ಮಡಿಕೇರಿ ಕ್ಷೇತ್ರದಲ್ಲಿ ಕಮಲಕ್ಕೆ ಎದುರಾಳಿ ಕಾಂಗ್ರೆಸ್ಸಾ? ಅಥವಾ ಜೆಡಿಎಸ್ಸಾ?, ಇಲ್ಲಿದೆ ವಿವರ

ಮಡಿಕೇರಿ, ಏಪ್ರಿಲ್‌, 30: ಬಿಜೆಪಿಯ ಭದ್ರಕೋಟೆ ಕೊಡಗಿನ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿಕೊಂಡು ಬಂದಿರುವ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ಹೊರ ಜಿಲ್ಲೆಯ ಯುವ ನಾಯಕ ಮಂಥರ್ ಗೌಡರನ್ನು ಕಣಕ್ಕಿಳಿಸಿದೆ. ಮತ್ತೊಂದೆಡೆ ಜೆಡಿಎಸ್ ಒಂದು ಕಾಲದ ಕಾಂಗ್ರೆಸ್‌ನ ಕಟ್ಟಾಳು, ಸದ್ಯ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ಕೊಡವ ಸಮುದಾಯದ ನಾಪಂಡ ಮುತ್ತಪ್ಪಗೆ ಟಿಕೆಟ್ ನೀಡಿದೆ. ಹೀಗಾಗಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಿದ್ದರೂ ಕೆಲವೆಡೆ ಜೆಡಿಎಸ್-ಬಿಜೆಪಿ ನಡುವೆ ನೇರ ಸ್ಪರ್ಧೆಯಿರುವುದು ಕಂಡುಬಂದಿದೆ.

ಮಡಿಕೇರಿ ಕ್ಷೇತ್ರದ ಮಟ್ಟಿಗೆ ಬಹುತೇಕ ಮತದಾರರು ಪಕ್ಷವನ್ನು ನೋಡಿ ಮತ ನೀಡುವುದನ್ನು ರೂಢಿಸಿಕೊಂಡಿರುವ ಕಾರಣ ಕಾಂಗ್ರೆಸ್‌ನ ತಂತ್ರಗಳು ಕಳೆದ ಒಂದೆರಡು ದಶಕಗಳಿಂದ ಯಾವುದೇ ಫಲ ಕೊಟ್ಟಿಲ್ಲ. ಜೊತೆಗೆ ಬಿಜೆಪಿಯನ್ನು ಕಟ್ಟಿಹಾಕಲು ಮಾಡಿದ ಪ್ರಯತ್ನ ಯಶಸ್ಸು ಕಾಣಲಿಲ್ಲ. ಇದಕ್ಕೆ ಕಾರಣಗಳು ಅನೇಕ ಇದ್ದರೂ ಒಂದೇ ಒಂದು ಮುಖ್ಯ ಕಾರಣ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ, ತಾರಕಕ್ಕೇರಿದ ಭಿನ್ನಾಭಿಪ್ರಾಯಗಳಾಗಿವೆ.

Karnataka election 2023: Huge Competition between JDS and BJP in Madikeri Constituency

ಆದರೂ ಕೇಂದ್ರ, ರಾಜ್ಯ ನಾಯಕರು ಕೊಡಗು ಜಿಲ್ಲೆಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ಕಾಂಗ್ರೆಸ್ ಅನ್ನು ಸಂಘಟಿಸುವ ಪ್ರಯತ್ನವನ್ನಂತೂ ಮಾಡಲೇ ಇಲ್ಲ. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಸ್ಪರ್ಧೆ ನೀಡುವಂತಹ ನಾಯಕರಿದ್ದರೂ ಹೊರ ಜಿಲ್ಲೆಯ (ಹಾಸನ) ಅಭ್ಯರ್ಥಿಗೆ ಮಣೆ ಹಾಕಿ ಕಣಕ್ಕಿಳಿಸಿರುವುದು ಕ್ಷೇತ್ರದ ಸ್ಥಳೀಯರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿ ಕೊಡವ ಸಮುದಾಯಕ್ಕಿಂತಲೂ ಇತರೆ ಸಮುದಾಯದ ಅದರಲ್ಲೂ ಒಕ್ಕಲಿಗ ಮತ್ತು ಅರೆಗೌಡ ಸಮುದಾಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರು ಡಾ.ಮಂಥರಗೌಡರನ್ನು ಕಣಕ್ಕಿಳಿಸುವ ಮೂಲಕ ಮತಸೆಳೆಯುವ ತಂತ್ರ ಹೆಣೆದಿದ್ದಾರೆ.

ತಳಮಟ್ಟದಿಂದ ಬಿಜೆಪಿ ಪ್ರಬಲ

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಪಕ್ಷ ನಿಷ್ಠೆಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಜಾತಿ, ಸಮುದಾಯ, ಎಲ್ಲವನ್ನು ಮೀರಿ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಇದು ಬಿಜೆಪಿ ತಳಮಟ್ಟದಿಂದ ಮಾಡಿದ ಸಂಘಟನೆಯ ಫಲವಾಗಿದೆ. ಗ್ರಾಮಪಂಚಾಯಿತಿ ಮಟ್ಟದಿಂದ ಬಿಜೆಪಿ ಪ್ರಬಲವಾಗಿದೆ. ಈ ಪ್ರಬಲ ಕೋಟೆಯನ್ನು ಕೆಡವಿ ಗೆಲುವು ಸಾಧಿಸುವುದು ಸುಲಭವಾಗಿ ಉಳಿದಿಲ್ಲ.

ಇನ್ನು ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡಲೇ ಇಲ್ಲ. ಜೊತೆಗೆ ರಾಜ್ಯ ನಾಯಕರು ಸ್ಥಳೀಯ ನಾಯಕರನ್ನು ಕಡೆಗಣಿಸಿರುವುದು ಮತದಾರರಲ್ಲಿ ಅಸಮಾಧನಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಇದನ್ನು ಸರಿಪಡಿಸಿಕೊಂಡು ಸದ್ಯ ಕಾಂಗ್ರೆಸ್ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

ಸದ್ಯ ಬಿಜೆಪಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಸಿ ಮಡಿಕೇರಿಯಲ್ಲಿ ರೋಡ್ ಶೋ ನಡೆಸಿದೆ. ಆ ಮೂಲಕ ಬಿಜೆಪಿ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸುವ ತಂತ್ರ ಮಾಡಿದೆ. ಕ್ಷೇತ್ರದಲ್ಲಿ ಬಿಜೆಪಿಯ ಮತಗಳನ್ನು ಕಟ್ಟಿಹಾಕಲು ಕಾಂಗ್ರೆಸ್ ಹಲವು ರೀತಿಯ ಪ್ರಯತ್ನ ಮಾಡಿತ್ತಾದರೂ ಇದೀಗ ಸಂಕಷ್ಟ ಎದುರಾಗಿರುವುದು ಬಿಜೆಪಿಯಿಂದಲ್ಲ. ಜೆಡಿಎಸ್‌ನಿಂದ ಎಂದರೆ ಅಚ್ಚರಿಯಾಗಬಹುದು. ಆದರೆ ಇದೆ ನಿಜ.

"ಕೈ" ಬಿಟ್ಟು ತೆನೆ ಹೊತ್ತ ನಾಪಂಡ ಮುತ್ತಪ್ಪ

ಈ ಬಾರಿ ಜೆಡಿಎಸ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾಪಂಡ ಮುತ್ತಪ್ಪ ಅವರು ಒಂದು ಕಾಲದ ಕಾಂಗ್ರೆಸ್‌ನ ಜನಪ್ರಿಯ ನಾಯಕರು. ಕಳೆದ 2018ರಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಆ ನಂತರ ಕಾಂಗ್ರೆಸ್‌ನಿಂದ ಹೊರಬಂದ ಅವರು ಜೆಡಿಎಸ್‌ನತ್ತ ಮುಖ ಮಾಡಿದ್ದರು. ಅಷ್ಟೇ ಅಲ್ಲದೆ ಜೆಡಿಎಸ್‌ನಲ್ಲಿದ್ದುಕೊಂಡೇ ಕಳೆದೊಂದು ವರ್ಷದ ಹಿಂದೆಯೇ ಚುನಾವಣೆಗೆ ತಯಾರಿ ನಡೆಸಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಜೆಡಿಎಸ್‌ನ ಅಭ್ಯರ್ಥಿ ಎಂದೇ ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಆ ಮೂಲಕ ಮತದಾರರ ಮನೆ ಬಾಗಿಲು ತಟ್ಟಿದ್ದರು. ಇನ್ನು ನಾಪಂಡ ಮುತ್ತಪ್ಪ ಅವರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಎಂಬುದು ಜೆಡಿಎಸ್‌ನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್‌ಗೆ ಗೊತ್ತಾಗುತ್ತಿದ್ದಂತೆಯೇ, ಪಕ್ಷದ ರಾಜ್ಯ ನಾಯಕರು ಘೋಷಣೆ ಮಾಡುವ ಮುನ್ನವೇ ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಮತಕೇಳುವುದು ಸರಿಯಲ್ಲವೆಂದು ನೋಟೀಸ್ ನೀಡಲಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಪಂಡ ಮುತ್ತಪ್ಪ ಅವರಿಗೆ ಟಿಕೆಟ್ ನೀಡಿದ್ದಾರೆ.

ನಾಪಂಡ ಮುತ್ತಪ್ಪ ಸ್ಪರ್ಧೆಯಿಂದ ನಷ್ಟ ಯಾರಿಗೆ?

ಈಗಿನ ಪರಿಸ್ಥಿತಿಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಇಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಮತ್ತು ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಕೊಡವ ಸಮುದಾಯದ ನಾಯಕರಾಗಿದ್ದು, ಇಬ್ಬರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇದರಿಂದ ಮತದಾರ ಪ್ರಭುಗಳು ಇಬ್ಬರಲ್ಲಿ ಯಾರತ್ತ ಒಲವು ತೋರುತ್ತಾರೆ ಎಂಬುದೇ ಬಹುಮುಖ್ಯವಾಗಿದೆ. ಅಷ್ಟೇ ಅಲ್ಲದೆ ಈ ಹಿಂದೆ ನಾಪಂಡ ಮುತ್ತಪ್ಪ ಅವರು ಕಾಂಗ್ರೆಸ್‌ನಲ್ಲಿದ್ದುದರಿಂದ ಕಾಂಗ್ರೆಸ್‌ನ ಒಂದಷ್ಟು ಮತಗಳನ್ನು ಅವರು ಸೆಳೆದರೂ ಅಚ್ಚರಿಯಿಲ್ಲ.

ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಜೆಪಿ ತನ್ನ ಭದ್ರಕೋಟೆಯನ್ನು ಭದ್ರವಾಗಿರಿಸಿಕೊಳ್ಳುತ್ತಾ? ಅಥವಾ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸುತ್ತವೆಯಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಕ್ಷೇತ್ರದ ಮತದಾರರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿಂತಿದ್ದು, ಫಲಿತಾಂಶ ಬರುವ ತನಕ ಕಾಯಲೇಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+