ಕೊಡಗಿನ ಪ್ರವಾಸಿ ತಾಣ ದುಬಾರೆಯಲ್ಲಿ ರಿವರ್ ರಾಫ್ಟಿಂಗ್ ಸ್ಥಗಿತ: ಇಲ್ಲಿದೆ ಕಾರಣ?
ಮಡಿಕೇರಿ, ಮಾರ್ಚ್ 04: ಕೊಡಗಿನ ಪ್ರವಾಸಿ ತಾಣ ದುಬಾರೆಯ ಪ್ರಮುಖ ಆಕರ್ಷಣೆಗಳಲ್ಲೊಂದಾದ ರಿವರ್ ರಾಫ್ಟಿಂಗ್ ಇದೀಗ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಸ್ಥಗಿತಗೊಂಡಿದೆ. ಹೀಗಾಗಿ ರಾಫ್ಟಿಂಗ್ ಮಾಡಲು ಇಷ್ಟಪಡುವವರು ಮಳೆಗಾಲ ಆರಂಭವಾಗಿ ಕಾವೇರಿ ನದಿಯಲ್ಲಿ ನೀರು ಧುಮ್ಮಿಕ್ಕಿ ಹರಿಯುವ ತನಕ ಕಾಯುವುದು ಅನಿವಾರ್ಯವಾಗಿದೆ. ಬೇಸಿಗೆ ಆರಂಭವಾಗಿರುವುದರಿಂದ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ತಗ್ಗುತ್ತಾ ಹೋಗುತ್ತಿರುವುದು ಆತಂಕಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ನದಿ ಹರಿಯುವ ಪ್ರದೇಶ ಮೈದಾನದಂತೆ ಗೋಚರಿಸಿದರೂ ಅಚ್ಚರಿಯಿಲ್ಲ.
ಕಳೆದ ವರ್ಷ ಈ ವೇಳೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ತಳಮಟ್ಟಕ್ಕೆ ಕುಸಿದಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಶಾದಾಯಕವಾಗಿದೆ. ಆದರೆ ಇದೇ ರೀತಿ ಬೇಸಿಗೆಯ ಧಗೆ ಮುಂದುವರೆದರೆ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಸದ್ಯ ನೀರಿಲ್ಲದ ಕಾರಣ ರಾಫ್ಟಿಂಗ್ ಸ್ಥಗಿತಗೊಂಡಿದ್ದು. ಇದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಜೊತೆಗೆ ರಾಫ್ಟಿಂಗ್ ನಡೆಸುವವರಿಗೂ ಆದಾಯಕ್ಕೆ ಹೊಡೆತ ಬಿದ್ದಿದೆ. ರಾಫ್ಟಿಂಗ್ ನಿಂದಲೇ ಹಲವರು ಬದುಕು ಕಟ್ಟಿಕೊಂಡಿದ್ದರು. ಅವರು ಮಳೆಗಾಲ ಆರಂಭವಾಗುವ ತನಕ ಕಾಯಬೇಕಾಗಿದೆ.

ದೂರದಿಂದ ಪ್ರವಾಸಿಗರು ಕಾವೇರಿ ನದಿಯಲ್ಲಿ ದೋಣಿ ವಿಹಾರ ನಡೆಸಲೆಂದೇ ಬರುತ್ತಿದ್ದರು. ಆದರೀಗ ನೀರಿಲ್ಲದಿರುವುದು ಅವರಿಗೆ ಬೇಸರ ತಂದಿದೆ. ಕಾವೇರಿ ನದಿಯಲ್ಲಿ ಮಳೆಗಾಲದ ಆರಂಭದ ನಂತರ ಡಿಸೆಂಬರ್ ತನಕವೂ ತುಂಬಿ ಹರಿಯುತ್ತದೆ. ಈ ವೇಳೆ ರಿವರ್ ರಾಫ್ಟಿಂಗ್ ಮಾಡಲೆಂದೇ ಸ್ಥಳೀಯ ಮತ್ತು ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು, ಧುಮ್ಮಿಕ್ಕಿ ಹರಿಯುವ ನದಿಯಲ್ಲಿ ರಾಫ್ಟಿಂಗ್ ಮಾಡಿ ಖುಷಿ ಪಡುತ್ತಿದ್ದರು. ಇದೊಂದು ದುಬಾರೆಯ ಆಕರ್ಷಣೆಯಾಗಿ ಗಮನಸೆಳೆದಿತ್ತು.
ಪ್ರತಿ ವರ್ಷವೂ ಕಾವೇರಿನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ರಿವರ್ ರಾಫ್ಟಿಂಗ್ ಹಾಗೂ ದೋಣಿ ವಿಹಾರಗಳು ಸ್ಥಗಿತಗೊಳ್ಳುತ್ತವೆ. ಈ ವೇಳೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಬತ್ತಿದ ಕಾವೇರಿ, ಲವಲವಿಕೆ ಕಳೆದುಕೊಂಡ ಪರಿಸರ ಬೋರ್ ಹೊಡೆಸುತ್ತದೆ. ನದಿಯಲ್ಲಿ ನೀರು ಕಡಿಮೆಯಾದರೆ ದೋಣಿಯ ಸಹಾಯವಿಲ್ಲದೆ ನದಿಯೊಳಗೆ ಕಲ್ಲಿನಿಂದ ಕಲ್ಲಿಗೆ ಹಾರುತ್ತಾ ಆನೆಕ್ಯಾಂಪ್ ಕಡೆಗೆ ಹೋಗಬಹುದಾಗಿದ್ದು ಅಲ್ಲಿ ಆನೆ ಸಫಾರಿ ಮಾಡಿ ಹಿಂತಿರುಗಬಹುದು. ಆದರೆ ರಿವರ್ ರಾಫ್ಟಿಂಗ್ ಪ್ರವಾಸೋದ್ಯಮಕ್ಕೆ ಆದಾಯ ತರುತ್ತಿದ್ದು ಇದನ್ನು ನಂಬಿದ್ದವರು ಇದೀಗ ಪರ್ಯಾಯ ಉದ್ಯೋಗವನ್ನು ಕಂಡು ಕೊಳ್ಳಬೇಕಾಗುತ್ತದೆ.

ಈ ಬಾರಿ ಮುಂಗಾರು ಯಾವಾಗ ಆರಂಭವಾಗುತ್ತದೆ? ಮತ್ತು ಮಳೆಯ ಪ್ರಮಾಣ ಹೇಗಿರಲಿದೆ ಎಂಬುದರ ಮೇಲೆ ಮುಂದಿನ ರಿವರ್ ರಾಫ್ಟಿಂಗ್ ಆರಂಭವಾಗಲಿದೆ. ಮುಂಬರುವ ದಿನಗಳು ನಡು ಬೇಸಿಗೆಯ ದಿನಗಳಾಗಿರುವುದರಿಂದ ನೀರಿನ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ನದಿ, ಕೆರೆ, ಬಾವಿ ಹೀಗೆ ಜಲಮೂಲಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಲಿದೆ. ಸಮಯಕ್ಕೆ ಸರಿಯಾಗಿ ಮಳೆ ಬಂದರೆ ಜನ ನೆಮ್ಮದಿಯುಸಿರು ಬಿಡಬಹುದೇನೋ? ಕಳೆದ ವರ್ಷವಂತೂ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿ ಹಾಹಾಕಾರವುಂಟಾಗಿದ್ದನ್ನು ಮರೆಯುವಂತಿಲ್ಲ. ಹೀಗಾಗಿ ಕೊಡಗಿನ ಜನರು ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications