5 ವರ್ಷದ ನಂತರ ಕೊಡಗಿನಲ್ಲಿ ಜೂನ್ ತಿಂಗಳಲ್ಲೇ ಭರ್ಜರಿ ಮಳೆ

ಮಡಿಕೇರಿ, ಜೂನ್ 13 : ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಜೂನ್ ತಿಂಗಳಲ್ಲೇ ಅತಿ ಹೆಚ್ಚು ಮಳೆಯಾಗುತ್ತಿದ್ದು, ಮಳೆಗಾಲದ ಗತವೈಭವ ಮರುಕಳಿಸಿದೆ. ಈ ಹಿಂದೆ ಜೂನ್ ತಿಂಗಳಲ್ಲೇ ಭಾರಿ ಮಳೆಯಾಗಿ ಅಂತರ್ಜಲ ಹೆಚ್ಚಾಗಿ ಬೆಟ್ಟಗುಡ್ಡ, ತಗ್ಗು, ಕೊಲ್ಲಿ ಪ್ರದೇಶಗಳಲ್ಲಿ ಜಲ ಉಕ್ಕಿ ಹರಿಯುತ್ತಿತ್ತು.

ಇದೀಗ ಇದೇ ರೀತಿ ಮಳೆ ಮುಂದುವರಿದಿದ್ದೇ ಆದರೆ ಕೊಡಗು ಮಾತ್ರವಲ್ಲದೆ ಕಾವೇರಿ ನೀರನ್ನು ಆಶ್ರಯಿಸಿರುವ ಮಂದಿಯ ಸಂಕಷ್ಟವೆಲ್ಲವೂ ಪರಿಹಾರವಾಗುವುದು ಖಚಿತವಾಗಿದೆ. ಕಳೆದ ಕೆಲವು ವರ್ಷಗಳಿಂದ ಮಳೆಗಾಲದ ಅನುಭವವೇ ಆಗಿರಲಿಲ್ಲ. ಆದರೆ ಈ ಬಾರಿ ಈಗಾಗಲೇ ಮಳೆಗಾಲದ ಕಷ್ಟ, ನಷ್ಟಗಳು ಕೊಡಗಿನ ಜನರಿಗಾಗಿದ್ದು, ಮಳೆಗೆ ಆತಂಕ ಪಡುವಂತಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಮಳೆಗಾಲ ತಡವಾಗಿ ಆರಂಭವಾಗುತ್ತಿತ್ತು. ಹೀಗಾಗಿ ಮಳೆಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ಮತ್ತೆ ಮಾಡಿಕೊಂಡರಾಯಿತು ಎಂದು ಉದಾಸೀನತೆ ತೋರಿದ್ದ ಜನ ಈಗ ಏಕಾಏಕಿ ಮಳೆ ಸುರಿಯುತ್ತಿರುವುದರಿಂದ ಬೆಚ್ಚಿ ಬಿದ್ದಿದ್ದಾರೆ. ವಾರಗಟ್ಟಲೆ ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿಯುತ್ತಿರುವುದರಿಂದ ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿ ಪರಿಣಮಿಸಿದೆ.

ತುಂಬಿ ಹರಿಯುತ್ತಿವೆ ನದಿ, ತೊರೆಗಳು

ತುಂಬಿ ಹರಿಯುತ್ತಿವೆ ನದಿ, ತೊರೆಗಳು

ತೊರೆ, ನದಿ ಎಲ್ಲವೂ ತುಂಬಿ ಹರಿಯುತ್ತಿದೆ. ಕಾವೇರಿ, ಲಕ್ಷ್ಮಣನದಿ ಉಕ್ಕಿ ಹರಿಯುತ್ತಿದ್ದು, ಕೆಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಮನೆಗಳು ಕುಸಿದು ಬಿದ್ದಿವೆ. ತೋಟಗಳಲ್ಲಿ ಮರಗಳು ಉರುಳಿ ಬಿದ್ದಿದ್ದರಿಂದ ವಿದ್ಯುತ್ ತಂತಿಗಳು ತುಂಡರಿಸಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ಮಳೆಯಿಂದಾಗಿ ಮನೆಯಿಂದ ಕಾಲಿಟ್ಟರೆ ಬಟ್ಟೆಗಳು ಒದ್ದೆಯಾಗುತ್ತಿದ್ದು, ಬಟ್ಟೆಗಳನ್ನು ಒಣಗಿಸುವುದೇ ಸಮಸ್ಯೆಯಾಗಿ ಪರಿಣಮಿಸಿದೆ. ಮಳೆಯಿಂದಾಗಿ ಚೆಸ್ಕಾಂಗೆ 52.17 ಲಕ್ಷ ರುಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯ ದಕ್ಷಿಣ ಗಡಿ ಕುಟ್ಟದಿಂದ ಉತ್ತರ ಭಾಗದ ಕೊಡ್ಲಿಪೇಟೆ ತನಕ ವಿದ್ಯುತ್ ಸಮಸ್ಯೆ ಉಂಟಾಗಿರುವುದರಿಂದ ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ.

ಕೊಡಗಿನಾದ್ಯಂತ ಒಂದೇ ದಿನ ಸರಾಸರಿ 102.65 ಮಿ.ಮೀ ಮಳೆ

ಕೊಡಗಿನಾದ್ಯಂತ ಒಂದೇ ದಿನ ಸರಾಸರಿ 102.65 ಮಿ.ಮೀ ಮಳೆ

ಇನ್ನು ಕೊಡಗಿನಾದ್ಯಂತ ಒಂದು ದಿನದ ಅವಧಿಯಲ್ಲಿ ಸರಾಸರಿ 102.65 ಮಿ.ಮೀ ಮಳೆಯಾಗಿದೆ. ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ಅತಿ ಹೆಚ್ಚು 320 ಮಿ.ಮೀ. ಮಳೆಯಾಗಿದ್ದರೆ, ಕುಶಾಲನಗರದಲ್ಲಿ ಅತಿ ಕಡಿಮೆ 2.40 ಮಿ.ಮೀ. ಮಳೆಯಾಗಿದೆ. ಇನ್ನು ತಾಲೂಕುವಾರು ನೋಡುವುದಾದರೆ ಮಡಿಕೇರಿ ತಾಲೂಕಿನಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಸರಾಸರಿ 102.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 15.95 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಜನವರಿಯಿಂದ ಇಲ್ಲಿಯವರೆಗಿನ 1225.99 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 525.85 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಎರಡು ಪಟ್ಟು ಮಳೆಯಾಗಿರುವುದು ಕಂಡು ಬಂದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಹೆಚ್ಚಳ

ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಹೆಚ್ಚಳ

ವಿರಾಜಪೇಟೆ ತಾಲೂಕಿನಲ್ಲಿ 176.32 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ 22.92 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 883.12 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 398.38 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 29.08 ಮಿ.ಮೀ ಸುರಿದಿದ್ದು, ಕಳೆದ ವರ್ಷ ಇದೇ ದಿನ 10.63 ಮಿ.ಮೀ. ಆಗಿತ್ತು. ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ 739.88 ಮಿ.ಮೀ. ಮಳೆ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 345.26 ಮಿ.ಮೀ. ಮಳೆಯಾಗಿದ್ದನ್ನು ತಾಳೆ ಹಾಕಿ ನೋಡಿದರೆ ಮಳೆಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಗೋಚರಿಸುತ್ತಿದೆ.

ಜಲಾಶಯಗಳು ಬಹುಬೇಗ ಭರ್ತಿಯಾಗುವ ನಿರೀಕ್ಷೆ

ಜಲಾಶಯಗಳು ಬಹುಬೇಗ ಭರ್ತಿಯಾಗುವ ನಿರೀಕ್ಷೆ

ಇಲ್ಲಿಂದ ಮುಂದೆ ಇನ್ನಷ್ಟು ದಿನಗಳು ಮಳೆ ಸುರಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ದರಿಂದ ಹೆಚ್ಚಿನ ಮಳೆ ಸುರಿದು, ಕಾವೇರಿ ನದಿ ಉಕ್ಕಿ ಹರಿದು ಕೆಆರ್ ಎಸ್ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿರುವ ಜಲಾಶಯಗಳು ಬಹುಬೇಗ ಭರ್ತಿಯಾಗುವ ನಿರೀಕ್ಷೆ ಮೂಡಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ಸುರಿದ ಮಳೆಯನ್ನು ನೋಡುವುದಾದರೆ ಜನವರಿಯಿಂದ ಇಲ್ಲಿಯವರೆಗೆ 949.66 ಮಿ.ಮೀ ಸುರಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 423.16 ಮಿ.ಮೀಯಷ್ಟು ಮಾತ್ರ ಮಳೆ ಸುರಿದಿತ್ತು. ಕೆಲವೆಡೆ ಮಳೆಗೆ ಮನೆ, ದನದ ಕೊಟ್ಟಿಗೆ, ಗುಡ್ಡಗಳು ಕುಸಿದು ನಷ್ಟವಾಗಿದೆ. ಅಷ್ಟೇ ಅಲ್ಲ, ಸೋಮವಾರಪೇಟೆಯ ಯಡೂರು ಮತ್ತು ದುದ್ದುಗಲ್ಲು ಗ್ರಾಮದ ಯಡೂರು ಲೋಕೇಶ್ ಎಂಬವರಿಗೆ ಸೇರಿದ ಎತ್ತುಗಳು ಗದ್ದೆಯಲ್ಲಿ ಮೇಯುತ್ತಿದ್ದ ಸಂದರ್ಭ ಮಳೆ-ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ 2 ಜಾನುವಾರುಗಳು ಸಾವನ್ನಪ್ಪಿವೆ.

ವಾಹನ ಸಂಚಾರ ಮಾರ್ಗ ಬದಲು

ವಾಹನ ಸಂಚಾರ ಮಾರ್ಗ ಬದಲು

ಈ ಎಲ್ಲದರ ನಡುವೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರವನ್ನು ನಿರ್ಬಂಧಿಸಿದ್ದರಿಂದ ವಾಹನಗಳು ಕೊಡಗಿನ ಮೂಲಕ ಸಂಚರಿಸುತ್ತಿದ್ದು, ಮಳೆ ಮತ್ತು ವಾಹನ ಸಂಚಾರದ ಪರಿಣಾಮ ರಾಜ್ಯ ಹೆದ್ದಾರಿ ದುಸ್ಥಿತಿಗೆ ತಲುಪಿದೆ. ಕೆಲವೆಡೆ ಹಳ್ಳ-ಕೊಳ್ಳಗಳು ಆಗಿವೆ. ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಅವಘಡದ ಭೀತಿ ಎದುರಾಗಿದೆ. ಒಟ್ಟಾರೆ ಕೊಡಗಿನಲ್ಲಿ ಮಳೆ ಭಾರೀ ಅವಾಂತರ ಸೃಷ್ಠಿಸಿದ್ದು, ಒಂದಷ್ಟು ಬಿಡುವು ನೀಡಿದರೆ ಸಾಕೆಂದು ಜನ ಕಾಯುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+