ಕೊಡಗಿನಲ್ಲಿ ಗುಡುಗು ಸಹಿತ ಮಳೆ: ಧರೆಗುರುಳಿದ ಮರ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಏಪ್ರಿಲ್ 8: ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆಯಾಗಿರುವುದು ಬೆಳೆಗಾರರಲ್ಲಿ ಹರ್ಷ ತಂದಿದೆ. ಕೆಲವು ದಿನಗಳಿಂದ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿತ್ತಾದರೂ ಗುರುವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಬಿಸಿಲಿನ ಬೇಗೆಗೆ ತತ್ತರಿಸಿದ ಮಂದಿ ನಿಟ್ಟುಸಿರು ಬಿಡುವಂತಾಗಿದೆ.

ಮಡಿಕೇರಿಯ ಸುತ್ತಮುತ್ತ, ಸುಂಟಿಕೊಪ್ಪ, ಚೆಟ್ಟಳ್ಳಿ, ಮೂರ್ನಾಡು, ಭಾಗಮಂಡಲ ಹಾಗೂ ದಕ್ಷಿಣ ಕೊಡಗಿನ ಇರ್ಪು, ಶ್ರೀಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ವರುಣ ದಯೆ ತೋರಿದ್ದು, ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದೆ. ಭಾರೀ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಅಲ್ಲಲ್ಲಿ ಮರಗಳು ಮುರಿದು ಬಿದ್ದು, ನಷ್ಟವಾಗಿದ್ದರೆ, ಗುಡುಗು ಸಿಡಿಲಿನ ಆರ್ಭಟಕ್ಕೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.[ಮಂಡ್ಯದ ಲಕ್ಷ್ಮಿಸಾಗರದಲ್ಲಿ ಕತ್ತೆಗಳ ಮದುವೆ, ಭರ್ಜರಿ ಮೆರವಣಿಗೆ]

Heavy rainfall in Kodagu, trees fell on road

ಮಡಿಕೇರಿ ಸಮೀಪದ ಚೆಟ್ಟಳ್ಳಿಯಲ್ಲಿ ರಾತ್ರಿ ಮಳೆ- ಗಾಳಿಗೆ ಭಾರೀ ಗಾತ್ರದ ಬಳಂಜಿ ಮರ ಮುಖ್ಯ ರಸ್ತೆಗೆ ಉರುಳಿ ಬಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಅಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ತಡೆಗೋಡೆಯ ಬದಿಯಿರುವ ಮರ ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ಮರದ ಕೊಂಬೆಗಳು ಪಕ್ಕದ ತೋಟದ ಕಾಫಿಗಿಡಗಳ ಮೇಲೆ ಬಿದ್ದಿದ್ದರಿಂದ ತೋಟದ ಮಾಲಿಕ ಕಾಶಿದೇವಯ್ಯ ಎಂಬುವರಿಗೆ ನಷ್ಟವಾಗಿದೆ. ಮರ ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಬಳಿಕ ಸ್ಥಳೀಯರು ಮರ ಕತ್ತರಿಸುವ ಯಂತ್ರದಿಂದ ತುಂಡರಿಸಿ ತೆಗೆದು, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.[ಹಾಸನದಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ಇಬ್ಬರು ಬಲಿ]

Heavy rainfall in Kodagu, trees fell on road

ಅಲ್ಲದೆ ಮಳೆಯ ರಭಸಕ್ಕೆ ಪುತ್ತರಿರ ಐನ್‍ಮನೆಗೆ ತೆರಳುವ ರಸ್ತೆಯಲ್ಲಿ ಮರವೊಂದು ರಸ್ತೆಗೆ ಬಿದ್ದು, ಕೆಲಸಕಾಲ ಸಂಚಾರಕ್ಕೆ ತೊಂದರೆಯಾಯಿತು. ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವಂತಾಗಿತ್ತು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಳೆ ಸುರಿದಿದ್ದರಿಂದ ತಂಪಾಗಿದೆ.

ಪಕ್ಕದ ಆನೆಕಾಡಿನಲ್ಲಿ ಇತ್ತೀಚೆಗೆ ಬಿದ್ದ ಬೆಂಕಿಯಿಂದ ಇಡೀ ಅರಣ್ಯ ಹೊತ್ತಿ ಉರಿದಿತ್ತಲ್ಲದೆ, ಕುರುಚಲು ಗಿಡ, ಮರಗಳು ಬೆಂದು ಹೋಗಿದ್ದವು. ಮಳೆ ಬಂದಿದ್ದರಿಂದ ತುಸು ಜೀವ ಬಂದಂತಾಗಿದೆ. ಶುಕ್ರವಾರ ಬೆಳಗ್ಗೆಯೂ ತುಂತುರು ಮಳೆ ಸುರಿಯಲಾರಂಭಿಸಿತ್ತು.

Heavy rainfall in Kodagu, trees fell on road

ಸುಂಟಿಕೊಪ್ಪ, ಹರದೂರು, ಗದ್ದೆಹಳ್ಳ, ಕೆದಕಲ್, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಅಂದಗೋವೆ, ಕೊಡಗರಹಳ್ಳಿ, ಕಂಬಿಬಾಣೆ, ಚೆಟ್ಟಳ್ಳಿ, ಭೂತನಕಾಡು, ಮಾದಾಪುರ, ಕುಂಬೂರು, ಐಗೂರು, ಗ್ರಾಮ ವ್ಯಾಪ್ತಿಯಲ್ಲಿ ಯುಗಾದಿ ಕಳೆದು ಬಂದ ಹೊಸ ವರ್ಷದ ಮೊದಲ ಮಳೆ ಇದಾಗಿದೆ.[ಬಂಟ್ವಾಳ ತಾಲೂಕಿನಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆ]

Heavy rainfall in Kodagu, trees fell on road

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗಿದ್ದು, ಕಾಫಿ ಸೇರಿದಂತೆ ಕರಿಮೆಣಸಿಗೆ ಉಪಯುಕ್ತವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಬಂದರೆ ಕಾವೇರಿ ನದಿ ನೀರಿನಲ್ಲಿ ಒಂದಷ್ಟು ಏರಿಕೆ ಕಂಡು ಬಂದು, ಇದೀಗ ಕಾಣಿಸಿರುವ ಬರ ದೂರವಾಗಬಹುದೇನೋ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Heavy rainfall in Kodagu district. Slow traffic movement due to trees fell on road.
Please Wait while comments are loading...