ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಕೊಡವ ಹಾಕಿ ಉತ್ಸವ..ಇದರ ಹಾದಿಯೇ ರೋಚಕ!
ಮಡಿಕೇರಿ, ಮಾರ್ಚ್ 25: ಕೊಡವ ಹಾಕಿ ಉತ್ಸವಕ್ಕೀಗ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂಭ್ರಮಕ್ಕೆ ಮುದ್ದಂಡ ಕುಟುಂಬ ಸಾಕ್ಷಿಯಾಗುತ್ತಿದೆ. ಈ ಬಾರಿಯ ಹಾಕಿ ಉತ್ಸವವು ಮುದ್ದಂಡ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿದ್ದು, ಕಳೆದೊಂದು ವರ್ಷದ ಶ್ರಮದಿಂದಾಗಿ ಪಂದ್ಯಾವಳಿ ಅಚ್ಚುಕಟ್ಟಾಗಿ ಆಯೋಜನೆಗೊಳ್ಳುತ್ತಿದ್ದು, ಪಂದ್ಯಾವಳಿಗೆ ಬೇಕಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಅದ್ಧೂರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ಈ ಬಾರಿಯ 'ಮುದ್ದಂಡ ಹಾಕಿ ಉತ್ಸವ'ದ ಉದ್ಘಾಟನೆ ಮಾ.28ರಂದು ಮಡಿಕೇರಿಯ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9.45ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ನಂತರ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತದೆ.

ಈ ನಡುವೆ ಮುದ್ದಂಡ ಹಾಕಿ ಪಂದ್ಯಾವಳಿಯ ಕ್ರೀಡಾ ಜ್ಯೋತಿ ಕರಡ ಗ್ರಾಮದ ಪಾಂಡಂಡ ಐನ್ ಮನೆಯಲ್ಲಿ ಉದ್ಘಾಟನೆಗೊಂಡಿದ್ದು, ಕ್ರೀಡಾ ಜ್ಯೋತಿಯನ್ನು ಪಾಂಡಂಡ ಮೊಣ್ಣಪ್ಪ, ಪಾಂಡಂಡ ದಿ.ಕುಟ್ಟಪ್ಪ ಅವರ ಪತ್ನಿ ಲೀಲಾ ಕುಟ್ಟಪ್ಪ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಸಂಪ್ರದಾಯಬದ್ಧವಾಗಿ ಉದ್ಘಾಟಿಸಿದ್ದಾರೆ.
ಇನ್ನು ಈ ಕ್ರೀಡಾಜ್ಯೋತಿ ಇದುವರೆಗೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿರುವ 24 ಕೊಡವ ಕುಟುಂಬಗಳ ಐನ್ ಮನೆ(ಹಿರಿಯ ಮನೆ) ಗಳಿಗೆ ಮ್ಯಾರಥಾನ್ ಮೂಲಕ ತಲುಪಲಿದ್ದು, ಆ ನಂತರ ಅಂತಿಮವಾಗಿ,ಮಾರ್ಚ್ 28 ರಂದು ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಿಂದ ಹಾಕಿ ಪಂದ್ಯಾವಳಿ ನಡೆಯಲಿರುವ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಮೆರವಣಿಗೆಯ ಮೂಲಕ ತೆರಳಲಿದೆ. ಅಂದು ಉದ್ಘಾಟನಾ ಪ್ರದರ್ಶನ ಪಂದ್ಯವಾಗಿ ಕೊಡವ ಹಾಕಿ ಅಕಾಡೆಮಿ- ಇಲೆವೆನ್ ಹಾಗೂ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ಕರ್ನಾಟಕ- ಇಲೆವೆನ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.

ಹಾಕಿ ಉತ್ಸವ ಕೊಡಗಿನ ಹೆಮ್ಮೆ
ಇನ್ನು ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಪಂದ್ಯಾವಳಿಯ ಬಗ್ಗೆ ಹೇಳಬೇಕೆಂದರೆ ಇದೊಂದು ಹೆಮ್ಮೆಯಾಗಿದೆ. ಏಕೆಂದರೆ ಇದು ಕೇವಲ ಪಂದ್ಯಾವಳಿಯಾಗಿ ಉಳಿಯದೆ ಹಬ್ಬವಾಗಿ ಕಂಗೊಳಿಸುತ್ತಿದೆ. ಹಾಕಿ ಪಂದ್ಯಾವಳಿ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ, ಕ್ರೀಡಾ ಉತ್ಸಾಹ ಮನೆಮಾಡುವುದು ಮಾಮೂಲಿಯಾಗಿದೆ. ಅದರಲ್ಲೂ ಈ ಬಾರಿ 25ನೇ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಅರ್ಥಾತ್ ಬೆಳ್ಳಿಹಬ್ಬದ ಸಡಗರ ಹೀಗಿರಬೇಕಾದರೆ ಇಡೀ ಜಿಲ್ಲೆಯಲ್ಲಿ ಕ್ರೀಡಾಸಂಭ್ರಮ ಮನೆ ಮಾಡದಿದ್ದರೆ ಹೇಗೆ?
ಕಳೆದ ಇಪ್ಪತ್ತನಾಲ್ಕು ಪಂದ್ಯಾವಳಿ ಕೊಡಗಿನ ವಿವಿಧ ಊರುಗಳಲ್ಲಿ ನಡೆದಿದ್ದು, ಈ ಬಾರಿ ಮುಖ್ಯಪಟ್ಟಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಹೀಗಾಗಿ ಜಿಲ್ಲೆಯವರು ಮಾತ್ರವಲ್ಲದೆ ಹೊರಗಿನಿಂದ ಆಗಮಿಸುವ ಕ್ರೀಡಾಪ್ರೇಮಿಗಳಿಗೂ ಅನುಕೂಲವಾಗಿದೆ. ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಬಗ್ಗೆ ಹೇಳಬೇಕೆಂದರೆ ಇದು 'ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮತ್ತು ಗಿನ್ನಿಸ್ ನಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.

ಜತೆಗೆ ಕೇವಲ ಸೋಲು-ಗೆಲುವಿನ ಲೆಕ್ಕಚಾರದ ಪಂದ್ಯವಾಗಿರದೆ, ಕೊಡವ ಸಮುದಾಯದ ಒಗ್ಗಟ್ಟು, ಪ್ರೀತಿ-ವಿಶ್ವಾಸವನ್ನು ಬಲಪಡಿಸುವ, ಯುವ ಸಮೂಹದಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ, ರಾಷ್ಟ್ರೀಯ -ಅಂತರಾಷ್ಟ್ರೀಯ ಕ್ರೀಡಾ ಕಲಿಗಳ ಮೂಲಕ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ, ಆಟದ ನಿಯಮ, ಶಿಸ್ತು, ಚಾಕಚಕ್ಯತೆಗಳನ್ನು ಪರಿಚಯಿಸುವ, ವಿವಾಹ ಸಂಬಂಧ ಬೆಳೆಸುವ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಮುಂದುವರೆಸುವ ಹಬ್ಬವಾಗಿಯೂ ಗಮನಸೆಳೆಯುತ್ತಿದೆ.
ಈ ಬಾರಿ 46 ಮಹಿಳಾ ತಂಡಗಳು ಭಾಗಿ
ಈ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಹಾಕಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಆಟಗಾರರಲ್ಲದೆ, ಇತರೆ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ಮೆರೆದ, ಸೇನೆ, ಪೊಲೀಸ್, ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು, ಕಾಫಿ ಬೆಳೆಗಾರರು, ವಿದ್ಯಾರ್ಥಿಗಳು, ಯುವಕರು, ಯುವತಿಯರು ಒಟ್ಟಾಗಿ ಕುಟುಂಬದ ತಂಡವನ್ನು ಸಿದ್ಧಪಡಿಸಿಕೊಂಡು ಆಡುವುದು ವಿಶೇಷವಾಗಿದೆ. ಆದರೆ ಈ ಬಾರಿ ಸುಮಾರು 46 ಮಹಿಳಾ ತಂಡಗಳು ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷದಲ್ಲಿ ವಿಶೇಷವಾಗಿದೆ. ಇವತ್ತು ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿಯೂ ಹೆಸರು ಮಾಡಿರುವ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿಯ ಹುಟ್ಟಿನ ಬಗ್ಗೆ ಮೆಲುಕು ಹಾಕಿದರೆ ಇದರ ಹಿಂದೆ ಹತ್ತು ಹಲವು ರೋಚಕತೆ ಇರುವುದನ್ನು ನಾವು ಕಾಣಬಹುದಾಗಿದೆ.

1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿ 'ಹಾಕಿ ಪಂದ್ಯಾವಳಿ' ಯನ್ನು ಆರಂಭಿಸಲಾಯಿತು. ಕೊಡವರೆಲ್ಲರೂ ಇದನ್ನು ಪಂದ್ಯಾವಳಿಯಾಗಿ ನೋಡದೆ ನಮ್ಮದೇ ಹಬ್ಬ ಎಂಬಂತೆ ನೋಡಿದರೆ ಪರಿಣಾಮ ಅದು ಹಾಕಿ ನಮ್ಮೆ (ಹಾಕಿ ಹಬ್ಬ) ಆಯಿತು. ಮೊದಲ ಬಾರಿ ಪಂದ್ಯಾವಳಿ ಆರಂಭವಾದಾಗ ಪಾಂಡಂಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು ತದ ನಂತರ ಸೃಷ್ಟಿಯಾಗಿದ್ದೇ ಇತಿಹಾಸ.
ಹಾಕಿಯ ಸಾರಥ್ಯ ವಹಿಸಿದ ಕುಟುಂಬ ಮತ್ತು ಗೆದ್ದವರು
1998ರಲ್ಲಿ ಕಡಂಗದಲ್ಲಿ ನಡೆದ ಕೋಡಿರಕಪ್‌ನಲ್ಲಿ 116 ತಂಡಗಳು ಪಾಲ್ಗೊಂಡು ಕುಲ್ಲೇಟಿರ ತಂಡ ವಿಜಯಿಯಾದರೆ, 1999ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಬಲ್ಲಚಂಡಕಪ್‌ನಲ್ಲಿ 140 ತಂಡಗಳು ಪಾಲ್ಗೊಂಡಿದ್ದು ಕೂತಂಡ ಹಾಗೂ ಕುಲ್ಲೇಟಿರ ತಂಡಗಳು ಕಪ್ನ ಒಡೆತನವನ್ನು ಹಂಚಿಕೊಂಡಿದ್ದವು.
2000ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರಕಪ್ ನಲ್ಲಿ 170 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ಗೆಲುವು ಪಡೆದಿತ್ತು. 2001ರಲ್ಲಿ ಅಮ್ಮತ್ತಿಯಲ್ಲಿ ನಡೆದ ನೆಲ್ಲಮಕ್ಕಡ ಕಪ್ ನಲ್ಲಿ 220 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ವಿಜಯಿಯಾಗಿತ್ತು. 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚಕ್ಕೇರಕಪ್ ನಲ್ಲಿ 252 ತಂಡಗಳು ಪಾಲ್ಗೊಂಡಿದ್ದು ಅವುಗಳಲ್ಲಿ ಕುಲ್ಲೇಟಿರ ತಂಡ ಒಡೆತನ ಸಾಧಿಸಿತ್ತು.
2003ರಲ್ಲಿ ನಾಪೋಕ್ಲುನಲ್ಲಿ ನಡೆದ ಕಲಿಯಂಡ ಕಪ್ ನಲ್ಲಿ 280 ತಂಡಗಳು ಭಾಗವಹಿಸಿದ್ದು ನೆಲ್ಲಮಕ್ಕಡ ತಂಡ ಗೆಲುವು ಸಾಧಿಸಿತ್ತು.
2004ರಲ್ಲಿ ಮಾದಾಪುರದಲ್ಲಿ ನಡೆದ ಮಾಳೆಯಂಡ ಕಪ್‌ನಲ್ಲಿ 235 ತಂಡ ಪಾಲ್ಗೊಂಡು ಕೂತಂಡ ತಂಡ ಗೆಲುವು ಪಡೆದಿತ್ತು. 2005ರಲ್ಲಿ ಮಡಿಕೇರಿಯಲ್ಲಿ ನಡೆದ ಬಿದ್ದಂಡ ಕಪ್‌ನಲ್ಲಿ 222 ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ವಿಜಯಿಯಾಗಿತ್ತು.
2006ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಕಳ್ಳಿಚಂಡ ಕಪ್‌ನಲ್ಲಿ 217 ತಂಡಗಳು ಭಾಗವಹಿಸಿ ಪಳಂಗಂಡ ತಂಡ ಒಡೆತನ ಸಾಧಿಸಿತ್ತು. 2007ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಮಂಡೇಟಿರ ಕಪ್ ನಲ್ಲಿ 186 ತಂಡ ಪಾಲ್ಗೊಂಡು ಮಂಡೇಪಂಡ ತಂಡ ಗೆಲುವು ಪಡೆದಿತ್ತು. 2008ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಅಳಮೇಂಗಡ ಕಪ್‌ನಲ್ಲಿ 216 ತಂಡಗಳು ಪಾಲ್ಗೊಂಡು ಅಂಜಪರವಂಡ ಗೆಲುವು ಪಡೆದಿತ್ತು.
ಹ್ಯಾಟ್ರಿಕ್ ಸಾಧನೆಯ ಪಳಂಗಂಡ ತಂಡ
2009ರಲ್ಲಿ ಅಮ್ಮತ್ತಿಯಲ್ಲಿ ನಡೆದ ಮಂಡೇಪಂಡ ಕಪ್‌ನಲ್ಲಿ 231 ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ಒಡೆತನ ಸಾಧಿಸಿತ್ತು. 2010ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮನೆಯಪಂಡ ಕಪ್‌ನಲ್ಲಿ ಸುಮಾರು 214 ತಂಡಗಳು ಭಾಗವಹಿಸಿದ್ದವಲ್ಲದೆ ಅಂತಿಮವಾಗಿ ಪಳಂಗಂಡ ತಂಡ ಕಪ್‌ನ್ನು ತನ್ನದಾಗಿಸಿಕೊಂಡಿತು. 2011ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮಚ್ಚಾಮಾಡ ಕಪ್ ಪಂದ್ಯಾವಳಿಯಲ್ಲಿ 228 ತಂಡಗಳು ಭಾಗವಹಿಸಿದ್ದ ಆಟದಲ್ಲಿ ಪಳಂಗಂಡ ತಂಡ ಕಪ್‌ನ್ನು ತನ್ನದಾಗಿಸಿಕೊಂಡಿತ್ತು.
2012ರಲ್ಲಿ ಅಮ್ಮತ್ತಿಯಲ್ಲಿ ನಡೆದ ಐಚೆಟ್ಟಿರ ಕಪ್ ಪಂದ್ಯಾವಳಿಯಲ್ಲಿ 217 ತಂಡಗಳು ಭಾಗವಹಿಸಿದ್ದವಾದರೂ ಪಳಂಗಂಡ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. 2013ರಲ್ಲಿ ವೀರಾಜಪೇಟೆಯ ಬಾಳುಗೋಡುವಿನಲ್ಲಿ ಮಾದಂಡ ಕಪ್ ನಡೆದು 225 ತಂಡಗಳು ಭಾಗವಹಿಸಿ ಅಂಜಪರವಂಡ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡರೆ ಹ್ಯಾಟ್ರಿಕ್ ಸಾಧನೆ ಮಾಡಿದ ಪಳಂಗಂಡ ತಂಡ ರನ್ನರ್‌ಗೆ ತೃಪ್ತಿಪಟ್ಟುಕೊಂಡಿತ್ತು.
2014ರಲ್ಲಿ ವೀರಾಜಪೇಟೆಯಲ್ಲಿ ತಾತಂಡಕಪ್ ನಡೆದು 242 ತಂಡಗಳು ಭಾಗವಹಿಸಿ ಕಲಿಯಂಡ ಕುಟುಂಬದ ತಂಡ ಚಾಂಪಿಯನ್ ಪಟ್ಟ ಕಟ್ಟಿಕೊಂಡರೆ ಪಳಂಗಂಡ ರನ್ನರ್‌ಗೆ ತೃಪ್ತಿಪಟ್ಟುಕೊಂಡಿತ್ತು. 2015ರಲ್ಲಿ ವೀರಾಜಪೇಟೆಯಲ್ಲಿ ನಡೆದ ಕುಪ್ಪಂಡ ಕಪ್ ನಡೆದು 225 ತಂಡಗಳು ಭಾಗವಹಿಸಿ ಪಳಂಗಡ ಗೆಲುವು ಪಡೆದರೆ ಚೇಂದಂಡ ತಂಡ ರನ್ನರ್ ಆಗಿತ್ತು. 2016ರಲ್ಲಿ ಶಾಂತೆಯಂಡ ಕಪ್ ಮಡಿಕೇರಿಯಲ್ಲಿ ನಡೆದಿದ್ದು, ಈ ವೇಳೆ 299 ತಂಡಗಳು ಭಾಗವಹಿಸಿ ಪಳಂಗಂಡ ವಿರುದ್ಧ ಕಲಿಯಂಡ ಗೆಲುವು ಸಾಧಿಸಿತ್ತು.
ತದ ನಂತರ 2017ರಲ್ಲಿ ನಾಪೋಕ್ಲುನಲ್ಲಿ ನಡೆದ ಬಿದ್ದಾಟಂಡ ಕಪ್ ನಲ್ಲಿ 306 ತಂಡಗಳು ಭಾಗವಹಿಸಿ ಪರದಂಡ ತಂಡದ ವಿರುದ್ಧ ಚೇಂದಂಡ ತಂಡ ಗೆಲುವಿನ ನಗೆ ಬೀರಿತ್ತು. 2018ರಲ್ಲಿ ನಾಪೋಕ್ಲುನಲ್ಲಿ ನಡೆದ ಕುಲ್ಲೇಟಿರ ಕಪ್ ನಲ್ಲಿ 334 ತಂಡಗಳು ಭಾಗವಹಿಸಿ ಚೇಂದಂಡ ತಂಡವು ಅಂಜಪರವಂಡ ತಂಡದ ವಿರುದ್ದ ಜಯ ಸಾಧಿಸಿತ್ತು.
ನಾಲ್ಕು ವರ್ಷ ಪಂದ್ಯಾವಳಿ ನಡೆಯಲಿಲ್ಲ
ಸುಮಾರು 22 ವರ್ಷಗಳ ಕಾಲ ಸುಧೀರ್ಘವಾಗಿ ನಡೆದುಕೊಂಡು ಬಂದಿದ್ದ ಹಾಕಿ ಪಂದ್ಯಾವಳಿ ಇಷ್ಟರಲ್ಲೇ ಬೆಳ್ಳಿ ಹಬ್ಬವನ್ನು ಆಚರಿಸಬೇಕಾಗಿತ್ತು. ಆದರೆ ಕೊಡಗಿನಲ್ಲಿ ಯಾರೂ ನಿರೀಕ್ಷಿಸದ ಘಟನೆ ನಡೆದು ಹೋಗಿತ್ತು. 2018ರಲ್ಲಿ ಮಹಾಮಳೆಗೆ ಸಂಭವಿಸಿದ -ಪ್ರಕೃತಿ ವಿಕೋಪಕ್ಕೆ ಕೊಡಗು ನಲುಗುವಂತಾಯಿತು. ಹೀಗಾಗಿ 2019ರಲ್ಲಿ ಹಾಕಿ ಪಂದ್ಯಾವಳಿ ನಡೆಯಲಿಲ್ಲ. ಆ ನಂತರ 2020ರಲ್ಲಿ ಮಹಾಮಾರಿ ಕೊರೋನಾ ವಕ್ಕರಿಸಿತು. ಪರಿಣಾಮ 2021 ಮತ್ತು 2022ರಲ್ಲಿ ನಡೆಯಲಿಲ್ಲ. ಇದಾದ ಬಳಿಕ ಮತ್ತೆ 2023ರಲ್ಲಿ ಮತ್ತೆ ಪಂದ್ಯಾವಳಿಯನ್ನು ಮುಂದುವರೆಸಲಾಯಿತು.
ನಾಪೋಕ್ಲುನಲ್ಲಿ ನಡೆದ ಅಪ್ಪಚೆಟ್ಟೋಳಂಡ ಕಪ್ ಹಾಕಿಯಲ್ಲಿ 336 ತಂಡಗಳು ಭಾಗವಹಿಸಿದ್ದು ಕೈಕೇರಿಯ ಕುಪ್ಪಂಡ ಮತ್ತು ಕುಲ್ಲೇಟಿರ ತಂಡದ ನಡುವೆ ಅಂತಿಮ ಪಂದ್ಯ ನಡೆದು ಕುಪ್ಪಂಡ ಗೆಲುವು ಸಾಧಿಸಿತ್ತು. 2024ರಲ್ಲಿ ನಾಪೋಕ್ಲುನಲ್ಲಿ ನಡೆದ ಕುಂಡ್ಯೋಳಂಡ ಕಪ್ ನಲ್ಲಿ 360 ತಂಡಗಳು ಭಾಗವಹಿಸಿ ಫೈನಲ್ ನಲ್ಲಿ ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳ ನಡುವೆ ರೋಚಕ ಪಂದ್ಯಾವಳಿ ನಡೆದು ಚೇಂದಂಡ ತಂಡ ಗೆಲುವು ಸಾಧಿಸಿತ್ತು. ಈ ಬಾರಿ 396 ತಂಡಗಳು ಭಾಗವಹಿಸುತ್ತಿದ್ದು ಯಾರು ಗೆಲುವಿನ ನಗೆ ಬೀರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications