ಕೊಡಗಿನಲ್ಲಿ ಆಸ್ತಿ ವಿವಾದದಿಂದ ಸೊಸೆಗೆ ಗುಂಡಿಟ್ಟ ಮಾವ
ಕೊಡಗು, ನವೆಂಬರ್ 5: ಆಸ್ತಿ ವಿಷಯವಾಗಿ ಉಂಟಾದ ವಿವಾದದಿಂದಾಗಿ ಮಾವ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.
ಅಯ್ಯಪ್ಪ ಎಂಬುವರು ತಮ್ಮ ಸೊಸೆ ತೀರ್ಥ (36) ಮೇಲೆ ಗುಂಡು ಹಾರಿಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೊದಲೇ ಆಸ್ತಿ ವಿಷಯವಾಗಿ ಇವರ ನಡುವೆ ಕಲಹ ಏರ್ಪಟ್ಟಿತ್ತು. ಗುರುವಾರ ದನ ಕಟ್ಟುವ ವಿಚಾರದಲ್ಲಿ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮಾವ ಕೋಪಗೊಂಡು ಸೊಸೆಯ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಆಕೆಯ ಎಡಗೈ, ಎದೆಯ ಭಾಗಕ್ಕೆ ಗುಂಡು ತಾಗಿ ಗಾಯಗೊಂಡಿರುವುದಾಗಿ ತೀರ್ಥ ಅವರ ಗಂಡ ಪೂವಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ತೀರ್ಥ ಅವರಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.












Click it and Unblock the Notifications