ಮಡಿಕೇರಿಯ ರೋಶನಾರಾದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮದಿನಾಚರಣೆ
ಮಡಿಕೇರಿ, ಜನವರಿ 28: ಭಾರತ ಸೇನಾ ಪಡೆಯ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 121ನೇ ಜನ್ಮದಿನಾಚರಣೆಯನ್ನು ಮಡಿಕೇರಿಯಲ್ಲಿರುವ ಕಾರ್ಯಪ್ಪ ಅವರ ಮೆಚ್ಚಿನ ಮನೆಯಾಗಿದ್ದ ರೋಶನಾರ ಬಳಿಯ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ಆಚರಿಸಲಾಯಿತು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಭಜನೆಗಳನ್ನು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಹಾಡಿದರಲ್ಲದೇ, ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ದೇಶಭಕ್ತಿಯ ಘೋಷವಾಕ್ಯಗಳನ್ನು ವಾಚಿಸಿದರು. ಕಾರ್ಯಪ್ಪ ಅವರ ಸಮಾಧಿ ಸ್ಥಳಕ್ಕೆ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಪುತ್ರಿ ನಳಿನಿ, ನಿವೃತ್ತ ಏರ್ ಚೀಫ್ ಮಾರ್ಷಲ್ ಫಾಲಿ ಮೇಜರ್, ಜರೀನ್ ಮೇಜರ್, ನಿವೃತ್ತ ಏರ್ ಮಾಷ9ಲ್ ಓಸ್ಮಾನ್ ಸೇರಿದಂತೆ ಹಲವು ಗಣ್ಯರು ಪುಪ್ಪಾರ್ಚನೆ ಮಾಡಿದರು.

ಈ ಸಂದರ್ಭ ಮಾತನಾಡಿದ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ತನ್ನ ತಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸದಾ ದೇಶ ಮೊದಲು, ಉಳಿದೆಲ್ಲವೂ ನಂತರ ಎಂಬ ತತ್ವಕ್ಕೆ ಬದ್ಧರಾಗಿದ್ದರು. ತಾವು ನಂಬಿದ್ದ ಆದರ್ಶದಂತೆಯೇ ಕೊನೆಯವರೆಗೂ ಜೀವಿಸಿದರು ಎಂದು ಸ್ಮರಿಸಿದರು. ಈ ಸಂದರ್ಭ ಫೀಲ್ಡ್ ಮಾರ್ಷಲ್ ಜೀವನದ ಕುರಿತಂತೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಕಾರ್ಯಪ್ಪ ಪುತ್ರಿ ನಳಿನಿ, ಸೊಸೆ ಮೀನಾ ಕಾರ್ಯಪ್ಪ ವಿತರಿಸಿದರು.












Click it and Unblock the Notifications