎಂದು ಜಿಲ್ಲಾಡಳಿತ ಹೇಳಿದೆ.
ಪೊನ್ನಂಪೇಟೆ ತಾಲೂಕಿನಲ್ಲಿ ಸುರಿದ ಮಳೆ 23.40 ಮಿ. ಮೀ. ಆಗಿದೆ. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ ಸುರಿದ ಮಳೆ 176.89 ಮಿ. ಮೀ.. ಪೊನ್ನಂಪೇಟೆಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 76.94 ಮಿ. ಮೀ. ಮಳೆಯಾಗಿತ್ತು ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ.
ಉಳಿದಂತೆ ಸೋಮವಾರಪೇಟೆ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 12.30 ಮಿ. ಮೀ. ಆಗಿದೆ. ಜನವರಿಯಿಂದ ಇಲ್ಲಿಯ ತನಕ ಸುರಿದ ಮಳೆ 172.65 ಮಿ. ಮೀ. ಆಗದೆ. ಕಳೆದ ವರ್ಷ ಇದೇ ಅವಧಿಯಲ್ಲಿ 96.66 ಮಿ. ಮೀ. ಮಳೆಯಾಗಿತ್ತು.
ಇನ್ನು ಕುಶಾಲನಗರ ತಾಲೂಕಿನಲ್ಲಿ ಸುರಿದ ಮಳೆಯ ಪ್ರಮಾಣ 6.70 ಮಿ. ಮೀ.. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ ಸುರಿದ ಮಳೆ 222 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 187.40 ಮಿ. ಮೀ. ಮಳೆಯಾಗಿತ್ತು.
ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಕಸಬಾ 5.20, ನಾಪೋಕ್ಲು 9.20, ಸಂಪಾಜೆ 71, ಭಾಗಮಂಡಲ ಹೋಬಳಿಯಲ್ಲಿ 55.60 ಮಿ. ಮೀ. ಮಳೆಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಕಸಬಾ 6.80, ಅಮ್ಮತ್ತಿ 10, ಹುದಿಕೇರಿ 1.30, ಶ್ರೀಮಂಗಲ 0.20 ಮಿ. ಮೀ. ಮಳೆಯಾಗಿದೆ. ಪೊನ್ನಂಪೇಟೆ 2, ಬಾಳೆಲೆ 90.10 ಮಿ. ಮೀ. ಮಳೆಯಾಗಿದೆ. ಸೋಮವಾರಪೇಟೆ ಕಸಬಾ 6.60, ಶನಿವಾರಸಂತೆ 11.20, ಶಾಂತಳ್ಳಿ 17.40, ಕೊಡ್ಲಿಪೇಟೆ 14 ಮಿ. ಮೀ. ಮಳೆಯಾಗಿದೆ. ಕುಶಾಲನಗರ 8.40, ಸುಂಟಿಕೊಪ್ಪ 5 ಮಿ. ಮೀ.ಮಳೆಯಾಗಿದೆ.
ಹಾರಂಗಿಗೆ ಒಳಹರಿವು ಹೆಚ್ಚಳ: ಮೇ 20ರ ಸೋಮವಾರದ ಮಾಹಿತಿ ಅನ್ವಯ ಕೊಡಗಿನಲ್ಲಿರುವ ಹಾರಂಗಿ ಡ್ಯಾಂಗೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಡ್ಯಾಂ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2823.09 ಅಡಿಗಳು.
ಕಳೆದ ವರ್ಷ ಇದೇ ದಿನ 2819.78 ಅಡಿಗಳ ನೀರಿನ ಸಂಗ್ರಹವಿತ್ತು. ಹಾರಂಗಿಯಲ್ಲಿ ಬಿದ್ದ ಮಳೆ 31.40 ಮಿ.ಮೀ., ಇಂದಿನ ನೀರಿನ ಒಳಹರಿವು 287 ಕ್ಯುಸೆಕ್, ಕಳೆದ ವರ್ಷ ಇದೇ ದಿನ 89 ಕ್ಯುಸೆಕ್ ಒಳಹರಿವು ಇತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್ ಮತ್ತು ನಾಲೆಗೆ 40 ಕ್ಯುಸೆಕ್.












Click it and Unblock the Notifications