ಮತಎಣಿಕೆ 2 ದಿನ ಇರುವಂತೆ ಇವಿಎಂ ತಂತ್ರ ಕಳುವಾಯಿತೇ: ಡಿಎಂ ಉತ್ತರವೇನು?
ಲಕ್ನೋ, ಮಾರ್ಚ್ 8: ಉತ್ತರ ಪ್ರದೇಶದಲ್ಲಿ ಮತಎಣಿಕೆಗೆ 48 ಗಂಟೆಗಳಷ್ಟೇ ಬಾಕಿ ಇರುವಂತೆ ಇವಿಎಂ ಮತಯಂತ್ರವೇ ಕಳ್ಳತನ ಆಗಿರುವ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ವಿಷಯ ಇದೀಗ ಯುಪಿ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಮತ್ತು ತೀವ್ರತರ ಬೆಳವಣಿಗೆಗಳಿಗೆ ಕಾರಣವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿ ವ್ಯಾಪ್ತಿಯಲ್ಲೇ ಇವಿಎಂ ಕಳ್ಳತನ ಮಾಡಲಾಗಿರುವ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥರು ದೂಷಿಸಿದ್ದಾರೆ. ಒಂದು ಕಡೆಯಲ್ಲಿ ಅಖಿಲೇಶ್ ಯಾದವ್ ಆರೋಪ ಮಾಡುತ್ತಿದ್ದಂತೆ ಇನ್ನೊಂದು ದಿಕ್ಕಿನಲ್ಲಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇವಿಎಂ ಕಳ್ಳತನ ಆರೋಪ ಹುಟ್ಟಿಕೊಳ್ಳಲು ಕಾರಣವೇನು?, ಅಖಿಲೇಶ್ ಯಾದವ್ ಮಾಡಿರುವ ಆರೋಪವೇನು?, ವಾರಣಾಸಿ ಜಿಲ್ಲಾಧಿಕಾರಿಗಳು ಈ ಕುರಿತು ನೀಡಿರುವ ಸ್ಪಷ್ಟನೆ ಏನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಅಖಿಲೇಶ್ ಯಾದವ್ ಮಾಡಿರುವ ಆರೋಪ?
ವಾರಣಾಸಿಯಲ್ಲಿ ನಾವು ಒಂದು ಟ್ರಕ್ ಅನ್ನು ಅಡ್ಡಗಟ್ಟಿದ್ದು, ಎರಡು ಟ್ರಕ್‌ಗಳು ತಪ್ಪಿಸಿಕೊಂಡು ಹೋಗಿವೆ. ಯಾವುದೇ ಸಂಶಯಾಸ್ಪದ ಚಟುವಟಿಕೆ ಇಲ್ಲದಿದ್ದರೆ, ಇವಿಎಂ ಹೊಂದಿರುವ ಎರಡು ಟ್ರಕ್‌ಗಳು ಏಕೆ ತಪ್ಪಿಸಿಕೊಂಡು ಹೋಗಬೇಕಿತ್ತು? ಅಭ್ಯರ್ಥಿಗಳ ಒಪ್ಪಿಗೆಯಿಲ್ಲದೆ ನೀವು ಯಾವುದೇ ಇವಿಎಂಗಳನ್ನು ಎಲ್ಲಿಯೂ ತೆಗೆದುಕೊಂಡು ಹೋಗುವಂತಿಲ್ಲ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಕಳೆದ 2017ರಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 5,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 47 ಸ್ಥಾನಗಳನ್ನು ಗೆದ್ದಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಈಗ ಎಕ್ಸಿಟ್ ಪೋಲ್‌ಗಳು "ಬಿಜೆಪಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರವನ್ನು ಹಾಕುತ್ತಿವೆ. ಕಳ್ಳತನದಿಂದ ಯಾವುದೇ ಲೆಕ್ಕಾಚಾರವನ್ನು ತಿರುವು ಮುರುವು ಮಾಡಬಹುದು ಎಂದು ಆರೋಪಿಸಿದ್ದಾರೆ.

ಇವಿಎಂ ಕಳ್ಳತನ ಆರೋಪಕ್ಕೆ ವಾರಣಾಸಿ ಡಿಎಂ ಸ್ಪಷ್ಟನೆ
"ನಾಳೆ ಯುಪಿ ಕಾಲೇಜಿನಲ್ಲಿ ಮತ ಎಣಿಕೆಯಲ್ಲಿ ಭಾಗಿಯಾಗಲಿರುವ ಸದಸ್ಯರಿಗೆ 2ನೇ ಹಂತದ ತರಬೇತಿ ಕಾರ್ಯಕ್ರಮ ನಿಗದಿಯಾಗಿದೆ. ತರಬೇತಿಗಾಗಿ 20 ಇವಿಎಂಗಳನ್ನು ಪಿಕಪ್ ವ್ಯಾನ್‌ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಇದನ್ನು ಕೆಲವರು ನಿಲ್ಲಿಸಿದರು, ಇವಿಎಂ ಸಮೀಕ್ಷೆ ವೇಳೆ ಅವರಲ್ಲಿ ಗೊಂದಲ ಉಂಟಾಗಿತ್ತು. ಬಳಿಕ ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿಕೊಂಡರು. ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರಿಗೆ ಈ ಕುರಿತು ವಿವರಿಸಲು ಪ್ರಯತ್ನಿಸಿದರು. ಆದರೆ ಜನಸಂದಣಿಯಿಂದಾಗಿ ಈಗ ಎಲ್ಲಾ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖ್ಯಸ್ಥರನ್ನು ಕರೆಸಲಾಗಿದೆ. ಅವರ ತೃಪ್ತಿಗಾಗಿ ಇವಿಎಂಗಳನ್ನು ತರಬೇತಿ ಉದ್ದೇಶಕ್ಕಾಗಿ ಮಾತ್ರ ತೆಗೆದುಕೊಳ್ಳಲಾಗಿದೆ," ಎಂದು ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ.

ಇವಿಎಂ ಸುರಕ್ಷತೆ ಬಗ್ಗೆ ವಾರಣಾಸಿ ಜಿಲ್ಲಾಧಿಕಾರಿ ಸ್ಪಷ್ಟನೆ
ಇಲ್ಲಿ ಸ್ಟ್ರಾಂಗ್ ರೂಮ್ ಇದೆ. ಮತದಾನ ಮಾಡಿದ ಇವಿಎಂಗಳನ್ನು ಅಲ್ಲಿ ಇರಿಸಲಾಗಿದ್ದು, ಬ್ಯಾರಿಕೇಡಿಂಗ್ ಮಾಡಲಾಗಿದೆ. ಬ್ಯಾರಿಕೇಡಿಂಗ್ ಅನ್ನು ಉಲ್ಲಂಘಿಸಲು ಯಾವುದೇ ಕಾರಣವಿಲ್ಲ. ಇನ್ನು ತರಬೇತಿಗಾಗಿ ಬಳಸುವ ಇತರ ಇವಿಎಂಗಳಿಗೆ ಬೇರೆ ಸ್ಟ್ರಾಂಗ್ ರೂಮ್‌ಗಳು ಮತ್ತು ಗೋಡೌನ್‌ಗಳಿವೆ. ಈ ಎರಡೂ ಇವಿಎಂಗಳ ಮಧ್ಯೆ ಒಂದಕ್ಕೊಂದು ಸಂಪರ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
"ಈಗಾಗಲೇ ಎಲ್ಲಾ ಅಭ್ಯರ್ಥಿಗಳನ್ನು ಕರೆಯಲಾಗಿದೆ, ಮತದಾನದ ದಿನದಂದು ಬಳಸಿದ ಇವಿಎಂಗಳ ಪಟ್ಟಿಯನ್ನು ಅವರಿಗೆ ಮೇಲ್ ಮಾಡಲಾಗಿದೆ. ಇಂದು ಹಾರ್ಡ್ ಕಾಪಿ ನೀಡಲಾಗುತ್ತಿದೆ. ತರಬೇತಿಗಾಗಿ ಈ 20 ಇವಿಎಂಗಳನ್ನು ಪ್ರತ್ಯೇಕವಾದ ವಾಹನದಲ್ಲಿ ಇರಿಸಲಾಗುತ್ತದೆ. ಸಂಖ್ಯೆಗಳನ್ನು ಹೊಂದಾಣಿಕೆ ಮಾಡಿ ಅಭ್ಯರ್ಥಿಗಳಿಗೆ ತೋರಿಸಲಾಗುತ್ತಿದೆ. ಇವು ಪೋಲ್ ಮಾಡಲಾದ ಇವಿಎಂಗಳಲ್ಲ," ಎಂದು ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

ವಾರಣಾಸಿಯಲ್ಲಿ ಎಸ್‌ಪಿ ಕಾರ್ಯಕರ್ತರಿಂದ ಪ್ರತಿಭಟನೆ
ವಾರಣಾಸಿಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ಕದ್ದುಕೊಂಡು ಹೋಗಲಾಗಿದೆ ಎಂದು ಅಖಿಲೇಶ್ ಯಾದ್ ಆರೋಪಿಸಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಮಂಗಳವಾರ ರಾತ್ರಿ ವೇಳೆಗೆ ವಾರಣಾಸಿಯ ಪಹರಿಯಾ ಮಂಡಿ ಪ್ರದೇಶದ ಸ್ಟ್ರಾಂಗ್ ರೂಮ್ ಎದುರಿನಲ್ಲಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಎಲ್ಲ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರ ಬೀಳಲಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ 202 ಸ್ಥಾನಗಳ ಅಗತ್ಯವಿದ್ದು, ಬಹುಪಾಲು ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಎರಡನೇ ಬಾರಿ ಸರ್ಕಾರ ರಚನೆ ಅವಕಾಶ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.












Click it and Unblock the Notifications