• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗು ಪ್ರಕೃತಿ ವಿಕೋಪಕ್ಕೆ 'ಕೈಲ್' ಮುಹೂರ್ತ ಸಂಭ್ರಮ ಬಲಿ!

By ಬಿ.ಎಂ.ಲವಕುಮಾರ್
|

ಮಡಿಕೇರಿ, ಸೆಪ್ಟೆಂಬರ್ 02 : ಎಲ್ಲವೂ ಸರಿ ಇದ್ದಿದ್ದರೆ ಇಷ್ಟರಲ್ಲೇ ಕೊಡಗಿನಲ್ಲಿ ಸಂಭ್ರಮ ಮನೆ ಮಾಡಬೇಕಿತ್ತು. ಹೌದು, ಸೆಪ್ಟಂಬರ್ 2 ಮತ್ತು 3 ಕೈಲ್‍ ಹಬ್ಬಕ್ಕೆ ಮುಹೂರ್ತ. ಈ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ತಲತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿತ್ತು.

ಆದರೆ, ಈ ಬಾರಿ ಸುರಿದ ಮಹಾಮಳೆ, ಭೂ ಕುಸಿತದಿಂದಾಗಿ ಹಲವು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ, ಹಲವು ಜನರು ಸಾವನ್ನಪ್ಪಿದ್ದಾರೆ. ಮಹಾಮಳೆ ತಂದ ದುರಂತ ಕಣ್ಣ ಮುಂದೆಯೇ ಇರುವಾಗ ಇನ್ನೆಲ್ಲಿಯ ಹಬ್ಬದ ಸಂಭ್ರಮ?.

ಚಿತ್ರಗಳು : ಕೊಡಗಿನಲ್ಲಿ ಇನ್ನೂ ನಡೆಯುತ್ತಿದೆ ಪರಿಹಾರ ಕಾರ್ಯ

ಮೈಮುರಿದು ದುಡಿದು ಗದ್ದೆ ನಾಟಿ ಮುಗಿಸಿ ನೆಮ್ಮದಿಯಿಂದ ಕೈಲ್‍ ಹಬ್ಬವನ್ನು ಆಚರಿಸುತ್ತಿದ್ದರು ಕೊಡಗಿನ ಜನತೆ. ಆದರೆ, ಬಹಳಷ್ಟು ಮಂದಿಗೆ ತಮ್ಮದು ಎನ್ನುವ ಯಾವ ಆಸ್ತಿಯೂ ಇಲ್ಲದೆ ನಿರಾಶ್ರಿತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದ್ದರಿಂದ, ಇನ್ನೆಲ್ಲಿಯ ಹಬ್ಬದ ಆಚರಣೆ, ಅದು ಅವರ ಪಾಲಿಗೆ ಬರೀ ನೆನಪಷ್ಟೆ.

ಮಹಾಮಳೆಯಿಂದ ನಲುಗಿದ ಊರಲ್ಲಿ ಸೂತಕದ ಕಳೆ

ಈ ಹಬ್ಬ ಕೊಡಗಿನವರ ಪಾಲಿಗೆ ಮನರಂಜನೀಯ ಹಬ್ಬವಾಗಿತ್ತು. ಗದ್ದೆ ಕೆಲಸದಲ್ಲಿ ದೇಹವನ್ನು ದಂಡಿಸಿದವರು ಹೊಟ್ಟೆ ತುಂಬಾ ಉಂಡು, ಕಂಠಮಟ್ಟ ಕುಡಿದು ಸಂಭ್ರಮಿಸುವ ಹಾಗೂ ಮೈದಾನಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಕ್ರೀಡಾ ಕೌಶಲ್ಯತೆಯನ್ನು ಪ್ರದರ್ಶಿಸುವ ಹಬ್ಬವಿದಾಗಿತ್ತು.

ಚಿತ್ರಗಳು : ಮಳೆ, ಗುಡ್ಡ ಕುಸಿತದ ಬಳಿಕ ಕೊಡಗಿನ ರಸ್ತೆಗಳು

ಜಿಲ್ಲೆಯಲ್ಲಿ ಈಗ ಸೂತಕದ ಛಾಯೆ

ಜಿಲ್ಲೆಯಲ್ಲಿ ಈಗ ಸೂತಕದ ಛಾಯೆ

ಜಿಲ್ಲೆಯಿಂದ ಹೊರಗಿರುವವರು, ಸೇನೆಯಲ್ಲಿರುವರ ಪೈಕಿ ಬಹುತೇಕ ಮಂದಿ ಈ ಹಬ್ಬಕ್ಕೆ ತಮ್ಮ ಊರಿಗೆ ಆಗಮಿಸಿ ಕುಟುಂಬದವರೊಂದಿಗೆ ಬೆರೆತು ಖುಷಿಯಾಗಿ ಕಾಲ ಕಳೆದು ಹೋಗುತ್ತಿದ್ದರು. ಆದರೆ, ಈ ಬಾರಿ ಅದ್ಯಾವುದೂ ಕಂಡು ಬರುತ್ತಿಲ್ಲ.

ಮಳೆಯಿಂದ ಸಂಭವಿಸಿದ ದುರಂತದಿಂದ ಇನ್ನೂ ಎಚ್ಚೆತ್ತುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಕೂಡ ರಸ್ತೆ ದುರಸ್ತಿಯಾಗದೆ ಬಹುತೇಕ ಕಡೆಗೆ ವಾಹನ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿದ್ದರಿಂದ ಅವುಗಳನ್ನು ದುರಸ್ತಿಪಡಿಸಿ ವಿದ್ಯುತ್ ನೀಡುವ ವೇಳೆಗೆ ಇನ್ನೊಂದಷ್ಟು ದಿನಗಳು ಬೇಕಾಗುತ್ತವೆ. ಭೂಕುಸಿತ ಸಂಭವಿಸಿದ ಊರುಗಳಲ್ಲಂತು ಇನ್ನೂ ಕೂಡ ಸೂತಕದ ವಾತಾವರಣವೇ ಇದೆ.

ಮಳೆಯ ಪರಿಣಾಮ ಕಾವೇರಿ ಉಕ್ಕಿ ಹರಿದ ಪರಿಣಾಮ ಜಲಾವೃತಗೊಂಡು ಭತ್ತದ ಕೃಷಿಯೆಲ್ಲ ನಾಶವಾಗಿದ್ದರೆ, ಇನ್ನು ಕೆಲವರ ತೋಟಗಳು ನಾಶವಾಗಿವೆ. ಮಿಡಿಕಚ್ಚಿ ಬೆಳವಣಿಗೆಯ ಹಂತದಲ್ಲಿದ್ದ ಕಾಫಿ ಮತ್ತು ಕರಿಮೆಣಸು ಫಸಲುಗಳು ಮಳೆಗಾಳಿಗೆ ನೆಲಕ್ಕುರುಳಿವೆ. ಇದರ ಪರಿಣಾಮ ಮುಂದಿನ ವರ್ಷ ಹೇಗಪ್ಪಾ ಎಂಬ ಚಿಂತೆಯೂ ಬೆಳೆಗಾರರನ್ನು ಕಾಡತೊಡಗಿದೆ.

ಕೈಲ್ ಮುಹೂರ್ತ ಏಕೆ ಆಚರಿಸುತ್ತಾರೆ?

ಕೈಲ್ ಮುಹೂರ್ತ ಏಕೆ ಆಚರಿಸುತ್ತಾರೆ?

ಇಷ್ಟಕ್ಕೂ ಈ ಹಬ್ಬವನ್ನು ಇಲ್ಲಿನವರು ಏಕೆ ಆಚರಿಸುತ್ತಾರೆ? ಮತ್ತು ಇದರ ಹಿನ್ನಲೆ ಏನು ಎಂಬುದನ್ನು ನೋಡುವುದಾದರೆ ಇದರಲ್ಲಿ ಮನರಂಜನೆ, ಸಂಭ್ರಮ, ಶೂರತ್ವ, ಕ್ರೀಡಾ ಸಂಭ್ರಮ, ಸಂಪ್ರದಾಯ ಹೀಗೆ ಎಲ್ಲವೂ ಮಿಳಿತವಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

"ಕೈಲ್‍ಮುಹೂರ್ತ" ಹಬ್ಬವನ್ನು ಕೊಡವ ಭಾಷೆಯಲ್ಲಿ "ಕೈಲ್‍ಪೊಳ್ದ್" ಎಂದು ಕರೆಯಲಾಗುತ್ತದೆ. "ಕೈಲ್" ಎಂದರೆ ಆಯುಧ "ಪೊಳ್ದ್" ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ. "ಕೈಲ್‍ಮುಹೂರ್ತ" ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಕಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ.

ಹಬ್ಬಕ್ಕೆ ರೋಮಾಂಚನಕಾರಿ ಹಿನ್ನಲೆ

ಹಬ್ಬಕ್ಕೆ ರೋಮಾಂಚನಕಾರಿ ಹಿನ್ನಲೆ

"ಕೈಲ್‍ಪೊಳ್ದ್" ಹಬ್ಬಕ್ಕೆ ತನ್ನದೇ ಆದ ಆಚರಣೆ ಹಾಗೂ ರೋಮಾಂಚನಕಾರಿ ಹಿನ್ನಲೆ ಇದೆ. ಗುಡ್ಡ-ಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೆ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ.

ಹೀಗಾಗಿ ಕೃಷಿಕರಿಗೆ ನಿರ್ಧಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿಗೆ ಅನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿ ಕೊಡಲಾಗುತ್ತಿತ್ತು.

ಬಂದೂಕುಗಳಿಗೆ ಪೂಜೆ

ಬಂದೂಕುಗಳಿಗೆ ಪೂಜೆ

ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು.

ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು. ಈ ದಿನಗಳಲ್ಲಿ ಕೋವಿಯನ್ನು ನೆಲ್ಲಕ್ಕಿ ಬಾಡೆ(ದೇವರಕೋಣೆ)ಯಲ್ಲಿಡಲಾಗುತ್ತಿತ್ತು. ಅಲ್ಲದೆ ಕಕ್ಕಡ ಮಾಸ (ಜುಲೈ 17ರಿಂದ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು.

ದುಡಿದ ಜೀವಗಳಿಗೆ ರಂಜನೆ

ದುಡಿದ ಜೀವಗಳಿಗೆ ರಂಜನೆ

ದುಡಿಮೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್‍ಮುಹೂರ್ತ ಹಬ್ಬದ ಸಂದರ್ಭವೇ ಆಗಿತ್ತು. ಹಾಗಾಗಿ ಕೈಲ್‍ಮುಹೂರ್ತ ದುಡಿದ ಜೀವಗಳಿಗೆ ಸಂತಸವನ್ನೀಯುವ ಹಬ್ಬವಾಗಿ ಆಚರಣೆಯಾಗುತ್ತಾ ಬಂದಿದೆ.

ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತಿತ್ತು. ನಂತರ ಎತ್ತುಗಳನ್ನು ಉಳುಮೆಗೆ ಉಪಯೋಗಿಸುವುದು ಮುಂದಿನ ವರುಷದ ಮುಂಗಾರಿನಲ್ಲಿ ಮಾತ್ರ ಆಗಿರುತ್ತಿತ್ತು.

ಹಬ್ಬದಲ್ಲಿ ನಡೆಯುತ್ತೆ ಕ್ರೀಡಾಕೂಟ

ಹಬ್ಬದಲ್ಲಿ ನಡೆಯುತ್ತೆ ಕ್ರೀಡಾಕೂಟ

ಇನ್ನು ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸುತ್ತಿದ್ದರು. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಿದ್ದರು.

ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಪೂಜೆ ಸಲ್ಲಿಸಿ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಆಶೀರ್ವಾದ ಪಡೆದು ಬಳಿಕ ಕೋವಿಯನ್ನು ಹೆಗಲಿಗೇರಿಸಿ ಬೇಟೆಗೆ ತೆರಳುತ್ತಿದ್ದರು.

ಆದರೆ, ಬದಲಾದ ಕಾಲದಲ್ಲಿ ಬೇಟೆ ನಿಷಿದ್ಧವಾಗಿದ್ದರಿಂದ ಊರಲ್ಲಿ ಕ್ರೀಡಾಕೂಟ ಏರ್ಪಡಿಸಿ ತೆಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ಶೌರ್ಯ ಪ್ರದರ್ಶಿಸುತ್ತಾ ಬರಲಾಗುತ್ತಿತ್ತು. ಆದರೆ, ಈ ಬಾರಿ ಸಂಭವಿಸಿದ ದುರಂತ ಎಲ್ಲದಕ್ಕೂ ತಣ್ಣೀರೆರಚಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Kail Pold festival was celebrated in different parts of Kodagu in the first week of September every year. But, this time there is no festival due to heavy rain and landslide.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more