ಕೊಡಗಿನ ಗುಂಡಿಯತ್ ಅಯ್ಯಪ್ಪ ದೇವರಿಗೆ ಅವಲಕ್ಕಿಯ ನೈವೇದ್ಯ: ಏನಿದು ವಿಶೇಷ ಆಚರಣೆ?
ಮಡಿಕೇರಿ, ಮೇ 09: ಕೊಡಗಿನಲ್ಲಿ ಮೇ ತಿಂಗಳಾಂತ್ಯಕ್ಕೆ ಎಲ್ಲ ಗ್ರಾಮದೇವರುಗಳ ಹಬ್ಬಗಳು ಮುಗಿದು ಹೋಗಲಿದೆ. ಮಳೆಗಾಲ ಆರಂಭವಾದ ಬಳಿಕ ಆಗಸ್ಟ್ 3ರ ಕಕ್ಕಡ ಪದ್ನಟ್ ತನಕ ಯಾವುದೇ ಹಬ್ಬಾಚರಣೆಗಳು ನಡೆಯುವುದಿಲ್ಲ. ಹೀಗಾಗಿ ಎಲ್ಲರೂ ತಮ್ಮ ಮನೆಗಳು ಸೇರಿದಂತೆ ಊರ ಹಬ್ಬಗಳನ್ನು ತಿಂಗಳಾಂತ್ಯದೊಳಗೆ ಮುಗಿಸಿ ಬಿಡುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಮೊದಲೆಲ್ಲ ಮಳೆಗಾಲ ಕೊಡಗಿನಂತಹ ಪ್ರದೇಶಗಳಲ್ಲಿ ಮೇ ತಿಂಗಳ ಕೊನೆಯ ಭಾಗದಲ್ಲಿಯೇ ಆರಂಭವಾಗಿ ಬಿಡುತ್ತಿತ್ತು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿದ್ದವು. ಅದರ ಜತೆಗೆ ಮಳೆಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ಕೂಡ ಕಷ್ಟವಾಗಿರುತ್ತಿತ್ತು. ಹೀಗಾಗಿಯೇ ಮುಂಗಾರಿಗಿಂತ ಮೊದಲೇ ಎಲ್ಲ ಹಬ್ಬ, ಶುಭಕಾರ್ಯಗಳನ್ನು ಮಾಡಿ ಮುಗಿಸಿ ಬಿಡುತ್ತಿದ್ದರು.

ಬದಲಾದ ಕಾಲಘಟ್ಟದಲ್ಲಿ ಮೊದಲಿನಂತೆ ಯಾವುದೂ ಇಲ್ಲವಾಗಿದೆ. ಒಂದಷ್ಟು ಬದಲಾವಣೆಗಳು ಪ್ರಕೃತಿ ಸೇರಿದಂತೆ ಜನವಲಯದಲ್ಲಿಯೂ ಬದಲಾವಣೆಗಳಾಗಿವೆ. ಆದರೆ ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಹಬ್ಬಗಳ ಆಚರಣೆಯನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವುದು ಕಂಡುಬರುತ್ತಿದೆ. ಇಲ್ಲಿ ನಡೆಯುವ ಹಬ್ಬಾಚರಣೆ ಪೈಕಿ ದಕ್ಷಿಣಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ವಿಶೇಷವಾಗಿದೆ.
ಹಬ್ಬದ ಆಚರಣೆ ಹೇಗಿರುತ್ತದೆ ಗೊತ್ತಾ?
ಈ ಹಬ್ಬದ ಆಚರಣೆ ಹೇಗಿರುತ್ತದೆ ಎಂಬುದನ್ನು ನೋಡಿದ್ದೇ ಆದರೆ ಈ ಆಚರಣೆ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ಇಂತಹ ಆಚರಣೆ ಕೊಡಗು ಹೊರತು ಪಡಿಸಿ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಹಬ್ಬದ ಆಚರಣೆ ಅಂಗವಾಗಿ ಗುಂಡಿಯತ್ತ್ ಅಯ್ಯಪ್ಪ ದೇವರ ಅವುಲ್ ಹಾಗೂ ರಾತ್ರಿ ಮನೆ ಮನೆ ಕಳಿ (ಮನೆಗಳಿಗೆ ತೆರಳಿ ನೃತ್ಯ) ನಡೆಯುತ್ತದೆ. ಇದು ಊರು ತಕ್ಕರಾದ ಚಮ್ಮಟೀರ ಮನೆಯಿಂದ ಹೊರಡುತ್ತದೆ.
ಈ ವೇಳೆ ಕೃತಕವಾಗಿ ಶೃಂಗರಿಸಲಾದ ಒಂದು ಕುದುರೆ ಚಮ್ಮಟೀರ ಹಾಗೂ ಮತ್ತೊಂದು ಕುದುರೆ ಮೂಕಳೇರ ಕುಟುಂಬದ ಮನೆಯಿಂದ ಹೊರಟು ದೇವಸ್ಥಾನದ ಸಮೀಪ ಅಂಬಲ (ಮೈದಾನ)ದಲ್ಲಿ ಪರಸ್ಪರ ಕೆಸರು ಎರಚಾಟದ ನಂತರ ದೇವಸ್ಥಾನದಲ್ಲಿ ಹರಕೆ ಕಾಣಿಕೆ ಒಪ್ಪಿಸುವುದರೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ.

ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಹಲವು ವಿಶೇಷತೆಗಳನ್ನು ನಾವು ಕಾಣಬಹುದಾಗಿದೆ. ಈ ಬೋಡು ಹಬ್ಬದಲ್ಲಿ ಅವಲಕ್ಕಿ ಪ್ರಸಾದ ಮತ್ತು ಕೆಸರು ಎರಚಾಟ ಪ್ರಮುಖವಾಗಿದ್ದು ಮೊದಲಿನಿಂದಲೂ ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬರಲಾಗಿದೆ. ಈ ಹಬ್ಬದ ಆಚರಣೆಯೂ ವಿಚಿತ್ರವಾಗಿದೆ.
ದೇವರಿಗೆ ಅವಲಕ್ಕಿಯ ನೈವೇದ್ಯ ಅರ್ಪಣೆ
ಹಬ್ಬದ ದಿನ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ ಪೊಲವಂದೆರೆ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಊರಿನ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೊಲವಪ್ಪಂಡ ಕೋಟದಲ್ಲಿ (ದೇವಸ್ಥಾನ) ಊರಿನ ಜನರು, ಹೆಂಗಸರು, ಮಕ್ಕಳು ಸೇರುತ್ತಾರೆ. ಇದಕ್ಕೆ ಮುಂಚೆ ಇಬ್ಬರು ಕೊಡವ ಪೂಜಾರಿಗಳು (ಒಬ್ಬರು ಚಮ್ಮಟೀರ ಹಾಗೂ ಮತ್ತೊಬ್ಬರು ಮೂಕಳೇರ) ಮೂಕಳೇರ ಬಲ್ಯಮನೆಯ ಹತ್ತಿರದ ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸಿ ನಂತರ ಕೆರೆಯ ಹತ್ತಿರದಲ್ಲಿ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಇದನ್ನು ಕುಟ್ಟಿ ಅವಲಕ್ಕಿಯನ್ನು ಮಾಡಿ ದೇವರಿಗೆ ನೈವೇದ ತಯಾರು ಮಾಡುತ್ತಾರೆ.
ಈ ಇಬ್ಬರು ಪೂಜಾರಿಗಳು ಹಬ್ಬದ ದಿನದಂದು ಬೆಳಿಗ್ಗೆಯಿಂದಲೇ ಉಪವಾಸ ಮತ್ತು ಕಟ್ಟುನಿಟ್ಟಿನ ವೃತ ಮಾಡುತ್ತಾರೆ. ನೀರು ಸಹ ಸೇವಿಸುವಂತಿಲ್ಲ. ಬಳಿಕ ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಅವುಲ್ ಎಂಬ ಪ್ರಸಾದವನ್ನು ನೀಡುತ್ತಾರೆ. ವಿಶೇಷ ಪೂಜೆಯ ನಂತರ ಸಂಜೆಯಾಗುತ್ತಿದ್ದಂತೆ ಜೋಡುಬೀಟಿಯಲ್ಲಿರುವ ಪ್ರಮುಖ ದೇವಾಲಯದಲ್ಲಿ ಒಂದಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುತ್ತಾರೆ (ಇಲ್ಲಿ ಹೆಂಗಸರು ಪ್ರವೇಶಿಸುವಂತಿಲ್ಲ) ಈ ಎಲ್ಲ ದೇವಸ್ಥಾನಕ್ಕೂ ಬ್ರಾಹ್ಮಣರ ಪೂಜೆ ನಿಷೇಧವಾಗಿದೆ. ಈ ದೇವಸ್ಥಾನದ ಸುತ್ತ ಶುಚಿಗೊಳಿಸಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಲಾಗುತ್ತದೆ. ಸಂಪ್ರದಾಯವನ್ನು ಮುರಿದರೆ ಹೆಜ್ಜೇನು ಕಡಿಯುತ್ತದೆ ಎಂಬ ಭಯವೂ ಇದೆ.

ದೇವರಿಗೆ ಈಡು ಕಾಯಿಯ ಹರಕೆ ಸಲ್ಲಿಕೆ
ವಿಶೇಷ ಪೂಜೆ ಬಳಿಕ ಇಲ್ಲಿ ಸಾವಿರಾರು ತೆಂಗಿನ ಕಾಯಿಯನ್ನು ಈಡು ಕಾಯಿ ರೂಪದಲ್ಲಿ ಭಕ್ತರು ಒಡೆದು ಹರಕೆ ತಿರಿಸಿಕೊಳ್ಳುತ್ತಾರೆ. ನಂತರ ಇಲ್ಲಿಂದ ಹೊರಟು ಸಮೀಪದ ನಿಗದಿತ ಜಾಗದಲ್ಲಿ ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಬಳಿಕ ಹೊರಟು ಮೂಕಳೇರ ಬಲ್ಯ(ಹಿರಿ)ಮನೆಯಲ್ಲಿ ಸಾಮೂಹಿಕ ಭೋಜನ ಮಾಡಿ ನಂತರ ಚಮ್ಮಟೀರ ಬಲ್ಯಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ (ಆಟ) ಹಾಕಿ ಮನೆ ಮನೆಗೆ ತೆರಳಲಾಗುತ್ತದೆ. ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯ(ಹಿರಿ)ಮನೆಯಲ್ಲಿ ಈ ಕಳಿ(ಆಟ) ರಾತ್ರಿಯಿಡಿ ನಡೆಯುತ್ತದೆ. ನಂತರ ಅಲ್ಲಿನ ಅಂಬಲ(ಮೈದಾ)ದಲ್ಲಿ ಮುಂಜಾನೆ ಮನೆಕಳಿ ಮುಕ್ತಾಯವಾಗುತ್ತದೆ.
ಮಾರನೆಯ ದಿನದ ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ದೇವರ ಕೆರೆಯ ಸಮೀಪದ ಅಂಬಲ(ಮೈದಾನ)ದಲ್ಲಿ ಸೇರಿ ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಊರಿನವರು ಆಲಂಗಿಸಿಕೊಂಡು ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆಹಾಕುತ್ತಾರೆ.
ಪರಸ್ಪರ ಕೆಸರು ಎರಚಾಡುತ್ತಾ ನೃತ್ಯ
ಇದಾದ ನಂತರ ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಹಿರಿಯರು ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊಂದು ಬೆತ್ತದ ಕೋಲು ನೀಡಲಾಗುತ್ತದೆ.
ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ, ಈ ಅಂಬಲದಲ್ಲಿ ಸುಮಾರು ಒಂದು ಗಂಟೆ ಕಾಲ ಪರಸ್ಪರ ಕೆಸರು ಎರಚಿ ಸಂಭ್ರಮಿಸುತ್ತಾರೆ. ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಹರಕೆ, ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications