ಸಕಲ ಸೌಲಭ್ಯ ವಂಚಿತ ಕುಗ್ರಾಮ ಕೊಡಗಿನ ಅಂಚೆತಿಟ್ಟು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜುಲೈ 20 : ಮುಂದುವರೆದ ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ವಿಶ್ವವೇ ಅಂಗೈಯಲ್ಲಿದೆ. ಆದರೆ ಇಂತಹ ಆಧುನಿಕ ಯುಗದಲ್ಲಿಯೂ ಜನ ರಸ್ತೆ, ನೀರು, ವಿದ್ಯುತ್ ಇಲ್ಲದೆ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯಸ್ಯಸತ್ಯ.

ಇಂತಹ ಜನರನ್ನು ನೋಡಬೇಕಾದರೆ ನಾವು ಕೊಡಗಿಗೊಂದು ಸುತ್ತು ಹೊಡೆಯಬೇಕು. ಇಲ್ಲಿ ಮೇಲ್ನೋಟಕ್ಕೆ ಶ್ರೀಮಂತ ಕಾಫಿ ಬೆಳೆಗಾರರಿಂದ ತುಂಬಿ ತುಳುಕುವಂತೆ ಕಂಡು ಬಂದರೂ, ಅರಣ್ಯದಂಚಿನ ಮತ್ತು ಅರಣ್ಯದೊಳಗೆ ಇವತ್ತಿಗೂ ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಆದಿವಾಸಿಗಳನ್ನು ನಾವು ಕಾಣಬಹುದಾಗಿದೆ.

Read also :'ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ!'

ಸುರಿಯುವ ಮಳೆ, ಗಾಳಿ, ಚಳಿಗೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ಆದಿವಾಸಿಗಳು ಜೀವನ ಕಳೆಯುವ ಸ್ಥಿತಿ ಇಂದಿಗೂ ಇದೆ. ಹಾಗೆ ನೋಡಿದರೆ ಕೊಡಗು ಜಿಲ್ಲೆಯಲ್ಲಿ ಸೌಲಭ್ಯವಂಚಿತ ಹತ್ತಾರು ಹಾಡಿಗಳಿದ್ದು, ಅವುಗಳಲ್ಲಿ ಅಂಚೆತಿಟ್ಟು ಪ್ರಮುಖವಾದದ್ದು.

ಸಿದ್ದಾಪುರ ಬಳಿಯ ಮಾಲ್ದಾರೆ ಮುಖ್ಯ ರಸ್ತೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಅರಣ್ಯದೊಳಗಿರುವ ಈ ಹಾಡಿಯಲ್ಲಿ ಜೇನುಕುರುಬ, ಸೋಲಿಗ, ಬೆಟ್ಟೆಕುರುಬ, ಪಂಜಿರ ಎರವ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ.

Anchetittu village remote from all modern facilities

ಇಲ್ಲಿ ಆನೆ ಕಂದಕಗಳನ್ನು ತೋಡಲಾಗಿದ್ದು, ಸೇತುವೆ ವ್ಯವಸ್ಥೆ ಇಲ್ಲದ್ದರಿಂದ ಮರದ ತುಂಡುಗಳನ್ನು ಅಡ್ಡಲಾಗಿಟ್ಟು ನಿವಾಸಿಗಳೇ ಸೇತುವೆ ಮಾಡಿಕೊಂಡಿದ್ದಾರೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆನೆಕಂದಕಕ್ಕೆ ಬೀಳುವುದು ಖಂಚಿತ!

ಕಳೆದ 75 ವರ್ಷಗಳಿಂದ ವಾಸಿಸುತ್ತಾ ಬಂದಿರುವ ಇಲ್ಲಿನ ಜನರಿಗೆ ರಾಜಕಾರಣಿಗಳು ಮತದಾನದ ಹಕ್ಕು ಮಾಡಿಕೊಟ್ಟಿದ್ದಾರೆಯೇ ವಿನಃ ಮತ್ಯಾವುದೇ ಸೌಲಭ್ಯ ನೀಡಿಲ್ಲ. ನಮಗೂ ಮೂಲಭೂತ ಸೌಕರ್ಯ ಮಾಡಿಕೊಡಿ ಎನ್ನುವುದು ಆದಿವಾಸಿಗಳ ಕಳಕಳಿಯ ಮನವಿಯಾಗಿದೆ.

Read also :ದುಬಾರೆ ಅರಣ್ಯ ಪ್ರವಾಸಿಗರಿಗೆ ಸ್ವರ್ಗ, ಗಿರಿಜನರಿಗೆ ನರಕ

ಚುನಾವಣೆ ಬಂದಾಗ ಹಣ ಹೆಂಡ ನೀಡಿ ಮತಹಾಕಿಸಿಕೊಳ್ಳುವ ರಾಜಕಾರಣಿಗಳು ಆ ನಂತರ ಮರೆಯುವುದರಿಂದ ಅಂಚೆತಿಟ್ಟು ನಿವಾಸಿಗಳು ಸರ್ಕಾರದ ಸೌಲಭ್ಯ ದೊರೆಯದೆ ಪರದಾಡುವಂತಾಗಿದೆ. ಆದಿವಾಸಿಗಳು ಸೌಲಭ್ಯಕ್ಕಾಗಿ ಎಷ್ಟೇ ಗೋಗರೆದರೂ ಅದು ಅರಣ್ಯರೋದನವಾಗಿದೆ.

Anchetittu village remote from all modern facilities

ಇನ್ನು ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಮತ್ತು ಮಕ್ಕಳು ಹಾಡಿಯಿಂದ ಹೊರ ಬರಲು ಭಯ ಪಡಬೇಕಾಗುತ್ತದೆ. ಇನ್ನು ಶಾಲೆಗೆ ಕಾಲುದಾರಿಯಲ್ಲಿ 3 ಕಿ.ಮೀ ನಡೆದು ಮಾಲ್ದಾರೆಗೆ ಬರಬೇಕಾಗಿದೆ. ಬೆಳಿಗ್ಗೆ ಶಾಲೆಗೆ ತೆರಳಿದ ಮಕ್ಕಳು ಮರಳಿ ಸಂಜೆ ಮನೆ ತಲುಪುವವರೆಗೆ ಪೋಷಕರು ಜೀವಕೈಯಲ್ಲಿಡಿದುಕೊಂಡು ಕಾಯಬೇಕು.

Read also :ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು

ಹಾಡಿಯಲ್ಲಿ ಯಾರಾದರು ಅನಾರೋಗ್ಯಕ್ಕೀಡಾದರೆ ಹೆಗಲ ಮೇಲೆ ಹೊತ್ತು ತರಬೇಕು. ಆಯುಷ್ಯ ಗಟ್ಟಿ ಇದ್ದರೆ ಮಾತ್ರ ಆತ ಬದುಕುತ್ತಾನೆ, ಇಲ್ಲಾಂದ್ರೆ ದಾರಿ ಮಧ್ಯೆ ಶಿವನಪಾದ ಸೇರುವುದರಲ್ಲಿ ಸಂಶಯವಿಲ್ಲ! ರಾತ್ರಿ ಬೆಳಕಿಗೆ ಸೀಮೆಣ್ಣೆ ದೀಪವನ್ನು ಇಲ್ಲಿನವರು ಆಶ್ರಯಿಸಿದ್ದಾರೆ. ಕೆಲವೊಮ್ಮೆ ಸೀಮೆಣ್ಣೆ ಸಿಗದಿದ್ದಾಗ ಸೌದೆಯಿಂದ ಬೆಂಕಿ ಉರಿಸಿಕೊಂಡು ರಾತ್ರಿಯನ್ನು ಕಳೆಯಬೇಕಾಗುತ್ತದೆ.

ಒಟ್ಟಾರೆ ಕಷ್ಟದಲ್ಲೇ ಜೀವನ ಸಾಗಿಸುತ್ತಿರುವ ಆದಿವಾಸಿಗಳ ಬದುಕಿನಲ್ಲಿ ಒಳ್ಳೆಯ ದಿನಗಳು ಅದ್ಯಾವಾಗ ಬರುತ್ತೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಮುಖ್ಯಮಂತ್ರಿ ಸಮೇತ, ಸಂಬಂಧಿಸಿದ ರಾಜಕಾರಣಿಗಳು ಉತ್ತರ ನೀಡುವರೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even though Madikeri is considered as rich state with coffee planters spread all over the district, there is one village called Anchetittu, which is still remote from all modern facilities. The villagers don't have roads, water, electricity, hospitals etc. But, the govt representatives are least bothered about providing them the basic necessities.
Please Wait while comments are loading...