ಕೊಡವ ಹಾಕಿ ಉತ್ಸವಕ್ಕೆ 40ಲಕ್ಷ ರೂ. ಅನುದಾನ

Posted By: Ramesh
Subscribe to Oneindia Kannada

ಮಡಿಕೇರಿ, ಫೆಬ್ರವರಿ. 09 : ಲಿಮ್ಕಾ ದಾಖಲೆ ಬರೆದು ಗಿನ್ನಿಸ್ ದಾಖಲೆಯತ್ತ ಮುನ್ನುಗ್ಗುತ್ತಿರುವ ಮತ್ತು ಕೊಡಗನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿರುವ, ಕೊಡವ ಕುಟುಂಬಗಳಲ್ಲಿ ಸೌಹಾರ್ದತೆಯನ್ನು, ಭವಿಷ್ಯದ ಹಾಕಿ ಆಟಗಾರರನ್ನು ಹುಟ್ಟು ಹಾಕುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವಕ್ಕೆ ಸರ್ಕಾರದಿಂದ 40 ಲಕ್ಷ ರೂ.ಗಳ ಅನುದಾನವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.

ಈ ಬಾರಿ ಹಾಕಿ ಉತ್ಸವದ ಸಾರಥ್ಯವನ್ನು ಬಿದ್ದಾಟಂಡ ಕುಟುಂಬ ವಹಿಸಿಕೊಂಡಿದ್ದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ. ಈಗಾಗಲೇ ಪಂದ್ಯಾವಳಿಗೆ ಸಂಬಂಧಿಸಿದಂತೆ ಸಿದ್ಧತಾ ಕಾರ್ಯಗಳು ನಾಪೋಕ್ಲುನಲ್ಲಿ ಭರದಿಂದ ಸಾಗಿದೆ.

cm Siddaramaiah agreed give Rs 40 lakh for Kodava hockey festival

ಈ ಹಾಕಿ ಉತ್ಸವಕ್ಕೆ ಕೋಟ್ಯಂತರ ರೂ. ಖರ್ಚಾಗಲಿದ್ದು, ಕುಟುಂಬಸ್ಥರೇ ಭರಿಸಲಿದ್ದಾರೆ. ಇದರೊಂದಿಗೆ ಸರ್ಕಾರವೂ ಅನುದಾನ ನೀಡುತ್ತಿರುವುದು ಹಾಕಿ ಉತ್ಸವ ಉಳಿದು ಬೆಳೆಯಲು ಸಾಧ್ಯವಾಗುತ್ತಿದೆ.

ಅನುದಾನ ಕೋರಿ ಮುಖ್ಯಮಂತ್ರಿಗಳ ಬಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಪಶು ಸಂಗೋಪನೆ ಸಚಿವ ಎ. ಮಂಜು, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಪೊನ್ನಪ್ಪ, ನಾಪಂಡ ಮುತ್ತಪ್ಪ, ಬಿದ್ದಾಟಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಚಂಗಪ್ಪ, ಪದಾಧಿಕಾರಿಗಳಾದ ಬಿ.ಎಸ್. ತಮ್ಮಯ್ಯ, ಬೆಲ್ಲು ಬೆಳ್ಯಪ್ಪ, ಜೀವನ್ ಕಾರ್ಯಪ್ಪ, ಸುಜನ್ ನಂಜಪ್ಪ, ಪವನ್ ಮುತ್ತಪ್ಪ, ಹರ್ಷಿತ್ ಸೋಮಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ಕೊಂಗಂಡ ನವೀನ್ ಪೂಣಚ್ಚ ಅವರನ್ನೊಳಗೊಂಡ ನಿಯೋಗ ತೆರಳಿ ಮನವಿ ಮಾಡಿದ ಮೇರೆಗೆ ರಾಜ್ಯ ಸರ್ಕಾರದಿಂದ ಕಳೆದ ವರ್ಷ ನೀಡಿದಂತೆ ಈ ಬಾರಿಯೂ ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಅದರಂತೆ ಮುಂದಿನ ಏಪ್ರಿಲ್- ಮೇನಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಬಿದ್ದಾಟಂಡ ಕಪ್ ಹಾಕಿ ಉತ್ಸವಕ್ಕೆ ರಾಜ್ಯ ಸರಕಾರದಿಂದ ರೂ. 40ಲಕ್ಷ ಅನುದಾನ ಮಂಜೂರು ಮಾಡುವಂತೆ ಅವರು ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.

ಕೆಲ ಕಾಲ ನಿಯೋಗದೊಂದಿಗೆ ಚರ್ಚೆ ನಡೆಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕೊಡಗಿನಲ್ಲಿ ನಡೆಯುತ್ತಿರುವ ಹಾಕಿ ಉತ್ಸವವನ್ನು ಶ್ಲಾಘಿಸಿ ಅನುದಾನ ನೀಡಲು ಒಪ್ಪಿದರಲ್ಲದೆ, ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿ ಸಹಿ ಹಾಕಿ, ಈ ಕುರಿತಂತೆ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister Siddaramaiah agreed give Rs 40 lakh for the Kodava hockey festival.
Please Wait while comments are loading...