ಸಾಲ ನೀಡುತ್ತೇವೆ ಎನ್ನುವವರ ಬಗ್ಗೆ ಎಚ್ಚರವಿರಲಿ!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಅಕ್ಟೋಬರ್, 27: ಲಕ್ಷಾಂತರ ರೂಪಾಯಿ ಸಾಲವನ್ನು ಸುಲಭವಾಗಿ ನೀಡಲಾಗುತ್ತದೆ ಎಂಬ ಜಾಹೀರಾತು ನಂಬಿ ಸಾವಿರಾರು ರೂಪಾಯಿ ಕಳೆದುಕೊಂಡಿರುವ ಪ್ರಕರಣ ಕೊಡಗಿನಲ್ಲಿ ಬೆಳಕಿಗೆ ಬಂದಿದೆ.

ಹಣ ಕಳೆದುಕೊಂಡು ಮೋಸ ಹೋದ ಕೆಲವರು ವಿಷಯವನ್ನು ಬಹಿರಂಗಗೊಳಿಸದೆ ಗೌಪ್ಯವಾಗಿಡಿತ್ತಿದ್ದು, ಇದನ್ನೇ ಅವಕಾಶ ಮಾಡಿಕೊಂಡು ಖದೀಮರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ.

Madikeri: public cheated by fake finance company

ಲಕ್ಷಾಂತರ ರೂಪಾಯಿಗಳನ್ನು ಮೋಸದ ಮೂಲಕ ಸಂಪಾದಿಸಿಕೊಳ್ಳುತ್ತಿದ್ದಾರೆ. ಲಕ್ಷ ರೂಪಾಯಿಯ ಆಸೆಗೆ ಬಿದ್ದು, ಸಾಲ ಮಾಡಿ ಸಾವಿರಾರು ರೂಪಾಯಿ ಕಟ್ಟಿ ಅತ್ತ ಲಕ್ಷವೂ ಇಲ್ಲ ಇತ್ತ ಸಾವಿರವೂ ಇಲ್ಲದಂತಹ ಪರಿಸ್ಥಿತಿ ಮುಗ್ಧ ಜನರದ್ದಾಗಿದೆ.

ಇತ್ತೀಚೆಗೆ ಜಾಹೀರಾತು ಏಜೆನ್ಸಿ ಮೂಲಕ ಪತ್ರಿಕೆಗಳಿಗೆ ಶ್ರೀ ಲಕ್ಷ್ಮಿ ಗ್ರಾಮೀಣ ಫೈನಾನ್ಸ್' ಎಂಬ ಹೆಸರಿನ ಜಾಹೀರಾತು ನೀಡಿ ವಿವಿಧ ಸಾಲಗಳನ್ನು ನೀಡುವ ಬಗ್ಗೆ ಸಾರ್ವಜನಿಕರ ಗಮನಸೆಳೆದಿದ್ದು, ಸಂಪರ್ಕಕ್ಕಾಗಿ 9986107898, 9513880273 ಈ ಎರಡು ಮೊಬೈಲ್ ಸಂಖ್ಯೆಗಳನ್ನು ನೀಡಿದ್ದರು.

ಜನ ಸುಲಭದಲ್ಲಿ ಹಣ ಸಿಗುತ್ತದೆ ಎಂದರೆ ಸುಮ್ಮನಿರುತ್ತಾರಾ? ಕೇಳಿಯೇ ಬಿಡೋಣ. ಸಾಲ ಸಿಕ್ಕರೆ ಏನಾದರೊಂದು ಮಾಡಬಹುದೆಂದು ಯೋಚಿಸಿ ಜಾಹೀರಾತಿನಲ್ಲಿ ನೀಡಿದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಸಾಲ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಮಾತಿನಲ್ಲೇ ಮರಳು ಮಾಡಿದ ಶ್ರೀ ಲಕ್ಷ್ಮಿ ಗ್ರಾಮೀಣ ಫೈನಾನ್ಸ್‍ನ ಸಿಬ್ಬಂದಿಗಳು ಎನ್ನಲಾದ ಕೆಲವು ವಂಚಕರು ಕೆಲವು ದಾಖಲೆ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ನಿಯಗಳನ್ನು ಹೇಳಿ ಖಾತೆ ನಂಬರು ನೀಡಿ ಅದಕ್ಕೆ ವಿಮೆ ಹಣ ಸುಮಾರು ಹತ್ತು ಸಾವಿರ ಕಟ್ಟುವಂತೆಯೂ ಹೇಳಿದ್ದಾರೆ.

ಲಕ್ಷ ರೂಪಾಯಿ ಸಾಲ ಸಿಗುವಾಗ ಹತ್ತು ಸಾವಿರ ರೂಪಾಯಿ ಕಟ್ಟಲು ಹಿಂದೇಟು ಹಾಕದ ಕೆಲವರು ಹಣ ತಮ್ಮಲ್ಲಿ ಇಲ್ಲದಿದ್ದರೂ ಬೇರೆಯವರಿಂದ ಪಡೆದು ಕಟ್ಟಿದ್ದಾರೆ.

ಹಣ ಕಟ್ಟಿದ ಬಳಿಕ ಸಂಸ್ಥೆಯವರು ತಟಸ್ಥರಾಗಿದ್ದಾರೆ. ದೂರವಾಣಿ ಕರೆ ಮಾಡಿ ವಿಚಾರಿಸಿದರೆ ಯಾವುದೋ ಸಬೂಬು ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಅಲ್ಲದೆ ಕೊನೆ ಕೊನೆಗೆ ಮೊಬೈಲ್‍ನ್ನೇ ಸ್ವಿಚ್‍ಆಫ್ ಮಾಡಿದ್ದಾರೆ.

ವಂಚಕರು ನೀಡಿದ ಖಾತೆ ಸಂಖ್ಯೆ ಎಸ್‍ಬಿಐ 20292198042 ಆಗಿದ್ದು ಇದು ಬೆಂಗಳೂರಿನ ಉಮಾಪತಿ ಲಕ್ಷ್ಮಿ ನರಸಮ್ಮ, ಮೋತಿನಗರದ್ದು ಎನ್ನಲಾಗಿದೆ. ಮೂರು ಲಕ್ಷ ರೂಪಾಯಿ ಸಾಲ ನೀಡುತ್ತೇವೆಂದು ಸಾವಿರಾರು ರೂಪಾಯಿಗಳನ್ನು ಭದ್ರತೆಗಾಗಿ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೊಡಗಿನ ವ್ಯಕ್ತಿಗೆ ಫೇಸ್ ಬುಕ್‍ನಲ್ಲಿ ಪರಿಚಯವಾದ ವ್ಯಕ್ತಿ ಚಾಟ್ ಮೂಲಕವೇ ಎಲ್ಲ ವಿಚಾರವನ್ನು ತಿಳಿದುಕೊಂಡಿದ್ದಾನೆ. ಆತ ತಾನು ಲಂಡನ್‍ನಲ್ಲಿರುವುದಾಗಿಯೂ ಹೇಳಿದ್ದಾನೆ. ಆತನೊಂದಿಗೆ ಮಾತನಾಡುತ್ತಾ ಆತ್ಮೀಯತೆ ಬೆಳೆದು ತನ್ನ ಮನೆಯ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾನೆ.

ಪತ್ನಿಗೆ ಸೊಂಟದ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಲಕ್ಷಾಂತರ ರೂ. ಹಣ ಬೇಕಾಗಿದೆ. ಅದರ ಬಗ್ಗೆಯೇ ಚಿಂತೆಯಾಗಿದೆ ಎಂದಿದ್ದಾನೆ. ಆತನ ಕಷ್ಟವನ್ನು ದುರುಪಯೋಗಪಡಿಸಿಕೊಂಡ ಲಂಡನ್‍ನಲ್ಲಿರುವುದಾಗಿ ಹೇಳಿದ್ದ ವ್ಯಕ್ತಿ ನಿನಗೆ ನಾನು ಸಹಾಯ ಮಾಡುತ್ತೇನೆ ಎಂದಿದ್ದಾನೆ.

ಈ ನಡುವೆ ಕೊಡಗಿನ ವ್ಯಕ್ತಿಗೆ ಮಹಿಳೆಯೊಬ್ಬಳು ದೂರವಾಣಿ ಕರೆ ಮಾಡಿ ನಾನು ದೆಹಲಿ ಏರ್‍ಪೋರ್ಟ್‍ನಿಂದ ಮಾತನಾಡುತ್ತಿದ್ದು, ನಿಮಗೆ ಲಂಡನ್‍ನಿಂದ ಪಾರ್ಸಲ್ ಬಂದಿದ್ದು ನಾನು ನೀಡುವ ಅಕೌಂಟ್ ನಂಬರಿಗೆ 1.70 ಲಕ್ಷ ರೂ ಪಾವತಿಸಿ ಪಾರ್ಸಲ್ ಬಿಡಿಸಿಕೊಳ್ಳುವಂತೆ ಹೇಳಿದ್ದಾಳೆ.

ಗೆಳೆಯ ಲಂಡನ್‍ನಿಂದ ಹಣ ಕಳಿಸಿದ್ದಾನೆ ಎಂದು ನಂಬಿ ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು 1.70ಲಕ್ಷ ರೂಪಾಯಿಯನ್ನು ತುಂಬಿದ್ದಾರೆ. ಆ ನಂತರ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ವಿಚಾರಿಸಲೆಂದು ಹೋದವರಿಗೆ ಶಾಕ್ ಆಗಿತ್ತು. ಅದು ನಾಗಾಲ್ಯಾಂಡ್‍ನ ಬ್ಯಾಂಕ್ ಖಾತೆಯಾಗಿತ್ತು.

ಹೀಗೆ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದಲ್ಲ ಒಂದು ಕಾರಣಕ್ಕೆ ವಂಚಕರ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಈ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಅದಕ್ಕೆ ಹೇಳೋದು ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇರುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some of the public cheated by fake finance company 'Shri Lakshmi grameena finance' in Madikerei. effect of this public has loses money.
Please Wait while comments are loading...