• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಗಸ್ಟ್ 3ರಂದು ಕೊಡಗಿನಲ್ಲಿ ಆಟಿ ಪದ್ನಟ್ ಸಂಭ್ರಮ

By ಬಿ.ಎಂ.ಲವಕುಮಾರ್
|

ಮಡಿಕೇರಿ, ಆಗಸ್ಟ್ 01: ಕೊಡಗಿನಲ್ಲೀಗ ಆಟಿ(ಕಕ್ಕಡ) ಆರಂಭವಾಗಿದ್ದು, ಆಟಿ ಮಾಸದ(ಆಷಾಢ) 18ನೇ ದಿನವನ್ನು ಆಟಿ ಪದ್ನಟ್ ಎಂದು ಆಚರಿಸಲಾಗುತ್ತದೆ. ಇದರ ವಿಶೇಷತೆಗಳನ್ನು ತಿಳಿದರೆ ಅಚ್ಚರಿಯಾಗುತ್ತದೆ. ಜತೆಗೆ ಹೀಗೂ ಒಂದು ಸಂಪ್ರದಾಯವನ್ನು ಇನ್ನೂ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಬಗ್ಗೆ ಹೆಮ್ಮೆಯೂ ಆಗುತ್ತದೆ.

ಭತ್ತದ ಕೃಷಿ ಅಂದರೆ ಇಲ್ಲಿನವರಿಗೆ ಇದು ಹಣ ತರುವ ಕೃಷಿಯಲ್ಲ. ಇದರ ಬಗ್ಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಈ ಭತ್ತದ ಕೃಷಿಯನ್ನು ಆಧರಿಸಿ ಇಲ್ಲಿ ಹಬ್ಬಗಳು ಆಚರಿಸಲ್ಪಡುತ್ತವೆ. ಅದರಂತೆ ಆಟಿ ಪದ್ನಟ್ ಕೂಡ.

ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ

ಹಾಗೆನೋಡಿದರೆ ಆಟಿ(ಕಕ್ಕಡ) ತಿಂಗಳೆಂದರೆ ಕೊಡಗಿನವರ ಮಟ್ಟಿಗೆ ಬಿಡುವಿಲ್ಲದ ದುಡಿಮೆಯ ಕಾಲ. ಸದಾ ಸುರಿಯುವ ಮಳೆ... ಕೊರೆಯುವ ಚಳಿ.. ಮುಂಜಾನೆಯಿಂದ ಸಂಜೆಯವರೆಗೂ ಮಳೆಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯಬೇಕಾದ ಅನಿವಾರ್ಯತೆ.

ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಆಟಿ(ಕೊಡವ ಭಾಷೆಯಲ್ಲಿ ಕಕ್ಕಡ) ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧ, ಕೃಷಿ ಕೆಲಸಗಳಿಗೆ ಜನ ಹೆಚ್ಚಿನ ಆದ್ಯತೆ ನೀಡುವುದರಿಂದ ಇತರೆ ಎಲ್ಲ ವ್ಯಾಪಾರಗಳು ಕಡಿಮೆಯಾಗುತ್ತವೆ.

ಬೇರೆ ಕಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಭತ್ತದ ಕೃಷಿ ಮಾಡುವುದೇ ಮಳೆಗಾಲದಲ್ಲಿ. ಮಳೆ ಸುರಿದು ಭೂಮಿಯಡಿಯಿಂದ ಜಲ ಹುಟ್ಟಿ ಹರಿದರೆ ಅದರ ನೀರಲ್ಲಿ ಕೃಷಿ ಮಾಡುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಹೀಗಾಗಿ ಮಳೆಗಾಲದಲ್ಲಿ ಭತ್ತದ ಪೈರು ಹಾಕಿ ಅದನ್ನು ನಾಟಿ ನೆಡುತ್ತಾರೆ.

ಸುದ್ದಿಯ ಜಂಜಾಟ ಮರೆತು ಕೆಸರುಗದ್ದೆಯಲ್ಲಿ ಮಿಂದೆದ್ದ ಕೊಡಗಿನ ಪತ್ರಕರ್ತರು

ಈ ನಾಟಿ ಕೆಲಸ ಎನ್ನುವುದು ಇಲ್ಲಿ ಅಷ್ಟು ಸುಲಭದ ಕೆಲಸವಲ್ಲ. ಸುರಿಯುವ ಮಳೆ, ಕೊರೆಯುವ ಚಳಿಯಲ್ಲಿ ಕೆಸರುಗದ್ದೆಯಲ್ಲಿ ನಾಟಿ ನೆಡುವುದು ಎಂದರೆ ಅದು ಕಷ್ಟದ ಕೆಲಸವೂ ಹೌದು. ಜತೆಗೆ ವಿಭಿನ್ನ ಅನುಭವವೂ ಹೌದು. ಇಲ್ಲಿ ಹೆಂಗಸರು ಪೈರು ಕಿತ್ತರೆ ಗಂಡಸರು ನಾಟಿ ನೆಡುತ್ತಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಗದ್ದೆ ಹೊಂದಿರುವ ಎಲ್ಲರೂ ಗದ್ದೆ ಕೆಲಸವನ್ನು ಕಲಿತಿರುತ್ತಾರೆ. ಹಿಂದಿನ ಕಾಲದಲ್ಲಿ ಕೂಡು ಆಳುಗಳಾಗಿ ಭತ್ತದ ಕೃಷಿ ಕೆಲಸವನ್ನು ಮಾಡುತ್ತಿದ್ದರು.

ಆಗ ಇನ್ನೂ ಗದ್ದೆಗೆ ಯಂತ್ರೋಪಕರಣಗಳು ಇಳಿದಿರಲಿಲ್ಲ. ಎತ್ತುಗಳನ್ನು ಬಳಸಿ ಉಳುಮೆ ಮಾಡಲಾಗುತ್ತಿತ್ತು. ಬೆಳಿಗ್ಗೆ 5ಗಂಟೆಗೆ ಮಳೆಯಿರಲಿ, ಚಳಿಯಿರಲಿ ಯಾವುದನ್ನೂ ಲೆಕ್ಕಿಸದೆ ಎತ್ತುಗಳೊಂದಿಗೆ ಗದ್ದೆಗೆ ತೆರಳಿ ಉಳುಮೆ ಆರಂಭಿಸಿದರೆ 11ಗಂಟೆ ವೇಳೆಗೆ ಉಳುಮೆ ನಿಲ್ಲಿಸಲಾಗುತ್ತಿತ್ತು. ಆ ನಂತರ ಉಳುಮೆ ಮಾಡುತ್ತಿರಲಿಲ್ಲ. ಇನ್ನು ನಾಟಿಗೆ ಎಲ್ಲರೂ ಸೇರಿಕೊಂಡು ಮಾತನಾಡುತ್ತಾ ಹರಟೆ ಹೊಡೆಯುತ್ತಾ ಮಾಡುತ್ತಿದ್ದರಿಂದ ಆಯಾಸವೂ ಗೊತ್ತಾಗುತ್ತಿರಲಿಲ್ಲ. ಕುಂಭದ್ರೋಣ ಮಳೆ ಸುರಿದರೂ ಜಗ್ಗದೆ ಕೆಲಸ ಮಾಡುತ್ತಿದ್ದರು. ಮಳೆಯಿಂದ ಕಾಪಾಡಲು ವಾಟೆ(ಬಿದಿರಿನ ರೀತಿಯ ಚಿಕ್ಕದಾದ ಸಸ್ಯ)ಯಿಂದ ಮಾಡಿದ ಕೊರಂಬು(ಗೊರ್ಗ) ಧರಿಸುತ್ತಿದ್ದರು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಗದ್ದೆಗಳೇ ಇದ್ದುದರಿಂದಾಗಿ ಅವುಗಳಲ್ಲಿ ನಾಟಿ ಮಾಡಿ ಮುಗಿಸುವ ಹೊತ್ತಿಗೆ ಜನ ಸುಸ್ತಾಗಿ ಬಿಡುತ್ತಿದ್ದರು.

ಆಟಿ ತಿಂಗಳು ಎಂದರೆ ಬಿಡುವಿಲ್ಲದ ಮಳೆ ಮತ್ತು ಬಿಡುವಿಲ್ಲದ ಅದು ಕೂಡ ನೀರಲ್ಲೇ ನಿಂತು ಮಾಡಬೇಕಾದ ಅನಿವಾರ್ಯತೆ ಹೀಗೆ ಸದಾ ಕೊರೆವ ಚಳಿ, ಮಳೆಯಲ್ಲೇ ಕೆಲಸ ಮಾಡುತ್ತಿದ್ದವರಿಗೆ ತಮ್ಮ ಶರೀರವನ್ನು ಶೀತದಿಂದ ರಕ್ಷಿಸಿಕೊಳ್ಳುವ ಅಗತ್ಯತೆಯೂ ಇತ್ತು. ಆಗ ಬಂದಿದ್ದೇ ಆಟಿ ಪದ್ನಟ್ ಆಚರಣೆ.

ಮೊದಲೆಲ್ಲ ಕಾಲಕ್ಕೆ ನಿಗದಿಯಂತೆ ಮಳೆಯೂ ಬರುತ್ತಿತ್ತು. ಜತೆಗೆ ಬೇರೆ ಯಾವ ಕೆಲಸದ ಭರಾಟೆಯೂ ಇಲ್ಲದರಿಂದಾಗಿ ಆಟಿ ಹದಿನೆಂಟನೇ ದಿನಕ್ಕೆಲ್ಲ ಗದ್ದೆಯ ನಾಟಿ ಕೆಲಸಗಳು ಬಹುತೇಕ ಮುಗಿದು ಬಿಡುತ್ತಿದ್ದವು. ಜತೆಗೆ ತಮ್ಮ ಸುತ್ತ ಮುತ್ತ ಇರುವ ಗಿಡ ಮೂಲಿಕೆಗಳ ಮಹತ್ವ ಕಂಡು ಕೊಂಡಿದ್ದವರು ತಮ್ಮ ಆರೋಗ್ಯ ರಕ್ಷಣೆಗಾಗಿ ಕೆಲವೊಂದು ಗಿಡಮೂಲಿಕೆಗಳ ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

ಆಟಿ ತಿಂಗಳು ಎಂದರೆ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ಹೀಗಾಗಿ ಹೆಚ್ಚಿನವರು ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು. ಇನ್ನು 18ನೇ ದಿನ ಆಟಿ ಪಾಯಸ ಸೇವಿಸಲಾಗುತ್ತದೆ. ಈ ಆಟಿ ಪಾಯಸದ ವಿಶೇಷತೆ ಆಟಿ ಪದ್ನಟ್ ಆಚರಣೆಯ ಹಿಂದೆ ಅಡಗಿದೆ ಎಂದರೆ ತಪ್ಪಾಗಲಾರದು.

ಕೊಡಗಿನ ಕಾಡುಗಳಲ್ಲಿ, ತೋಟಗಳ ಅಂಚಿನಲ್ಲಿ ಪೊದೆಯಾಗಿ ಬೆಳೆಯುವ ಉದ್ದುದ್ದ ದಂಟಿನ ಮೂರ್ನಾಲ್ಕು ಅಡಿಗೂ ಹೆಚ್ಚು ಎತ್ತರ ಬೆಳೆಯುವ ಸಸ್ಯ ಆಟಿಸೊಪ್ಪು. ಇದರ ವೈಜ್ಞಾನಿಕ ಹೆಸರು ಜಸ್ಟಿಕಾ ವೈನಾಡೆನ್ಸಿಯಂತೆ. ಈ ಸೊಪ್ಪಿನಲ್ಲಿ ಆಟಿ ತಿಂಗಳು ಆರಂಭವಾಗುತ್ತಿದ್ದಂತೆಯೇ ಒಂದೊಂದೇ ಔಷಧಿಗುಣ ಇದಕ್ಕೆ ಸೇರುತ್ತಾ ಹೋಗಿ 18ರಂದು 18 ತರಹದ ಔಷಧಿ ಇದರಲ್ಲಿ ಇರುತ್ತದೆ. ಬಳಿಕ ಅದು ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ನಂಬಿಕೆ. ಹೀಗಾಗಿ ಆಟಿ ಪದ್ನಟ್(ಆಗಸ್ಟ್ 3)ರಂದು ಈ ಸೊಪ್ಪಿಗೆ ಎಲ್ಲಿಲ್ಲದ ಬೇಡಿಕೆ ಕೊಡಗಿನಲ್ಲಿ ಕಂಡು ಬರುತ್ತದೆ.

ಈ ಸೊಪ್ಪನ್ನು ತಂದು ಶುಚಿಗೊಳಿಸಿ ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಿದಾಗ ನೀಲಿ ಬಣ್ಣದ ರಸ ಬಿಡುತ್ತದೆ. ಬಳಿಕ ಸೊಪ್ಪನ್ನು ಬೇರ್ಪಡಿಸಿ ರಸವನ್ನು ತೆಗೆದುಕೊಂಡು ಅದರಲ್ಲಿ ಪಾಯಸ, ಬರ್ಪಿ ಸೇರಿದಂತೆ ಹಲವು ಖಾದ್ಯಗಳನ್ನು ಮಾಡಿ ಅದಕ್ಕೆ ಜೇನು ಬೆರೆಸಿ ತಿಂದರೆ ತುಂಬಾ ರುಚಿಯಾಗಿರುತ್ತದೆ. ಇನ್ನು ನಾಟಿ ಕೋಳಿ ಖಾದ್ಯಗಳು ಮನೆಗಳಲ್ಲಿ ಘಮ್ಮೆನ್ನುತ್ತಿರುತ್ತವೆ. ಜತೆಗೆ ಕೆಲವರ ಮನೆಗಳಲ್ಲಿ ಮದ್ಯಕ್ಕೂ ಸ್ಥಾನ ನೀಡಲಾಗುತ್ತದೆ.

ಹಿಂದಿನ ಕಾಲದ ಪರಿಸ್ಥಿತಿಗೆ ತಕ್ಕಂತೆ ಪೂರ್ವಜರು ಹಲವು ಸಂಪ್ರದಾಯವನ್ನು ಜಾರಿಗೆ ತಂದಿದ್ದು ಆದು ಆರೋಗ್ಯಕಾರಿಯಾಗಿದೆ. ಅದನ್ನು ಬದಲಾದ ಕಾಲಘಟ್ಟದಲ್ಲಿಯೂ ಇಲ್ಲಿನವರು ಆಚರಿಸಿಕೊಂಡು ಹೋಗುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ.

English summary
Kodagu people are anxious to celebrate Aati Padnat on August 3rd. Aati Padnat is a festival, celebrated on 18th day of Aati Padnat or Ashada month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X