ಕೊಡಗು ವಿಶೇಷ; ಕೈಲ್ ಮುಹೂರ್ತ ಕೊಡಗಿನವರ ಪಾಲಿನ ಆಯುಧಪೂಜೆ
ಮಡಿಕೇರಿ, ಸೆಪ್ಟೆಂಬರ್ 03; ಕೊರೊನಾ ನಡುವೆ ಕೊಡಗಿನ ಮನೆಮನಗಳಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದುವರೆಗೆ ಮಳೆ-ಗಾಳಿ ನಡುವೆ ಗದ್ದೆ ಕೆಲಸದಲ್ಲಿ ನಿರತರಾದವರು ನಾಟಿ ಕೆಲಸವನ್ನು ಮುಗಿಸಿ ಕೈಲ್ ಮುಹೂರ್ತ ಹಬ್ಬವನ್ನು ಖುಷಿಯಾಗಿ ತಮ್ಮ ಕುಟುಂಬದವರೊಂದಿಗೆ ಕಲೆತು ಆಚರಿಸುತ್ತಿದ್ದಾರೆ.
'ಕೈಲ್ ಮುಹೂರ್ತ' ಎನ್ನುವುದು ಕೊಡಗಿನವರ ಪಾಲಿಗೆ ಮನರಂಜನೀಯ ಹಬ್ಬ. ಗದ್ದೆ ಕೆಲಸದಲ್ಲಿ ದೇಹವನ್ನು ದಂಡಿಸಿದವರು ಹೊಟ್ಟೆ ತುಂಬಾ ಉಂಡು, ಕಂಠಮಟ್ಟ ಕುಡಿದು ಸಂಭ್ರಮಿಸುವ ಹಾಗೂ ಮೈದಾನಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಕ್ರೀಡಾ ಕೌಶಲ್ಯತೆಯನ್ನು ಪ್ರದರ್ಶಿಸುವ ಹಬ್ಬ. ಇದೊಂದು ಆಯುಧಪೂಜೆಯೂ ಹೌದು.
ಕೊರೊನಾ ಕಾರಣದಿಂದಾಗಿ ಹಬ್ಬದ ಹಿನ್ನಲೆಯಲ್ಲಿ ಜನರೆಲ್ಲ ಕಲೆತು ನಡೆಸುತ್ತಿದ್ದ ಕ್ರೀಡಾಕೂಟವನ್ನು ಕೈ ಬಿಟ್ಟು ಮನೆಗಳಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳೇ ಹಾಗೆ ಅವು ಇತರೆಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟ ವಾಗಿರುತ್ತವೆ.
ಹಬ್ಬಗಳ ಆಚರಣೆಯನ್ನು ನೋಡಿದರೆ ಎಲ್ಲದರಲ್ಲಿಯೂ ಭತ್ತದ ಕೃಷಿಗೆ ಅನುಗುಣವಾಗಿ ಆಚರಣೆ ಮಾಡುವುದು ಕಂಡು ಬರುತ್ತದೆ. ಜತೆಗೆ ಎಲ್ಲ ಹಬ್ಬಗಳಲ್ಲಿಯೂ ಶೂರತ್ವ, ಕ್ರೀಡೆ, ಸಂಪ್ರದಾಯದ ಹಿನ್ನಲೆ ಎದ್ದು ಕಾಣಿಸುತ್ತದೆ. ಸಾಮಾನ್ಯವಾಗಿ ಕೈಲ್ ಮುಹೂರ್ತ ಹಬ್ಬಕ್ಕೆ ಕೊಡಗಿನ ಮಂದಿ ದೂರದ ಯಾವುದೇ ಊರಿನಲ್ಲಿದ್ದರೂ ತಪ್ಪದೆ ಬರುತ್ತಾರೆ. ಕುಟುಂಬದ ಹಾಗೂ ಊರ ಜನರೊಂದಿಗೆ ಬೆರೆತು ಹಬ್ಬದ ಸಂತಸವನ್ನು ಹಂಚಿಕೊಳ್ಳುತ್ತಾರೆ.

ಕೈಲ್‌ಮುಹೂರ್ತ
ಕೈಲ್ ಮುಹೂರ್ತ ಏಕೆ ಕೊಡಗಿನವರಿಗೆ ಆಯುಧ ಪೂಜೆ ಎಂಬುದಾಗಿ ನೋಡಿದರೆ ಇದರ ಹಿಂದೆ ಒಂದಷ್ಟು ರೋಚಕ ಇತಿಹಾಸ ಇರುವುದು ಕಾಣುತ್ತದೆ. 'ಕೈಲ್‌ಮುಹೂರ್ತ' ಹಬ್ಬವನ್ನು ಕೊಡವ ಭಾಷೆಯಲ್ಲಿ 'ಕೈಲ್‌ಪೊಳ್ದ್' ಎಂದು ಕರೆಯಲಾಗುತ್ತದೆ. 'ಕೈಲ್' ಎಂದರೆ ಆಯುಧ 'ಪೊಳ್ದ್' ಎಂದರೆ ಹಬ್ಬ. ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ 'ಕೈಲ್‌ಮುಹೂರ್ತ' ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಕಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ.

ಆಯುಧ ಕೆಳಗಿಟ್ಟು ನೇಗಿಲು ಹಿಡಿಯುತ್ತಿದ್ದರು!
ಹಬ್ಬದ ಆಚರಣೆ ಹಿನ್ನಲೆ ಕೆದಕಿದರೆ ಅವತ್ತಿನ ಕಾಲದಲ್ಲಿ ಗುಡ್ಡಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ಕೃಷಿಕರಿಗೆ ನಿರ್ಧಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತಿತ್ತು.

ಮುಂಗಾರು ಆರಂಭ, ಕೆಲಸ ಪ್ರಾರಂಭ
ಇನ್ನೊಂದೆಡೆ ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು. ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ಧಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇ ಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು. ಈ ದಿನಗಳಲ್ಲಿ ಕೋವಿಯ (ಬಂದೂಕು)ನ್ನು ನೆಲ್ಲಕ್ಕಿ ಬಾಡೆ (ದೇವರಕೋಣೆ)ಯಲ್ಲಿಡಲಾಗುತ್ತಿತ್ತು. ಅಲ್ಲದೆ ಕಕ್ಕಡ ಮಾಸ (ಜುಲೈ 17ರಿಂದ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು. ದುಡಿಮೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್‌ಮುಹೂರ್ತ ಹಬ್ಬದ ಸಂದರ್ಭವೇ ಆಗಿತ್ತು.

ಹಬ್ಬದ ಆಚರಣೆ ಹೇಗಿರುತ್ತಿತ್ತು ಗೊತ್ತಾ?
ಹಬ್ಬದ ಆಚರಣೆ ಹೇಗೆ ನಡೆಯುತ್ತಿತ್ತು ಎಂದರೆ, ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತದೆ. (ನಂತರ ಎತ್ತುಗಳನ್ನು ಉಳುಮೆಗೆ ಉಪಯೋಗಿಸುವುದು ಮುಂದಿನ ವರುಷದ ಮುಂಗಾರಿನಲ್ಲಿ ಮಾತ್ರ.) ಈ ಸಂದರ್ಭ ಅಕ್ಕಿಯಿಂದ ಮಾಡಿದ ವಿಶೇಷ ತಿಂಡಿಯನ್ನು ಸೇವಿಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗದ್ದೆಗಳು ಕಣ್ಮರೆಯಾಗಿ ಕಾಫಿ ತೋಟಗಳು ತಲೆ ಎತ್ತಿರುವುದರಿಂದ ಹಾಗೂ ಎತ್ತಿನ ಬದಲಾಗಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳು ಬಂದಿರುವುದರಿಂದ ಎತ್ತುಗಳ ಬದಲಿಗೆ ಗೋಪೂಜೆ ಮಾಡುವುದು ಕೆಲವೆಡೆ ಕಂಡು ಬರುತ್ತದೆ.

ಕಿರಿಯಯರಿಗೆ ಹಿರಿಯರ ಆಶೀರ್ವಾದ
ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸುತ್ತಾರೆ. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಾರೆ. (ಇದನ್ನು ಕೊಡವ ಭಾಷೆಯಲ್ಲಿ ಆಪ್‌ಪತರ್ ಎಂದು ಕರೆಯಲಾಗುತ್ತದೆ) ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಇದಕ್ಕೆ ಕಾಡಿನಲ್ಲಿ ಸಿಗುವ ವಿಶೇಷ ಹೂವಾದ ಕೋವಿ ಹೂವನ್ನಿಟ್ಟು ತಳಿಯತಕ್ಕಿ ಬೊಳಕ್(ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ನ್ನು ಉರಿಸಿ ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಾರೆ. ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಬೇಡಿಕೊಳ್ಳುತ್ತಾರೆ. ಅಲ್ಲದೆ ದೇವರ ಕೋಣೆಯಲ್ಲಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.

ಹೊರಗಿರುವ ಕೊಡಗಿನವರು ಹಬ್ಬಕ್ಕೆ ಹಾಜರು
ಹಿಂದಿನ ಕಾಲದಲ್ಲಿ ಹಬ್ಬದ ದಿನ ದೇವರ ಕೋಣೆಯಲ್ಲಿಟ್ಟ ಕೋವಿಯನ್ನು ಪೂಜೆಯ ಬಳಿಕ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಮನೆಗೆ ಬರುತ್ತಿದ್ದರು. ಈಗ ಹಾಗಿಲ್ಲ ಎಲ್ಲವೂ ಬದಲಾಗಿದೆ ಆದರೆ ಸಂಪ್ರದಾಯ ಉಳಿದುಕೊಂಡಿದ್ದರೂ ಬೇಟೆಯನ್ನು ನಿಷೇಧಿಸಿರುವುದರಿಂದ ಕೈಲ್ ಮುಹೂರ್ತ ಹಬ್ಬದ ದಿನದಂದು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಪಾಲ್ಗೊಂಡು ತಮ್ಮ ಶೌರ್ಯ ಪ್ರದರ್ಶಿಸುತ್ತಾರೆ.
ಸಾಮಾನ್ಯವಾಗಿ ಕೈಲ್ ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹದು. ಕೆಲವು ಮನೆಗಳಲ್ಲಿ ಕೈಲ್ ಮುಹೂರ್ತ ಹಬ್ಬಕ್ಕೆಂದೇ ಹಂದಿಗಳನ್ನು ಸಾಕಲಾಗುತ್ತದೆ. ಈ ಹಂದಿಗಳು ಸುಮಾರು 150ಕೆಜಿ ಗಿಂತಲೂ ಹೆಚ್ಚು ಬೆಳೆದಿರುತ್ತವೆ. ಇಂತಹ ಹಂದಿಗಳ ಮಾಂಸಕ್ಕೆ ತಿಂಗಳಿರುವಾಗಲೇ ಮುಂಗಡವಾಗಿ ಕಾಯ್ದಿರಿಸಲಾಗುತ್ತದೆ. ಪ್ರತಿ ಮನೆಯಲ್ಲಿ ಕನಿಷ್ಟ ಐದರಿಂದ ಹತ್ತು ಕೆಜಿಯಷ್ಟು ಮಾಂಸವನ್ನು ಉಪಯೋಗಿಸುತ್ತಾರೆ. ಜೊತೆಗೆ ವಿವಿಧ ಬಗೆಯ ಮದ್ಯಗಳು ಸಾಥ್ ನೀಡುತ್ತವೆ. ಅಂದು ಹಿರಿಯರು, ಕಿರಿಯರು ಎಂಬ ಭೇದ ಭಾವವಿಲ್ಲದೆ ಒಟ್ಟಾಗಿ ಮದ್ಯ ಸೇವಿಸುವುದು ಸಂಪ್ರದಾಯವಾಗಿದೆ.












Click it and Unblock the Notifications