ಯುಪಿ: 'ಬಿಎಸ್‌ಪಿಯ ಗುರುಗಳು ಬಿಜೆಪಿಯಲ್ಲಿ ಕುಳಿತಿದ್ದಾರೆ' ಅಖಿಲೇಶ್ ಯಾದವ್
ಲಕ್ನೋ ಫೆಬ್ರವರಿ 21: ಯುಪಿ ಚುನಾವಣೆಯಲ್ಲಿ ಮಾಯಾವತಿಯವರ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆ ಎಂದು ಆರೋಪಿಸಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಬಿಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯುಪಿಯಲ್ಲಿ ರ್‍ಯಾಲಿ ವೇಳೆ ಮಾತನಾಡಿದ ಅವರು, ಬಿಎಸ್‌ಪಿಯ ಗುರುಗಳು ಬಿಜೆಪಿಯಲ್ಲಿ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. "ಆನೆ (ಬಿಎಸ್‌ಪಿ ಚಿಹ್ನೆ) ಮೇಲೆ ಕುಳಿತವರು ಎಲ್ಲಿ ಬೇಕಾದರೂ ಹೋಗಬಹುದು ಎಂದು ನಾನು ಭಾವಿಸುತ್ತೇನೆ. ಅದರ ಗುರುಗಳು ಯಾವ ಪಕ್ಷದಲ್ಲಿ ಕುಳಿತಿದ್ದಾರೆ? ಅದರ ಗುರುಗಳು ಬಿಜೆಪಿಯಲ್ಲಿ ಕುಳಿತಿದ್ದಾರೆ. ನಾವು ಬಹುಮತದೊಂದಿಗೆ ಸರ್ಕಾರ ರಚಿಸುತ್ತಿದ್ದೇವೆ" ಎಂದು ಅವರು ಬಿಎಸ್‌ಪಿ ಗುರಿಯಾಗಿಸಿಕೊಂಡು ಹೇಳಿದರು.
ಪ್ರಚಾರದಲ್ಲಿ ಬಿಎಸ್‌ಪಿ ಕಾಣೆಯಾಗಿದೆ. ಅದು ಈಗಾಗಲೇ ಯುದ್ಧವನ್ನು ಕಳೆದುಕೊಂಡಿದೆ. ಸಮೀಕ್ಷೆಗಳು ಈ ಬಾರಿ ಚುನಾವಣೆಯಲ್ಲಿ ಪಕ್ಷದ ಪ್ರಭಾವ ಕಡಿಮೆ ಎಂದು ಸೂಚಿಸಿವೆ. ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದರಿಂದ, ಇದು ದ್ವಿಧ್ರುವಿ ಚುನಾವಣೆಯಾಗಿದ್ದು, ಇಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ಮಾತ್ರ ನೇರ ಹಣಾಹಣಿ ಇದೆ ಎಂದು ಚುನಾವಣಾ ವಿಶ್ಲೇಷಕರು ಘೋಷಿಸಿದ್ದಾರೆ.

ಇನ್ನೂ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಗರದ ಹೆಸರು ಬದಲಿಸುವ ವಿಚಾರದಲ್ಲಿ ವಾಗ್ದಾಳಿ ನಡೆಸಿದ ಅಖಿಲೇಶ್ ಅವರು, "ಅವರು (ಸಿಎಂ ಯೋಗಿ ಆದಿತ್ಯನಾಥ್) ಎಲ್ಲದರ ಹೆಸರನ್ನು ಬದಲಾಯಿಸಿದ್ದಾರೆ. ಯೋಗಿ ಸರ್ಕಾರವು ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಮತ್ತು ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಬದಲಾಯಿಸಿದೆ. ಈಗ ಅವರು 'ಬುಲ್ಡೋಜರ್ ವಾಲೇ ಬಾಬಾ' ಆಗಿದ್ದಾರೆ. ಇದು ಬಿಜೆಪಿ ವಿರುದ್ಧ ಸಾರ್ವಜನಿಕರು ಮತ್ತು ನಮ್ಮ ನಡುವಿನ ಸ್ಪಷ್ಟ ಹೋರಾಟವಾಗಿದೆ. ಸಾರ್ವಜನಿಕರೊಂದಿಗೆ ನಾವು ನಿಂತಿದ್ದೇವೆ" ಎಂದಿದ್ದಾರೆ.
ಮತ್ತೊಂದು ರ್‍ಯಾಲಿಯಲ್ಲಿ ಎಸ್‌ಪಿ ಮುಖ್ಯಸ್ಥರು ಬಿಜೆಪಿ ಸರ್ಕಾರ ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. "ಈ ಸರ್ಕಾರ (ಬಿಜೆಪಿ) ಬಡವರ ಸರ್ಕಾರವಲ್ಲ, ಆದರೆ ಶ್ರೀಮಂತರ ಸರ್ಕಾರ, ನಮಗೆ ಸುಲಭವಾಗಿ ಸಾಲ ಸಿಗುವುದಿಲ್ಲ, ನಮ್ಮ ಭೂಮಿ ಮತ್ತು ಮನೆಯನ್ನು ಅಡಮಾನಕ್ಕೆ ಇಡಬೇಕಾಗುತ್ತದೆ, ಆದರೆ ದೊಡ್ಡ ಕೈಗಾರಿಕೋದ್ಯಮಿಗಳು ಬ್ಯಾಂಕ್‌ಗಳನ್ನು ಲೂಟಿ ಮಾಡಿ ಓಡಿಹೋದರು. ರಸ್ತೆಯಲ್ಲಿ ಯಾರನ್ನಾದರೂ ಕೇಳಿ, ಈ ಬಾರಿ ಎಸ್ಪಿ ಬರುತ್ತದೆ ಎಂದು ಎಲ್ಲರೂ ಹೇಳುತ್ತಾರೆ'' ಎಂದು ಬಿಜೆಪಿ ವಿರುದ್ಧ ಹರಿಹಾಯುತ್ತಾ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಪ್ರದೇಶದಲ್ಲಿ ಈಗಾಗಲೇ ಮೂರನೇ ಹಂತದ ಮತದಾನ ಮುಗಿದಿದ್ದು, ಫೆಬ್ರವರಿ 23ರಂದು ನಾಲ್ಕನೇ ಹಂತದ ಮತದಾನ ನಡೆಯಲಿದೆ. ಈ ನಡುವೆ ಐದನೇ ಹಂತದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ 685 ಅಭ್ಯರ್ಥಿಗಳ ಪೈಕಿ 185 ಮಂದಿ ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. 141 (21%) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳುತ್ತದೆ.
ಪ್ರಮುಖ ಪಕ್ಷಗಳ ಪೈಕಿ, ಎಸ್‌ಪಿಯಿಂದ 59 ಅಭ್ಯರ್ಥಿಗಳಲ್ಲಿ 42 (71%), ಅಪ್ನಾ ದಳ್ 7 ಅಭ್ಯರ್ಥಿಗಳಲ್ಲಿ 4 (57%), ಬಿಜೆಪಿಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 25 (48%), BSP ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 23 (38%), INC ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 23 (38%) ಮತ್ತು AAP ಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 10 (19%) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಈಗಾಗಲೇ ಉತ್ತರ ಪ್ರದೇಶ ಚುನಾವಣೆಯ ಮೊದಲನೇ ಹಂತ ಫೆಬ್ರವರಿ 10ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು ಪೂರ್ಣಗೊಂಡಿದೆ. ನಾಲ್ಕನೇ ಹಂತ ಫೆಬ್ರವರಿ 23 ರಂದು, 5 ನೇ ಹಂತ ಫೆಬ್ರವರಿ 27 ರಂದು, ಮಾರ್ಚ್ 3 ಮತ್ತು 7 ರಂದು 6 ನೇ ಹಂತ ಮತ್ತು ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದ 403, ಪಂಜಾಬ್‌ನ 117, ಉತ್ತರಾಖಂಡದ 70, ಮಣಿಪುರದ 60 ಮತ್ತು ಗೋವಾದ 40 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.












Click it and Unblock the Notifications