ಕೊಡಗಿನ ಕಮಲ ಕಲಿಗಳ ನಿದ್ದೆಗೆಡಿಸುತ್ತಾ ಕಾಂಗ್ರೆಸ್ ತಂತ್ರ?
ಮಡಿಕೇರಿ, ಏಪ್ರಿಲ್ 13: ಕೊಡಗಿನಲ್ಲಿರುವ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ ಹಾಲಿ ಶಾಸಕರಿಗೆ ಮಣೆ ಹಾಕಿದರೆ ಕಾಂಗ್ರೆಸ್ ಹೊಸ ಮುಖಗಳನ್ನು ಅಖಾಡಕ್ಕಿಳಿಸಿದೆ. ಜೆಡಿಎಸ್ ಇದುವರೆಗೆ ಯಾರನ್ನೂ ಘೋಷಣೆ ಮಾಡಿಲ್ಲ.
ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಈ ಬಾರಿ ರಾಜಕೀಯವಾಗಿ ಒಂದಷ್ಟು ಬದಲಾವಣೆಗಳಾಗಿವೆ. ಬಿಜೆಪಿ ಮಟ್ಟಿಗೆ ಹೆಚ್ಚಿನ ಬದಲಾವಣೆಗಳಾಗುತ್ತವೆ, ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೊಸಮುಖಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂಬಿತ್ಯಾದಿ ಅಂತೆಕಂತೆಗಳ ಸುದ್ದಿಗಳು ಮುನ್ನಲೆಗೆ ಬಂದಿದ್ದವು. ಆದರೆ ಬಿಜೆಪಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗಿರುವುದು ಕಾಂಗ್ರೆಸ್‌ನಲ್ಲಿ ಎನ್ನುವುದಂತು ನಿಜ. ಇನ್ನು ಜೆಡಿಎಸ್ ಬದಲಾವಣೆಗೆ ತೆರೆದುಕೊಳ್ಳಲೇ ಇಲ್ಲ.

ಜೆಡಿಎಸ್ ಬಗ್ಗೆ ಹೇಳಲೇ ಬೇಕು. ಜನತಾದಳ ಇಬ್ಭಾಗವಾಗಿ ಜೆಡಿಎಸ್ ಆದ ಬಳಿಕ ಕೊಡಗಿನ ಮಟ್ಟಿಗೆ ಜೆಡಿಎಸ್ ಮುನ್ನಲೆಗೆ ಬರಲೇ ಇಲ್ಲ. ಅದಕ್ಕೂ ಮುನ್ನ ಜನತಾದಳವಿದ್ದ ಕಾಲದಲ್ಲಿ ಎಂ.ಸಿ.ನಾಣಯ್ಯ ಸೇರಿದಂತೆ ಹಲವು ನಾಯಕರು ಪಕ್ಷದಲ್ಲಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಗೆ ಸ್ಪರ್ಧೆ ನೀಡುವಷ್ಟರ ಮಟ್ಟಿಗೆ ಪ್ರಬಲರಾಗಿದ್ದರು. ಆದರೆ ಜನತಾದಳ ಇಬ್ಭಾಗವಾದ ಬಳಿಕ ಜಿಲ್ಲೆಯ ಬಹುತೇಕ ನಾಯಕರು ಹಂಚಿ ಹೋದರು. ಜೆಡಿಎಸ್ ಅನ್ನು ಕಟ್ಟಿಬೆಳೆಸುವ ಕೆಲಸಗಳಿಗೆ ಕೆಲವು ನಾಯಕರು ಕೈ ಹಾಕಿದರೂ ಪ್ರಯೋಜನವಾಗಲಿಲ್ಲ.
ಜೆಡಿಎಸ್‌ನಿಂದ ಅಸ್ತಿತ್ವಕ್ಕಾಗಿ ಹೋರಾಟ
ಬಿಜೆಪಿ ಮತ್ತು ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಪಕ್ಷದ ಸಂಘಟನೆ ಮಾಡುವುದು ಕೊಡಗಿನಲ್ಲಿ ಕಷ್ಟವಾಗಿದೆ. ಕೆಲವು ಜೆಡಿಎಸ್ ನಾಯಕರು ಇದ್ದರೂ ಪಕ್ಷವನ್ನು ಸಂಘಟಿಸಿ ಮತವನ್ನು ಪಡೆಯುವ ಮಟ್ಟಿಗೆ ಬೆಳೆಸುವುದು ಸುಲಭದ ಮಾತಾಗಿ ಉಳಿದಿಲ್ಲ. ಈ ಹಿಂದೆ ಸಂಕೇತ್ ಪೂವಯ್ಯ ಅವರು ಆ ಕೆಲಸವನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಇತ್ತೀಚೆಗೆ ಅವರು ಕಾಂಗ್ರೆಸ್ ಸೇರಿದ್ದು ಒಂದಷ್ಟು ನಾಯಕರನ್ನು ಕಾಂಗ್ರೆಸ್ ಗೆ ಸೆಳೆದಿದ್ದಾರೆ. ಬಿಜೆಪಿ ಕಾಂಗ್ರೆಸ್ ನಡುವೆ ಸ್ಪರ್ಧೆ ಮಾಡುವ ನಾಯಕರ ಕೊರತೆಯಿದೆ. ಹೀಗಾಗಿ ನಾಮಕಾವಸ್ಥೆಗೆ ಪಕ್ಷದಿಂದ ಸ್ಪರ್ಧಿಸಬೇಕಷ್ಟೆ.

ಟಿಕೆಟ್ ಗೆ ಕಸರತ್ತು ನಡೆಸಿ ತನಗೆ ಟಿಕೆಟ್ ಬೇಕೆಂದು ಕೇಳುವ ಆಕಾಂಕ್ಷಿಗಳ ಕಡಿಮೆಯಿದೆ. ಹೀಗಾಗಿಯೇ ಜೆಡಿಎಸ್ ಮೊದಲ ಪಟ್ಟಿಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಎರಡನೇ ಪಟ್ಟಿಯನ್ನು ಶುಕ್ರವಾರ(ಏ.14) ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಅದರಲ್ಲಿ ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಕೊಡಗಿನಲ್ಲಿ ಜೆಡಿಎಸ್ ಗಟ್ಟಿಯಾಗಿ ಬೆಳೆದಿಲ್ಲ ಮತ್ತು ಗೆಲುವು ಸುಲಭವಲ್ಲ ಎಂಬುದು ಎಚ್.ಡಿ.ಕುಮಾರಸ್ವಾಮಿಗೂ ಗೊತ್ತಿದೆ. ಹೀಗಾಗಿ ಅವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಫಲಕೊಡುತ್ತಾ ಕಾಂಗ್ರೆಸ್ ಲೆಕ್ಕಾಚಾರ?
ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಹೇಳಿಕೆ ನೀಡುತ್ತಿದ್ದರೂ ಒಳಗೊಳಗೆ ಪಕ್ಷಕ್ಕೆ ದುಡಿದ ಸ್ಥಳೀಯ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಇಲ್ಲದಿಲ್ಲ. ಡಾ.ಮಂಥರಗೌಡ ಅವರನ್ನು ಕಳೆದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯ ಸುಜಾ ಕುಶಾಲಪ್ಪ ಅವರ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿತ್ತು. ತೀವ್ರ ಪೈಪೋಟಿ ನೀಡಿದ ಮಂಥರಗೌಡ ಅವರು ತಲೆಬಾಗಿದ್ದರು. ಆದರೆ ಮತ್ತೆ ಮಂಥರಗೌಡ ಅವರಿಗೆ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದರ ಹಿಂದಿನ ಲೆಕ್ಕಾಚಾರಗಳು ಏನಿದೆಯೋ ಗೊತ್ತಿಲ್ಲ? ಆದರೆ ಬದಲಾವಣೆ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ.
ವೀರಾಜಪೇಟೆಯಲ್ಲಿ ಕಳೆದ ಬಾರಿ ಅರುಣ್ ಮಾಚಯ್ಯ ಅವರಿಗೆ ಕಾಂಗ್ರೆಸ್ ನಿಂದ ನೀಡಲಾಗಿತ್ತು. ಆದರೆ ಅವರು ಬಿಜೆಪಿಯ ಕೆ.ಜಿ.ಬೋಪಯ್ಯ ಅವರ ವಿರುದ್ಧ ಸೋಲನ್ನು ಕಂಡಿದ್ದರು. ಆದರೆ ಈ ಬಾರಿ ಹಿರಿಯ ನಾಯಕ ದಿ.ಎ.ಕೆ.ಸುಬ್ಬಯ್ಯ ಅವರ ಪುತ್ರ ವಕೀಲರಾದ ಎ.ಎಸ್.ಪೊನ್ನಣ್ಣ ಅವರಿಗೆ ನೀಡಲಾಗಿದೆ. ಇವರು ಕಾಂಗ್ರೆಸ್ ನಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಬಹುಶಃ ಅವರಿಗೆ ಟಿಕೆಟ್ ನೀಡುವ ಸಲುವಾಗಿಯೇ ವೀರಾಜಪೇಟೆ ಕಳಿಸಿ ಪಕ್ಷದ ಸಂಘಟನೆ ಮಾಡುವಂತೆ ಹಿರಿಯ ನಾಯಕರು ತಿಳಿಸಿದ್ದರೇನೋ? ಕಳೆದೊಂದು ವರ್ಷದಲ್ಲಿ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಅವರು ಕ್ಷೇತ್ರದ ಕಾಂಗ್ರೆಸ್ ನ ಸಂಘಟನೆಗೆ ಒತ್ತು ನೀಡಿದ್ದಾರೆ.
ಬಿಜೆಪಿ ಭದ್ರಕೋಟೆ ಛಿದ್ರವಾಗುತ್ತಾ?
ವೀರಾಜಪೇಟೆ ಕ್ಷೇತ್ರದಲ್ಲಿ ಕೊಡವ ಸಮುದಾಯದ ಪ್ರಾಬಲ್ಯವಿರುವುದರಿಂದ ಗೆಲುವು ಸುಲಭ ಎನ್ನಲಾಗುತ್ತಿದೆ. ಆದರೆ ಹೊರಗಿರುವ ನಾಯಕರಿಗೆ ಟಿಕೆಟ್ ನೀಡಿ ಸ್ಪರ್ಧಾ ಕಣಕ್ಕಿಳಿಸುತ್ತಿದ್ದರೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಇವತ್ತಿವರೆಗೂ ಪಕ್ಷಕ್ಕಾಗಿ ದುಡಿಯುತ್ತಿರುವ ಸ್ಥಳೀಯ ನಾಯಕರ ಗತಿಯೇನು? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಅದು ಏನೇ ಇರಲಿ ಜಿಲ್ಲೆಯಲ್ಲಿ ಪ್ರಬಲ ಎರಡು ಪಕ್ಷಗಳು ಟಿಕೆಟ್ ಘೋಷಣೆ ಮಾಡಿರುವುದರಿಂದ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿಯಲಿದ್ದು, ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗಲಿದೆ. ಒಂದೆರಡು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿ ಉಳಿದಿರುವ ಕೊಡಗಿನಲ್ಲಿ ಕಾಂಗ್ರೆಸ್ ಈ ಬಾರಿ ಕಮಾಲ್ ಮಾಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications