• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೇಫ್ ಆಗಿದ್ದ ಕುಶಾಲನಗರದಲ್ಲೂ ನೆರೆ ಉಂಟಾಗಿದ್ದು ಹೇಗೆ?

|

ಮಡಿಕೇರಿ, ಆಗಸ್ಟ್‌ 07: ಕೊಡಗು ಜಿಲ್ಲೆಯ ಮಟ್ಟಿಗೆ ಸುರಕ್ಷಿತ ಸ್ಥಳವಾಗಿದ್ದ ಕುಶಾಲನಗರ ಕಳೆದ ಮೂರು ವರ್ಷಗಳಿಂದ ನೆರೆಗೆ ತುತ್ತಾಗುತ್ತಿದ್ದು, ಹಲವು ಬಡಾವಣೆಗಳು ಜಲಾವೃತವಾಗುತ್ತಿರುವುದರಿಂದ ಜನ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನರು ಭಯದಲ್ಲಿಯೇ ಮಳೆಗಾಲವನ್ನು ಕಳೆಯುವಂತಾಗಿದೆ.

   ವಿಜಯ್ ಮಲ್ಯಗೆ ಸಂಬಂಧಿಸಿದ ಮಹತ್ವದ ದಾಖಲೆ ಮಿಸ್ | Oneindia Kannada

   ಕೊಡಗಿನಲ್ಲಿರುವ ಇತರೆ ಪಟ್ಟಣಗಳಿಗೆ ಹೋಲಿಸಿದರೆ ಕುಶಾಲನಗರ ಸುರಕ್ಷಿತ ಸ್ಥಳವಾಗಿತ್ತು. ಒಂದಷ್ಟು ಸಮತಟ್ಟಿನ ಪ್ರದೇಶವಾಗಿ ಅತ್ತ ಹಾಸನ, ಇತ್ತ ಮೈಸೂರಿಗೆ ಹತ್ತಿರವಾಗಿರುವುದರಿಂದ, ಮಳೆಯೂ ಕಡಿಮೆ ಜತೆ ಉತ್ತಮ ವಾತಾವರಣ ಹೊಂದಿದ್ದು, ಹೆಚ್ಚಿನ ಜನರು ಕುಶಾಲನಗರದತ್ತ ಮುಖ ಮಾಡಿದ್ದರು. ಹೀಗಾಗಿ ನದಿ ತಟದಲ್ಲಿದ್ದ ಹೊಲಗದ್ದೆಗಳು ಬಡಾವಣೆಗಳಾಗಿ ರೂಪುಗೊಂಡಿದ್ದವು. ಆದರೆ ಇದೀಗ ಪರಿಸ್ಥಿತಿ ಬೇರೆಯಾಗಿದೆ.

   ಮಳೆಯ ಆರ್ಭಟಕ್ಕೆ ಬೆಚ್ಚಿ ಬಿದ್ದಿದೆ ಕೊಡಗು ಜಿಲ್ಲೆ...

    ಆತಂಕ ಸೃಷ್ಟಿಸಿದ 2018ರ ಮಳೆ

   ಆತಂಕ ಸೃಷ್ಟಿಸಿದ 2018ರ ಮಳೆ

   ಮೂರು ವರ್ಷಗಳ ಹಿಂದೆ ಮಳೆಯೂ ಕಡಿಮೆ ಪ್ರಮಾಣದಲ್ಲಿ ಸುರಿಯುತ್ತಿದ್ದರಿಂದ ಕಾವೇರಿಯೂ ಉಕ್ಕಿ ಹರಿದಿರಲಿಲ್ಲ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲಿನವರನ್ನು ಕಾಡಿರಲಿಲ್ಲ. ಹೀಗಾಗಿ ನದಿ ತಟದಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿದವರಿಗೆ ಮುಂದೊಂದು ದಿನ ನಮ್ಮ ಬಡಾವಣೆಗೂ ನೀರು ನುಗ್ಗುತ್ತದೆ ಎಂಬ ಚಿಕ್ಕ ಅನುಮಾನವೂ ಮೂಡಿರಲಿಲ್ಲ.

   ಬಹಳಷ್ಟು ಮಂದಿಗೆ ಕುಶಾಲನಗರದಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟುವುದು ಒಂದು ರೀತಿಯ ಪ್ರತಿಷ್ಠೆಯಾಗಿತ್ತು. ಅದಕ್ಕೆ ತಕ್ಕಂತೆ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿಯೂ ಬೆಳೆಯಲಾರಂಭಿಸಿತ್ತು. ಜತೆಗೆ ನಿವೇಶನಗಳ ಬೆಲೆಯೂ ಗಗನಕ್ಕೇರಿತ್ತು.

    ನೆಮ್ಮದಿ ಕಸಿದ ಮಳೆ

   ನೆಮ್ಮದಿ ಕಸಿದ ಮಳೆ

   ನೋಡನೋಡುತ್ತಿದ್ದಂತೆಯೇ ಕಾವೇರಿ ಹಾಗೂ ಹಾರಂಗಿ ನದಿಯಂಚಿನಲ್ಲಿ ಸಾಯಿ ಲೇಔಟ್, ಕುವೆಂಪು ಬಡಾವಣೆ, ಮುಳ್ಳುಸೋಗೆ ಶ್ರೀನಿಧಿ ಬಡಾವಣೆ, ಯೋಗಾನಂದ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳು ಎದ್ದು ನಿಂತವು. ಎಲ್ಲರೂ ಮನೆಕಟ್ಟಿಕೊಂಡು ನೆಮ್ಮದಿಯಾಗಿಯೇ ವಾಸಮಾಡಿಕೊಂಡಿದ್ದರು. ಯಾರಿಗೂ ತಮ್ಮ ಮನೆ ತನಕ ನೀರು ಬರುತ್ತದೆ ಎಂಬ ಚಿಕ್ಕ ಕಲ್ಪನೆಯೂ ಇರಲಿಲ್ಲ. ಆದರೆ ಇಲ್ಲಿನ ಜನರ ನೆಮ್ಮದಿಯನ್ನು 2018ರಲ್ಲಿ ಸುರಿದ ಮಹಾಮಳೆ ಮೊದಲ ಬಾರಿಗೆ ಕೆಡಿಸಿತ್ತು.

   ಮಳೆಗೆ ಜರಿದ ಬ್ರಹ್ಮಗಿರಿ ಬೆಟ್ಟ; ಅರ್ಚಕ ನಾರಾಯಣಾಚಾರ್ ಕುಟುಂಬಕ್ಕೆ ಶೋಧ

    ಚಿಂತಾಕ್ರಾಂತರಾಗಿದ್ದಾರೆ ಹಲವರು

   ಚಿಂತಾಕ್ರಾಂತರಾಗಿದ್ದಾರೆ ಹಲವರು

   ಆಗಲೇ ಹೆಚ್ಚಿನ ಜನಕ್ಕೆ ಗೊತ್ತಾಗಿದ್ದು ಯಾವತ್ತಿದ್ದರೂ ನಮಗೆ ಅಪಾಯ ತಪ್ಪಿದಲ್ಲ ಎಂಬುದು. ಬಹಳಷ್ಟು ಜನ ನದಿ ತಟದಲ್ಲಿ ನಿವೇಶನ ಖರೀದಿಸಿದವರು ಅದು ಮಳೆಗಾಲದಲ್ಲಿ ಮುಳುಗಡೆಯಾಗಿದ್ದನ್ನು ಕಂಡು ಚಿಂತಾಕ್ರಾಂತರಾಗಿದ್ದಾರೆ. ಎಲ್ಲ ತಿಳಿದು ಅಲ್ಲಿ ಮನೆ ಕಟ್ಟಲು ಮನಸ್ಸು ಒಪ್ಪುತ್ತಿಲ್ಲ. ಅದನ್ನು ಬೇರೆಯವರಿಗೆ ಮಾರಾಟ ಮಾಡೋಣ ಎಂದರೆ ಕೊಳ್ಳಲು ಮುಂದೆ ಯಾರೂ ಬರುತ್ತಿಲ್ಲ. ಈ ವ್ಯಾಪ್ತಿಯಲ್ಲಿ ಕಳೆದ ವರ್ಷವೂ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಪ್ರಸಕ್ತ ವರ್ಷ ಜೂನ್ ನಿಂದ ಮಳೆ ಆರಂಭವಾಗಿತ್ತಾದರೂ ಕುಂಭದ್ರೋಣ ಮಳೆ ಸುರಿದಿರಲಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ನೆಮ್ಮದಿಯಾಗಿಯೇ ಇದ್ದರು. ಆದರೆ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು ಕಾವೇರಿ ಮತ್ತು ಹಾರಂಗಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಮತ್ತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ.

    ವಿವಿಧ ಬಡಾವಣೆಗಳಿಗೆ ನುಗ್ಗಿದ ನೀರು

   ವಿವಿಧ ಬಡಾವಣೆಗಳಿಗೆ ನುಗ್ಗಿದ ನೀರು

   ಕಾವೇರಿ ನದಿಯ ದಂಡೆ ಮೇಲಿರುವ ಸಾಯಿ ಲೇಔಟ್, ಕುವೆಂಪು ಬಡಾವಣೆ, ಮುಳ್ಳುಸೋಗೆ ಶ್ರೀನಿಧಿ ಬಡಾವಣೆ, ಯೋಗಾನಂದ ಬಡಾವಣೆ ಹಾಗೂ ಗಂಧದಕೋಟೆ ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನವಸತಿ ಪ್ರದೇಶಗಳು ಹಾಗೂ ಹಳ್ಳಕೊಳ್ಳಗಳು ಜಲಾವೃತವಾಗಿವೆ. ಸಾಯಿ ಬಡಾವಣೆಯ ಸತ್ಯಸಾಯಿ ಬಾಬಾ ದೇವಸ್ಥಾನ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೆ ಸುಮಾರು ಐದು ಅಡಿಗಳಷ್ಟು ನೀರು ಆವರಿಸಿಕೊಂಡಿದೆ.

    ಸಂಬಂಧಿಕರಲ್ಲಿ ಆಶ್ರಯ ಪಡೆದ ಜನರು

   ಸಂಬಂಧಿಕರಲ್ಲಿ ಆಶ್ರಯ ಪಡೆದ ಜನರು

   ಇನ್ನು ಪ್ರವಾಹಕ್ಕೆ ಹೆದರಿದ ನದಿ ತಟದ ಬಡಾವಣೆಯ ನಿವಾಸಿಗಳು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವರು ಈಗಾಗಲೇ ಬಾಡಿಗೆಗೆ ಮನೆಗಳನ್ನು ಹುಡುಕಿಕೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ. ಕುವೆಂಪು ಬಡಾವಣೆಯಲ್ಲಿ ನದಿ ಆಸುಪಾಸಿನಲ್ಲಿರುವ ಹಲವು ಮನೆಗಳು, ಇಂದಿರಾ ಬಡಾವಣೆಯಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ಗಂಧದಕೋಟೆ ಬಳಿಯ ಕೆರೆಗೆ ನೀರು ನುಗ್ಗಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೋಪಾನ ಕಟ್ಟೆ ಸಂಪೂರ್ಣ ಮುಳುಗಡೆಗೊಂಡಿದೆ. ಈ ಪ್ರದೇಶದಲ್ಲಿ ಯಾರೂ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇದೆಲ್ಲದರ ನಡುವೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ನಾಗರಿಕ ರಕ್ಷಣಾ ಪಡೆ, ಅಗ್ನಿಶಾಮಕ ದಳದ ಸಿಬ್ಬಂದಿ ತೊಡಗಿದ್ದಾರೆ. ಕುಶಾನಗರ ಬಳಿಯಲ್ಲಿ ಕಾವೇರಿ ನದಿ ವಿಶಾಲವಾಗಿ ಹರಿಯುತ್ತಿದ್ದು, ಕೊಪ್ಪ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕಣಿವೆ ಬಳಿಯಿರುವ ತೂಗು ಸೇತುವೆಯೂ ಮುಳುಗಡೆಗೊಂಡಿದೆ.

    ಧೈರ್ಯ ತುಂಬಿದ ಶಾಸಕ ಅಪ್ಪಚ್ಚುರಂಜನ್

   ಧೈರ್ಯ ತುಂಬಿದ ಶಾಸಕ ಅಪ್ಪಚ್ಚುರಂಜನ್

   ಈಗಾಗಲೇ ಕಾವೇರಿ ನದಿ ನೀರು ನುಗ್ಗಿರುವ ಕೆಲವು ಬಡಾವಣೆಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲಿಸಿದ್ದು, ಜನರು ಯಾವುದೇ ಕಾರಣಕ್ಕೂ ಆತಂಕಗೊಳ್ಳಬಾರದು. ನಿಮ್ಮ ಸುರಕ್ಷತೆಗೆ ಎಲ್ಲ ರೀತಿಯ ನೆರವು ನೀಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಯಾವುದೇ ತೊಂದರೆ ಉಂಟಾದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಹೇಳಿದ್ದಾರೆ. ಆದರೆ ಮಳೆಯ ಅಬ್ಬರ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದರಿಂದ ಈಗಾಗಲೇ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ಹಾರಂಗಿ ಜಲಾಶಯದಿಂದ ಬೃಹತ್ ಪ್ರಮಾಣದ ನೀರು ಹೊರಕ್ಕೆ ಬರುತ್ತಿದೆ. ಇದು ತಳಭಾಗದ ಜನಕ್ಕೆ ಇನ್ನಷ್ಟು ಭಯವನ್ನುಂಟು ಮಾಡಿದೆ.

   English summary
   Kushalanagar, the safest place in the Kodagu district, has been hitting by flood for the past three years. what may be the reason for this?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X