ಯುಪಿ ಚುನಾವಣೆ: 'ಸಂಕಲ್ಪ ಪತ್ರ' ಸಿದ್ಧತೆಗೆ ಜನರ ಸಲಹೆ ಪಡೆಯುತ್ತಿದೆ ಬಿಜೆಪಿ
ಲಕ್ನೋ, ಜನವರಿ 03: ಮುಂದಿನ ಎರಡು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಸಿದ್ಧತೆಯನ್ನು ಮಾಡಿಕೊಂಡಿದೆ. ಈ ನಡುವೆ ಬಿಜೆಪಿಯು ಉತ್ತರ ಪ್ರದೇಶ ಚುನಾವಣೆಯ ನಿಟ್ಟಿನಲ್ಲಿ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಮುಂದಾಗಿದೆ. ತನ್ನ "ಸಂಕಲ್ಪ ಪತ್ರ"ಕ್ಕೆ ಬಿಜೆಪಿಯು ಸೋಮವಾರ ಜನರಿಂದಲೇ ಸಲಹೆಯನ್ನು ಪಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಬಿಜೆಪಿ ಸಹ ಮಾಧ್ಯಮ ಉಸ್ತುವಾರಿ ಅಭಯ್ ಸಿಂಗ್, "ಮುಂದಿನ ವಿಧಾನಸಭೆ ಚುನಾವಣೆಯ ನಿಟ್ಟಿನಲ್ಲಿ ಬಿಜೆಪಿಯು ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದು , ಇದಕ್ಕಾಗಿ ಸೋಮವಾರ ಜನರ ಸಲಹೆಯನ್ನು ಪಡೆಯಲಾಗುವುದು. ಈಗಾಗಲೇ ಜನಪ್ರತಿನಿಧಿಗಳಾದ ಸಂಸದರು, ಶಾಸಕರು ಈ ಸಂಕಲ್ಪ ಪತ್ರ ತಯಾರಿಗೆ ಜನರಿಂದ ಅಗತ್ಯ ಸಲಹೆಯನ್ನು ಪಡೆಯುತ್ತಿದ್ದಾರೆ," ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷದ ಘೋಷಣಾ ಪತ್ರ ನಿರ್ಮಾಣ ಸಮಿತಿಯ ಸದಸ್ಯರು ಜನವರಿ 3ರಿಂದ ಸಮಾಜದ ವಿವಿಧ ವರ್ಗಗಳ ವಕೀಲರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕೂಡಾ ಅಭಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಜನವರಿ 3ರಂದು ರಾಜ್ಯ ಸಭೆ ಸಂಸದರಾದ ಸೀಮಾ ದ್ವಿವೇದಿ ಅಲಹಾಬಾದ್‌ನ ಕಾರ್ಮಿಕರು, ಶಿಕ್ಷಣ ತಜ್ಞರು ಹಾಗೂ ವಕೀಲರ ಜೊತೆಯಲ್ಲಿ ಸಂವಾದ ನಡೆಸಲಿದ್ದಾರೆ. ರಾಜ್ಯ ಸಚಿವ ಅತುಲ್ ಗಾರ್ಗ್ ಕಾರ್ಮಿಕರ ಸಲಹೆಯನ್ನು ಪಡೆಯಲಿದ್ದಾರೆ. ಹಾಗೆಯೇ ಪ್ರವಾಸೋದ್ಯಮದಲ್ಲಿ ತೊಡಗಿರುವ ಜನರ ಹಾಗೂ ಆಗ್ರಾದ ಪಾದರಕ್ಷೆ ತಯಾರಿಕ ಕಾರ್ಖಾನೆಗಳ ಜನರಲ್ಲಿ ಸಂವಾದ ನಡೆಸಿ ಈ ಪ್ರಣಾಳಿಕೆಗೆ ಸಲಹೆಯನ್ನು ಪಡೆಯಲಿದ್ದಾರೆ.

ಮಂಗಳವಾರ ಇನ್ನಷ್ಟು ಜನರಿಂದ ಸಲಹೆ
ಇನ್ನು ಮಂಗಳವಾರ ಪುಷ್ಕರ್ ಮಿಶ್ರಾ ಉದ್ಯಮಿಗಳಿಂದ ಸಲಹೆಯನ್ನು ಪಡೆಯಲಿದ್ದಾರೆ. ಇನ್ನು ಸಂಸದ ರಾಜೇಶ್ ವರ್ಮಾ ಸಿನಿಮಾ ಇಂಡಸ್ಟ್ರಿ ಹಾಗೂ ವ್ಯಾಪಾರಿಗಳಿಂದ ಸಹಾರನ್ಪುರದಲ್ಲಿ ಮಾತುಕತೆ ನಡೆಸಿ ಸಲಹೆಯನ್ನು ಪಡೆಯಲಿದ್ದಾರೆ, ಈ ಸಂದರ್ಭದಲ್ಲಿ ಮರದ ಕೆಲಸ ಮಾಡುವವರೂ ಕೂಡಾ ಇರಲಿದ್ದಾರೆ. ಇನ್ನು ರಾಜ್ಯಸಭೆ ಸಂಸದ ವಿಜಯ್‌ಪಾಲ್ ತೋಮರ್ ರೈತರು ಹಾಗೂ ಹಿತ್ತಾಳೆ ಕೈಗಾರಿಕೋದ್ಯಮಿಗಳ ಬಳಿ ಸಂವಾದ ನಡೆಸಲಿದ್ದಾರೆ. ಜನವರಿ 7ರವರೆಗೆ ಈ ಸಂವಾದ ಕಾರ್ಯಕ್ರಮವು ನಡೆಯಲಿದೆ.
ರಾಜ್ಯಸಭಾ ಸಂಸದ ಬ್ರಿಜ್‌ಲಾಲ್, ಯುಪಿ ಹಣಕಾಸು ಸಚಿವ ಸುರೇಶ್ ಖನ್ನಾ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮತ್ತು ಎಂಎಲ್‌ಸಿ ಅರವಿಂದ್ ಕುಮಾರ್ ಶರ್ಮಾ, ಸಂಸದರಾದ ಕಾಂತಾ ಕರ್ದಮ್ ಮತ್ತು ರೀಟಾ ಬಹುಗುಣ ಜೋಶಿ ಕೂಡ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಡಿಸೆಂಬರ್ 15ರಂದು ಬಿಜೆಪಿಯು ಸಂಕಲ್ಪ ಪತ್ರಕ್ಕಾಗಿ ಅಭಿಪ್ರಾಯ ಸಂಗ್ರಹವನ್ನು ಪ್ರಾರಂಭ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದ 30,000 ಸ್ಥಳಗಳಲ್ಲಿ ಪೆಟ್ಟಿಗೆಗಳನ್ನು ಇರಿಸಲಾಗಿದೆ.
ಅಭಿವೃದ್ಧಿ, ಯೋಜನಗಳ ಪಟ್ಟಿಯ ಪ್ರಣಾಳಿಕೆ ಸಾಧ್ಯತೆ
ಭಾನುವಾರ ಮಾಧ್ಯಮಗಳು 2017 ರ ಚುನಾವಣೆಗೂ ಇದಕ್ಕೂ ಏನು ಬದಲಾವಣೆ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "2017 ರಲ್ಲಿ ನಾವು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧವಾಗಿ ಹೋರಾಡಿದ್ದೇವೆ. ಆದರೆ ಈ ಬಾರಿ ನಮ್ಮ ಸರ್ಕಾರ ಮಾಡಿದ ಕಾರ್ಯ ಸಾಧನೆಗಳ ಆಧಾರದ ಮೇಲೆ ಸ್ಫರ್ಧೆ ನಡೆಸುತ್ತೇವೆ," ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಈ ವರ್ಷದ ಚುನಾವಣಾ ಪ್ರಣಾಳಿಕೆಯು ಹೆಚ್ಚಾಗಿ ಅಭಿವೃದ್ಧಿ ಕಾರ್ಯ, ಯೋಜನೆಗಳ ಪಟ್ಟಿಯಂತೆ ಆಗುವ ಸಾಧ್ಯತೆ ಇದೆ. ಇನ್ನು ಕಳೆದ ಬಾರಿಯಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹೆಸರು ಮುಂದೆ ಬರುವ ಸಾಧ್ಯತೆ ಇದೆ. ಆದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಮುಖ್ಯವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವು ಪ್ರಧಾನ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications