ಹುಲಿ ಸೆರೆಗೆ ಒತ್ತಾಯಿಸಿ ಪೊನ್ನಂಪೇಟೆ ಬಂದ್; ಉತ್ತಮ ಬೆಂಬಲ
ಮಡಿಕೇರಿ, ಮಾರ್ಚ್ 11; ನರಹಂತಕ ಹುಲಿಯನ್ನು ಸೆರೆಹಿಡಿಯುವಲ್ಲಿ ಅಥವಾ ಗುಂಡು ಹೊಡೆದು ಸಾಯಿಸುವಲ್ಲಿ ವಿಫಲವಾದ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಬುಧವಾರ ಹೆದ್ದಾರಿ ತಡೆ ಮಾಡಲಾಗಿತ್ತು. ಇಂದು ಪೊನ್ನಂಪೇಟೆ ತಾಲೂಕು ಬಂದ್ ಕರೆ ನೀಡಲಾಗಿದೆ.
ಗುರುವಾರ ವಿವಿಧ ಸಂಘ ಸಂಸ್ಥೆಗಳು ಹಾಗೂ ಬೆಳೆಗಾರರ ಸಹಕಾರದೊಂದಿಗೆ ರಾಜ್ಯ ರೈತಸಂಘ ಕರೆ ನೀಡಿರುವ ಪೊನ್ನಂಪೇಟೆ ತಾಲೂಕು ಬಂದ್‌ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಕುಟ್ಟಾ, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ ಭಾಗದಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ.
ವಾಹನ ಸಂಚಾರ ಕೂಡ ವಿರಳವಾಗಿದೆ. ನರಹಂತಕ ಹುಲಿಯನ್ನು ಗುಂಡು ಹೊಡೆದು ಸಾಯಿಸಬೇಕು ಎಂದು ಇಂದು ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಬಂದ್ ಕರೆ ನೀಡಲಾಗಿದೆ. ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ನರಭಕ್ಷಕ ಹುಲಿಯನ್ನು ಹಿಡಿಯಲು ಒತ್ತಾಯಿಸಿ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘದ ಪದಾಧಿಕಾರಿಗಳು ಬುಧವಾರ ಮೈಸೂರು-ಗೋಣಿಕೊಪ್ಪ ರಾಜ್ಯ ಹೆದ್ದಾರಿ ತಡೆದಿದ್ದರು. ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆ ನಡೆಸಿದ್ದರು.

ಬುಧವಾರ ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲುವಿನಲ್ಲಿ ಮಾನವ ಸರಪಳಿ ರಚಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಗಿತ್ತು. ಮೂವರನ್ನು ಕೊಂದಿರುವ ಹುಲಿ ಬಗ್ಗೆ ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿತ್ತು.
ಅರಣ್ಯ ಇಲಾಖೆಯ 150ಕ್ಕೂ ಅಧಿಕ ಸಿಬ್ಬಂದಿ ಶ್ರಮಿಸುತ್ತಿದ್ದರೂ ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಜೀವಂತವಾಗಿ ಸೆರೆ ಹಿಡಿಯಲು ಆಗದಿದ್ದರೆ ಕಂಡಲ್ಲಿ ಗುಂಡಿಕ್ಕಲು ಸಹ ಆದೇಶ ಹೊರಡಿಸಲಾಗಿದೆ. ಮೂವರ ಜೀವವನ್ನು ಹುಲಿ ಬಲಿಪಡೆದಿದ್ದು, ಜನರೂ ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಕತ್ತಲಾದ ಮೇಲೆ ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ತೋಟಗಳಲ್ಲಿ ಕೆಲಸಗಳನ್ನು ಸಹ ನಿಲ್ಲಿಸಲಾಗಿದೆ.












Click it and Unblock the Notifications