Madhugiri Elections: ಬಿಜೆಪಿಯ ಪ್ರಭಾವವೇ ಇಲ್ಲದ ತುಮಕೂರು ಜಿಲ್ಲೆಯ ಕ್ಷೇತ್ರವಿದು!
ತುಮಕೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರ ಮಧುಗಿರಿ. ಈ ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ರಾಜ್ಯ ರಾಜಕಾರಣದಲ್ಲಿ ಉನ್ನತ ಮಟ್ಟದ ತನಕ ಏರಿದ್ದಾರೆ. ಸ್ವಾತಂತ್ರ ಪೂರ್ವದಲ್ಲಿ ಮಧುಗಿರಿಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಇತ್ತು. ಕನ್ನಡದ ಆಸ್ತಿಯಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಉಪವಿಭಾಗಾಧಿಕಾರಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡಿದ್ದರು. ಇಬ್ಬರನ್ನು ಹೊರತುಪಡಿಸಿದರೆ ಕ್ಷೇತ್ರದಿಂದ ಆಯ್ಕೆಯಾದ ಯಾವ ಶಾಸಕರು ಎರಡನೇ ಅವಧಿಗೆ ಗೆದ್ದು ಬಂದಿಲ್ಲ. ಕ್ಷೇತ್ರದಿಂದ ಗೆದ್ದ ಇಬ್ಬರು ಸಚಿವರಾಗಿ ಕೆಲಸ ಮಾಡಿದ್ದಾರೆ.
ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಸಿ. ಚೆನ್ನಿಗಪ್ಪ ಪುತ್ರ ಡಿ. ಸಿ. ಗೌರಿ ಶಂಕರ್, ಕಾಂಗ್ರೆಸ್‌ನ ಕೆ. ಎನ್. ರಾಜಣ್ಣ ಹೀಗೆ ಹಲವು ನಾಯಕರು ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 15 ಬಾರಿ ಚುನಾವಣೆ ಎದುರಿಸಿದ ಕ್ಷೇತ್ರದಲ್ಲಿ ಎರಡು ಬಾರಿ ಮಾತ್ರ ಸ್ಥಳೀಯರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅನಿತಾ ಕುಮಾರಸ್ವಾಮಿ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

1957ರಲ್ಲಿ ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳು ದ್ವಿ-ಸದಸ್ಯ ಕ್ಷೇತ್ರವಾಗಿತ್ತು. ಆಗ ಕೊರಟಗೆರೆ (ಪರಿಶಿಷ್ಟ ಜಾತಿ), ಮಧುಗಿರಿ (ಸಾಮಾನ್ಯ) ಕ್ಷೇತ್ರವಾಗಿದ್ದವು. 1962ರಲ್ಲಿ ಕ್ಷೇತ್ರ ಪುನರ್ ವಿಂಗಡನೆಗೊಂಡಾಗ ಕೊರಟಗೆರೆ, ಮಧುಗಿರಿ ಬೇರೆ-ಬೇರೆ ಕ್ಷೇತ್ರಗಳಾದವು. 1978ರಲ್ಲಿ ಮಧುಗಿರಿ ಕ್ಷೇತ್ರ ಪರಿಶಿಷ್ಟ ಮೀಸಲು ಕ್ಷೇತ್ರವಾಗಿ ಬದಲಾಯಿತು. ಜೆಎನ್‌ಪಿ ಪಕ್ಷದ ರಾಜವರ್ಧನ್ 1983, 1985ರಲ್ಲಿ ಶಾಸಕರಾದರು. 1989ರ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ಕಾಂಗೆಸ್‌ನ ಡಾ. ಜಿ. ಪರಮೇಶ್ವರ ರಾಜವರ್ಧನ್ ಸೋಲಿಸಿ ವಿಧಾನಸಭೆ ಪ್ರವೇಶ ಮಾಡಿದರು.
1994ರಲ್ಲಿ ಡಾ. ಪರಮೇಶ್ವರ ಸೋಲಿಸಿದ ಜನತಾ ಪಕ್ಷದ ಗಂಗಹನುಮಯ್ಯ ಶಾಸಕರಾದರು. 1999 ಮತ್ತು 2004ರಲ್ಲಿ ಮತ್ತೆ ಡಾ. ಜಿ. ಪರಮೇಶ್ವರ ಗೆದ್ದರು. 2008ರಲ್ಲಿ ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಬೆಳ್ಳಾವಿ ಕ್ಷೇತ್ರದ ದೊಡ್ಡೇರಿ ಹೋಬಳಿ ಮಧುಗಿರಿಗೆ ಸೇರಿತು. ಮಧುಗಿರಿ ಕ್ಷೇತ್ರದಲ್ಲಿದ್ದ ಪುರವರ ಹೋಬಳಿ ಕೊರಟಗೆರೆ ಮೀಸಲು ಕ್ಷೇತ್ರವಾಯಿತು.

ಕ್ಷೇತ್ರ ಪುನರ್ ವಿಂಗಡನೆ ಬಳಿಕ ನಡೆದ ಚುನಾವಣೆಯಲ್ಲಿ ಡಾ. ಜಿ. ಪರಮೇಶ್ವರ ಕೊರಟಗೆರೆ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗೆದ್ದರು. ಮಧುಗಿರಿಯಲ್ಲಿ ಮಾಜಿ ಸಚಿವ ಸಿ. ಚೆನ್ನಿಗಪ್ಪ ಪುತ್ರ, ಜೆಡಿಎಸ್ ಅಭ್ಯರ್ಥಿ ಡಿ. ಸಿ. ಗೌರಿ ಶಂಕರ್ 51,971 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಕೆ. ರಾಜಣ್ಣ 51,408 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದರು. ಆದರೆ ಚುನಾವಣೆಯಲ್ಲಿ ಗೆದ್ದ ಕೆಲವೇ ತಿಂಗಳಿನಲ್ಲಿ ಆಪರೇಷನ್ ಕಮಲದ ಬಲೆಗೆ ಬಿದ್ದ ಡಿ. ಸಿ. ಗೌರಿ ಶಂಕರ್ ಶಾಸಕ ಸ್ಥಾನ ತೊರೆದು ಬಿಜೆಪಿ ಸೇರಿದರು.
2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ. ಸಿ. ಚೆನ್ನಿಗಪ್ಪ (ಬಿಜೆಪಿ), ಕೆ. ಎನ್. ರಾಜಣ್ಣ (ಕಾಂಗ್ರೆಸ್), ಅನಿತಾ ಕುಮಾರಸ್ವಾಮಿ (ಜೆಡಿಎಸ್) ಅಭ್ಯರ್ಥಿಗಳಾದರು. ಅನಿತಾ ಕುಮಾರಸ್ವಾಮಿ ಗೆಲುವು ಕಂಡರು. ಮಧುಗಿರಿ ಕ್ಷೇತ್ರದಿಂದ ಗೆದ್ದ ಏಕೈಕ ಮಹಿಳಾ ಶಾಸಕಿ ಎಂಬ ಹಿರಿಮೆ ಸಹ ಅನಿತಾ ಕುಮಾರಸ್ವಾಮಿ ಅವರದ್ದು. ಆದರೆ 2013ರಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿಲ್ಲ. ಕಾಂಗ್ರೆಸ್‌ನ ಕೆ. ಎನ್. ರಾಜಣ್ಣ, ಜೆಡಿಎಸ್‌ನ ಎಂ. ವಿ. ವೀರಭದ್ರಯ್ಯ ಮುಖಾಮುಖಿಯಾದರು. ಕೆ. ಎನ್. ರಾಜಣ್ಣ 75,086 ಮತಗಳನ್ನು ಪಡೆದು ಗೆದ್ದರು. ಎಂ. ವಿ. ವೀರಭದ್ರಯ್ಯ 60,659 ಮತಗಳನ್ನು ಪಡೆದರು. ಬಿಜೆಪಿಯ ಬಿ. ಸುಮಿತ್ರಾ ದೇವಿ 1,741 ಮತಗಳನ್ನು ಪಡೆದರು. ಈ ಮೂಲಕ ಮಧುಗಿರಿಯಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಪೈಪೋಟಿಗೆ ಸಾಕ್ಷಿಯಾಯಿತು.
2018ರ ಚುನಾವಣೆಯಲ್ಲಿ ಎಂ. ವಿ. ವೀರಭದ್ರಯ್ಯ 88,521 ಮತಗಳನ್ನು ಪಡೆಯುವ ಮೂಲಕ ಗೆದ್ದು, ಕಾಂಗ್ರೆಸ್‌ನ ಕೆ. ಎನ್. ರಾಜಣ್ಣ (69,947) ಸೋಲಿಸಿ ಹಿಂದಿನ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡರು. ಬಿಜೆಪಿಯ ರಮೇಶ್ ರೆಡ್ಡಿ ಪಡೆದಿದ್ದು ಕೇವಲ 2,911 ಮತಗಳು. 2023ರ ಚುನಾವಣೆಗೆ ಜೆಡಿಎಸ್ ಹಾಲಿ ಶಾಸಕ ಎಂ. ವಿ. ವೀರಭದ್ರಯ್ಯ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕಾಂಗ್ರೆಸ್ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ, ಆದರೆ ಮಧುಗಿರಿಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಮಧುಗಿರಿ ಕ್ಷೇತ್ರದಲ್ಲಿ ಪ್ರತಿ ಬಾರಿಯು ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ. 2018ರಲ್ಲಿ ಬಿಜೆಪಿ ಪಡೆದ ಮತಗಳು 2,911, 2013ರಲ್ಲಿ 1,741 ಮತ್ತು 2008ರಲ್ಲಿ 2,911 ಮತಗಳು. ಮಧುಗಿರಿಯಿಂದ ಶಾಸಕಿಯಾಗಿದ್ದ ಅನಿತಾ ಕುಮಾರಸ್ವಾಮಿ ಹಾಲಿ ರಾಮನಗರದ ಶಾಸಕರು. ಡಿ. ಸಿ. ಗೌರಿ ಶಂಕರ್ ಈಗ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರು. ಡಾ. ಜಿ. ಪರಮೇಶ್ವರ ಕೊರಟಗೆರೆ ಕ್ಷೇತ್ರದ ಶಾಸಕರು. 1967ರಲ್ಲಿ ಆಯ್ಕೆಯಾದ ಐ. ಡಿ. ಹಳ್ಳಿಯ ಜಿ. ಟಿ. ಗೋವಿಂದ ರೆಡ್ಡಿ, 1972ರಲ್ಲಿ ದೊಡ್ಡೇರಿ ಹೋಬಳಿ ರಂಗಾಪುರ ಗ್ರಾಮದ ಆರ್. ಚಿಕ್ಕಯ್ಯ ಮಾತ್ರ ಮಧುಗಿರಿಯಿಂದ ಆಯ್ಕೆಯಾದ ಸ್ಥಳೀಯರು.
ರಾಜಕೀಯ ಸೇಡು; ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿಯೂ ಆಗಿದ್ದ ಡಾ. ಜಿ. ಪರಮೇಶ್ವರ ಹಾಲಿ ಕೊರಟಗೆರೆ ಕ್ಷೇತ್ರದ ಶಾಸಕರು. ಪರಮೇಶ್ವರ ತಂದೆ ಹೆಚ್. ಎಂ. ಗಂಗಾಧರಯ್ಯ ಕೊರಟಗೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದಾಗ ಮಾಜಿ ಸಚಿವ ರಾಜವರ್ಧನ್ ತಂದೆ ಚನ್ನಿಗರಾಮಯ್ಯ ವಿರುದ್ಧ ಮೂರು ಬಾರಿ ಸೋಲು ಕಂಡಿದ್ದರು. ಡಾ. ಜಿ. ಪರಮೇಶ್ವರ ಮಧುಗಿರಿ ಮೀಸಲು ಕ್ಷೇತ್ರವಾಗಿದ್ದಾಗ ರಾಜವರ್ಧನ್ ಮತ್ತು ಅವರ ಪುತ್ರ ಅಶೋಕ ರಾಜವರ್ಧನ್ ಸೋಲಿಸಿ ತಮ್ಮ ತಂದೆ ಗಂಗಾಧರಯ್ಯ ಸೋಲಿಸಿದ ಸೇಡು ತೀರಿಸಿಕೊಂಡರು.
Madhugiri Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಂ. ವಿ. ವೀರಭದ್ರಯ್ಯ (ಜೆಡಿಎಸ್) | 88,521 | ಕೆ. ರಾಜಣ್ಣ (ಕಾಂಗ್ರೆಸ್) | 69,521 |
| 2013 | ಕೆ. ರಾಜಣ್ಣ (ಕಾಂಗ್ರೆಸ್) | 75,086 | ಎಂ. ವಿ. ವೀರಭದ್ರಯ್ಯ (ಜೆಡಿಎಸ್) | 60,659 |
| 2008 | ಡಿ. ಸಿ. ಗೌರಿ ಶಂಕರ್ (ಜೆಡಿಎಸ್) | 51,971 | ಕೆ. ರಾಜಣ್ಣ (ಕಾಂಗ್ರೆಸ್) | 51,408 |
ಮಧುಗಿರಿ ಕ್ಷೇತ್ರದ ಒಟ್ಟು ಮತದಾರರು 1,90,297. ಪುರುಷರು 96,448, ಮಹಿಳೆಯರು 93,765, ಇತರರು 3.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications