ದಲಿತ ಕೇರಿಯಲ್ಲಿ ಬಿಜೆಪಿಯಿಂದ ರಕ್ಷಾ ಬಂಧನ
ಮಡಿಕೇರಿ, ಆಗಸ್ಟ್ 8: ವಿಧಾನಸಭಾ ಚುನಾವಣೆಗೆ ಇನ್ನು ಒಂಬತ್ತು ತಿಂಗಳು ಇರುವಂತೆಯೇ ಬಿಜೆಪಿ ಎಲ್ಲ ರೀತಿಯಲ್ಲೂ ಜನಮನವೊಲಿಸುವ ಕಾರ್ಯವನ್ನು ಮಾಡುತ್ತಾ ಸಾಗುತ್ತಿದೆ.
ಜನರಿಗೆ ಮತ್ತಷ್ಟು ಹತ್ತಿರವಾಗುವ ಸಲುವಾಗಿಯೇ ದಲಿತರ ಮನೆಗೆ, ದಲಿತರ ಕೇರಿಗೆ ಹೋಗಿ ಮನೆಗಳಲ್ಲಿ ಉಪಹಾರ ಸೇವಿಸುವ ಮೂಲಕ ಬಿಜೆಪಿ ಸುದ್ದಿ ಮಾಡಿದ್ದಲ್ಲದೆ, ರಾಜಕೀಯವಾಗಿ ದಲಿತರನ್ನು ತಮ್ಮ ಪಕ್ಷದತ್ತ ಸೆಳೆದುಕೊಳ್ಳುವ ತಂತ್ರ ರೂಪಿಸಲಾಗಿತ್ತು.

ಇದೀಗ ಬಿಜೆಪಿಯ ಕಲೆ ಮತ್ತು ಸಾಂಸ್ಕೃಕ ಪ್ರಕೋಷ್ಟದ ಜಿಲ್ಲಾ ಘಟಕದ ವತಿಯಿಂದ ಮಡಿಕೇರಿ ಬಳಿಯ ಕರ್ಣಂಗೇರಿ ಗ್ರಾಮದ ದಲಿತರ ಕೇರಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಆ ಮೂಲಕ ಸಮಾನತೆ ಸಾರುವ ಕೆಲಸ ಮಾಡಿದೆಯಲ್ಲದೆ, ರಾಜಕೀಯವಾಗಿಯೂ ಅದರಿಂದ ಲಾಭ ಪಡೆಯುವ ಕೆಲಸ ಮಾಡಿದೆ.

ದಲಿತ ಕೇರಿಯಲ್ಲಿ ರಕ್ಷ ಬಂಧನ ಆಚರಣೆ ಕುರಿತಂತೆ ಮಾತನಾಡಿದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚಂಗಪ್ಪ ರಕ್ಷಾಬಂಧನ ಎನ್ನುವುದು ಸ್ನೇಹ, ಸಹೋದರತೆ, ಸಹಕಾರ ರಕ್ಷಣೆಯ ಸಂಕೇತವಾಗಿದೆ. ಎಂತಹ ವೈರಿಗಳನ್ನೂ ಮಿತ್ರರನ್ನಾಗಿಸುವ ಶಕ್ತಿ ಈ ರಕ್ಷ ಬಂಧನಕ್ಕಿದೆ ಎಂದರು.
ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಭಾರತಿ ರಮೇಶ್ ಮಾತನಾಡಿ, ರಕ್ಷಾ ಬಂಧನ ಕೇವಲ ಸಹೋದರಿಯನ್ನು ರಕ್ಷಿಸಲು ಮಾತ್ರ ಸೀಮಿತವಾಗದೆ ಮಾತೃಭೂಮಿ, ಪರಿಸರ, ಜಲವನ್ನು ಸಂರಕ್ಷಿಸುವ ಅಸ್ತ್ರವಾಗಬೇಕೆಂದರು.

ಈ ವೇಳೆ ಬಿಜೆಪಿಯ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷರಾದ ಎಸ್.ಸಿ.ಸತೀಶ್ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.












Click it and Unblock the Notifications