ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮಣೀಯ ಕಾವೇರಿ ನಿಸರ್ಗಧಾಮಕ್ಕೆ ಬಿದಿರು ಮೆಳೆಗಳ ಮೆರಗು

By ಬಿ.ಎಂ.ಲವಕುಮಾರ್
|
Google Oneindia Kannada News

z

ಮಡಿಕೇರಿ, ಮೇ 30: ಕಾವೇರಿ ನದಿ ಸೃಷ್ಟಿಸಿದ ದ್ವೀಪ ಪ್ರದೇಶದಲ್ಲೊಂದಾದ ಕಾವೇರಿ ನಿಸರ್ಗಧಾಮವು ಕೊಡಗಿನ ಸುಂದರ ಪ್ರವಾಸಿ ತಾಣ. ಇಲ್ಲಿಗೆ ಬಿದಿರುಮೆಳೆಗಳೇ ಮೆರಗು. ಹಚ್ಚ ಹಸಿರಿನ ಮುಗಿಲತ್ತ ಬೆಳೆದು ನಿಂತ ಬಿದಿರು ಮೆಳೆಗಳ ನಡುವೆ ಹೆಜ್ಜೆ ಹಾಕುತ್ತಾ ಕಾಲ ಕಳೆಯುವುದು ಪ್ರವಾಸಿಗರಿಗೆ ಮುದ ನೀಡುತ್ತದೆ.

ನಾಲ್ಕೈದು ವರ್ಷಗಳ ಹಿಂದೆ ಬಿದಿರುಮೆಳೆಗಳು ಹೂ ಬಿಟ್ಟು ನಾಶವಾಗಿದ್ದರಿಂದ ಇಡೀ ಕಾವೇರಿ ನಿಸರ್ಗಧಾಮ ಬೋಳು ಬೋಳಾಗಿತ್ತಲ್ಲದೆ, ದೂರದಿಂದ ಬಂದವರು ಇಲ್ಲೇನಿದೆ ಎಂದು ಪ್ರಶ್ನಾರ್ಥಕ ನೋಟ ಬೀರುವಂತಾಗಿತ್ತು. ಅಲ್ಲದೆ ಹಸಿರೇ ಇಲ್ಲದ ತಾಣ ಬೋರ್ ಹೊಡೆಸುತ್ತಿತ್ತು.

ಆಪರೇಷನ್ ಗ್ರೀನ್ : ಬಿದಿರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಆಪರೇಷನ್ ಗ್ರೀನ್ : ಬಿದಿರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ

ಇದೀಗ ಕಾವೇರಿ ನಿಸರ್ಗಧಾಮಕ್ಕೆ ಮತ್ತೆ ಕಳೆ ಬರತೊಡಗಿದೆ. ಹಳೆಯ ಬಿದಿರು ಮೆಳೆಗಳು ಒಣಗಿ ಹೋಗಿ ಹೊಸದಾಗಿ ಬಿದಿರು ಮೆಳೆಗಳು ಬೆಳೆಯತೊಡಗಿವೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಇವು ಮುಗಿಲತ್ತ ಬೆಳೆದು ಹಿಂದಿನ ಸೌಂದರ್ಯವನ್ನು ನೋಡುಗರಿಗೆ ಉಣ ಬಡಿಸಲಿವೆ.

ರಮಣೀಯ ನಿಸರ್ಗಧಾಮ

ರಮಣೀಯ ನಿಸರ್ಗಧಾಮ

ಹಾಗೆನೋಡಿದರೆ ಕಾವೇರಿ ನಿಸರ್ಗಧಾಮವು ಕೊಡಗಿನ ಹೆಬ್ಬಾಗಿಲು ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಸ್ತೆಯ ಎಡಭಾಗಕ್ಕಿದೆ. ನಿಸರ್ಗಧಾಮದ ಪ್ರವೇಶ ದ್ವಾರವನ್ನು ಪ್ರವೇಶಿಸಿ ತೂಗು ಸೇತುವೆಯಲ್ಲಿ ಕಾಲಿಡುತ್ತಿದ್ದಂತೆಯೇ ಜುಳು ಜುಳು ನಿನಾದಗೈಯುತ್ತಾ ಹರಿಯುವ ಕಾವೇರಿ ನದಿ. ಅದರ ದಡದುದ್ದಕ್ಕೂ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಿಡಗಳು, ಬಿದಿರು ಮೆಳೆಗಳು, ಚಿಲಿಪಿಲಿ ಗುಟ್ಟುವ ಹಕ್ಕಿಗಳು... ಹೀಗೆ ನಿಸರ್ಗ ರಮಣೀಯತೆ ನಿಸರ್ಗಧಾಮದೊಳಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ.

ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ.

ಈ ವಿಹಾರಧಾಮದಲ್ಲಿ ಮಕ್ಕಳು ಆಡಿ ನಲಿಯಲು ಏಣಿಯಾಟ, ಉಯ್ಯಾಲೆ, ಉದ್ದಜಿಗಿತ ಮುಂತಾದ ಆಟದ ಸಾಮಾಗ್ರಿಗಳನ್ನಿಡಲಾಗಿದೆ.

ಆನೆ ಸವಾರಿ ಮಾಡಬೇಕೆ?

ಆನೆ ಸವಾರಿ ಮಾಡಬೇಕೆ?

ಇಲ್ಲಿಂದ ಮುಂದೆ ಬಿದಿರುಮೆಳೆಗಳ ನಡುವೆ ನಡೆದರೆ ಆನೆ ಸವಾರಿ ನಡೆಸುವ ಜಾಗವನ್ನು ತಲುಪಬಹುದು. ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ.

ಮನಸೆಳೆವ ಕುಟೀರಗಳು

ಮನಸೆಳೆವ ಕುಟೀರಗಳು

ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಜೊತೆಗೆ ಇಲ್ಲಿನ ನಿಸರ್ಗ ಸೌಂದರ್ಯವನ್ನು ಕೂಡ ಸವಿಯಬಹುದು. ಇನ್ನು ಇಲ್ಲಿ ಪ್ರವಾಸಿ ಮಾಹಿತಿ ಕೇಂದ್ರವಿದೆ. ಮೊಲಗಳಿವೆ. ಕಾವೇರಿ ತಾಯಿಯ ಪ್ರತಿಮೆಯೂ ಇದೆ.

ಇದೀಗ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಇಲ್ಲಿನ ಜಾನಪದ ನೃತ್ಯ ಪ್ರಕಾರಗಳಾದ ಮಹಿಳೆಯರ ಉಮ್ಮತ್ತಾಟ್, ಪುರುಷರ ಕೋಲಾಟ್ ಮೊದಲಾದವುಗಳನ್ನು ಪರಿಚಯಿಸುವ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು ಅವುಗಳು ಗಮನಸೆಳೆಯುತ್ತಿದ್ದು, ಹೊರಗಿನಿಂದ ಬಂದವರಿಗೆ ಇಲ್ಲಿನ ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ.

ಎಲ್ಲಿ ನೋದಿದರೂ ಬಿದಿರಿನ ಜಾತ್ರೆ!

ಎಲ್ಲಿ ನೋದಿದರೂ ಬಿದಿರಿನ ಜಾತ್ರೆ!

ಮೊದಲು ಈ ದ್ವೀಪವು ಬಿದಿರುಮೆಳೆ, ಕಾಡಿನಿಂದ ಕೂಡಿದ ಅರಣ್ಯವಾಗಿತ್ತು. ಸುತ್ತಲೂ ಕಾವೇರಿ ನದಿ ಹರಿಯುತ್ತಿದ್ದರಿಂದ ಯಾರೂ ಕೂಡ ಇದರತ್ತ ತೆರಳುತ್ತಿರಲಿಲ್ಲ. ಸುಮಾರು 65 ಎಕರೆ ಅರಣ್ಯ ಪ್ರದೇಶ ಹೊಂದಿದ್ದ ಈ ದ್ವೀಪವನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬಹುದೆಂಬ ಆಲೋಚನೆ ಅವತ್ತಿನ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ತೋರ್ವೆ ಹಾಗೂ ವಲಯಾಧಿಕಾರಿ ಟಿ.ಎನ್.ನಾರಾಯಣ್ ಅವರಿಗೆ ಬಂದಿತ್ತು. ಅವರ ಸತತ ಪ್ರಯತ್ನದಲ್ಲಿ 1989ರಲ್ಲಿ ಕಾವೇರಿ ನಿಸರ್ಗಧಾಮ ನಿರ್ಮಾಣವಾಯಿತು.

ಮೊದಲ ಬಾರಿಗೆ ಸುಳ್ಯದ ತೂಗುಸೇತುವೆ ನಿರ್ಮಾತೃರಾದ ಇಂಜಿನಿಯರ್ ಗಿರೀಶ್ ಭಾರಧ್ವಾಜ್ ಅವರು ಕಾವೇರಿ ನದಿ ದಾಟಿ ನಿಸರ್ಗಧಾಮದೊಳಕ್ಕೆ ತೆರಳಲು ಪುಟ್ಟದಾದ ತೂಗುಸೇತುವೆಯನ್ನು ನಿರ್ಮಿಸಿದರು. ಈ ತೂಗು ಸೇತುವೆಯಲ್ಲಿ ತೆರಳಲೆಂದೇ ಜನ ಬರತೊಡಗಿದರು. ತೂಗು ಸೇತುವೆಯಲ್ಲಿ ತೂಗಾಡುತ್ತಾ ನಿಸರ್ಗಧಾಮದೊಳಕ್ಕೆ ಹೋಗಿ ಒಂದಷ್ಟು ಸಮಯ ಕಳೆಯಲು ಜನ ಮುಗಿಬಿದ್ದರು. ಹೀಗೆ ವರ್ಷದಿಂದ ವರ್ಷಕ್ಕೆ ಕಾವೇರಿ ನಿಸರ್ಗಧಾಮ ಅಭಿವೃದ್ಧಿಯಾಗುತ್ತಾ ಹೋಯಿತು.

ಆಕರ್ಷಕ ತೂಗು ಸೇತುವೆ

ಆಕರ್ಷಕ ತೂಗು ಸೇತುವೆ

ಆಧುನಿಕ ಶೈಲಿಯ ಆಕರ್ಷಕ ತೂಗು ಸೇತುವೆಯನ್ನು ಮತ್ತೆ ನಿರ್ಮಾಣ ಮಾಡಲಾಯಿತು.(ಹಳೆಯ ತೂಗು ಸೇತುವೆ ಈಗಲೂ ಕಾಣಸಿಗುತ್ತಿದೆ). ಒಂದಷ್ಟು ಅಭಿವೃದ್ಧಿಯನ್ನು ಮಾಡಲಾಯಿತು. ಪ್ರವಾಸಿಗರನ್ನು ಸೆಳೆಯಲು ಆನೆಸಫಾರಿ, ಉಪಹಾರದ ವ್ಯವಸ್ಥೆ, ದೋಣಿ ವಿಹಾರ, ತಂಗಲು ಕಾಟೇಜ್ ಗಳ ವ್ಯವಸ್ಥೆ ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಯಿತು. ಇವತ್ತು ಕಾವೇರಿ ನಿಸರ್ಗಧಾಮಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಒಂದಷ್ಟು ಸಮಯವನ್ನು ಕಳೆದು ಹೋಗುತ್ತಾರೆ.

ಒಂದು ಕಾಲದಲ್ಲಿ ದ್ವೀಪವಾಗಿ ಅರಣ್ಯ ಪ್ರದೇಶವಾಗಿದ್ದ ಕಾವೇರಿ ನಿಸರ್ಗಧಾಮ ಇವತ್ತು ಸುಂದರ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಅಗತ್ಯತೆಯೂ ಇದೆ.

English summary
Bamboo plants are growing again in Kaveri Nisargadhama in Kodagu district. Four years back bamboo plants are distroyed due to many reasons. Now Greeny bamboo plants attracting tourists here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X