ಕೊಡಗು: ಮುಂಗಾರು ಮಳೆ ಆರಂಭ, ಸಹಾಯವಾಣಿ ತೆರೆದ ಜಿಲ್ಲಾಡಳಿತ
ಮಡಿಕೇರಿ, ಮೇ 29: ಕೊಡಗು ಜಿಲ್ಲೆಯಲ್ಲಿ 2025ನೇ ಸಾಲಿನ ಮುಂಗಾರು ಮಳೆ ಆರಂಭವಾಗಿದೆ. ಪೂರ್ವ ಮುಂಗಾರು ಮಳೆಯೂ ಸಹ ಜಿಲ್ಲೆಯಲ್ಲಿ ಆರ್ಭಟಿಸಿದ್ದು, ಮುಂಗಾರು ಅವಧಿಯಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ಇದೆ. ಆದ್ದರಿಂದ ಮಳೆಗಾಲದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧವಾಗಿದೆ. ಜನರ ಸಹಾಯಕ್ಕಾಗಿ ಸಹಾಯವಾಣಿಯನ್ನು ಸ್ಥಾಪನೆ ಮಾಡಿದೆ.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 62.67 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಮಳೆ 589.33 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 325.90 ಮಿ. ಮೀ. ಮಳೆಯಾಗಿತ್ತು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮುಂಗಾರು ಮಳೆ ಆರಂಭದ ಹಿನ್ನೆಲೆ ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್. ವಿ. ಪ್ರಸಾದ್ ಅಧಿಕಾರಿಗಳ ಸಭೆಯನ್ನು ನಡೆಸಿದರು.
ಸಹಾಯವಾಣಿ ಆರಂಭ: ಸಭೆಯಲ್ಲಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಸಹಾಯವಾಣಿ ಸಂಖ್ಯೆ 08272-221077 ಆರಂಭಿಸಲಾಗಿದೆ. 8550001077 ವಾಟ್ಸ್ಆಪ್ ಸಂಖ್ಯೆಯನ್ನು ಸಹ ಆರಂಭಿಸಿದ್ದು, ಅತಿವೃಷ್ಟಿಯಿಂದ ಉಂಟಾಗುವ ವಿಪತ್ತಿನ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ" ಎಂದರು.
"ಮಡಿಕೇರಿ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ 08272-228396, ವಿರಾಜಪೇಟೆ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ-08274-257328, ಸೋಮವಾರಪೇಟೆ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ-08276-282045, ಕುಶಾಲನಗರ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ-08276-200198 ಹಾಗೂ ಪೊನ್ನಂಪೇಟೆ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರವನ್ನು 08274-249700 ಸಹಾಯವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದು" ಎಂದು ಹೇಳಿದರು.
"ಮಳೆಯಿಂದ ಉಂಟಾಗುವ ಹಾನಿ ಸಂಬಂಧ ಜಿಲ್ಲಾಡಳಿತದಿಂದ ಆರಂಭಿಸಿರುವ ವಾಟ್ಸ್ಆಪ್ ಗುಂಪಿಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಛಾಯಾಚಿತ್ರ ಹಾಗೂ ವಾಯ್ಸ್ ರೆಕಾರ್ಡ್ ಸಹಿತ ಮಾಹಿತಿ ನೀಡಬಹುದಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರ ಜೊತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಸಮನ್ವಯ ಸಾಧಿಸಿ ವಿಪತ್ತು ನಿರ್ವಹಣೆ ಮಾಡಬೇಕು" ಎಂದು ಡಾ. ಎನ್. ವಿ. ಪ್ರಸಾದ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, "ಪ್ರಾಕೃತಿಕ ವಿಕೋಪ ನಿರ್ವಹಣೆಗೆ 40 ಕೋಟಿ ರೂ. ಹಣವಿದೆ. ಜೊತೆಗೆ ತಹಶೀಲ್ದಾರ್ ಬಳಿಯು ಸಹ ಹಣವಿದೆ. ಈ ಬಾರಿ ಮೇ ತಿಂಗಳಲ್ಲಿಯೇ ಮುಂಗಾರು ಆರಂಭವಾಗಿದ್ದು, ಹೆಚ್ಚಿನ ಬಿರುಗಾಳಿಯಿಂದ ಮನೆಗೆ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ" ಎಂದು ಮಾಹಿತಿ ನೀಡಿದರು.
"ಅಗ್ನಿಶಾಮಕ ದಳ, ಪೊಲೀಸ್ ರಕ್ಷಣಾ ತಂಡ, ಗೃಹರಕ್ಷಕ ದಳ, ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಹಾಗೂ ಈ ಹಿಂದೆ ವಿಕೋಪವಾದ ಸ್ಥಳಗಳ ಆಧಾರದ ಮೇಲೆ ಗುರುತಿಸಲಾಗಿದೆ. ಒಟ್ಟು 43 ಪ್ರವಾಹ ಪೀಡಿತ ಮತ್ತು 44 ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ" ಎಂದರು.












Click it and Unblock the Notifications