• search
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗು ಮಹಾಮಳೆಯ ದುರಂತದ ನಂತರ ಕಾಲೂರಿನ ದುಸ್ಥಿತಿ ಇದು

By ಬಿ.ಎಂ.ಲವಕುಮಾರ್
|

ಮಡಿಕೇರಿ, ಸೆಪ್ಟೆಂಬರ್ 07: ಅದೊಂದು ಮಹಾಮಳೆ ಕೊಡಗಿನ ಮಡಿಕೇರಿ ತಾಲೂಕಿನ ಕಾಲೂರು ವ್ಯಾಪ್ತಿಯಲ್ಲಿ ಸೃಷ್ಟಿಸಿದ ದುರಂತ ಸದ್ಯಕ್ಕೆ ಯಾರೂ ಮರೆಯುವಂತಿಲ್ಲ. ಹಚ್ಚಹಸಿರು ಕಾಫಿ, ಗದ್ದೆ, ಬೆಟ್ಟಗುಡ್ಡಗಳ ಊರು ಇವತ್ತು ಪ್ರವಾಹ ಮತ್ತು ಭೂಕುಸಿತದಿಂದ ಅಸ್ಥಿಪಂಜರವಾಗಿ ನಿಂತಿದೆ. ಇಡೀ ಊರನ್ನು ಕೆಸರು ಮುಚ್ಚಿದೆ. ಅಲ್ಲಿಂದ ಊರು ಬಿಟ್ಟು ಬಂದವರಿಗೆ ಮತ್ತೆ ತಾವಿದ್ದ ಮನೆ, ತೋಟದ ಜಾಗವನ್ನು ಗುರುತಿಸುವುದೇ ಕಷ್ಟಸಾಧ್ಯವಾಗಿದೆ.

ಇವತ್ತು ಕಾಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಒಂದಷ್ಟು ಅಧಿಕಾರಿಗಳು, ರಾಜಕಾರಣಿಗಳು ಬಂದು ಹೋಗುತ್ತಿದ್ದಾರೆ. ಎಲ್ಲರೂ ಪರಿಶೀಲನೆ ನಡೆಸಿ ಮುಂದೇನು ಮಾಡಬಹುದು ಎಂಬುದರ ಚಿಂತನೆ ಮಾಡುತ್ತಿದ್ದಾರೆ. ಜತೆಗೆ ಊರಿಗೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವತ್ತ ಆದ್ಯತೆ ನೀಡುತ್ತಿದ್ದಾರೆ. ಸದ್ಯ ಸಂತ್ರಸ್ತರಾದವರಿಗೆ ಊಟ, ಬಟ್ಟೆಗೆ ಚಿಂತೆಯಿಲ್ಲವಾದರೂ ಮುಂದೇನು ಎಂಬುದೇ ಪ್ರಶ್ನೆಯಾಗಿ ಗಿರಕಿ ಹೊಡೆಯುತ್ತಿದೆ. ಕಾರಣ ಇಲ್ಲಿನವರಿಗೆ ಕೃಷಿ ಹೊರತು ಪಡಿಸಿ ಬೇರೇನು ಮಾಡಿ ಗೊತ್ತಿಲ್ಲ. ಹೀಗಿರುವಾಗ ಎಲ್ಲವನ್ನು ಕಳೆದುಕೊಂಡು ಖಾಲಿ ಕೈನಲ್ಲಿ ನಿಂತಿರುವ ಜನರ ಮುಂದೆ ಬದುಕಲು ಬೇಕಾದ ಯಾವ ಮಾರ್ಗಗಳು ಇಲ್ಲದಂತಾಗಿದೆ ಅವರ ಕಣ್ಣಿಗೆ ಬದುಕಿನ ಹಾದಿಯೇ ಮುಚ್ಚಿ ಹೋದಂತೆ ಗೋಚರವಾಗುತ್ತಿದೆ.

ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ

ಒಂದು ಕಾಲದಲ್ಲಿ ಕಾಲೂರು ಎಂದರೆ ದಟ್ಟ ಅರಣ್ಯದಿಂದ ಕೂಡಿದ ಪ್ರದೇಶವಾಗಿತ್ತು. ಒಂದಷ್ಟು ಭತ್ತದ ಬಯಲುಗಳನ್ನು ಹೊರತುಪಡಿಸಿದರೆ ಹೆಚ್ಚಿನ ಭಾಗ ಕಾಡಿನಿಂದ ಆವೃತವಾಗಿತ್ತು. ಈ ಕಾಡು ಪ್ರದೇಶದಲ್ಲಿ ಜನ ಏಲಕ್ಕಿ ಬೆಳೆಯುತ್ತಿದ್ದರು. ಇಲ್ಲಿಂದ ಮಡಿಕೇರಿ ಪಟ್ಟಣಕ್ಕೆ ಬರಲು ರಸ್ತೆಯೇ ಇರಲಿಲ್ಲ ಹೀಗಾಗಿ ವಾಹನಗಳು ತೆರಳುತ್ತಿರಲಿಲ್ಲ. ಜನ ನಡೆದುಕೊಂಡೇ ಬರುತ್ತಿದ್ದರು. ಸಾಮಾನ್ಯವಾಗಿ ಆಗಸ್ಟ್‍ನಿಂದ ಡಿಸೆಂಬರ್ ತನಕ ಏಲಕ್ಕಿ ಫಸಲು ಕೊಡುತ್ತಿತ್ತು. ಅದರಿಂದಲೇ ಅವರ ಬದುಕು ಸಾಗುತ್ತಿತ್ತು. ಹೆಚ್ಚು ಮಳೆ ಮತ್ತು ಕಾಡಿನಿಂದ ಆವೃತವಾದ ಕಾರಣ ಬೇರೆ ಯಾವ ಬೆಳೆಗಳು ಬೆಳೆಯುತ್ತಿರಲಿಲ್ಲ. ಹೀಗಾಗಿ ಅವರನ್ನು ಕಾಪಾಡುತ್ತಿದ್ದದ್ದು ಏಲಕ್ಕಿ ಮಾತ್ರ.

ಬಹುಬೇಗ ಆಧುನಿಕತೆಗೆ ಗ್ರಾಮ ತೆರೆದುಕೊಂಡಿತು!

ಬಹುಬೇಗ ಆಧುನಿಕತೆಗೆ ಗ್ರಾಮ ತೆರೆದುಕೊಂಡಿತು!

ಸಂಜೆಯಾಗುತ್ತಿದ್ದಂತೆಯೇ ಊರಿಗೆ ಊರೇ ಮೌನವಾಗಿ ಬಿಡುತ್ತಿತ್ತು. ಜನ ಕತ್ತಲೆಯಾಗುವ ಮುನ್ನವೇ ಮನೆ ಸೇರಿಕೊಳ್ಳುತ್ತಿದ್ದರು. ಕಾರಣ ಕಾಡುಪ್ರಾಣಿಗಳ ಭಯ. ಹೆಚ್ಚಿನ ಮನೆಗಳಿಗೆ ವಿದ್ಯುತ್ ಇರಲಿಲ್ಲ. ಹೀಗಾಗಿ ಸೀಮೆಎಣ್ಣೆ ದೀಪವೇ ಇಲ್ಲಿನವರಿಗೆ ಅನಿವಾರ್ಯವಾಗಿತ್ತು. ಕಷ್ಟಪಟ್ಟು ದುಡಿಯುತ್ತಾ ಬದುಕುತ್ತಿದ್ದ ಜನರಿಗೆ ಹತ್ತಾರು ಎಕರೆ ಜಾಗವಿದ್ದರೂ ಅವರ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸಿರಲಿಲ್ಲ. ಆದರೆ ಕ್ರಮೇಣ ಇವರ ಬದುಕಲ್ಲಿ ಒಂದಷ್ಟು ಆಶಾಕಿರಣಗಳು ಮೂಡತೊಡಗಿದವು.

90ರ ದಶಕದ ನಂತರ ಅಲ್ಲೊಂದು ಬದಲಾವಣೆ ಆಯಿತು ಅದುವರೆಗೆ ಅಲ್ಲಿ ಎಕರೆಗೆ ಹತ್ತೋ ಇಪ್ಪತ್ತೋ ಸಾವಿರ ಮೌಲವ್ಯವಿತ್ತು. ಕೆಲವರು ತಮ್ಮ ಆಸ್ತಿಗಳನ್ನು ಸಿಕ್ಕ ಬೆಲೆಗೆ ಮಾರಾಟ ಮಾಡಿ ಬೇರೆ ಕಡೆಗೆ ಹೊರಟು ಹೋದರು. ಕಾರಣ ಅಲ್ಲಿ ತನಕ ಉತ್ತಮ ಬೆಲೆ ತಂದು ಕೊಡುತ್ತಿದ್ದ ಏಲಕ್ಕಿ ಬೆಲೆ ಕುಸಿಯಲಾರಂಭಿಸಿತು. ಜತೆಗೆ ಕಟ್ಟೆರೋಗ ಬಂದು ಗಿಡಗಳನ್ನು ನಾಶ ಮಾಡತೊಡಗಿತು. ಇದರಿಂದ ಹೈರಾಣರಾಗಿದ್ದ ಕೆಲವರು ಜಾಗಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ತೀರ್ಮಾನಕ್ಕೆ ಬಂದರು.

ಅದೇ ವೇಳೆಗೆ ಕಾಫಿಯ ಬೆಲೆ ಗಗನಕ್ಕೇರಿದ್ದಲ್ಲದೆ ಅದು ಕಾಫಿ ಮಂಡಳಿ ಹಿಡಿತದಿಂದ ಮುಕ್ತ ಮಾರುಕಟ್ಟೆಗೆ ಬಂತು ಈ ವೇಳೆ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಮಾರ್ಪಡಿಸುವ ತೀರ್ಮಾನಕ್ಕೆ ಬಂದರು ಪರಿಣಾಮ ಟಿಂಬರ್ ಮಾಫಿಯಾ ತಲೆ ಎತ್ತಿ ನಿಂತಿತು. ಸದ್ದಿಲ್ಲದೆ ಮರಗಳು ನೆಲಕ್ಕುರುಳಿ ಅದು ಹೊರಗೆ ಸಾಗಾಟವಾಯಿತು. ಕಾಡು ನಾಶವಾಗಿ ಕಾಫಿ ತೋಟಗಳು ತಲೆ ಎತ್ತಿದವು. ಗುಡ್ಡವನ್ನು ಸಮತಟ್ಟು ಮಾಡಿ ತೋಟ, ಮನೆಗಳ ನಿರ್ಮಾಣವಾಯಿತು.

ಕಾಫಿ ತೋಟ, ರೆಸಾರ್ಟ್ ನಿರ್ಮಾಣ..

ಕಾಫಿ ತೋಟ, ರೆಸಾರ್ಟ್ ನಿರ್ಮಾಣ..

ಹೊರಗಿನವರು ಬಂದು ಇಲ್ಲಿ ಕಡಿಮೆ ಬೆಲೆಗೆ ಜಾಗ ಖರೀದಿಸಿ ರೆಸಾರ್ಟ್‍ಗಳನ್ನು ನಿರ್ಮಿಸಿದರು. ಆಧುನಿಕತೆ ಭರಾಟೆ ಕಾಲೂರು ಜನರನ್ನು ಒಂದಷ್ಟು ಬದಲಾವಣೆಗೆ ತಂದಿತ್ತಲ್ಲದೆ, ಆರ್ಥಿಕವಾಗಿಯೂ ಸಬಲರನ್ನಾಗಿಸಿತು. ಅದರ ಪರಿಣಾಮಗಳು ಆಗ ಗೊತ್ತಾಗಲಿಲ್ಲ ಈಗ ಗೊತ್ತಾಗಿದೆ. ಇಡೀ ಊರಿಗೆ ಊರೇ ಪ್ರವಾಹ ಭೂಕುಸಿತಕ್ಕೊಳಗಾಗಿ ನಾಶ ಮಾಡಿದೆ. ಆದರೆ ದುರಂತ ಸಂಭವಿಸುವ ಒಂದು ತಿಂಗಳ ಮುಂದೆಯೇ ಅನಾಹುತದ ಮುನ್ಸೂಚನೆ ಕಂಡು ಬಂದಿದ್ದವು. ಮೊದಲಿಗೆ ರಸ್ತೆಯಲ್ಲಿ ಬಿರುಕು ಕಾಣಿಸಿತು. ಅದಾದ ಬಳಿಕ ಕಾಳಚಂಡ ರವಿತಮ್ಮಯ್ಯ ಎಂಬುವರ ತೋಟದಲ್ಲಿ ಸಣ್ಣ ಪ್ರಮಾಣದ ಕುಸಿತ ಕಾಣಿಸಿತು. ಮಳೆಗಾಲದಲ್ಲಿ ಇದೆಲ್ಲ ಮಾಮೂಲಿ ಎಂದುಕೊಂಡು ಎಲ್ಲರೂ ಸುಮ್ಮನಾದರು. ಆದರೆ ಅದು ಮತ್ತೆ ಕೆಲವೇ ದಿನಗಳಲ್ಲಿ ಭೀಕರತೆಯನ್ನು ಹೆಚ್ಚಿಸುತ್ತದೆ ಎಂದು ಯಾರಿಗೂ ಗೊತ್ತೇ ಆಗಲಿಲ್ಲ, ಗೊತ್ತಾಗುವ ವೇಳೆಗೆ ಊರಿಗೆ ಊರೇ ನಾಶವಾಗಿ ಹೋಗಿತ್ತು.

ಚಿತ್ರಗಳು : ಕೊಡಗಿನ ಈ ರಸ್ತೆಗಳ ಗುರುತು ಹಿಡಿಯುವಿರಾ?

ಇಲ್ಲಿದ್ದವು 250ಕ್ಕೂ ಹೆಚ್ಚು ಕುಟುಂಬ

ಇಲ್ಲಿದ್ದವು 250ಕ್ಕೂ ಹೆಚ್ಚು ಕುಟುಂಬ

ಕಾಲೂರಿನಲ್ಲಿ ಸುಮಾರು 250 ಒಕ್ಕಲು ಕುಟುಂಬದ ಅಂದಾಜು 700 ಮಂದಿ ಬದುಕು ಕಟ್ಟಿಕೊಂಡಿದ್ದರು. ಇವರ ಪೈಕಿ ಕೊಡವ ಸಮುದಾಯದ ಕೊಳುಮಾಡಂಡ, ಅಯ್ಯಲಪಂಡ, ನಂದಲಪಂಡ, ಕಾರೇರ, ತಂಬುಕುತ್ತೀರ, ನಂದೀರ, ಕಾಕೆರ, ಚಂಡೀರ, ಚನ್ನಪಂಡ, ಸಿದ್ದಂಡ, ಜಡ್ಡಮಂದಂಡ, ತುಳುನಾಡಂಡ ಮತ್ತು ಗೌಡಕುಟುಂಬಗಳಾದ ಕೊಂಬಾರನ, ಯಾಲದಾಳು ಸೇರಿದಂತೆ ಹಲವು ಕುಟುಂಬಗಳು ನೆಲೆ ಹಿಂದಿನಿಂದಲೂ ನೆಲೆಸಿದ್ದು, ಬಹುತೇಕರಿಗೆ ಕೃಷಿಯೇ ಆಧಾರವಾಗಿತ್ತು.

ಕೊಡಗು ಚಿತ್ರಗಳು : 1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ

ಮಾಡಿಟ್ಟ ತೋಟ, ಮನೆ ಮಣ್ಣುಪಾಲು

ಮಾಡಿಟ್ಟ ತೋಟ, ಮನೆ ಮಣ್ಣುಪಾಲು

ಭೀಕರ ದುರಂತದ ಬಳಿಕ ಈಗ ಕಾಲೂರಿನ ಬಹುತೇಕ ಕುಟುಂಬಗಳ ತೋಟಗಳು ಮಣ್ಣುಪಾಲಾಗಿವೆ. ಮನೆಗಳೇ ನೆಲಸಮವಾಗಿ ಗುಡ್ಡದಡಿಯಲ್ಲಿ ಸಿಲುಕಿವೆ. ಅಂದಾಜು ಮೂರು ಎಕರೆ ಪ್ರದೇಶ ನಾಲ್ಕು ಅಡಿಗೂ ಹೆಚ್ಚಿನ ದಟ್ಟ ಕೆಸರಿನಿಂದ ಮುಚ್ಚಿ ಹೋಗಿದೆ. ಕಷ್ಟಪಟ್ಟು ಮಾಡಿದ ಕಾಫಿ ತೋಟದ ಗಿಡಗಳ ತುದಿಗಳಷ್ಟೆ ಅಲ್ಲೊಂದು ಇಲ್ಲೊಂದು ಎಂಬಂತೆ ಗೋಚರಿಸುತ್ತಿದೆ, ಈ ತೋಟ ಮತ್ತೆ ಸುಸ್ಥಿತಿಗೆ ಬರುವ ಸಾಧ್ಯತೆಯೇ ಇಲ್ಲವಾಗಿದೆ.

ಪ್ರಕೃತಿ ವಿಕೋಪದಿಂದ ಸಣ್ಣ ತೊರೆ ದೊಡ್ಡ ನದಿಯಾಗಿ ಹರಿದಿದ್ದು, ಹಿಂದೆ ಹರಿಯುತ್ತಿದ್ದ ನದಿಯ ದಿಕ್ಕೇ ಇವತ್ತ ಬದಲಾಗಿದೆ. ಇಲ್ಲಿನವರು ಹೇಳುವ ಪ್ರಕಾರ ಈ ಊರು ದಶಕಗಳ ಹಿಂದಕ್ಕೆ ಹೋಗಿದೆ ಇಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಮರು ಸ್ಥಾಪಿಸುವುದು ಅನಿವಾರ್ಯವಾಗಿದೆ.

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಹುಟ್ಟೂರು

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಹುಟ್ಟೂರು

ಇಷ್ಟಕ್ಕೂ ಕಾಲೂರು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಹುಟ್ಟೂರು ಅವರಿಗೆ ಕಾಫಿ ತೋಟವಿದೆ. ಅವರ (ಕೊಂಬಾರನ) ಕುಟುಂಬಸ್ಥರು ಅಲ್ಲಿಯೇ ಇದ್ದಾರೆ. ಈಗಾಗಲೇ ಅಲ್ಲಿಗೆ ಹಲವು ಬಾರಿ ಬೋಪಯ್ಯ, ಅಪ್ಪಚ್ಚುರಂಜನ್, ಸುನೀಲ್ ಸುಬ್ರಮಣಿ ಸೇರಿದಂತೆ ಹಲವು ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಅಧಿಕಾರಿಗಳೊಂದಿಗೆ ತೆರಳಿ ಅಗತ್ಯ ಕಾಮಗಾರಿ ನಡೆಸುವಂತೆ ಸೂಚಿಸಿದ್ದಾರೆ.

ಸದ್ಯ ಅಲ್ಲಿ ಈಗ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಸದ್ಯದ ಮಟ್ಟಿಗೆ ವಾಹನ ಆಚೆಗಿರಲಿ ಮನುಷ್ಯ ನಡೆದು ಹೋಗಲು ದಾರಿಯಾದರೆ ಸಾಕು ಆಮೇಲೆ ನೋಡೋಣ ಎಂಬ ಸ್ಥಿತಿಯಲ್ಲಿ ಕೆಲವರಿದ್ದಾರೆ. ಕೆಲವರು ತಾವಿದ್ದ ಮನೆಗಳತ್ತ ಹೋಗೋದಿಲ್ಲ ಆ ನರಕ ನಮ್ಮ ಕಣ್ಣಿಂದ ನೋಡಲು ಆಗಲ್ಲ ಎಂದು ಸಂಕಟ ಪಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಜಿಲ್ಲಾಡಳಿತ ಅಗತ್ಯ ಕಾಮಗಾರಿಗಳನ್ನು ನಡೆಸುತ್ತಿದೆ. ಆದರೆ ಈಗ ಬಿಡುವುಕೊಟ್ಟ ಮಳೆ ಇದೇ ರೀತಿ ಮುಂದುವರೆದರಷ್ಟೆ ನೆಮ್ಮದಿ.

ಮಡಿಕೇರಿ : ವೈರಲ್ ಆಗಿರುವ ಮನೆ ಕುಸಿತದ ವಿಡಿಯೋ ಹಿಂದಿನ ಕಥೆ!

ಇನ್ನಷ್ಟು ಮಡಿಕೇರಿ ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After heavy rain and flood lash Kodagu district, Kaluru taluk people have last their farm, land and crops, even home. Here is the present picture of their tragical situation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more