ದಿನಗೂಲಿ ಕಾರ್ಮಿಕರಿಗೆ ದಿನಕ್ಕೆ 1000ರೂ ಘೋಷಿಸಿದ ಆದಿತ್ಯನಾಥ್ ಸರ್ಕಾರ
ಲಕ್ನೌ, ಮಾರ್ಚ್ 21: ದಿನಗೂಲಿ ಕಾರ್ಮಿಕರಿಗೆ ಪ್ರತಿದಿನ 1000 ರೂಪಾಯಿ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದು, ಸೋಂಕು ಹರಡದಂತೆ ತಡೆಯಲು ಜನರನ್ನು ಮನೆಯಲ್ಲಿ ಉಳಿದುಕೊಳ್ಳಿ ಎಂದು ಸರ್ಕಾರ ವಿನಂತಿಸಿಕೊಂಡಿದೆ. ಇದರಿಂದ ಸಹಜವಾಗಿ ಬೀದಿ ವ್ಯಾಪಾರಿಗಳಿಗೆ, ದಿನಗೂಲಿ ಕಾರ್ಮಿಕರ ದೈನಂದಿನ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಇದನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರ, 15 ಲಕ್ಷ ದಿನಗೂಲಿ ಕಾರ್ಮಿಕರು ಹಾಗೂ 20.37 ಲಕ್ಷ ನಿರ್ಮಾಣ ಕಾರ್ಮಿಕರ ದೈನಂದಿನ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ಪೂರೈಸಲು ದಿನಕ್ಕೆ ಸಾವಿರ ರೂಪಾಯಿ ಪರಿಹಾರವಾಗಿ ನೀಡಲಿದೆ.

ಇದುವರೆಗೂ ಭಾರತದಲ್ಲಿ ಒಟ್ಟು 270ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಒಟ್ಟು 23 ಕೇಸ್‌ಗಳು ದಾಖಲಾಗಿದೆ, ಅದರಲ್ಲಿ 9 ಜನರು ಚೇತರಿಸಿಕೊಂಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಎಲ್ಲರು ಬೆಂಬಲ ನೀಡಿ, ಆ ದಿನ ಮನೆಯಲ್ಲೇ ಉಳಿದುಕೊಂಡು ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡಬೇಕಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.












Click it and Unblock the Notifications