ಕೊಡಗು-ಮೈಸೂರು ನಡುವೆ ಸಂಚರಿಸುವವರಿಗೆ ಸೂಚನೆ
ಮಡಿಕೇರಿ, ಮೇ 04 : ಕೊಡಗು ಮತ್ತು ಮೈಸೂರು ನಡುವೆ ಸಂಚಾರ ನಡೆಸುವ ವಾಹನಗಳಿಗೆ ಎರಡೂ ಜಿಲ್ಲಾಡಳಿತ ಹಲವು ಸೂಚನೆಗಳನ್ನು ನೀಡಿದೆ. ಕೊರೊನಾ ಸೋಂಕಿತರ ವಿಚಾರದಲ್ಲಿ ಕೊಡಗು ಜಿಲ್ಲೆ ಹಸಿರು ವಲಯದಲ್ಲಿದೆ. ಆದರೆ, ಮೈಸೂರು ಜಿಲ್ಲೆ ಕೆಂಪು ವಲಯದಲ್ಲಿ ಗುರುತಿಸಿಕೊಂಡಿದೆ.
ಕೊಡಗು ಜಿಲ್ಲೆಯಿಂದ ಒಂದು ಬಾರಿ ಅನುಮತಿ ಪಡೆದು (One Time Pass) ಪಡೆದು ಮೈಸೂರು ಜಿಲ್ಲೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಕೊಡಗು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಪ್ರಯಾಣಿಸುವವರಿಗೆ ಕೊಪ್ಪ (ಕುಶಾಲನಗರ) ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿದೆ.
ಕೊಡಗು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಸ್ವಂತ ವಾಹನದ ಮೂಲಕ ಪ್ರಯಾಣಿಸುವವರಿಗೆ ಕೊಪ್ಪ (ಕುಶಾಲನಗರ) ಚೆಕ್ ಪೋಸ್ಟ್ ಹೊರತುಪಡಿಸಿ ಉಳಿದ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಮೈಸೂರು ಜಿಲ್ಲಾಡಳಿತ ಬಂದ್ ಮಾಡಿದೆ. ಆದ್ದರಿಂದ, ಪ್ರಯಾಣಿಕರು ಯೋಜನೆ ರೂಪಿಸಿಕೊಂಡು ತೆರಳಲು ಮನವಿ ಮಾಡಲಾಗಿದೆ.

ಉಳಿದಂತೆ ಎಲ್ಲಾ ರೀತಿಯ ಸರಕು ಸಾಗಾಟ ವಾಹನಗಳಿಗೆ, ಕೃಷಿ ಚಟುವಟಿಕೆಗಳಿಗೆ ಮತ್ತು ತುರ್ತು ಸೇವೆಗಳಿಗೆ ಕೊಡಗು ಜಿಲ್ಲೆಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಅವಕಾಶವನ್ನು ನೀಡಲಾಗುತ್ತದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರು ಅವರ ಸ್ವಂತ ಊರುಗಳಿಗೆ ಬರಲು ತಾವು ಸಿಲುಕಿರುವ ಜಿಲ್ಲೆ/ವಿಭಾಗದ ಜಿಲ್ಲಾಧಿಕಾರಿ/ಆರಕ್ಷಕ ಉಪ ಅಧೀಕ್ಷಕರನ್ನು ಸಂಪರ್ಕಿಸಿ ಒಂದು ಬಾರಿಯ ಪ್ರಯಾಣಕ್ಕೆ ಅನುಮತಿ ಪಡೆದು ಆಗಮಿಸಬಹುದು.
ಈ ರೀತಿ ಪ್ರಯಾಣಿಸುವ ಕೊಡಗು ಜಿಲ್ಲೆಯ ಯಾವುದೇ ಭಾಗದ ಜನರು ಕುಶಾಲನಗರ (ಕೊಪ್ಪ) ಮತ್ತು ಸಂಪಾಜೆ ಈ ಎರಡು ಚೆಕ್ ಪೋಸ್ಟ್ ಗಳ ಮೂಲಕ ಮಾತ್ರ ಜಿಲ್ಲೆಗೆ ಪ್ರವೇಶಿಸುವುದು. ಇತರೆ ಚೆಕ್ ಪೋಸ್ಟ್ ಗಳ ಮೂಲಕ ಪ್ರವೇಶಿಸಲು ಅವಕಾಶವಿಲ್ಲ.
ಕೊಡಗು ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ತಡೆಯಲು ರೂಪಿಸಿರುವ ಮಾರ್ಗಸೂಚಿಗಳನ್ನು 3/05/2020ರ ಮಧ್ಯರಾತ್ರಿಯಿಂದ ಈಗಾಗಲೇ ಜಾರಿಯಲ್ಲಿರುವ ನಿರ್ಬಂಧ ಮತ್ತು ನಿಯಮಗಳೊಂದಿಗೆ 18/05/2020ರ ಮಧ್ಯರಾತ್ರಿಯ ತನಕ ವಿಸ್ತರಣೆ ಮಾಡಲಾಗಿದೆ.












Click it and Unblock the Notifications