ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?

By ಬಿ.ಎಂ. ಲವಕುಮಾರ್, ಮಡಿಕೇರಿ
|
Google Oneindia Kannada News

Recommended Video

ಕೊಡಗಿನ ಭೀಕರ ಪ್ರವಾಹಕ್ಕೂ ಮುಂಚೆನೇ ಜಲಪ್ರಳಯದ ಮುನ್ಸೂಚನೆ ಸಿಕ್ಕಿತ್ತಾ? | Oneindia Kannada

ಮಡಿಕೇರಿ, ಆಗಸ್ಟ್ 18 : ಕಂಡರಿಯದಂಥ ಭಾರೀ ವರ್ಷಧಾರೆಗೆ ಕೊಡೆಗಿಗೆ ಕೊಡಗೇ ಮುಳುಗಿ ಹೋಗಿದೆ, ಜೊತೆಗೆ ಜನರ ಕಂಬನಿಯ ಬಿಂದುಗಳು ಕೂಡ ಸೇರಿಕೊಂಡಿವೆ. ಕೊಡಗಿನಲ್ಲಿ ಇಂತಹದೊಂದು ಭಾರೀ ದುರಂತ ನಡೆದು ಹೋಗುತ್ತೆ ಎಂಬ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ? ಎಂಬ ಪ್ರಶ್ನೆಗೆ ಇಲ್ಲ ಎನ್ನಲಾಗುವುದಿಲ್ಲ.

ಏಕೆಂದರೆ ಈ ಹಿಂದೆಯೇ ಮುಂಗಾರು ಆರಂಭದ ಮೊದಲೇ ಇಲ್ಲಿ ಭೂಮಿ ಕಂಪಿಸಿತ್ತು. ಭಾರೀ ಸದ್ದುಗಳು ಕೇಳಿ ಬಂದಿದ್ದವು. ಸಿಡಿಲು ಗುಡುಗಿನ ಆರ್ಭಟಗಳು ಜೋರಾಗಿದ್ದವು. ಸಿಡಿಲ ಅಬ್ಬರ ಕೇಳಿದ ಹಿರಿಯರು ಇಂತಹದೊಂದು ಗುಡುಗು, ಸಿಡಿಲಿನ ಸದ್ದನ್ನು ತಮ್ಮ ಜೀವನಾವಧಿಯಲ್ಲೇ ಕೇಳಿರಲಿಲ್ಲ ಎಂದಿದ್ದರು. ಬಹುಶಃ ಅವತ್ತು ನಡೆದ ಒಂದೆರಡು ಘಟನೆಗಳು ಜಲಪ್ರಳಯದ ಮುನ್ಸೂಚನೆಯಾಗಿತ್ತಾ? ಎಂಬುದು ಇವತ್ತು ಕೊಡಗಿನ ಜನರನ್ನು ಕಾಡತೊಡಗಿದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಇವತ್ತು ವರುಣ ಅಬ್ಬರಿಸಿದ್ದಾನೆ.. ಭೂತಾಯಿ ಪದೇಪದೇ ಕಂಪಿಸುತ್ತಿದ್ದಾಳೆ.. ಕಾವೇರಿ ರೌದ್ರಾವತಾರ ತಾಳುತ್ತಿದ್ದಾಳೆ.. ಗುಡ್ಡಗಳು ಕುಸಿಯುತ್ತಿವೆ.. ಮನೆಗಳು ನೆಲಕ್ಕುರುಳುತ್ತಿವೆ.. ಎಲ್ಲೆಲ್ಲಿಂದಲೂ ಹರಿದು ಬಂದ ನೀರು ಮನೆಗೆ ನುಗ್ಗುತ್ತಿದೆ.. ಒಂದಷ್ಟು ಮಂದಿ ಮನೆಮಠ ಬಿಟ್ಟು ಅನಾಥರಾಗಿ ಗಂಜಿ ಕೇಂದ್ರ ಸೇರಿದ್ದಾರೆ.. ಮತ್ತೊಂದಷ್ಟು ಮಂದಿ ನಾಪತ್ತೆಯಾಗಿದ್ದಾರೆ.. ಆರು ಮಂದಿ ಪ್ರಾಣ ಬಿಟ್ಟಿದ್ದಾರೆ.. ಸುತ್ತಲೂ ನೀರು ಆವರಿಸಿ, ರಸ್ತೆ ಕುಸಿದು, ಹೊರ ಪ್ರಪಂಚದೊಂದಿಗೆ ಸಂಪರ್ಕವೇ ಕಳೆದುಹೋಗಿದೆ..

ಕೊಡಗು ಜಿಲ್ಲೆಯಾದ್ಯಂತ 3ಸಾವಿರಕ್ಕೂ ಅಧಿಕ ಸಂತ್ರಸ್ತರ ರಕ್ಷಣೆಕೊಡಗು ಜಿಲ್ಲೆಯಾದ್ಯಂತ 3ಸಾವಿರಕ್ಕೂ ಅಧಿಕ ಸಂತ್ರಸ್ತರ ರಕ್ಷಣೆ

ಸಹಾಯಕ್ಕೆ ಎಂದೂ ಕೈಚಾಚದ ವೀರಶೂರರ ನಾಡು, ದಕ್ಷಿಣದ ಕಾಶ್ಮೀರ ಎಂದು ಹೆಸರಾಗಿರುವ ಕೊಡಗು ಇಂದು ಅನಿವಾರ್ಯವಾಗಿ ಸಹಾಯಕ್ಕೆ ಕೈಚಾಚುವಂತಾಗಿದೆ. ಕೊಡಗಿನ ಗುಂಡಿಗೆ ಮಾತ್ರವಲ್ಲ ಭಾರೀ ಮಳೆಗೂ ಎದೆಯೊಡ್ಡಿದ್ದಾರೆ. ಆದರೆ ಈಬಾರಿಯ ಮಳೆ ಕೊಡಗಿನ ಜನರನ್ನು ಜಡಿದುಹಾಕಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ನರಕಸದೃಶ ವಾತಾವರಣ ಸೃಷ್ಟಿಯಾಗಿದೆ.

ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ

ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ

ಎಲ್ಲಿ ನೋಡಿದರೂ ಕುಸಿದ ಗುಡ್ಡ, ಕಾಫಿ ತೋಟಗಳು, ಧರೆಗುರುಳಿದ ಮನೆಗಳು, ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ, ಕುಸಿದ, ಬಿರುಕುಬಿಟ್ಟ ರಸ್ತೆಗಳು, ಅಡ್ಡಾದಿಡ್ಡಿ ನೆಲಕ್ಕುರಳಿದ ಮರಗಳು, ವಿದ್ಯುತ್ ಕಂಬಗಳು, ನೀರಿನಲ್ಲಿ ಮುಳುಗಡೆಯಾದ ವಸತಿ ಪ್ರದೇಶಗಳು, ಮುಗಿಲು ಮುಟ್ಟಿದ ಆಕ್ರಂದನ, ಒಂದೇ ಊರಲ್ಲಿ ಇದ್ದರೂ ತಮ್ಮವರನ್ನು ಸಂಪರ್ಕಿಸಲಾಗದೆ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವ ಜನ.. ಒಂದೇ ಎರಡೇ? ನೂರಾರು ನೋವು ತುಂಬಿದ ನೋಟಗಳು ಕೊಡಗಿನಲ್ಲೀಗ ಕಂಡು ಬರುತ್ತಿದೆ. ವೀರರ, ಶೂರರ ನಾಡು, ದಕ್ಷಿಣ ಕಾಶ್ಮೀರ ಎಂದೆಲ್ಲ ಕರೆಯಿಸಿಕೊಳ್ಳುತ್ತಿರುವ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಇದುವರೆಗೆ ಯಾರೂ ಕಂಡು ಕೇಳರಿಯದೆ ದುರಂತ ಇಲ್ಲಿ ನಡೆದು ಹೋಗಿದೆ. ಇಷ್ಟಕ್ಕೂ ಇಲ್ಲಿ ಆಗಿರೋದು ಅರ್ಥಾತ್ ಜಲಪ್ರಳಯ ಅಲ್ಲದೆ ಮತ್ತೇನೂ ಅಲ್ಲ.

ಹಾರದ ಹೆಲಿಕಾಪ್ಟರ್‌: ರಸ್ತೆ ಮೂಲಕ ಪ್ರವಾಹ ಸಮೀಕ್ಷೆಗೆ ಸಿಎಂ ನಿರ್ಧಾರ ಹಾರದ ಹೆಲಿಕಾಪ್ಟರ್‌: ರಸ್ತೆ ಮೂಲಕ ಪ್ರವಾಹ ಸಮೀಕ್ಷೆಗೆ ಸಿಎಂ ನಿರ್ಧಾರ

ಮಳೆ ಹೊಸತಲ್ಲ ಅದು ತಂದ ದುರಂತ ಮಾತ್ರ ಹೊಸದು

ಮಳೆ ಹೊಸತಲ್ಲ ಅದು ತಂದ ದುರಂತ ಮಾತ್ರ ಹೊಸದು

ಹಾಗೆ ನೋಡಿದರೆ ಕೊಡಗಿನವರಿಗೆ ಮಳೆ ಹೊಸತೇನಲ್ಲ. ಎಂಥೆಂಥದ್ದೋ ಕುಂಭದ್ರೋಣ ಮಳೆಗಳನ್ನು ನೋಡಿದ್ದಾರೆ. ಅದಕ್ಕೆ ಅಂಜದೆ ಎದೆಗೊಟ್ಟು ಬದುಕು ಸಾಗಿಸಿದ್ದಾರೆ. ಬೆಟ್ಟಗುಡ್ಡಗಳ ನಡುವೆ, ನದಿ ಬದಿಯಲ್ಲಿ ಯಾವುದೇ ಭಯವಿಲ್ಲದೆ ಒಂಟಿ ಮನೆಗಳನ್ನು ಕಟ್ಟಿಕೊಂಡು ಬದುಕು ಸವೆಸಿದ್ದಾರೆ. ಆದರೆ ಅಂತಹ ಜನ ಇವತ್ತು ತಮ್ಮ ಕಣ್ಣಮುಂದೆ ನಡೆದ ಘಟನೆಯಿಂದ ನಲುಗಿ ಹೋಗಿದ್ದಾರೆ.

ಕಷ್ಟಪಟ್ಟು ಮಾಡಿದ ಮನೆ, ತೋಟ, ಚಿನ್ನಾಭರಣ ವಾಹನ ಎಲ್ಲವನ್ನೂ ಕಳೆದುಕೊಂಡು ಜೀವ ಉಳಿದರೆ ಸಾಕೆಂದು ಆಶ್ರಯ ಬೇಡಿ ಗಂಜಿಕೇಂದ್ರ ಸೇರಿದ್ದಾರೆ. ಅಲ್ಲಿ ತಮಗಾದ ತೊಂದರೆಯನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಇದು ಯಾರಿಗೂ ಬರಬಾರದಂತಹ ಸಂಕಷ್ಟ. ತಮ್ಮ ಕೈಲಾದ ಸಹಾಯ ಹಸ್ತ ಚಾಚುತ್ತಾ, ಭೂ ತಾಯಿಯ ಮಡಿಲಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯಿಂದ ಸ್ವಾಭಿಮಾನದಿಂದ ಬದುಕಿದವರು ಈಗ ಅಂಗಲಾಚುವಂತಹ ಸ್ಥಿತಿಗೆ ಬಂದಿದ್ದರಿಂದ ಅವರು ಸಹಜವಾಗಿಯೇ ಕಣ್ಣೀರಿಡುತ್ತಾರೆ. ಸದ್ಯಕ್ಕೆ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ಹೊರಗೆ ಭೋರ್ಗರೆಯುವ ಮಳೆ.. ಒಳಗೆ ನೋವಿನ, ಅಸಹಾಯಕತೆಯ ಕಣ್ಣೀರು ದೇಹವನ್ನು ತೋಯುತ್ತಿದೆ.

ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ

ಕೊಡಗು ನಲುಗಿ ಹೋಗಿದ್ದೇ ಇಂಥವರಿಂದ

ಕೊಡಗು ನಲುಗಿ ಹೋಗಿದ್ದೇ ಇಂಥವರಿಂದ

ಕಳೆದ ಕೆಲವು ದಶಕಗಳಿಂದ ಇಲ್ಲಿ ವಾಡಿಕೆಯ ಮಳೆ ಸುರಿಯುತ್ತಿರಲಿಲ್ಲ. ಹೀಗಾಗಿ ಇಲ್ಲಿನ ಜನ ಮಳೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನದಿಗಳು ಉಕ್ಕಿ ಹರಿಯದೆ ಕೆಲವು ವರ್ಷಗಳೇ ಕಳೆದು ಹೋಗಿದ್ದವು. ಕಳೆದೊಂದು ದಶಕದಿಂದೀಚೆಗೆ ಆಧುನಿಕ, ವಾಣಿಜ್ಯೀಕರಣದ ಬದುಕು ತೆರೆದುಕೊಳ್ಳತೊಡಗಿತು. ಹಿಂದಿನವರು ಯಾವುದನ್ನು ಮಾಡಬೇಡಿ ಎಂದಿದ್ದರೋ ಅದನ್ನೇ ಮಾಡತೊಡಗಿದ್ದರು. ನದಿ ದಡಗಳು ಒತ್ತುವರಿಯಾಗಿ ಮನೆಗಳು ಮೇಲೆದ್ದವು. ಸದಾ ನೀರಿನಾಶ್ರಯವಿದ್ದ ಪ್ರದೇಶಗಳನ್ನು ಭತ್ತದ ಗದ್ದೆಯಾಗಿಸಿ ಬೆಳೆ ಬೆಳೆಯುವಲ್ಲಿ ಹಿರಿಯರು ಸಫಲರಾಗಿದ್ದರು. ಆದರೆ ಅವುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಕಾರ್ಯಗಳು ನಡೆದವು. ಹೊರಗಿನವರು ಬಂದು ಗುಡ್ಡಪ್ರದೇಶಗಳನ್ನು ಖರೀದಿಸಿ ಅಲ್ಲಿ ಜೆಸಿಬಿ ಬಳಸಿ ರಸ್ತೆಗಳನ್ನು ಮಾಡಿದರು, ಕಟ್ಟಡ ಕಟ್ಟಿ ಹೋಂಸ್ಟೇ, ರೆಸಾರ್ಟ್ ಮಾಡಿ ಹಣ ಸಂಪಾದಿಸುವ ದಾರಿ ಕಂಡುಕೊಂಡರು. ಬೆಟ್ಟಗುಡ್ಡವೆನ್ನದೆ ಮನೆಗಳು ತಲೆ ಎತ್ತಿದವು. ಮುಂದೆ ಏನು ಆಗಲ್ಲ ಎಂಬ ಹುಂಬ ಧೈರ್ಯ ಏನು ಮಾಡಬಾರದಿತ್ತೋ ಅದನ್ನು ಮಾಡಿಸಿತು.

ಪಟ್ಟಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮನೆಗಳಾದವು. ನೀರು ಹರಿದು ಹೋಗಲು ಅವಕಾಶವಿಲ್ಲದಂತೆ ಕಟ್ಟಡಗಳು ಎದ್ದು ನಿಂತ ಪರಿಣಾಮ ಒಂದಷ್ಟು ಪ್ರದೇಶಗಳು ಜಲಾವೃತವಾಗುವಂತಾಗಿದೆ. ಗುಡ್ಡಗಳನ್ನು ಅಗೆದು ಹಳ್ಳ, ಕಂದಕಗಳಿಗೆ ಮಣ್ಣು ಸುರಿದು ಮಾಡಿದ ರಸ್ತೆಗಳು ಇಲ್ಲಿ ತನಕ ಏನೂ ಆಗಿರಲಿಲ್ಲ. ಆದರೆ ಈ ಬಾರಿಯ ಕುಂಭದ್ರೋಣ ಮಳೆಗೆ ಗುಡ್ಡ ಕುಸಿಯುತ್ತಿದ್ದಂತೆಯೇ ರಸ್ತೆಗಳು ಕುಸಿದಿವೆ, ಬಿರುಕು ಬಿಟ್ಟಿವೆ. ಒಟ್ಟಾರೆ ಕೊಡಗಿಗೆ ಕೊಡಗೇ ನಲುಗಿ ಹೋಗಿದೆ.

ಕರ್ನಾಟಕದ ಪ್ರವಾಹ ಪೀಡಿತರ ರಕ್ಷಣೆಗೆ ಸೇನಾಪಡೆ : ಕುಮಾರಸ್ವಾಮಿ ಕರ್ನಾಟಕದ ಪ್ರವಾಹ ಪೀಡಿತರ ರಕ್ಷಣೆಗೆ ಸೇನಾಪಡೆ : ಕುಮಾರಸ್ವಾಮಿ

ದುರಂತದ ಮುನ್ಸೂಚನೆ ನೀಡಿದ ನೀರಿನ ಸದ್ದು

ದುರಂತದ ಮುನ್ಸೂಚನೆ ನೀಡಿದ ನೀರಿನ ಸದ್ದು

ಕಳೆದವರ್ಷ ಇದೇ ವೇಳೆಗೆ ಸಾಧಾರಣ ಮಳೆಯಾಗಿತ್ತು. ಮುಂಗಾರಿನ ಆರಂಭ ಮಂದಗತಿಯಲ್ಲಿತ್ತು. ಆದರೆ ಈ ಬಾರಿ ಹಾಗೆ ಆಗಲೇ ಇಲ್ಲ. ಜೂನ್ ಮೊದಲ ವಾರದಲ್ಲಿಯೇ ಅಬ್ಬರಿಸಿದ ಮೃಗಶಿರಾ ಮಳೆ ಪ್ರವಾಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಭಾಗಮಂಡಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾದವು. ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿದ್ದವು. ಜನ ಇದನ್ನು ಮಾಮೂಲು ಮಳೆ ಎಂದು ನಂಬಿದ್ದರು. ಹೇಗೋ ಪ್ರವಾಹ ಪರಿಸ್ಥಿತಿಯಿಂದ ಪಾರಾಗಿ ಬಂದರು. ನಂತರದ ದಿನಗಳಲ್ಲಿ ಮಳೆಯ ಅಬ್ಬರವೂ ತಗ್ಗಿತ್ತು. ಆದರೆ ನಂತರದ ದಿನಗಳಲ್ಲಿ ಮಳೆಯ ಅರ್ಭಟ ಹೆಚ್ಚಾಗತೊಡಗಿತು. ಮಡಿಕೇರಿ ಬಳಿಯ ಕಾಲೂರಿನ ಕೆಲವು ಪ್ರದೇಶಗಳಲ್ಲಿ ಬಿರುಕು ಕಾಣಿಸಿತು. ಸದ್ದುಗಳು ಬರತೊಡಗಿದವು. ನೆಲಕ್ಕೆ ಕಿವಿಕೊಟ್ಟರೆ ನೀರು ಹರಿದು ಹೋಗುವ ಶಬ್ದಗಳು ಕೇಳಿಸತೊಡಗಿತು. ಆಗಲೇ ಇಲ್ಲಿ ಏನೋ ಅನಾಹುತ ಸಂಭವಿಸುತ್ತದೆ ಎಂಬ ಚಿಕ್ಕ ಸೂಚನೆ ಸಿಕ್ಕಿತ್ತು. ಆದರೆ ಅದರ ಭೀಕರತೆಯ ಬಗ್ಗೆ ಯಾರು ನಿರೀಕ್ಷೆ ಮಾಡಿರಲಿಲ್ಲ.

ಪ್ರವಾಹ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಮತ್ತು ಸಚಿವರು ಭೇಟಿ ಪ್ರವಾಹ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಮತ್ತು ಸಚಿವರು ಭೇಟಿ

ಆಕಾಶಕ್ಕೇ ತೂತು ಬಿದ್ದಂತೆ ವರ್ಷಧಾರೆ

ಆಕಾಶಕ್ಕೇ ತೂತು ಬಿದ್ದಂತೆ ವರ್ಷಧಾರೆ

ಆಗಸ್ಟ್ ತಿಂಗಳ ವಾರ ಮಡಿಕೇರಿ ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮಡಿಕೇರಿಗೆ ಸಮೀಪವೇ ಕುಸಿಯಿತು. ಅದಾದ ಬಳಿಕ ಮದೆನಾಡು ಬಳಿ ಗುಡ್ಡವೇ ರಸ್ತೆಗೆ ಕುಸಿದು ಬಿತ್ತು. ನಂತರ ಮಡಿಕೇರಿ ವ್ಯಾಪ್ತಿಯ ಗುಡ್ಡಗಳಲ್ಲಿ ಸಣ್ಣಗೆ ಆತಂಕ ಶುರುವಾಯಿತು. ಮಡಿಕೇರಿಗೆ ಸುಮಾರು 15 ಕಿ.ಮೀ. ದೂರವಿರುವ ಕಾಲೂರು, ದೇವಸ್ತೂರು, ಮೊಣ್ಣಂಗೇರಿ, ಮೇಘತ್ತಾಳ, ಮಕ್ಕಂದೂರು, ತಂತಿಪಾಲ ಹೀಗೆ ವಿವಿಧ ಕಡೆ ಮಳೆಯ ರಭಸ ಹೆಚ್ಚಿ ಸಣ್ಣಪುಟ್ಟ ಹೊಳೆಗಳೆಲ್ಲ ರೌದ್ರಾವತಾರ ತಾಳಿ ಹರಿಯತೊಡಗಿದವು. ಮೊದಲೇ ಸೇತುವೆಯಿಲ್ಲದೆ, ತಾವೇ ನಿರ್ಮಿಸಿಕೊಂಡಿದ್ದ ಸೇತುವೆ ಮೂಲಕ ಪಟ್ಟಣದೊಂದಿಗೆ ಸಂಪರ್ಕ ಹೊಂದಿದ್ದ ಪ್ರದೇಶಗಳು ಆಗ ಸಂಪೂರ್ಣ ಜಲಾವೃತವಾದವು.

ಅಷ್ಟೇ ಆಗಿದ್ದರೆ ಜನ ಹೇಗೋ ನಿಭಾಯಿಸಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಹಾಗೆ ಆಗಲೇ ಇಲ್ಲ. ಗದ್ದೆ ಬದಿಯಲ್ಲಿ ಹರಿಯುತ್ತಿದ್ದ ನದಿಗಳು ಭೀಕರ ಸ್ವರೂಪ ತಾಳಿ ಗದ್ದೆ, ತೋಟವನ್ನೆಲ್ಲ ನೀರು ಆವರಿಸಿತು. ಇದ್ದಕ್ಕಿದ್ದಂತೆ ಆಕಾಶವೇ ತೂತು ಬಿದ್ದಂತೆ ಸುರಿದ ಮಳೆಗೆ ಎತ್ತರ ಪ್ರದೇಶದಲ್ಲಿದ್ದ ಮನೆಗಳು ನಡುಗತೊಡಗಿದವು. ಗುಡ್ಡಗಳು ಮನೆಯ ಮೇಲೆ ಕುಸಿದರೆ, ಮತ್ತೆ ಕೆಲವೆಡೆ ಮನೆಗಳೇ ಕುಸಿದು ಬಿದ್ದವು. ಆಗಲೇ ಜನ ಬೆಚ್ಚಿ ಬಿದ್ದರು. ಮನೆಯಿಂದ ಹೊರಗೆ ಹೋಗಿ ಸುರಕ್ಷಿತ ಸ್ಥಳ ತಲುಪೋಣ ಎಂದರೆ ಸುತ್ತಲೂ ನೀರು. ಅಷ್ಟೇ ಅಲ್ಲ ರಸ್ತೆಗಳಲ್ಲಿ ತೆರಳೋಣ ಎಂದರೆ ಅವುಗಳು ಅದಾಗಲೇ ಕುಸಿದು ಬಿದ್ದಿದ್ದವು. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಮನೆಯಿಂದ ಹೊರ ಬಂದ ಜನ ಕಾಡು ಮೇಡು ಅಲೆದು ಗುಡ್ಡ ಹತ್ತಿ ಕುಳಿತರು. ಕೆಲವರು ಯಾವ ಕಡೆ ತೆರಳಿದರೆ ಸುರಕ್ಷಿತ ಸ್ಥಳ ತಲುಪಬಹುದು ಯೋಚಿಸಿ ನಡೆದರು. ವಯಸ್ಸಾದವರು, ಮಕ್ಕಳು ಎಲ್ಲರನ್ನು ಕರೆದುಕೊಂಡು ಹೊರ ಬರುವ ವೇಳೆಗೆ ಅವರಿಗೆ ಪುನರ್ಜನ್ಮ ಕಂಡಂತಾಗಿತ್ತು.

ಒಂದರ ಮೇಲೊಂದರಂತೆ ದುರಂತ

ಒಂದರ ಮೇಲೊಂದರಂತೆ ದುರಂತ


ಈ ವ್ಯಾಪ್ತಿಯ ಹಳ್ಳಿಗಳಲ್ಲಿ ಕಿಲೋಮೀಟರ್‌ಗೊಂದರಂತೆ ದೂರದಲ್ಲಿ ಮನೆಯಿದ್ದು, ಸದ್ಯ ಅಲ್ಲಿಗೆ ಸಂಪರ್ಕ ಕಡಿದು ಹೋಗಿರುವುದರಿಂದ ಅವರ ಬಳಿಗೆ ತೆರಳುವುದೇ ಕಷ್ಟವಾಗಿದೆ. ಕೆಲ ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಅವರು ಮನೆಗಳಲ್ಲೇ ಸಿಲುಕಿ ಆಚೆಗೂ ಬರಲಾಗದೆ ಪರದಾಡುವಂತಾಗಿದೆ. ಈಗಾಗಲೇ ಕೆಲವರನ್ನು ರಕ್ಷಣಾ ಪಡೆಗಳು ಆಗಮಿಸಿ ರಕ್ಷಿಸಿದ್ದು ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಜಿಲ್ಲೆಯಾದ್ಯಂತ ಸುಮಾರು 31 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವಯಂ ಸೇವಕರು ಎಲ್ಲೆಡೆಯಿಂದ ಆಗಮಿಸಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಕರ್ನಾಟಕದಾದ್ಯಂತ ಜನ ನೆರವಿಗೆ ನಿಂತಿದ್ದಾರೆ. ಮನೆಮಠ, ಆಸ್ತಿಪಾಸ್ತಿ ಕಳೆದು ಕೊಂಡ ಜನರ ದುಃಖದ ಕಟ್ಟೆ ಒಡೆದು ಹೋಗಿದೆ. ಹಲವು ಜಾನುವಾರುಗಳು, ಸಾಕು ಪ್ರಾಣಿಗಳು ಸಾವನ್ನಪ್ಪಿವೆ. ಅಪಾಯಕಾರಿ ಪ್ರದೇಶಗಳಲ್ಲಿರುವ ಕುಟುಂಬಗಳನ್ನು ತೆರವುಗೊಳಿಸಿ ಗಂಜಿ ಕೇಂದ್ರಗಳಲ್ಲಿ ಅವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ಇನ್ನು ಮಡಿಕೇರಿ ಪಟ್ಟಣದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಹಲವು ಮನೆಗಳು ಕುಸಿದು ಬಿದ್ದಿದ್ದರೆ ಗೌಳಿಬೀದಿ, ಕೈಗಾರಿಕಾ ಬಡಾವಣೆಗಳು ಜಲಾವೃತವಾಗಿವೆ. ಖಾಸಗಿ ಬಸ್‌ ನಿಲ್ದಾಣದ ಹಿಂಭಾಗದ ಗುಡ್ಡ ಕುಸಿಯುತ್ತಲೇ ಇದೆ. ಇಲ್ಲಿನ ಕೆಲವು ಬಡಾವಣೆಗಳ ಅಪಾಯಕಾರಿ ಪ್ರದೇಶದಲ್ಲಿ ವಾಸವಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಡಿಕೇರಿ ಸದ್ಯಕ್ಕೆ ಸಂಪರ್ಕ ಕಳೆದುಕೊಂಡಿದೆ. ವೀರಾಜಪೇಟೆ ಬಳಿ ಬೇತ್ರಿ ನದಿ ಉಕ್ಕಿ ಹರಿಯುತ್ತಿದೆ. ಜತೆಗೆ ರಸ್ತೆಗೆ ಗುಡ್ಡಗಳು ಕುಸಿದು ಆ ಕಡೆಯಿಂದಲೂ ಸಂಪರ್ಕ ಕಡಿತಗೊಂಡಿದೆ. ಇನ್ನೊಂದೆಡೆ ಮಂಗಳೂರು ಕಡೆಯಿಂದಲೂ ಗುಡ್ಡ ಹಾಗೂ ರಸ್ತೆ ಕುಸಿತದಿಂದ ಸಂಪರ್ಕ ಇಲ್ಲದಂತಾಗಿದೆ. ಇನ್ನು ಸೋಮವಾರಪೇಟೆ ರಸ್ತೆಯಲ್ಲಿ ಕುಸಿತವಾಗಿದೆ. ಮಡಿಕೇರಿ ಕುಶಾಲನಗರದಲ್ಲಿ ರಸ್ತೆ, ಗುಡ್ಡ ಕುಸಿತವಾಗಿದೆ. ಅಲ್ಲದೆ ಕುಶಾಲನಗರ ಬಳಿ ತಾವರೆಕೆರೆ ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಒಟ್ಟಾರೆ ಎಲ್ಲ ಕಡೆಯಿಂದಲೂ ಸಂಪರ್ಕ ಕಡಿತಗೊಂಡಿದ್ದು ಇದೀಗ ದ್ವೀಪದಂತಾಗಿದೆ.

ಈಗ ಕಾಣುತ್ತಿರುವುದು ಜಲರಾಶಿ ಮಾತ್ರ

ಈಗ ಕಾಣುತ್ತಿರುವುದು ಜಲರಾಶಿ ಮಾತ್ರ

ಹಾರಂಗಿ ಜಲಾಶಯದಿಂದ (2,859 ಅಡಿ ಗರಿಷ್ಠಮಟ್ಟ, ಇಂದಿನ ಮಟ್ಟ 2,854.87 ಅಡಿ) ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಕುಶಾಲನಗರದ ಬಹುತೇಕ ಬಡಾವಣೆಗಳು ಜಲಾವೃತವಾಗಿದ್ದು, ಇಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಕಾವೇರಿ ನದಿ ಸೇತುವೆ ಮಟ್ಟಕ್ಕೆ ಹರಿಯುತ್ತಿದ್ದು ಭಯದ ವಾತಾವರಣ ಪಟ್ಟಣವನ್ನು ಆವರಿಸಿದೆ. ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ಮತ್ತು ರಾಮತೀರ್ಥ ನದಿಗಳು ಪ್ರವಾಹೋಪಾದಿಯಲ್ಲಿ ಹರಿಯುತ್ತಿದ್ದು ಹಲವು ಮನೆಗಳು ಜಲಾವೃತವಾಗಿವೆ. ಕೆಲವು ಮನೆಗಳ ಒಳಗಿನಿಂದಲೇ ಜಲ ಹುಟ್ಟಿ ಹರಿಯುತ್ತಿದ್ದು, ಒಳಗೆ ಇರಲಾರದೆ ಹೊರಗೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆ ಕೊಡಗಿಗೆ ಕೊಡಗೇ ಬದಲಾಗಿ ಹೋಗಿದೆ. ಅದರಲ್ಲೂ ಮಂಜಿನ ನಗರ ಮಡಿಕೇರಿ ಮತ್ತು ಸುತ್ತಮುತ್ತ ಜಲಪ್ರಳಯದ ಭೀಕರತೆ ಎದ್ದು ಕಾಣುತ್ತಿದ್ದು ಎಲ್ಲೆಡೆ ಕುಸಿದ ಗುಡ್ಡಗಳು, ನಾಶವಾದ ಕಾಫಿತೋಟಗಳು, ಧರೆಗುರುಳಿದ ಮನೆಗಳು, ಬಿರುಕುಬಿಟ್ಟ ರಸ್ತೆಗಳು ಅದರಾಚೆಗೆ ಕಾಣುತ್ತಿರುವುದು ಬರೀ ನೀರು ಮಾತ್ರ...

English summary
Karnataka Floods : Rain wrecks havoc in entire Kodagu district. The nature had given indication few months back itself, but everyone ignored. Also it is man made disaster. Due to deforestation and concretisation devastation has happened in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X