ಕೊಡಗು; ಅಮೆರಿಕದಿಂದ ಬಂತು ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್
ಮಡಿಕೇರಿ, ಮೇ 23; ಅಮೆರಿಕದಿಂದ ಕೊಡಗು ಜಿಲ್ಲೆಗೆ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಕೊಡುಗೆಯಾಗಿ ನೀಡಲಾಗಿದೆ. ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಗೆ 5 ಮತ್ತು 10 ಲೀಟರ್ ಸಾಮರ್ಥ್ಯದ 53 ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ನೀಡಲಾಗಿದೆ.
ನ್ಯೂಜೆರ್ಸಿಯಲ್ಲಿ ಮನೋ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ಡಾ. ಚೊಟ್ಟೇರ ಶೋಭಾ ಟುಟ್ಟು ಹಾಗೂ ಅಮೆರಿಕದಲ್ಲಿನ gofundme.org ವತಿಯಿಂದ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್‌ಗಳನ್ನು ಕೊಡಗೆಯಾಗಿ ಕೊಡಲಾಗಿದೆ.
ನಾಪೋಕ್ಲು ಗ್ರಾಮದ ಡಾ.ಸಣ್ಣುವಂಡ ಕಾವೇರಪ್ಪ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕಾರ್ಯಪ್ಪ, ಡಾ. ವಿಶಾಲ್ ಕುಮಾರ್, ಡಾ. ಮಂಜುನಾಥ್, ಡಾ. ರೂಪೇಶ್ ಗೋಪಾಲ್ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಹಸ್ತಾಂತರದ ಸಂದರ್ಭದಲ್ಲಿ ಇದ್ದರು.

ಅವರೇಮಾದಂಡ ಕೆ.ಮೊಣ್ಣಪ್ಪ (ನಿವೃತ್ತ ಐಎಎಸ್ ಅಧಿಕಾರಿ) ಅವರ ಪ್ರಯತ್ನದಿಂದ ಅಮೆರಿಕದಿಂದ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಡಾ.ಚೊಟ್ಟೇರ ಶೋಭಾ ಟುಟ್ಟು ಈ ಉಪಕರಣಗಳನ್ನು ಕಳುಹಿಸಿದ್ದಾರೆ ಎಂದು ಡಾ. ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.
1984ರಲ್ಲಿ ದೆಹಲಿಯ ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುತ್ತಿದ್ದ ಡಾ.ಶುಭ ವರ್ಮ, ಮೀರಾ ವೆಲ್ಸ್ ಇತರ ಭಾರತೀಯ ವೈದ್ಯರು ಇದಕ್ಕೆ ಸಹಕಾರ ನೀಡಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೇರಿದಂತೆ ಅಮೆರಿಕದಲ್ಲಿರುವ ವೈದ್ಯರು ವಾಟ್ಸ್ಆಪ್ ಗುಂಪು ಮಾಡಿ, ಹಲವು ಭಾರಿ ಚರ್ಚಿಸಿ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ ಎಂದು ಡಾ. ಕಾವೇರಪ್ಪ ಹೇಳಿದ್ದಾರೆ.












Click it and Unblock the Notifications