ಉತ್ತರ ಪ್ರದೇಶದಲ್ಲಿ ರಂಗೇರಿದ ವಾರಣಾಸಿಯ ರಣಕಣ: ಏನಿದರ ಕಾರಣ?
ವಾರಣಾಸಿ, ಮಾರ್ಚ್ 5: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಆರು ಹಂತದ ಮತದಾನ ಪೂರ್ಣಗೊಂಡಿದೆ. ಅಂತಿಮ ಹಾಗೂ 7ನೇ ಹಂತದ ಚುನಾವಣೆಗೆ ಇನ್ನೆರೆಡು ದಿನ ಬಾಕಿ ಇರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯು ರಾಜಕೀಯ ಯುದ್ಧಭೂಮಿಯಾಗಿ ಪರಿವರ್ತನೆ ಆಗಿದೆ.
ಶುಕ್ರವಾರ ತಮ್ಮ ಕರ್ಮಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವಂತೆ ಕೋರಿ ಬನಾರಸಿಯಲ್ಲಿ ಭರ್ಜರಿ ರೋಡ್‌ಶೋ ನಡೆಸಿದರು. ಅವರು ತಮ್ಮ ಮೆಗಾ ಶೋ ಅನ್ನು ಮುಗಿಸುತ್ತಿದ್ದಂತೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ತವರು ಕ್ಷೇತ್ರದಲ್ಲೇ ಮೋದಿಯವರ ವರ್ಚಸ್ಸಿಗೆ ಸವಾಲು ಎಸೆದರು.
ಮಾಲ್ದಾಹಿಯಾ ಕ್ರಾಸಿಂಗ್‌ನಲ್ಲಿರುವ ಸರ್ದಾರ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ, ಪ್ರಧಾನಿ ತಮ್ಮ ರೋಡ್‌ಶೋವನ್ನು ಪ್ರಾರಂಭಿಸಿದರು. ಬಿಜೆಪಿ ಬೆಂಬಲಿಗರು ಹೂವಿನ ಮಳೆ ಸುರಿಸಿದ್ದು, ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿದರು.

ಪ್ರಧಾನಿ ನೋಡಲು ಮೇಲ್ಛಾವಣಿಯಲ್ಲಿ ಜನಸ್ತೋಮ
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಮಾಲ್ದಾಹಿಯಾ ಕ್ರಾಸಿಂಗ್‌ನಲ್ಲಿ ತೆರೆದ ಮೇಲ್ಛಾವಣಿಯ ವಾಹನದಲ್ಲಿ ನಿಂತಿದ್ದ ಮೋದಿ, ಸಾರ್ವಜನಿಕರು ಹಾಗೂ ಕಾರ್ಯಕರ್ತರತ್ತ ಕೈ ಬೀಸಿದರು. ಈ ವೇಳೆ ಮೋದಿಯವರನ್ನು ನೋಡುವುದಕ್ಕಾಗಿ ಜನರು ಮನೆಯ ಮೇಲ್ಛಾವಣಿ ಮತ್ತು ಬಾಲ್ಕನಿಗಳಲ್ಲಿ ನೆರೆದಿದ್ದರು.
ಪ್ರಧಾನಮಂತ್ರಿ ಮೋದಿಯವರ ಪ್ರಚಾರ ಯಾತ್ರೆಯು ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ತಲುಪಲು ಸುಮಾರು ಮೂರು ಗಂಟೆ ತೆಗೆದುಕೊಂಡಿತು. ತದನಂತರ ಅಲ್ಲಿ ಹರ್ ಹರ್ ಮಹಾದೇವ್ ಪ್ರತಿಧ್ವನಿಸುವ ಮಂತ್ರಗಳ ನಡುವೆ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಾರಣಾಸಿಯ ಉತ್ತರ, ದಕ್ಷಿಣ ಮತ್ತು ಕಂಟೋನ್ಮೆಂಟ್ ವಿಧಾನಸಭೆ ಭಾಗಗಳ ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ ಪ್ರಧಾನಿ ಮೋದಿ, ಲಂಕಾ ಚೌಕ್‌ನಲ್ಲಿರುವ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ತಮ್ಮ 8-ಕಿಮೀ ರೋಡ್‌ಶೋ ಅನ್ನು ಕೊನೆಗೊಳಿಸಿದರು.

ಪ್ರಧಾನಮಂತ್ರಿಗೆ ಸ್ತೋತ್ರಗಳ ಮೂಲಕ ಅದ್ಧೂರಿ ಸ್ವಾಗತ
ಲಾಹುರಬೀರ್‌ನಲ್ಲಿ ಕೆಲವು ಭಕ್ತರು ಸ್ತೋತ್ರಗಳನ್ನು ಪಠಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು. ಕಬೀರ್ ಚೌರಾದಲ್ಲಿ, ಜನರು ಭಕ್ತಿ ಸಂಗೀತವನ್ನು ನುಡಿಸಿದಂತೆ ನೃತ್ಯ ಮಾಡಿದರು. 2014ರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಇದೇ ಸ್ಥಳದಿಂದ ವಾರಣಾಸಿಯಲ್ಲಿ ಮೋದಿ ತಮ್ಮ ಮೊದಲ ರೋಡ್‌ಶೋ ಆರಂಭಿಸಿದ್ದರು. ಪ್ರಚಾರದ ಕೊನೆಯ ದಿನ ಆಗಿರುವ ಶನಿವಾರವೇ ಪ್ರಧಾನಿಯವರು ತಮ್ಮ ವಾರಣಾಸಿ ಪ್ರವಾಸ ಮುಗಿಸಲಿದ್ದಾರೆ.

ಅಖಿಲೇಶ್ ಯಾದವ್ ಪ್ರಚಾರದಲ್ಲಿ ಅಲ್ಪಸಂಖ್ಯಾತರ ದಂಡು
ಇದೇ ವೇಳೆ ಅಖಿಲೇಶ್ ರಥಯಾತ್ರೆ ಕ್ರಾಸಿಂಗ್ ಮತ್ತು ಗಿರ್‌ಜಾಘರ್ ಕ್ರಾಸಿಂಗ್ ನಡುವೆ ವಾರಣಾಸಿ ಕಂಟೇನ್ಮೆಂಟ್ ಮತ್ತು ದಕ್ಷಿಣ ಕ್ಷೇತ್ರಗಳ ಭಾಗಗಳನ್ನು ಒಳಗೊಂಡ ಪ್ರದೇಶದಲ್ಲಿ 1.5 ಕಿ.ಮೀ ಸಂಚರಿಸಿ ಪ್ರಚಾರ ನಡೆಸಿದರು. 'ಸಮಾಜವಾದಿ ರಥ'ದ ಮೇಲೆ ನಿಂತು, ಯಾದವ್ ರಥಯಾತ್ರೆ ವೃತ್ತದಿಂದ ತಮ್ಮ ರೋಡ್‌ಶೋ ಪ್ರಾರಂಭಿಸಿದರು. ರೋಡ್‌ಶೋದಲ್ಲಿ ಅಪಾರ ಸಂಖ್ಯೆಯ ಜನರು ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದವರು ಭಾಗವಹಿಸಿದ್ದರು.

ಯುಪಿಯಲ್ಲಿ ಅಂತಿಮ ಹಂತದ ಮತದಾನ ಪ್ರಕ್ರಿಯೆ
ವಾರಣಾಸಿ ದಕ್ಷಿಣ ಮತ್ತು ವಾರಣಾಸಿ ಕಂಟೋನ್ಮೆಂಟ್ ಮತ್ತು ಪಕ್ಕದ ಜೌನ್‌ಪುರ್, ಗಾಜಿಪುರ್, ಅಜಮ್‌ಗಢ್, ಭದೋಹಿ ಮತ್ತು ಮೌ ಜಿಲ್ಲೆಗಳಲ್ಲಿ ವಿಧಾನಸಭೆ ಕ್ಷೇತ್ರಗಳಿಗೆ ಮಾರ್ಚ್ 7ರಂದು ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications