Rain Alert: ಮುಂಗಾರು ಮಳೆಗೆ ತಲೆದೂಗುವ ಕೊಡಗಿನಲ್ಲಿ ಈಗ ಏನಾಗಿದೆ?

ಮಡಿಕೇರಿ, ಜೂನ್‌ 24: ಕಪ್ಪು ಮೋಡದ ಮುಸುಕಿನ ನಡುವೆ ಒಮ್ಮೆ ಧೋ ಎಂದು ಮತ್ತೊಮ್ಮೆ ಜಿಟಿಜಿಟಿಯಾಗಿ ಸುರಿಯುವ ಮಳೆಗೆ ಜಿರ್ರೆಂದು ಚೀರುವ ಜೀರುಂಡೆಗಳು.. ಸುಯ್ಯೆಂದು ಬೀಸುವ ಗಾಳಿಗೆ ತಲೆದೂಗುವ ಗಿಡಮರಗಳು... ಬೆಟ್ಟ ಕಂದಕವನ್ನೆಲ್ಲ ಒಂದು ಮಾಡಿ ಅಚ್ಚರಿ ಹುಟ್ಟಿಸುವ ಮಂಜು.. ಅದರಾಚೆಗೆ ಘಾಟಿ ರಸ್ತೆಯಲ್ಲಿ ಎದುರುಸಿರು ಬಿಡುತ್ತಾ ಸಾಗುವ ವಾಹನಗಳು.

ಇದೆಲ್ಲವೂ ಕೊಡಗಿನಲ್ಲಿ ಮಳೆಗಾಲದಲ್ಲಿ ಕಂಡು ಬರುವ ಚೇತೋಹಾರಿ ದೃಶ್ಯಗಳಾಗಿವೆ. ಸದಾ ಮಳೆಗೆ ಮೈಕೊಟ್ಟು ಓಡಾಡುವವರಿಗೆ ಮಳೆ ತರುವ ಎಲ್ಲ ದೃಶ್ಯಗಳು ಮಾಮೂಲಿಯೇ.. ಛತ್ರಿ ಹಿಡಿದೋ, ಮಳೆಕೋಟು ಧರಿಸಿ ನಿತ್ಯದ ಕೆಲಸಗಳಿಗೆ ಸಾಗುವವರು ಅವರ ಪಾಡಿಗೆ ಅವರು ಎಂಬಂತೆ ನಿತ್ಯದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಮಲೆನಾಡಿನ ಮಳೆ ವೈಭವವನ್ನು ನೋಡದವರಿಗೆ ಅದು ಅಚ್ಚರಿಯ ಆಗರ.

Kodagu Rain How Is This Year s Monsoon In Kodagu District

ಕೊಡಗಿನವರಿಗೆ ಮಳೆ ಎಂದರೆ ಬದುಕಿನ ಹಾಡು.. ಅದರೊಂದಿಗೆ ಬೆರೆತು ತಮ್ಮೆಲ್ಲ ಕೆಲಸಗಳನ್ನು ಮಾಡಿ ಸಂಭ್ರಮಿಸುತ್ತಾರೆ. ಅವರಿಗೆ ಮಳೆಗಾಲವನ್ನು ಮತ್ತು ಆ ಮಳೆಗಾಲದಲ್ಲಿ ಸುರಿಯುವ ಕುಂಭದ್ರೋಣ ಮಳೆಯನ್ನು ಎದುರಿಸಿ ಬದುಕುವುದು ವಂಶಪಾರಂಪರ್ಯವಾಗಿ ಬಂದಿದೆ. ಹೀಗಾಗಿ ಮಳೆಗಾಲವನ್ನು ಮತ್ತು ಭಾರೀ ಮಳೆಯನ್ನು ಎದುರಿಸಲು ಏನೆಲ್ಲ ಕಸರತ್ತು ಮಾಡಬೇಕೋ ಅದೆಲ್ಲವನ್ನು ಮಾಡಿಕೊಂಡು ಮಳೆಗೆ ಕೈಕಟ್ಟಿ ಕೂರದೆ ತಮ್ಮ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಮಳೆ ವೈಭವಕ್ಕೆ ಇನ್ನಷ್ಟು ವೇಗ ಬೇಕಿದೆ

ಈ ಬಾರಿಯ ಬೇಸಿಗೆಯ ಧಗೆ ಎಲ್ಲರನ್ನು ಕಂಗೆಡಿಸಿತ್ತು. ಏರಿದ ಧಗೆಗೆ ಜನ ಅಲ್ಲಾಡಿ ಹೋಗಿದ್ದರು, ಜೀವ ಜಲದ ಕಾವೇರಿಯೇ ಬತ್ತಿ ಹೋಗಿದ್ದಳು, ಗಿಡ ಮರಗಳು ಒಣಗುವ ಹಂತ ತಲುಪಿದ್ದವು. ಜನವರಿಯಿಂದ ಏಪ್ರಿಲ್ ತನಕ ಮಳೆ ಬಾರದೆ ಇಡೀ ನಾಡನ್ನೇ ಬಿಸಿಯಾಗಿಸಿತ್ತು. ತಂಪು, ತಂಪಾಗಿದ್ದ ಕೊಡಗು ಇದೇನಾ? ಎಂದು ಜನ ಪ್ರಶ್ನಿಸಿಕೊಳ್ಳುವಂತಾಗಿತ್ತು. ಆದರೆ ಮೇ ಹೊತ್ತಿಗೆ ಧರೆಗಿಳಿದ ವರುಣ ಎಲ್ಲವನ್ನು ತಂಪಾಗಿಸಿ ಜೀವ ಉಳಿಸಿದ್ದನು. ಇದೀಗ ಎತ್ತ ನೋಡಿದರತ್ತ ಹಚ್ಚಹಸಿರಿನ ಸೊಬಗು ಕಣ್ಣಿಗೆ ರಾಚುತ್ತಿದೆ.

ಹಾಗೆನೋಡಿದರೆ ಮೊದಲಿಗೆ ಹೋಲಿಸಿದರೆ ಕೊಡಗಿನಲ್ಲಿ ಸುರಿದ ಮಳೆ ಏನೇನೂ ಅಲ್ಲ. ಇದುವರೆಗೆ ವಾಡಿಕೆಯ ಮಳೆ ಸುರಿಯಲೇ ಇಲ್ಲ. ಆದರೆ ಕಳೆದ ವರ್ಷ ಸುರಿದ ಮಳೆಗೆ ಹೋಲಿಕೆ ಮಾಡಿಕೊಂಡು ತುಸು ಸಮಾಧಾನ ಮಾಡಿಕೊಳ್ಳಬೇಕಷ್ಟೆ. ಮುಂಗಾರು ಆರಂಭದ ಮೃಗಶಿರ ಮಳೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಸುರಿದಿಲ್ಲ. ಇದೀಗ ಆರಿದ್ರ ಮಳೆ ಆರಂಭವಾಗಿದ್ದು, ರಭಸವಾಗಿ ಸುರಿದರೆ ಕೆರೆಕಟ್ಟೆ, ಬಾವಿ, ಹೊಳೆ, ನದಿಗಳು ತುಂಬಿಕೊಂಡು ಮುಂಗಾರಿನ ಆರಂಭಕ್ಕೆ ವೇಗ ಸಿಗಲಿದೆ.

ಮಳೆಗಾಲದ ಆ ದಿನಗಳು ಎಲ್ಲಿ ಹೋದವು?

ಸದ್ಯ ಮಳೆ ಸುರಿಯುತ್ತಿರುವುದರಿಂದ ನಿಸರ್ಗಕ್ಕೊಂದು ಮುಂಗಾರಿನ ಕಳೆ ಬಂದಿದೆ. ಅರಣ್ಯಗಳಲ್ಲಿ ಬೀಡು ಬಿಟ್ಟ ವನ್ಯಪ್ರಾಣಿಗಳು ನೆಮ್ಮದಿಯಾಗಿವೆ. ಜತೆಗೆ ರೈತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಸಾಮಾನ್ಯವಾಗಿ ಮುಂಗಾರು ಮಳೆಯನ್ನೇ ಕಾಯುವ ಇಲ್ಲಿನ ಜನ ಮಳೆ ಬಿದ್ದು ಭೂಮಿ ತೇವವಾಗುತ್ತಿದ್ದಂತೆಯೇ ಭತ್ತದ ಕೃಷಿ ಮಾಡುವವರುತೆಗೆ ಉಳುಮೆ, ಬಿತ್ತನೆಯತ್ತ ಗಮನಹರಿಸಿದರೆ, ಉಳಿದವರು ಕಾಫಿ ತೋಟ, ಶುಂಠಿ ಹೀಗೆ ಬಿಡುವಿಲ್ಲದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

Kodagu Rain How Is This Year s Monsoon In Kodagu District

ಇತ್ತೀಚೆಗಿನ ವರ್ಷಗಳಲ್ಲಿ ಪರಿಸರ ಮತ್ತು ವಾತಾವರಣದಲ್ಲಿ ಆಗುತ್ತಿರುವ ಏರುಪೇರುಗಳಿಂದಾಗಿ ಮುಂಗಾರು ಮಳೆ ಸುರಿಯುವುದರಲ್ಲೂ ವ್ಯತ್ಯಾಸವಾಗುತ್ತಿದೆ. ಮೊದಲೆಲ್ಲ ಜಿಟಿ ಜಿಟಿ ಯಾಗಿ ಆರಂಭವಾಗುತ್ತಿದ್ದ ಮಳೆ ನಿಧಾನವಾಗಿ ರಭಸವನ್ನು ಪಡೆದುಕೊಳ್ಳುತ್ತಿತ್ತು. ಜುಲೈ ಮತ್ತು ಆಗಸ್ಟ್ ತಿಂಗಳು ನಡು ಮಳೆಗಾಲದ ದಿನಗಳಾಗಿರುತ್ತಿದ್ದವು. ಈ ವೇಳೆ ಮಲೆನಾಡಿನಲ್ಲಿ ನದಿ ತೊರೆಗಳು ತುಂಬಿ ಹರಿಯುತ್ತಿದ್ದವು. ಪ್ರವಾಹವೂ ಏರ್ಪಡುತ್ತಿತ್ತು. ಆದರೆ ಜನರಿಗೆ ಇದರ ಅರಿವು ಇದ್ದುದರಿಂದ ಅದನ್ನು ನಿಭಾಯಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು.

ಈಗ ಮಳೆ ತರುತ್ತಿದೆ ಸಂಕಷ್ಟದ ಸರಮಾಲೆ

ಆಗಿನ ಕಾಲದಲ್ಲಿ ಯಥೇಚ್ಛವಾಗಿ ಮರಕಾಡುಗಳು ಇದ್ದುದರಿಂದ ಪ್ರವಾಹ ಏರ್ಪಟ್ಟರೂ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ. ನದಿದಡದಲ್ಲಿ, ಬೆಟ್ಟಪ್ರದೇಶಗಳಲ್ಲಿ ಮನೆಗಳಿರಲಿಲ್ಲ. ಹೀಗಾಗಿ ಭೂಕುಸಿತ, ಮನೆಕುಸಿತ, ಸಾವು, ನೋವುಗಳ ಭಯವಿರಲಿಲ್ಲ. ಈಗ ಮಳೆ ಬಂತೆಂದರೆ ಭಯ ಶುರುವಾಗುತ್ತದೆ. ಗಾಳಿ ಮಳೆಗೆ ಮುರಿದು ಬೀಳುವ ಮರಗಳು, ಕುಸಿದು ಬೀಳುವ, ಜಲಾವೃತವಾಗುವ ಮನೆಗಳು ಹೀಗೆ ಸಂಕಷ್ಟಗಳ ಸರಮಾಲೆಯೇ ಜನರ ಕೊರಳನ್ನು ಸುತ್ತಿಕೊಳ್ಳುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಮುಂಗಾರು ಮಳೆಯಿಂದ ಹಲವು ಅನಾಹುತಗಳು ಸಂಭವಿಸಿವೆ.

ಮುಂಗಾರು ಮಳೆಯ ಅಬ್ಬರಕ್ಕೆ ಬೆಟ್ಟಗುಡ್ಡಗಳೇ ಕುಸಿದು ಹಲವರ ಪ್ರಾಣ ಹೋಗಿದೆ. ಆಸ್ತಿಪಾಸ್ತಿಗಳ ನಷ್ಟವಾಗಿವೆ. ಪ್ರವಾಹದಿಂದಾಗಿ ನದಿ ತಟದಲ್ಲಿನ ವಸತಿ ಪ್ರದೇಶಗಳು ಮುಳುಗಡೆಯಾಗಿವೆ. ಮಳೆ ಸುರಿದರೆ ಅತಿವೃಷ್ಟಿ, ಸುರಿಯದೆ ಹೋದರೆ ಅನಾವೃಷ್ಟಿ ಎಂಬಂತಾಗಿದೆ. ಸಮತೋಲನೆ ಕೈತಪ್ಪಿ ಹೋಗಿದೆ. ಮೂರ್ನಾಲ್ಕು ದಶಕಗಳ ಹಿಂದೆ ಒಂದೇ ಸಮನೆ ಬಿಟ್ಟು ಬಿಡದೆ ವಾರಾನುಗಟ್ಟಲೆ ಮಳೆ ಸುರಿದ ದಾಖಲೆಗಳಿವೆ ಆದರೆ ಅವತ್ತು ಅಷ್ಟೊಂದು ಅನಾಹುತ ಸಂಭವಿಸುತ್ತಿರಲಿಲ್ಲ.

ಕಾವೇರಿ ಧುಮ್ಮಿಕ್ಕಿ ಹರಿದರೆ ಜನ ನಿರಾಳ

ಇವತ್ತು ಕಾವೇರಿ ನೀರನ್ನು ನಂಬಿದವರು ನೆಮ್ಮದಿಯಾಗಿ ಇರಬೇಕಾದರೆ ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಭಾರಿ ಮಳೆ ಸುರಿಯಬೇಕೆಂದು ಬಯಸುತ್ತಾರೆ. ಮಲೆನಾಡಿನಲ್ಲಿ ಮುಂಗಾರು ಪ್ರಗತಿಯಲ್ಲಿ ಇಲ್ಲದೆ ಹೋದರೆ ಕಾವೇರಿಯನ್ನು ನಂಬಿದವರಿಗೆ ಸಂಕಷ್ಟ ತಪ್ಪಿದಲ್ಲ. ಜತೆಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಂಘರ್ಷವೂ ಆರಂಭವಾಗುತ್ತದೆ. ಇದೆಲ್ಲದಕ್ಕೆ ವಿರಾಮ ಬೀಳಬೇಕೆಂದರೆ ಕೊಡಗಿನಲ್ಲಿ ಮಳೆಯಾಗಲೇ ಬೇಕಾಗುತ್ತದೆ.

Kodagu Rain How Is This Year s Monsoon In Kodagu District

ಅತ್ತ ಹಾಸನ, ಚಿಕ್ಕಮಗಳೂರಿನಲ್ಲಿ ಮಳೆ ಸುರಿದು ಹೇಮಾವತಿ ನದಿ ಉಕ್ಕಿದರೆ, ಇತ್ತ ಕೊಡಗಿನಲ್ಲಿ ಕಾವೇರಿ ಲಕ್ಷ್ಮಣತೀರ್ಥ ನದಿಗಳು ಪ್ರವಾಹೋಪಾದಿಯಲ್ಲಿ ಹರಿದರೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಿರ್ಮಿಸಿರುವ ಕೆಆರ್ ಎಸ್ ಜಲಾಶಯ ಭರ್ತಿಯಾಗಿ, ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋದರೆ ಸಮಸ್ಯೆಗಳು ಎದುರಾಗುವುದಿಲ್ಲ.

ಸಮೃದ್ಧ ಮಳೆಗಾಗಿ ಎಲ್ಲರ ಪ್ರಾರ್ಥನೆ

ಇನ್ನು ಕಾವೇರಿ ನೀರನ್ನು ನಂಬಿ ಕೃಷಿ ಮಾಡುವ ರೈತರು ಕೂಡ ನೆಮ್ಮದಿಯಾಗುತ್ತಾರೆ. ಆದರೆ ಇದೆಲ್ಲ ಆಗಬೇಕಾದರೆ ಪ್ರವಾಹದಿಂದ ಕೃಷಿ ನಷ್ಟ, ಭೂಕುಸಿತದ ಭಯ, ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಮಲೆನಾಡಿನ ಜನ ಎದುರಿಸಬೇಕಾಗುತ್ತದೆ. ಅದು ಏನೇ ಇರಲಿ ಮಲೆನಾಡಿನಲ್ಲಿ ಮುಂಗಾರು ನಿಧಾನವಾಗಿ ಲಯ ಕಂಡುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಸಮೃದ್ಧ ಮಳೆಯಾಗಿ ಮಲೆನಾಡಿನಲ್ಲಿ ನಿತ್ಯವೂ ಮಳೆಹಾಡು ಗುನುಗುವಂತಾದರೆ ನಾಡು ಸಮೃದ್ಧವಾಗುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಆಗಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+