Kodagu Rain: ಮಳೆಗಾಲದಲ್ಲಿ ಕೊಡಗಿನ ಜನರನ್ನು ಕಾಡುವ ‘ಗುಡ್ಡದ ಭೂತ’
ಮಡಿಕೇರಿ, ಜೂನ್ 29: ಕೊಡಗಿನ ನಿಸರ್ಗ ಸುಂದರತೆಗೆ ಜೀವ ತುಂಬಿರುವುದೇ ಬೆಟ್ಟಗುಡ್ಡಗಳು.. ಈ ಬೆಟ್ಟಗುಡ್ಡ, ಕಂದಕಗಳ ನಡುವಿನ ಸಮತಟ್ಟು ಜಾಗದಲ್ಲಿ ತೋಟ, ಗದ್ದೆ, ಜನವಸತಿ ಪ್ರದೇಶಗಳು ಸೃಷ್ಟಿಯಾಗಿವೆ. ಬಹುತೇಕ ಪ್ರದೇಶಗಳನ್ನು ಸಮತಟ್ಟಾಗಿರದೆ ಏರು ತಗ್ಗಿನಿಂದ ಕೂಡಿರುವ ಕಾರಣ ಇಲ್ಲಿ ಮನೆ ಸೇರಿದಂತೆ ಯಾವುದೇ ಕಟ್ಟಡ ಕಟ್ಟಬೇಕಾದರೆ ಸಮತಟ್ಟು ಮಾಡಲೇ ಬೇಕಾಗಿದ್ದು ಆಗ ಇದ್ದಕ್ಕಿದ್ದಂತೆಯೇ ಕಟ್ಟಡದ ಬಳಿ ಬರೆ(ಗುಡ್ಡ) ಸೃಷ್ಟಿಯಾಗಿ ಬಿಡುತ್ತದೆ. ಆದರೆ ಇದೀಗ ಮನೆ ಹಿಂಬದಿಯ ಇಂತಹ ಗುಡ್ಡ ಸೇರಿದಂತೆ ದೂರದ ಬೆಟ್ಟವೂ ಇಲ್ಲಿಯ ಜನರ ಎದೆ ಬಡಿತವನ್ನು ಹೆಚ್ಚಿಸಿದ್ದು, ಗುಡ್ಡದಭೂತವಾಗಿ ಕಾಡಲಾರಂಭಿಸಿದೆ.
ಇಷ್ಟಕ್ಕೂ ಏನಾಗಿದೆ ಕೊಡಗಿನ ಬೆಟ್ಟಗುಡ್ಡಗಳಿಗೆ? ಎಂಬ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳದಿರದು. ಈ ಪ್ರಶ್ನೆಗಳಿಗೆ ಉತ್ತರವಾಗಿ ಕಳೆದ ಐದು ವರ್ಷಗಳಲ್ಲಿ ಕೊಡಗಿನಲ್ಲಿ ಮಳೆಗಾಲದಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತಗಳು ಕಣ್ಣಮುಂದೆಯೇ ಇದೆ. ಇವತ್ತಿಗೂ ಅವತ್ತು ಕುಸಿದ ಬೆಟ್ಟಗಳ ಕುರುಹುಗಳು, ಭೂಸಮಾಧಿಯಾದ ತೋಟ, ಮನೆಗಳು, ಕಳೆದುಹೋದ ಪ್ರಾಣಗಳು ಸಾಕ್ಷಿಯಾಗಿ ಉಳಿದು ಹೋಗಿವೆ. ಅಷ್ಟೇ ಅಲ್ಲದೆ ಭಾರೀ ಮಳೆ ಸುರಿದಾಗಲೆಲ್ಲ ಆ ಭೀಕರ ದೃಶ್ಯಗಳು ಇಲ್ಲಿನ ಜನರ ಕಣ್ಮುಂದೆ ಬರುತ್ತಲೇ ಇರುತ್ತದೆ.

ಇವತ್ತು ಕುಂಭದ್ರೋಣ ಮಳೆ ಸುರಿಯುತ್ತಿದ್ದಂತೆಯೇ ಇಲ್ಲಿನ ಜನರಲ್ಲಿ ಸಣ್ಣಗಿನ ಆತಂಕ ಶುರುವಾಗಿ ಬಿಡುತ್ತದೆ. ಮನೆ ಎದುರಿನ, ಹಿಂಭಾಗದ ಮತ್ತು ಸುತ್ತಮುತ್ತ ಇರುವ ಗುಡ್ಡಗಳ ಬಗ್ಗೆಯೇ ಅನುಮಾನ ಹುಟ್ಟಲಾರಂಭಿಸುತ್ತದೆ. ಶತಶತಮಾನಗಳಿಂದ ಹೆದರದೆ ನೆಮ್ಮದಿಯಾಗಿದ್ದ ಜನರು ಈಗ ಮನೆ ಸುತ್ತಮುತ್ತ ಇರುವ ಬರೆ, ಬೆಟ್ಟಗುಡ್ಡಗಳಿಗೆ ಹೆದರುವಂತಾಗಿದೆ. ಈಗ ಮಳೆ ಸುರಿದರೆ ಅತಿವೃಷ್ಟಿ, ಮಳೆ ಬಾರದಿದ್ದರೆ ಅನಾವೃಷ್ಟಿ ಎಂಬಂತಾಗಿದೆ. ವಾತಾರವರಣದ ಸಮತೋಲನ ತಪ್ಪಿ ಹೋಗಿರುವ ಪರಿಣಾಮ ಅದರ ಹೊಡೆತಗಳು ಹಲವು ರೀತಿಯಲ್ಲಿ ಕಾಡಲಾರಂಭಿಸಿವೆ.
2018ರ ನಂತರ ಕೊಡಗಿನಲ್ಲಿ ಭೂಕುಸಿತ
2018ರವರೆಗೆ ಭೂಕುಸಿತದಂತಹ ಭಯ ಕೊಡಗಿನ ಜನರನ್ನು ಕಾಡಿರಲಿಲ್ಲ. ಅದಕ್ಕೂ ಮೊದಲು ಮಳೆಗಾಲದಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಗುಡ್ಡ ಹಾಗೂ ಮನೆಯ ಹಿಂಭಾಗದ ಬರೆ ಸಣ್ಣ ಪ್ರಮಾಣದಲ್ಲಿ ಕುಸಿಯುವುದು ಸಹಜವಾಗಿತ್ತು. ಆದರೆ ಜನರ ಜೀವ ಬಲಿ ಪಡೆಯುವ ಮಟ್ಟಿಗಿನ ಗಂಭೀರ ಸ್ವರೂಪ ತಾಳುತ್ತಿದ್ದದ್ದು ಅಪರೂಪ. ಆದರೆ ಈಗ ಹಾಗಿಲ್ಲ. ಮಳೆ ಬಂದ ತಕ್ಷಣ ಎಲ್ಲಿ ಗುಡ್ಡ ಕುಸಿಯುತ್ತದೆಯೋ? ಮನೆ ಹಿಂಭಾಗದಲ್ಲಿರುವ ಬರೆ ಜಾರಿ ಬಂದು ಅಪ್ಪಳಿಸಿ ಬಿಡುತ್ತದೆಯೋ ಎಂಬ ಭಯ ಹುಟ್ಟಿಸಿ ಬಿಡುತ್ತದೆ.
ಮಲೆನಾಡು ಹೊರತುಪಡಿಸಿದಂತೆ ಹೊರಗಿನ ಪ್ರದೇಶದವರಿಗೆ ಬರೆ ಪದ ತಕ್ಷಣಕ್ಕೆ ಅರ್ಥವಾಗುವುದಿಲ್ಲ. ಇದೇನಪ್ಪಾ ಬರೆ ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ಮಲೆನಾಡು ಪ್ರದೇಶ ಗುಡ್ಡಗಾಡುಗಳಿಂದ ಕೂಡಿರುವುದರಿಂದ ಮತ್ತು ಸಮತಟ್ಟು ಪ್ರದೇಶವೇ ಅಪರೂಪವಾಗಿರುವ ಕಾರಣ ಮನೆ, ಕಟ್ಟಡ ಮತ್ತು ರಸ್ತೆ ಹೀಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬೇಕಾದರೂ ಇರುವ ಜಾಗವನ್ನು ಸಮತಟ್ಟು ಮಾಡಲೇ ಬೇಕಾಗುತ್ತದೆ. ಈ ವೇಳೆ ಮಣ್ಣನ್ನು ಅಗೆದು ತೆಗೆಯುವಾಗ ಒಂದೋ, ಎರಡೋ ಅಥವಾ ಮೂರು ಬದಿಯಲ್ಲಿ ಎತ್ತರದ ಪ್ರದೇಶ ನಿರ್ಮಾಣವಾಗಿ ಬಿಡುತ್ತದೆ. ಇದನ್ನು ಬರೆ ಎಂದು ಕರೆಯಲಾಗುತ್ತದೆ. ಈ ಬರೆ ನಾವು ಮಣ್ಣು ತೆಗೆದು ಜಾಗ ವಿಸ್ತರಿಸುತ್ತಾ ಹೋದಂತೆ ಅದರ ಎತ್ತರವೂ ಹೆಚ್ಚುತ್ತಾ ಹೋಗುತ್ತದೆ.

ಬೆಟ್ಟಗುಡ್ಡಗಳು ಕುಸಿಯಲು ಕಾರಣಗಳೇನು?
ಈ ಬರೆಗಳು ಮಲೆನಾಡಿನಲ್ಲಿ ಕೇವಲ ಮನೆ, ಕಟ್ಟಡ ನಿರ್ಮಾಣವಾಗುವಾಗ ಮಾತ್ರ ಸೃಷ್ಟಿಯಾಗುವುದಿಲ್ಲ. ಅವು ತೋಟ, ಗದ್ದೆ, ರಸ್ತೆ ಹೀಗೆ ಏನೇ ಅಭಿವೃದ್ಧಿ ಕೆಲಸ ಮಾಡುವಾಗಲೂ ನಿರ್ಮಾಣವಾಗಿ ಬಿಡುತ್ತವೆ. ಈ ರೀತಿಯ ಬರೆಗಳು ಕೊಡಗಿನ ಹೆಚ್ಚಿನ ಮನೆಗಳ ಹಾಗೂ ಕಟ್ಟಡಗಳ ಹಿಂಭಾಗ ಸೃಷ್ಟಿಯಾಗಿವೆ. ಇವು ಕೆಲವು ಕಡೆಗಳಲ್ಲಿ ಮನೆಗಿಂತಲೂ ಎತ್ತರದಲ್ಲಿವೆ. ಇಂತಹ ಬರೆಗಳಿಂದ ಗುದ್ದಲಿ, ಪಿಕಾಸಿ ಇನ್ನಿತರೆ ಹತ್ಯಾರುಗಳನ್ನು ಬಳಸಿ ಅಥವಾ ಜೆಸಿಬಿ ಮೂಲಕ ಮಣ್ಣು ತೆಗೆಯುವುದರಿಂದ ಕೆಲವೊಮ್ಮೆ ಮಣ್ಣು ಸಡಿಲಗೊಂಡು ಮಳೆ ಬೀಳುತ್ತಿದ್ದಂತೆಯೇ ತೇವಾಂಶ ಹೆಚ್ಚಾಗಿ ಕುಸಿಯುತ್ತದೆ. ಇದೆಷ್ಟು ಅಪಾಯಕಾರಿ ಎಂಬುದಕ್ಕೆ ಹಲವು ದುರ್ಘಟನೆಗಳೇ ಸಾಕ್ಷಿಯಾಗಿವೆ.
ಇಂತಹ ಬರೆಗಳು ಕುಸಿದರೆ ಅದಕ್ಕೆ ನಾವೇ ಕಾರಣ ಎಂದು ಹೇಳಬಹುದು ಆದರೆ ನಿಸರ್ಗ ನಿರ್ಮಿತ ಬೆಟ್ಟಗಳೇ ಕುಸಿದು ಪ್ರಾಣವನ್ನು ಬಲಿಪಡೆದಿರುವುದು ನಮ್ಮ ಮುಂದೆಯೇ ಇದೆ. ಹಿಂದಿನ ಕಾಲದಲ್ಲಿ ಮನೆ ಹಿಂದೆ ಬರೆ ನಿರ್ಮಾಣವಾದರೂ ಅವುಗಳನ್ನು ತಮ್ಮದೇ ತಂತ್ರಗಳನ್ನು ಬಳಸಿ ಗುದ್ದಲಿ, ಪಿಕಾಸಿ, ಹಾರೆಗಳನ್ನು ಬಳಸಿ ಹಂತ ಹಂತವಾಗಿ ಮಣ್ಣು ತೆಗೆಯುವ ಮೂಲಕ ಮಳೆ ಬಿದ್ದು ಮಣ್ಣು ತೇವಗೊಂಡರೂ ಅವು ಕುಸಿಯದಂತೆ ನೋಡಿಕೊಳ್ಳುತ್ತಿದ್ದರು.
ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಿದ್ದೇಕೆ?
ಈಗ ಹಾಗಿಲ್ಲ. ಜೆಸಿಬಿಯಿಂದ ಮಣ್ಣು ತೆಗೆಯುವುದರಿಂದ ಇಡೀ ಪ್ರದೇಶ ಅಲುಗಾಡುತ್ತದೆ. ಇದರಿಂದ ಮಣ್ಣು ಸಡಿಲಗೊಳ್ಳುತ್ತದೆ. ಅದು ಮಳೆ ಬೀಳುತ್ತಿದ್ದಂತೆಯೇ ತೇವಗೊಂಡು ಕುಸಿದು ಬೀಳುತ್ತದೆ. ಜತೆಗೆ ಹೆಮ್ಮರಗಳನ್ನು ಕಡಿದು ಉರುಳಿಸಿದ ಪರಿಣಾಮ ಅದ ಬೇರುಗಳು ಹರಡಿದ್ದ ಪ್ರದೇಶವೆಲ್ಲ ಸಡಿಲಗೊಂಡು ಕುಸಿಯುತ್ತಿವೆ. 2018ರವರೆಗೆ ಭೂಕುಸಿತದ ರೌದ್ರ ಮುಖವನ್ನು ಕೊಡಗಿನವರು ನೋಡಿಯೇ ಇರಲಿಲ್ಲ. ಚಿಕ್ಕಪುಟ್ಟ ಕುಸಿತಗಳು ಸಂಭವಿಸುತ್ತಿತ್ತಾದರೂ ಅದೆಲ್ಲವೂ ಮಳೆಗಾಲದಲ್ಲಿ ನಡೆಯುವ ಮಾಮೂಲಿ ಕ್ರಿಯೆಗಳಾಗಿದ್ದವು.

ಆದರೆ ಊರಿಗೆ ಊರು, ಇಡೀ ಗುಡ್ಡವೇ ಕುಸಿದು ಕಿ.ಮೀ.ಗಟ್ಟಲೆ ಜಾರಿ ಹೋಗಿದ್ದನ್ನು ನೋಡಿದ ಮೇಲೆ ತಮ್ಮ ಮನೆಯ ಹಿಂದಿನ ಬರೆ ಯಾವಾಗ ನಮ್ಮ ಪಾಲಿಗೆ ಮೃತ್ಯುವಾಗಿ ಬಿಡುತ್ತದೆಯೋ ಎಂಬ ಆತಂಕ ಬಹಳಷ್ಟು ಮಂದಿಯನ್ನು ಕಾಡಲು ಆರಂಭಿಸಿದೆ. ಅದರಲ್ಲೂ ಮಳೆಗಾಲ ಬರುತ್ತಿದ್ದಂತೆಯೇ ಈ ಭಯ ಹೆಚ್ಚುತ್ತಲೇ ಹೋಗುತ್ತಿದೆ. ಏಕೆ ಹೀಗಾಯಿತು ಮತ್ತು ಹೀಗಾಗುತ್ತದೆ ಎಂಬುದನ್ನು ನೋಡಿದರೆ, ತೋಟಗಳನ್ನಷ್ಟೆ ನಂಬಿ ಬದುಕುತ್ತಿದ್ದ ಜಿಲ್ಲೆಯಲ್ಲಿ ರೆಸಾರ್ಟ್, ಹೋಂಸ್ಟೇ ಸಂಸ್ಕೃತಿ ಯಾವಾಗ ಆರಂಭವಾಯಿತೋ? ಬಂಡವಾಳ ಹಾಕಿ ಲಾಭ ಪಡೆಯಲು ಹಲವು ಸಂಸ್ಥೆಗಳು, ಪ್ರಭಾವಿ ನಾಯಕರು, ಸ್ಥಳೀಯ ಬೆಳೆಗಾರರು ಹೀಗೆ ಎಲ್ಲರೂ ಮುಗಿಬಿದ್ದರು.
ದುರಂತಗಳಿಗೆ ಈಗಾಗಲೇ ಮುನ್ನುಡಿ ಬರೆದಾಗಿದೆ
ಪ್ರವಾಸಿಗರ ಸೆಳೆಯಲು ಬೆಟ್ಟಗುಡ್ಡಗಳ ಮೇಲೆ ಕಟ್ಟಡ ನಿರ್ಮಿಸಿದರು. ಇದಕ್ಕಾಗಿ ಬೆಟ್ಟ ಗುಡ್ಡಗಳನ್ನು ಕೊರೆದು ದಾರಿ ಮಾಡಿದರು, ಜೆಸಿಬಿಯಿಂದ ಬೆಟ್ಟವನ್ನೇ ಸಮತಟ್ಟು ಮಾಡಿ ಬೃಹತ್ ಕಟ್ಟಡ ಕಟ್ಟಿದರು. ಕಟ್ಟಡ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಕೊಂಡೊಯ್ಯಲು ಬೃಹತ್ ವಾಹನಗಳು ಎಡೆಬಿಡದೆ ಸಂಚರಿಸಿದವು. ಮರಗಳು ನಾಶವಾದವು. ಅವುಗಳ ಬೇರು ಹಿಡಿದಿಟ್ಟಿದ್ದ ಮಣ್ಣು ಸಡಿಲವಾಯಿತು. ಪರಿಣಾಮ, ದೊಡ್ಡ ದುರಂತವನ್ನು ಮೈಮೇಲೆ ಎಳೆದುಕೊಳ್ಳುವುದರೊಂದಿಗೆ ಮುಂದೆ ಸಂಭವಿಸಬಹುದಾದ ದುರಂತಗಳಿಗೆ ಮುನ್ನುಡಿ ಬರೆದಾಗಿದೆ.
ಇದೀಗ ಜಿಲ್ಲೆಯ ಪ್ರತಿಯೊಬ್ಬರಿಗೂ ಮಳೆ ಸುರಿದಾಗಲೆಲ್ಲ ಮನೆಯ ಹಿಂಭಾಗದ ಬರೆ ಹಾಗೂ ಸಮೀಪದಲ್ಲಿರುವ ಗುಡ್ಡಗಳು, ಬೆಟ್ಟಗಳು ಮೃತ್ಯುವಾಗಿ ಗೋಚರಿಸತೊಡಗಿವೆ. ಇದಕ್ಕೆ 2018 ರಿಂದ 2020ರ ತನಕ ಮೂರು ವರ್ಷಗಳ ಕಾಲ ಮಳೆಗಾಲದಲ್ಲಿ ಬೆಟ್ಟಗಳು ಕುಸಿದು ಸಂಭವಿಸಿದ ದುರ್ಘಟನೆಗಳು ಸಾಕ್ಷಿಯಾಗಿವೆ. ಹೀಗಾಗಿ ಭಯದಲ್ಲಿ ಬದುಕುವುದು ಅನಿವಾರ್ಯವಾಗಿದೆ. ಮಳೆ ಮಂದಗತಿಯಲ್ಲಿ ಸುರಿದರೆ ಜನ ನೆಮ್ಮದಿ ಪಡುತ್ತಾರೆ. ಕುಂಭದ್ರೋಣ ಮಳೆ ಸುರಿಯಲು ಆರಂಭಿಸಿದಾಗಲೆಲ್ಲ ಸಣ್ಣಗಿನ ಆತಂಕ ಶುರುವಾಗುತ್ತದೆ.












Click it and Unblock the Notifications