• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗತವೈಭವಕ್ಕೆ ಮರಳಲು ಕಾಯುತ್ತಿದೆಯಾ ಮಡಿಕೇರಿ ಅರಮನೆ?

|

ಮಡಿಕೇರಿ, ಆಗಸ್ಟ್ 28: ನಾಡ ಹಬ್ಬ ದಸರಾವನ್ನು ಮೈಸೂರು ಸ್ವಾಗತಿಸಿದರೆ, ಮಡಿಕೇರಿ ಬೀಳ್ಕೊಡುತ್ತದೆ ಎಂಬ ಮಾತಿದೆ. ಅದಕ್ಕೆ ಕಾರಣವೂ ಇದೆ. ಮಡಿಕೇರಿಯಲ್ಲಿ ರಾತ್ರಿ ಪೂರ ನಡೆಯುವ ದಸರಾಕ್ಕೆ ತನ್ನದೇ ಆದ ಇತಿಹಾಸವಿದೆ. ಎಂತಹ ಕಷ್ಟದ ದಿನಗಳಲ್ಲಿಯೂ ಇಲ್ಲಿನ ದಸರಾ ನಿಂತ ನಿದರ್ಶನವಿಲ್ಲ. ವರ್ಷದಿಂದ ವರ್ಷಕ್ಕೆ ಇಲ್ಲಿ ದಸರಾ ತನ್ನ ವೈಭವವನ್ನು ಹೆಚ್ಚಿಸಿಕೊಂಡು ಬಂದಿದೆ.

ದಸರೆಯ ರಂಗೇರಿಸಲು ಸೆ.15 ರಿಂದ ಆರಂಭವಾಗಲಿದೆ ಯುವ ಸಂಭ್ರಮ

ಮೈಸೂರು ದಸರಾದ ಪ್ರಮುಖ ಆಕರ್ಷಣೆ ಅರಮನೆ. ದಸರಾ ಸಂದರ್ಭದಲ್ಲಿ ಅರಮನೆ ಜಗಮಗಿಸುತ್ತದೆ. ಆದರೆ ಮಡಿಕೇರಿಯಲ್ಲಿ ಅರಮನೆಯಿದ್ದರೂ ಅದು ದಸರಾ ವೇಳೆ ಕತ್ತಲಲ್ಲಿರುತ್ತದೆ. ಇಷ್ಟಕ್ಕೂ ಮಡಿಕೇರಿಯಲ್ಲಿರುವ ಅರಮನೆಯನ್ನು ಇದುವರೆಗೆ ಸರ್ಕಾರಿ ಬಂಗಲೆಯಾಗಿ ಮಾಡಿಕೊಂಡ ಪರಿಣಾಮ ಅದು ಪ್ರವಾಸಿಗರ ಗಮನ ಸೆಳೆಯುವಲ್ಲಿಯೂ ವಿಫಲವಾಯಿತು ಎಂದರೆ ತಪ್ಪಾಗಲಾರದು. ಆದರೆ ಇದೀಗ ಎಚ್ಚೆತ್ತುಕೊಂಡಿರುವ ಭಾರತೀಯ ಪುರಾತತ್ವ ಇಲಾಖೆಯು ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ಅರಮನೆಗೆ ಗತವೈಭವ ನೀಡಲು ಮುಂದಾಗಿದೆ.

 ಮಡಿಕೇರಿ ಅರಮನೆ ಅಭಿವೃದ್ಧಿಗೆ ಮುನ್ನುಡಿ

ಮಡಿಕೇರಿ ಅರಮನೆ ಅಭಿವೃದ್ಧಿಗೆ ಮುನ್ನುಡಿ

ಇಲ್ಲಿರುವ ಬಹಳಷ್ಟು ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಈ ನಡುವೆ ಭಾರತೀಯ ಪುರಾತತ್ವ ಇಲಾಖೆಯು ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಹಾಗೂ ಜಿಲ್ಲಾಡಳಿತದ ಅಧೀನವಿರುವ ಅರಮನೆಯನ್ನು ತನ್ನ ಸ್ವಾಧೀನಕ್ಕೆ ವಹಿಸಲು ಕ್ರಮ ವಹಿಸುವಂತೆಯೂ ಇತ್ತೀಚೆಗೆ ರಾಜ್ಯ ಉಚ್ಛನ್ಯಾಯಾಲಯಕ್ಕೆ ಕೋರಿಕೆ ಮಂಡಿಸಿದೆ.

ಈ ಸಂಬಂಧ ಮಡಿಕೇರಿ ಅರಮನೆಯ ಸ್ಥಿತಿಗತಿ ಬಗ್ಗೆ ಉಚ್ಛನ್ಯಾಯಾಲಯದ ನಿರ್ದೇಶನದಂತೆ; ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಾಗಿರುವ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕಿ ಮೂರ್ತೇಶ್ವರಿ ಮತ್ತು ಸಂಬಂಧಿಸಿದ ಇಂಜಿನಿಯರ್ ಜಂಟಿ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಪ್ರಸಕ್ತ ಜಿಲ್ಲಾಡಳಿತದ ಅಧೀನವಿರುವ ಅರಮನೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಕಚೇರಿಗಳ ತೆರವಿಗೂ ಕ್ರಮ ಕೈಗೊಂಡಿದ್ದಾರೆ. ಮಾತ್ರವಲ್ಲದೆ ಕೋಟೆಯ ಸುತ್ತ ಬೆಳೆದುನಿಂತಿದ್ದ ಕಾಡು, ಗಿಡಗಂಟಿಗಳನ್ನು ಕಿತ್ತೊಗೆದು ಅರಮನೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ.

ದಸರಾ ಆನೆಗಳಿಗೆ ಬರೋಬ್ಬರಿ 98 ಲಕ್ಷದ ವಿಮೆ !

 ಪ್ರವಾಸಿಗರು ಶಾಪ ಹಾಕುವುದು ತಪ್ಪಬೇಕು

ಪ್ರವಾಸಿಗರು ಶಾಪ ಹಾಕುವುದು ತಪ್ಪಬೇಕು

ಈಗಾಗಲೇ ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿರುವ ಕೋಟೆ, ಅರಮನೆ ಮತ್ತು ಅದರ ವ್ಯಾಪ್ತಿಯಲ್ಲಿರುವ ಸ್ಮಾರಕಗಳ ನವೀಕರಣವಾಗಬೇಕಿದೆ. ಆ ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಬೇಕಾಗಿದೆ. ಇದುವರೆಗೆ ದೂರದಿಂದ ಪ್ರವಾಸಿಗರು ಇಲ್ಲಿನ ಅರಮನೆ ಮತ್ತು ಅದು ಇರುವ ದುಸ್ಥಿತಿಯನ್ನು ನೋಡಿ ಮರುಗಿ ಹೋಗುತ್ತಿದ್ದರು. ಆದರೆ ಮುಂದೆ ಈ ರೀತಿಯಾಗದೆ ಗತವೈಭವವನ್ನು ಸಾರುವಂತಾಗಬೇಕು.

ದಸರಾಕ್ಕೆ ಬರುವ ಪ್ರವಾಸಿಗರು ಮಡಿಕೇರಿ ಅರಮನೆಯನ್ನು ಕಣ್ತುಂಬಿಕೊಳ್ಳುವಂತಾಗಬೇಕು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿ ಬಳಿಕ ಕೋಟೆಯ ದ್ವಾರಗಳನ್ನು ಮುಚ್ಚುವ ಕೆಲಸವಾಗಬೇಕಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ ಕೋಟೆ ಮತ್ತು ಅರಮನೆ ಮರಳಿ ತನ್ನ ವೈಭವವನ್ನು ಸಾರುವಂತಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.

 ಕೋಟೆ-ಅರಮನೆಗೂ ಇದೆ ಭವ್ಯ ಇತಿಹಾಸ

ಕೋಟೆ-ಅರಮನೆಗೂ ಇದೆ ಭವ್ಯ ಇತಿಹಾಸ

ಮಡಿಕೇರಿ ಕೋಟೆ ಮತ್ತು ಅರಮನೆಯ ಬಗ್ಗೆ ಹೇಳಿದ ಬಳಿಕ ಇದರ ಇತಿಹಾಸವನ್ನು ಮೆಲುಕು ಹಾಕದಿದ್ದರೆ ಇದರ ಮಹತ್ವ ಅರಿವಾಗುವುದಿಲ್ಲ. ಇಕ್ಕೇರಿಯ ರಾಜಕುಮಾರ ವೀರರಾಜ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ ಕೆಲವು ವರ್ಷಗಳಲ್ಲಿ ಅರಸೊತ್ತಿಗೆಯನ್ನು ಸ್ಥಾಪಿಸಿದವನು. ವೀರರಾಜರ ನಂತರ ಅವರ ಮಗ ಅಪ್ಪಾಜಿರಾಜನಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ನಂತರ ಮುದ್ದುರಾಜನು 1633ರಿಂದ 1687ರವರೆಗೆ ಸುಮಾರು 54 ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಈತ ತನ್ನ ರಾಜಧಾನಿಯನ್ನು ಹಾಲೇರಿಯಿಂದ ಕೊಡಗಿನ ಮಧ್ಯ ಭಾಗದಲ್ಲಿರುವ ಮತ್ತು ಶತ್ರುಗಳ ಆಕ್ರಮಣಕ್ಕೆ ಸಿಲುಕದಂತಹ ಸ್ಥಳಕ್ಕೆ ಬದಲಾಯಿಸುವ ತೀರ್ಮಾನ ಕೈಗೊಂಡಿದ್ದನು. ಅಲ್ಲದೆ ಸೂಕ್ತ ಸ್ಥಳವನ್ನು ಅರಸುತ್ತಿದ್ದನು.

 ಬೇಟೆನಾಯಿಗೆ ತಿರುಗಿ ಬಿದ್ದ ಮೊಲ

ಬೇಟೆನಾಯಿಗೆ ತಿರುಗಿ ಬಿದ್ದ ಮೊಲ

ಹೀಗಿರಲು ಒಂದು ದಿನ ಮುದ್ದುರಾಜ ತನ್ನ ಸೈನಿಕರೊಂದಿಗೆ ದಟ್ಟ ಕಾಡಿನ ನಡುವೆ ಬೇಟೆಯಾಡುತ್ತಾ ಹೊರಟನು. ಹಾಗೆ ಹೋಗುವಾಗ ಒಂದು ವಿಚಿತ್ರವನ್ನು ಅವನು ಅಲ್ಲಿ ಕಂಡನು. ಅದೇನೆಂದರೆ ರಾಜನೊಂದಿಗೆ ಬಂದಿದ್ದ ಬೇಟೆ ನಾಯಿಯೊಂದು ಕಾಡಿನಲ್ಲಿ ನುಗ್ಗಿ ಗಂಡು ಮೊಲವೊಂದನ್ನು ಕಡಿಯಲು ಹೋದಾಗ ಅದು ಓಡದೆ ತಿರುಗಿ ನಿಂತಿತಲ್ಲದೆ ಬೇಟೆ ನಾಯಿಯನ್ನೇ ಅಟ್ಟಿಸಿಕೊಂಡು ಬಂದಿತು. ಇದನ್ನು ಕಣ್ಣಾರೆ ಕಂಡ ಮುದ್ದುರಾಜ ಈ ಭೂಮಿ ಗಂಡು ನೆಲ ಎಂದು ಇಲ್ಲಿಯೇ ಕೋಟೆ ಮತ್ತು ಅರಮನೆಯನ್ನು ಕಟ್ಟಲು ತೀರ್ಮಾನ ಕೈಗೊಂಡನು.

ಅದರಂತೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆಯನ್ನೂ ಹಾಗೂ ಅರಮನೆಯನ್ನು ನಿರ್ಮಿಸಿದನು. ಮುಂದೆ ಮುದ್ದುರಾಜ ನಿರ್ಮಿಸಿದ ಊರು ಮುದ್ದುರಾಜಕೇರಿಯಾಗಿ ಆಮೇಲೆ ಮಡಿಕೇರಿಯಾಯಿತು.

ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ

 ಮರ್ಕೆರಾ ಅಂದರೂ ಮಡಿಕೇರಿ ಬದಲಾಗಲಿಲ್ಲ

ಮರ್ಕೆರಾ ಅಂದರೂ ಮಡಿಕೇರಿ ಬದಲಾಗಲಿಲ್ಲ

ಬ್ರಿಟಿಷರು ಮರ್ಕೆರಾ ಎಂದು ಕರೆದರೂ ಮಡಿಕೇರಿಯಾಗಿಯೇ ಉಳಿದಿದೆ. 1681ರಲ್ಲಿ ಅರಮನೆ ನಿರ್ಮಾಣವಾದಾಗ ಬರೀ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿತ್ತು. ಮುದ್ದುರಾಜ ನಿರ್ಮಿಸಿದ ಕೋಟೆಯನ್ನು ನಂತರ ವಶಪಡಿಸಿಕೊಂಡ ಟಿಪ್ಪು ಸುಲ್ತಾನ್ ಮಣ್ಣಿನ ಕೋಟೆಯನ್ನು ಕಲ್ಲಿನ ಕೋಟೆಯಾಗಿ ಮಾರ್ಪಡಿಸಿದನಲ್ಲದೆ, "ಜಾಫರಾಬಾದ್" ಎಂಬ ಹೆಸರಿಟ್ಟನು. ಆ ಬಳಿಕ 1734ರಲ್ಲಿ ಇದು ಬ್ರಿಟಿಷರ ವಶವಾಯಿತು.

ಕೋಟೆಯು ಅಂಕುಡೊಂಕಾದ ಷಡ್ಕೋನಾಕಾರದ ಸ್ಥಳ ವಿನ್ಯಾಸವನ್ನು ಹೊಂದಿದ್ದು, ಆರು ವಿವಿಧ ಮೂಲೆಗಳಲ್ಲಿ ಬುರುಜನ್ನು ಹೊಂದಿದೆ. ಈ ಬುರುಜುಗಳಿಂದ ನಿಂತು ನೋಡಿದರೆ ನಗರದ ವಿಹಂಗಮ ನೋಟ ಕಾಣುತ್ತದೆ. ಕೋಟೆಯ ಮಹಾದ್ವಾರವು ಪೂರ್ವಾಭಿಮುಖವಾಗಿದ್ದು, ಈ ದ್ವಾರದಿಂದ ಪ್ರವೇಶಿಸಿ ಮೊದಲ ದ್ವಾರ ದಾಟುತ್ತಿದ್ದಂತೆಯೇ ಗಣಪತಿ ದೇಗುಲ ಸಿಗುತ್ತದೆ. ಅಲ್ಲಿಂದ ಮುಂದೆ ಸಿಗುವ ದ್ವಾರ ಪ್ರವೇಶಿಸಿ ಮುನ್ನಡೆದರೆ ಅರಮನೆ ಎದುರಾಗುತ್ತದೆ.

ಅರಮನೆಯು 1814ರ ನಂತರದ ವರ್ಷಗಳಲ್ಲಿ ಪುನರಚನೆಗೊಂಡಿದ್ದು, ಎರಡನೆಯ ಲಿಂಗರಾಜನ ಕಾಲದಲ್ಲಿದ್ದ ಹುಲ್ಲಿನ ಚಾವಣಿಯನ್ನು ತೆಗೆದು ಬ್ರಿಟಿಷರು ಹೆಂಚು ಹಾಕಿದರು. ಅರಮನೆಯ ಆರಂಭ ಮತ್ತು ಮುಕ್ತಾಯದ ಬಗೆಗೆ ಇಲ್ಲಿನ ಹಿತ್ತಾಳೆಯ ಫಲಕ ಮಾಹಿತಿ ನೀಡುತ್ತದೆ.

ಒಟ್ಟಾರೆ ತನ್ನದೇ ಇತಿಹಾಸ ಸಾರುತ್ತಾ ನಿಂತಿರುವ ಅರಮನೆ ಮುಂದಿನ ದಿನಗಳಲ್ಲಿ ತನ್ನ ಖ್ಯಾತಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿಕೊಂಡು ಪ್ರವಾಸಿಗರನ್ನು ಸೆಳೆಯುವಂತಾಗಲಿ. ಆ ಕೆಲಸವನ್ನು ಭಾರತೀಯ ಪುರಾತತ್ವ ಇಲಾಖೆ ಆದಷ್ಟು ಬೇಗ ಮಾಡಲಿ.

English summary
The main attraction of Mysore Dasara is the Palace. But even if there is a palace in Madikeri, it will be not given importance in Dasara. But now, the Indian Archaeological Department is lookout to regain its charm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X