ಉತ್ತರ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಒಡೆದು ಆಳುವ ನೀತಿ ನಡೆಯುವುದಿಲ್ಲ ಎಂದ ರಾಕೇಶ್ ಟಿಕಾಯತ್
ಲಕ್ನೋ, ಜನವರಿ 29: ಉತ್ತರ ಪ್ರದೇಶದ ಮತದಾರರು ರೈತರ ಏಳ್ಗೆ ಮತ್ತು ಕಲ್ಯಾಣದ ಬಗ್ಗೆ ಮಾತನಾಡುವವರಿಗೆ ಮಾತ್ರ ಮಣೆ ಹಾಕುತ್ತಾರೆಯೇ ವಿನಃ ಧಾರ್ಮಿಕ ನೆಲೆಯಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಯುಪಿಯಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ವಿದ್ಯುತ್ ದರ ಏರಿಕೆಯಿಂದಾಗಿ ಅನ್ನದಾತರು ಸಂಕಷ್ಟ ಅನುಭವಿಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ರೈತರ ಸಮಸ್ಯೆಗಳು, ನಿರುದ್ಯೋಗ, ಹಣದುಬ್ಬರದಿಂದ ಮಧ್ಯಮ ವರ್ಗದ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಚುನಾವಣೆ ವಿಷಯಗಳಾಗಬೇಕು. ಆದರೆ ಮೊಹಮ್ಮದ್ ಅಲಿ ಜಿನ್ನಾ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುವ ಮೂಲಕ ಹಿಂದೂ-ಮುಸ್ಲಿಮರನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. ಅಲ್ಲದೇ ಹಿಂದೂ-ಮುಸ್ಲಿಂ ಹೆಸರಿನಲ್ಲಿ ಒಡೆದು ಆಳುವುದಕ್ಕೆ ಹೊರಟಿರುವುದು ಅವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನು ಉಂಟು ಮಾಡುತ್ತದೆ ಎಂದು ಟಿಕಾಯತ್ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷ ಮತ್ತು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅನ್ನು ಪಾಕಿಸ್ತಾನದ ಬೆಂಬಲಿಗರು ಮತ್ತು "ಜಿನ್ನಾ ಆರಾಧಕರು" ಎಂದು ಕರೆದಿದ್ದರು. ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದು, ಅಂಥ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

"ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ":
ನಾನು ರಾಜಕಾರಣಿಯಲ್ಲ, ರಾಜಕೀಯ ಪಕ್ಷಗಳಿಂದ ದೂರ ಉಳಿದಿದ್ದೇನೆ, ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅವರ ನಾಯಕರನ್ನು ಪ್ರಶ್ನಿಸುವುದಕ್ಕೆ ಜನರಿಗೆ ಒತ್ತಾಯಿಸುತ್ತೇನೆ, ನಾನು ರೈತರ ಸಮಸ್ಯೆಗಳನ್ನು ಮಾತ್ರ ಪ್ರಸ್ತಾಪಿಸುತ್ತೇನೆ. "ಉತ್ತರ ಪ್ರದೇಶದಲ್ಲಿ ರೈತರು ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಇಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಕಡಿಮೆ ಬೆಲೆಯನ್ನು ಪಡೆಯುವುದು ಮಾತ್ರವಲ್ಲದೇ, ಅವರು ಹೆಚ್ಚಿನ ವಿದ್ಯುತ್ ದರವನ್ನು ಪಾವತಿಸುವಂತಾ ಸ್ಥಿತಿಯಿದೆ," ಎಂದು ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಯಾರು ಗೆಲ್ಲುತ್ತಾರೆ ಎಂದು ಊಹಿಸುವುದಿಲ್ಲ ಎಂದ ಟಿಕಾಯತ್:
ಉತ್ತರ ಪ್ರದೇಶದಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಗೆಲುವು ಸಿಗಲಿದೆ ಎಂಬ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ಹಾಗೆ ಮುಂದುವರಿದ ಅವರು, ಚುನಾವಣೆ ಎಲ್ಲಿಗೆ ಹೋಗುತ್ತದೆ, ಯಾವ ಪಕ್ಷಕ್ಕೆ ಗೆಲ್ಲುತ್ತದೆ ಎಂಬ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಪ್ರಸ್ತುತ ರಾಜ್ಯದ ವಹಿವಾಟುಗಳ ಕುರಿತು ರೈತರು ತೃಪ್ತಿದಾಯಕವಾಗಿಲ್ಲ. ರೈತರ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ರೈತರು ಮತ್ತು ಸಾರ್ವಜನಿಕರು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಮತದಾನ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಜನರ ಸಮಸ್ಯೆಗಳ ಬಗ್ಗೆ ಮಾತನಾಡುವವರಿಗೆ ಬೆಂಬಲ:
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳದ ಮೈತ್ರಿ ಕುರಿತು ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಯಾರು ರೈತರಿಗೆ ವಿರುದ್ಧವಾಗಿ ಇಲ್ಲವೋ ಅಂಥವರಿಗೆ ರೈತರು ಬೆಂಬಲಿಸುತ್ತಾರೆ. ನಾಯಕರು ಹಿಂದೂ ಮುಸ್ಲಿಂರನ್ನು ಒಡೆಯುವ ಪ್ರಯತ್ನದಲ್ಲಿದ್ದಾರೆ. ಆದರೆ ಪಾಕಿಸ್ತಾನ ಮತ್ತು ಜಿನ್ನಾ ಬಗ್ಗೆ ಮಾತನಾಡುವವರ ಹೊರತಾಗಿ ರೈತರ ಸಮಸ್ಯೆಗಳ ಕುರಿತು ಮಾತನಾಡುವವರಿಗೆ ಒತ್ತು ನೀಡುತ್ತಾರೆ ಎಂದು ಟಿಕಾಯತ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications