Monsoon Rain: ಕೊಡಗಿನಲ್ಲಿ ಜುಲೈನಲ್ಲಿ ಮಳೆ ಆರ್ಭಟ?
ಮಡಿಕೇರಿ, ಜುಲೈ 06: ಕೊಡಗು ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಜುಲೈ 12ರ ತನಕ ಮಳೆ ಆರ್ಭಟಿಸುವ ಮುನ್ಸೂಚನೆ ನೀಡಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಮಳೆ 944.51 ಮಿ. ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 309.61 ಮಿ. ಮೀ. ಮಳೆಯಾಗಿತ್ತು.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಸಭೆಯನ್ನು ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, "ಕೊಡಗು ಜಿಲ್ಲೆಯಲ್ಲಿ ವಾಡಿಕೆಯಂತೆ ಸರಾಸರಿ ಮಳೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಅತಿವೃಷ್ಟಿಯಿಂದ ಪ್ರಾಕೃತಿಕ ಅವಘಡಗಳು ಸಂಭವಿಸಿದಲ್ಲಿ ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸದಾ ಸನ್ನದ್ಧರಾಗಿರಬೇಕು" ಎಂದರು.

"ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಕೆರೆಕಟ್ಟೆ, ತೊರೆ ಹಾಗೂ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರಾಕೃತಿಕ ವಿಕೋಪ ನಿರ್ವಹಣೆಯ ಕಡೆ ಹೆಚ್ಚಿನ ಗಮನಹರಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
"ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಈಗಾಗಲೇ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ವಾರಕ್ಕೊಮ್ಮೆಯಾದರೂ ತಮ್ಮ ಹೋಬಳಿ ವ್ಯಾಪ್ತಿಗೆ ಭೇಟಿ ನೀಡಿ ಪ್ರಾಕೃತಿಕ ವಿಕೋಪ ಸಂಬಂಧ ಮಾಹಿತಿ ಪಡೆಯುವುದರ ಜೊತೆಗೆ, ಹೆಚ್ಚಿನ ಮಳೆಯಾದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು" ಎಂದು ತಿಳಿಸಿದರು.
ಶಾಲೆಗಳಿಗೆ ರಜೆ ನೀಡುವುದು: ಜಿಲ್ಲಾಧಿಕಾರಿಗಳು ಮಾತನಾಡಿ, "ತಹಶೀಲ್ದಾರ್ ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಗೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿ ಹವಾಮಾನ ಮುನ್ಸೂಚನೆ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಹಂಚಿಕೊಳ್ಳಬೇಕು. ತಮ್ಮ ಹಾಗೂ ತಾಲೂಕು ಪಂಚಾಯಿತಿ ಇಒ ಹಂತದಲ್ಲಿ ಮಟ್ಟದಲ್ಲಿ ಸಭೆ ನಡೆಸಬೇಕು. ಹಾಗೆಯೇ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಸಹ ಸಭೆಗಳನ್ನು ಮಾಡಿ ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಬೇಕು" ಎಂದರು.
"ಹೆಚ್ಚಿನ ಮಳೆಯಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆಗೆ ಸಂಬಂಧಿಸಿದಂತೆ ಡಿಡಿಪಿಐ ಅವರಿಗೆ ಮಾಹಿತಿ ನೀಡಬೇಕು. ಡಿಡಿಪಿಐ ಅವರು ರಜೆ ಘೋಷಣೆ ಸಂಬಂಧ ಜಿಲ್ಲಾ ಮಟ್ಟದಲ್ಲಿ ಅಗತ್ಯ ಕ್ರಮವಹಿಸಬೇಕು" ಎಂದು ನಿರ್ದೇಶನ ನೀಡಿದರು.
"ಪ್ರಾಕೃತಿಕ ವಿಕೋಪ ಎದುರಿಸುವ ಸಂಬಂಧ ಎನ್‍ಡಿಆರ್‍ಎಫ್, ಪೊಲೀಸ್, ಅಗ್ನಿಶಾಮಕ ಇತರರ ಜೊತೆಗೂಡಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು. ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಎಚ್ಚರವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಅತಿವೃಷ್ಟಿ ಉಂಟಾಗದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕು" ಎಂದರು.
"ಅತಿವೃಷ್ಟಿ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರೀತಿಯ ಮುನ್ನೆಚ್ಚರ ಕ್ರಮಗಳನ್ನು ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಯಾವ ರೀತಿ ಕ್ರಮಕೈಗೊಳ್ಳಬೇಕು ಎಂದು ಮಾಹಿತಿ ಇರಬೇಕು. ಅಂತಹ ಸಮಯದಲ್ಲಿ ಹೆಚ್ಚಿನ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಯಾವುದೇ ರೀತಿಯ ಜೀವ ಹಾನಿಯಾಗದಂತೆ ಎಚ್ಚರವಹಿಸಬೇಕು. ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಸದಾ ಎಚ್ಚರವಹಿಸಬೇಕು. ಜನರು ಜಲಾಶಯಗಳ ಬಳಿ, ನದಿಗಳಿಗೆ ತೆರಳದಂತೆ ನೋಡಿಕೊಳ್ಳಬೇಕು" ಎಂದು ಹೇಳಿದರು.
"2018 ರಿಂದ ಮೂರು ವರ್ಷದ ಅವಧಿಯಲ್ಲಿ ಆಗಸ್ಟ್ ತಿಂಗಳಲ್ಲಿಯೇ ಹೆಚ್ಚಿನ ಮಳೆಯಾಗಿದೆ. ಆದ್ದರಿಂದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಕರೆ ಮಾಡಿದಾಗ ಸ್ವೀಕರಿಸಬೇಕು. ಸಾರ್ವಜನಿಕರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಜೊತೆಗೆ ತಹಶೀಲ್ದಾರರು ಕಾಲ ಕಾಲಕ್ಕೆ ಮಾಹಿತಿ ನೀಡುವುದು ಸಹ ಅತೀ ಮುಖ್ಯವಾಗಿದೆ. ರಸ್ತೆ ಬದಿಗೆ ಮರ ಹಾಗೂ ವಿದ್ಯುತ್ ಕಂಬ ಬಿದ್ದಲ್ಲಿ ಸಕಾಲದಲ್ಲಿ ತೆರವುಗೊಳಿಸುತ್ತಿದ್ದಾರೆ. ಹಾಗೆಯೇ ಬರೆ ಕುಸಿತ ಉಂಟಾದಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾದಲ್ಲಿ ಸಾರಿಗೆ ಸಂಪರ್ಕ ಮತ್ತಿತರ ವ್ಯತ್ಯಯಗಳು ಉಂಟಾದಲ್ಲಿ ಕೂಡಲೇ ಸ್ಪಂದಿಸುವ ಕಾರ್ಯವಾಗಬೇಕು" ಎಂದು ಹೇಳಿದರು.












Click it and Unblock the Notifications