ಕೊಡಗಿನ ಜನತೆಗೆ ಸಮಾಧಾನ ತಂತು ಈ ಬಾರಿಯ ವರ್ಷಧಾರೆ

Posted By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 6: ಕೊಡಗಿನ ಮಡಿಕೇರಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಜನವರಿಯಿಂದ ಇಲ್ಲಿಯವರೆಗೆ ನೂರು ಸೆಂ.ಮೀ. ದಾಖಲಾಗಿದ್ದರೆ, ಅತ್ತ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟವೂ ನೂರಕ್ಕೇರಿದೆ.

ಮಖಾ ಮಳೆಯ ಆರ್ಭಟಕ್ಕೆ ಮೈಯದುಂಬಿದೆ ಅಬ್ಬಿ ಜಲಪಾತ

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಒಂದಷ್ಟು ದಿನ ಭಾರೀ ಮಳೆ ಸುರಿದ ಕಾರಣದಿಂದ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆಯಾಗಲು ಸಾಧ್ಯವಾಗಿದೆ. ಈ ಬಾರಿ 100 ಸೆಂ.ಮೀ. ಮಳೆ ದಾಖಲಾಗಿದ್ದರೆ ಕಳೆದ ವರ್ಷ ಇದೇ ವೇಳೆಗೆ 93 ಸೆಂ.ಮೀ. ಮಳೆಯಾಗಿತ್ತು. ಈ ಬಾರಿ ಸುಮಾರು 7 ಸೆಂ.ಮೀ.ಯಷ್ಟು ಅಧಿಕ ಮಳೆಯಾಗಿರುವುದು ಕಂಡು ಬಂದಿದೆ.

People of Madikeri district feel relief after the district recieves good rain in August

ಜಿಲ್ಲೆಯಲ್ಲಿ ವರ್ಷಾರಂಭದಿಂದ ಇದುವರೆಗೆ ಸರಾಸರಿ 70 ಸೆಂ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಈ ವೇಳೆಗೆ 60.80 ಸೆಂ.ಮೀ. ಮಳೆ ದಾಖಲಾಗಿತ್ತು. ಹೀಗಾಗಿ ಸುಮಾರು 10 ಸೆಂ.ಮೀ. ಅಧಿಕ ಮಳೆ ಈ ಬಾರಿ ಆಗಿದೆ. ಮಡಿಕೇರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಆಶಾದಾಯಕ ಮಳೆಯೊಂದಿಗೆ 97.64 ಸೆಂ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 92.86 ಸೆಂ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಅವಧಿಯಲ್ಲಿ ಸರಾಸರಿ 54.20 ಸೆಂ.ಮೀ. ಮಳೆ ಬಿದ್ದಿದ್ದು, ಕಳೆದ ವರ್ಷ ಈ ಸಮಯಕ್ಕೆ 47 ಸೆಂ.ಮೀ. ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಪ್ರಸಕ್ತ ಸಾಲಿಗೆ ಒಟ್ಟು 54 ಸೆಂ.ಮೀ. ಮಳೆ ಆಗಿದ್ದು, ಕಳೆದ ವರ್ಷ 43 ಸೆಂ.ಮೀ. ಮಳೆ ದಾಖಲಾಗಿತ್ತು.

ಇನ್ನು ತಲಕಾವೇರಿಗೆ ವರ್ಷಾರಂಭದಿಂದ ಇದುವರೆಗೆ 192 ಸೆಂ.ಮೀ. ಮಳೆ ಪ್ರಸಕ್ತ ದಾಖಲಾಗಿದ್ದು, ಕಳೆದ ವರ್ಷ ಈ ಸಮಯಕ್ಕೆ 185 ಸೆಂ.ಮೀ. ಮಳೆಯಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಕೊಡಗಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆಯಾಗಿರುವುದು ಕಂಡು ಬಂದಿದೆ. ಅಕ್ಟೋಬರ್ ತಿಂಗಳ ತನಕವೂ ಮಳೆ ಬರುವ ಸಾಧ್ಯತೆ ಇರುವುದರಿಂದ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ.

ಮಳೆಯ ಪ್ರಮಾಣ ಹೆಚ್ಚಾದಂತೆಲ್ಲ ಕಾಫಿ ಫಸಲಿಗೆ ಹಾನಿಯಾಗುವ ಲಕ್ಷಣಗಳು ಕಂಡು ಬಂದಿದೆ. ಮಡಿಕೇರಿ ಸುತ್ತಮುತ್ತ ಈಗಾಗಲೇ ಮಳೆಗೆ ಕಾಫಿ ಫಸಲು ಉದುರುತ್ತಿರುವುದು ಗೋಚರಿಸಿದೆ. ಇತ್ತೀಚೆಗೆ ಸುರಿದ ಮಳೆಯಿಂದ ತೊರೆ, ಹೊಳೆಗಳಲ್ಲಿ ನೀರು ಕಾಣಿಸುವಂತಾಗಿದೆ. ಮಳೆ ಅಕ್ಟೋಬರ್ ತನಕ ಬಂದಿದ್ದೇ ಆದರೆ ಮುಂದಿನ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಬಹುದು ಇಲ್ಲದೆ ಹೋದರೆ ಕೊಡಗಿನಲ್ಲಿಯೇ ಅಂತರ್ಜಲದ ಕೊರತೆಯಿಂದ ಸಮಸ್ಯೆ ತಲೆದೋರಿದರೆ ಅಚ್ಚರಿ ಪಡಬೇಕಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People of Madikeri district feel relief after the district recieves good rain in August. Many lakes are filled.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ