ಯುಪಿ ಚುನಾವಣೆ: ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ತೊರೆದಿದ್ದು ಯಾಕೆ?
ಲಕ್ನೋ ಜನವರಿ 12: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತ ಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರಿ ಮುಖಭಂಗ ಅನುಭವಿಸಿದೆ. ಯುಪಿ ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ಗಂಟೆಗಳಲ್ಲಿ ಅವರ ನಿಕಟವರ್ತಿಗಳಾದ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯ ಅವರು ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ. ಇದರಿಂದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಅಷ್ಟಕ್ಕೂ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ತೊರೆದಿದ್ದು ಯಾಕೆ? ಅನ್ನೋದಕ್ಕೆ ಕೆಲ ಪ್ರಮುಖ ಕಾರಣಗಳು ಇವೆ.
ಮುಖ್ಯವಾಗಿ ಕೆಲ ತಿಂಗಳಿಂದ ಮೌರ್ಯ ಅವರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಮೌರ್ಯ ಅವರಿಗೆ ನಂಬಿಕೆ ಇರಲಿಲ್ಲ. ಜೊತೆಗೆ ಯೋಗಿ ಕಾರ್ಯಶೈಲಿಯ ಬಗ್ಗೆ ಅವರು ಕೋಪಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೌರ್ಯ ಅವರು ಕುಶಿನಗರದ ಪದ್ರೌನಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಅವರ ಪುತ್ರಿ ಸಂಘಮಿತ್ರ ಮೌರ್ಯ ಬದೌನ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ಪುತ್ರ ಅಶೋಕ್‌ಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳುತ್ತಿದ್ದರು. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲು ಬಿಜೆಪಿ ಒಲವು ತೋರಲಿಲ್ಲ.

ಜೊತೆಗೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕೂಡ ಸ್ವಾಮಿ ಪ್ರಸಾದ್ ಮೌರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಜ್ಯ ಸರ್ಕಾರದ ಕೆಲವು ವಿಷಯಗಳ ಬಗ್ಗೆ ಕೇಂದ್ರ ನಾಯಕರಿಗೆ ನಿರಂತರವಾಗಿ ದೂರು ನೀಡುತ್ತಿದ್ದರು. ಚುನಾವಣೆಯ ನಂತರ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಬೇರೆಯವರಿಗೂ ಸಿಎಂ ಪಟ್ಟ ನೀಡಿ ಸಿಎಂ ಬದಲಾಗಬಹುದು. ಇದೆಲ್ಲವನ್ನು ಕೇಂದ್ರ ನಾಯಕತ್ವ ನಿರ್ಧರಿಸುತ್ತದೆ ಎಂದು ಮೌರ್ಯ ಈಗಾಗಲೇ ಹೇಳಿದ್ದಾರೆ. ಇದೆಲ್ಲಾ ಕಾರಣಗಳಿಂದ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇತ್ತಾ ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜೀನಾಮೆಯೊಂದಿಗೆ ಇನ್ನುಳಿ ಅತೃಪ್ತ ಶಾಸಕರು ಮತ್ತು ಸಚಿವರನ್ನು ಕಾಪಾಡಿಕೊಳ್ಳುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಅತೃಪ್ತ 13-14 ಶಾಸಕರು ಮತ್ತು ಸಚಿವರನ್ನು ಉಳಿಸಿಕೊಳ್ಳಲು ಬಿಜೆಪಿ ದೊಡ್ಡ ತೊಂದರೆ ಎದುರಿಸುತ್ತಿದೆ. ಮೂಲಗಳ ಪ್ರಕಾರ, ಸ್ವಾಮಿ ಪ್ರಸಾದ್ ಮೌರ್ಯ ಅವರ ಮನವೊಲಿಸುವ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಸುನೀಲ್ ಬನ್ಸಾಲ್ ಅವರು ಉಳಿದ ಅತೃಪ್ತ ಶಾಸಕರೊಂದಿಗೆ ಮಾತನಾಡಲಿದ್ದಾರೆ.
ಇನ್ನು ಕೆಲವು ಸಚಿವರು ಕೂಡ ಶೀಘ್ರದಲ್ಲೇ ಬಿಜೆಪಿ ತೊರೆಯಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ ಮೌರ್ಯ ರಾಜೀನಾಮೆಗೆ ಹಳೆಯ ಸಮಸ್ಯೆಗಳ ಗುಚ್ಛವೇ ಕಾರಣ. ಯುಪಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಅವರು ಈಗಾಗಲೇ ಕೋಪಗೊಂಡಿದ್ದರು. ಸ್ವಾಮಿ ಪ್ರಸಾದ್ ಮೌರ್ಯ ಅವರು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತೊರೆದು 2017ರ ಯುಪಿ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದರು. ಇದೀಗ 2022ರ ಯುಪಿ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಎಸ್‌ಪಿ ಸೇರಿದ್ದಾರೆ.
Recommended Video
ಚುನಾವಣಾ ಆಯೋಗ ಘೋಷಿಸಿದ ಪ್ರಕಾರ, ಉತ್ತರ ಪ್ರದೇಶದಲ್ಲಿ ಮತದಾನ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ನಡೆಯಲಿದೆ. ಉತ್ತರ ಪ್ರದೇಶ ಚುನಾವಣೆ 2022 ಫಲಿತಾಂಶವನ್ನು ಮಾರ್ಚ್ 10 ರಂದು ಪ್ರಕಟಿಸಲಾಗಲಿದೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಚುನಾವಣಾ ರ್‍ಯಾಲಿಗಳನ್ನು ನಿಷೇಧಿಸಿರುವುದರಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ಮತದಾರರನ್ನು ತಲುಪಲು ತನ್ನ ಮನೆ-ಮನೆ ಪ್ರಚಾರವನ್ನು ಪ್ರಾರಂಭಿಸಿದೆ.












Click it and Unblock the Notifications