ಕೊಡಗಿನಲ್ಲಿ ಮರ ಕಪಾತ್ ವೇಳೆ ಅವಘಡ: ಕೂಲಿ ಕಾರ್ಮಿಕ ಸಾವು
ಮಡಿಕೇರಿ, ಏಪ್ರಿಲ್ 22: ಕೊಡಗಿನಲ್ಲಿ ಮಳೆ ಸುರಿದಿರುವ ಹಿನ್ನಲೆಯಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಕಾರ್ಯಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಈ ಸಮಯದಲ್ಲಿ ಕಾಫಿ ತೋಟಗಳ ನಡುವೆ ಇರುವ ಅನಗತ್ಯ ನೆರಳನ್ನು ತೆಗೆಯುವ ಮರ ಕಪಾತ್ ಕೆಲಸ ನಡೆಯುತ್ತಿದ್ದು, ಕಾರ್ಮಿಕರು ಮರಗಳನ್ನೇರಿ ತೋಟಕ್ಕೆ ನೆರಳು ನೀಡುವ ಕೊಂಬೆಗಳನ್ನು ಕಡಿಯುತ್ತಾರೆ. ಈ ರೀತಿ ಮಾಡುವುದರಿಂದ ಕಾಫಿ ತೋಟದಲ್ಲಿ ಬೆಳಕು ಗಾಳಿಯಾಡಲು ಅನುಕೂಲವಾಗುತ್ತದೆ. ಆದರೆ ಈ ಕಪಾತು ಕೆಲಸ ಕಠಿಣವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ.
ಮರ ಕಪಾತ್ ಮಾಡುವ ಸಂದರ್ಭ ಹಲವರು ಪ್ರಾಣ ಕಳೆದುಕೊಂಡ ನಿದರ್ಶನಗಳು ಬಹಳಷ್ಟಿವೆ. ಕೆಲವೊಮ್ಮೆ ಸ್ವಲ್ಪ ಎಚ್ಚರ ತಪ್ಪಿದರೆ ಅನಾಹುತ ಸಂಭವಿಸುವ ಸಾಧ್ಯತೆಯಿರುತ್ತದೆ. ಇನ್ನು ಕಾರ್ಮಿಕರು ಕೂಡ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಮರಹತ್ತಿ ಅಭ್ಯಾಸವಿರುವವರು ಮಾತ್ರ ಕೆಲಸ ಮಾಡುತ್ತಾರೆ. ಕೆಲವರು ಅಲ್ಯುಮಿನಿಯಂ ಏಣಿ ಬಳಸಿ ಮರಹತ್ತುತ್ತಿದ್ದು ಅದು ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಸಂಚಕಾರ ತಂದೊಡ್ಡಿ ಬಿಡುತ್ತದೆ. ಮರದ ಕೊಂಬೆಯನ್ನು ಕಡಿಯುವುದು ಸುಲಭವಲ್ಲ. ಇದರಲ್ಲಿ ನಿಪುಣತೆ ಇರಬೇಕಾಗುತ್ತದೆ.

ಮರವನ್ನೇರಿ ಕಪಾತ್ ಮಾಡುವುದರಲ್ಲಿ ನಿಪುಣತೆ ಹೊಂದಿದವರು ಇದನ್ನು ಯಾವುದೇ ಅಪಾಯವಾಗದಂತೆ ಮಾಡುತ್ತಾರೆ. ಆದರೆ ಕೂಲಿ ಕಾರ್ಮಿಕರ ಸಮಸ್ಯೆ ಕಾರಣ ಸಿಕ್ಕಿದವರ ಜೊತೆ ಕಪಾತ್ ಮಾಡಿಸುವುದರಿಂದ ಕೆಲವೊಮ್ಮೆ ಸಮಸ್ಯೆಗಳಾಗುತ್ತಿವೆ. ಮರದ ಮೇಲೆ ಕೊಂಬೆ ಕತ್ತರಿಸುವವರು ಎಷ್ಟು ಎಚ್ಚರವಾಗಿರುತ್ತಾರೆಯೋ ಅಷ್ಟೇ ಎಚ್ಚರಿಕೆಯಿಂದ ಕೆಳಗೆ ಕೆಲಸ ಮಾಡುವವರು ಇರಬೇಕಾಗುತ್ತದೆ. ಕೆಳಗೆ ಇರುವವರು ಮೈಮರೆತರೆ ಮೇಲಿಂದ ಕೊಂಬೆಗಳು ಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಇನ್ನು ಮರವನ್ನೇರಲು ಅಲ್ಯುಮಿನಿಯಂ ಏಣಿಯನ್ನು ತೋಟದೊಳಗೆ ಕೊಂಡೊಯ್ಯುವಾಗ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಬಹುತೇಕ ತೋಟಗಳ ನಡುವೆ ವಿದ್ಯುತ್ ತಂತಿ ಹಾದು ಹೋಗಿದ್ದು, ಈ ಬಗ್ಗೆ ಗಮನಹರಿಸದೆ ಏಣಿ ತಂತಿಯನ್ನು ಸ್ಪರ್ಶಿಸಿ ವಿದ್ಯುತ್ ಅಘಾತದಿಂದ ಸಾವನ್ನಪ್ಪಿದ ಪ್ರಕರಣಗಳು ಬಹಳಷ್ಟು ನಡೆದಿವೆ. ಈ ವಿಚಾರದಲ್ಲಿ ತೋಟದ ಮಾಲೀಕರು ಮತ್ತು ಕಾರ್ಮಿಕರು ಎಚ್ಚರ ವಹಿಸಿ ಕೆಲಸವನ್ನು ಮಾಡುವುದು ಅಗತ್ಯವಿದೆ. ಮರ ಕಪಾತ್ ಮಾಡುವ ಸಂದರ್ಭಗಳಲ್ಲಿ ಮಾಲೀಕರು ಸ್ಥಳದಲ್ಲಿದ್ದು ಅನಾಹುತ ಸಂಭವಿಸದಂತೆ ನೋಡಿಕೊಳ್ಳುವ ಅನಿವಾರ್ಯತೆಯಿದೆ.

ಇದೀಗ ಕೂಲಿ ಕಾರ್ಮಿಕರ ಸಮಸ್ಯೆ ಒಂದು ಕಡೆಯಾದರೆ ಕಾರ್ಮಿಕರು ದಿನಗೂಲಿಗೆ ಬಾರದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಮರಕ್ಕೆ ಇಂತಿಷ್ಟು ಹಣವನ್ನು ನಿಗದಿ ಮಾಡಿಕೊಂಡು ಕೆಲಸ ಮಾಡುತ್ತಾರೆ. ಹೀಗಾಗಿ ತೋಟದ ಮಾಲೀಕರು ತಲೆಕೆಡಿಕೊಳ್ಳುತ್ತಿಲ್ಲ. ಕಾರ್ಮಿಕರು ಕೆಲಸ ಮುಗಿಸುವ ಆತುರದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಮರ ಕಪಾತ್ ಕೆಲಸದ ವೇಳೆ ಕೂಲಿ ಕಾರ್ಮಿಕ ಸಾವು
ಇದೀಗ ಮರ ಕಪಾತ್ ಮಾಡುತ್ತಿದ್ದ ಸಂದರ್ಭ ಕಾರ್ಮಿಕನ ಮೇಲೆ ಮರ ಬಿದ್ದ ಮೃತಪಟ್ಟ ಘಟನೆ ಜಿಲ್ಲೆಯ ಚೆಟ್ಟಳ್ಳಿ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ. ಚೆಟ್ಟಳ್ಳಿ ಕಾಫಿ ಬೋರ್ಡ್ ಸಮೀಪದಲ್ಲಿರುವ ಮೇಜರ್ ಕೊಂಗೇಟಿರ ಮೊಣ್ಣಪ್ಪರವರ ಕಾಫಿ ತೋಟದಲ್ಲಿ ಮರ ಕಪಾತ್ ಕೆಲಸ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೃತಪಟ್ಟ ಕೂಲಿ ಕಾರ್ಮಿಕ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಣಿ(25) ಎಂದು ಗುರುತಿಸಲಾಗಿದೆ.
ಮೃತ ಮಣಿ ತೋಟದಲ್ಲಿ ಮರ ಕಪಾತ್ ಕೆಲಸ ಮಾಡಿಸುತ್ತಿದ್ದ ಸಂದರ್ಭ ಮಳೆ ಬರುತ್ತಿದ್ದ ಕಾರಣಕ್ಕೆ ಕಾರ್ಮಿಕನೊಬ್ಬನನ್ನು ಏಣಿಯಿಂದ ಇಳಿಸಲು ತೆರಳಿದ ಸಂದರ್ಭ ಮಳೆಗಾಳಿಯ ರಭಸಕ್ಕೆ ಪಕ್ಕದಲ್ಲಿ ಸುಮಾರು 60 ಅಡಿ ಎತ್ತದ ಬಳಂಜಿ ಮರವು ಕಾರ್ಮಿಕ ಮಣಿ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಚೆಟ್ಟಳ್ಳಿ ಉಪಠಾಣಾಧಿಕಾರಿ ಎಎಸ್ ಐ ದಿನೇಶ್, ಮಡಿಕೇರಿ ಗ್ರಾಮಾಂತರ ಠಾಣಾ ಪೋಲೀಸ್ ನಿರೀಕ್ಷರಾದ ಚಂದ್ರಶೇಖರ್ ಹಾಗೂ ಪಿಎಸ್ ಐ ಶ್ರೀನಿವಾಸಲು ಹಾಗು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications