ಯುಪಿ ಚುನಾವಣೆ: 7-8 ಹಂತದಲ್ಲಿ, ಮುಂದಿನ ತಿಂಗಳು ಘೋಷಣೆ ಸಾಧ್ಯತೆ
ಲಕ್ನೋ, ಡಿಸೆಂಬರ್ 15: ದೇಶದ ಐದು ರಾಜ್ಯಗಳು ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲೇ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಈ ನಡುವೆ ಭಾರತದ ಚುನಾವಣಾ ಆಯೋಗ ಈ ಚುನಾವಣೆ ನಡೆಯಲು ರಾಜ್ಯಗಳಿಗೆ ಭೇಟಿ ನೀಡುತಲಿದೆ. ಈ ಭೇಟಿಯನ್ನು ನೋಡಿದಾಗ ಶೀಘ್ರದಲ್ಲೇ ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ ಚುನಾವಣೆ ಘೋಷಣೆ ಮಾಡುವ ಸಾಧ್ಯತೆಗಳು ಕಂಡು ಬಂದಿದೆ.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಪಂಜಾಬ್‌ನಲ್ಲಿ ಚುನಾವಣಾ ತಯಾರಿಗಾಗಿ ಭೇಟಿ ನೀಡಿದ್ದಾರೆ. ಆ ಬಳಿಕ ಚುನಾವಣಾ ಆಯೋಗ ತಂಡವು, ಮುಂದಿನ ವಾರದಲ್ಲಿಯೇ ಉತ್ತರ ಪ್ರದೇಶ, ಗೋವಾ ಹಾಗೂ ಉತ್ತರಾಖಂಡಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಚುನಾವಣೆ ನಡೆಸುವ ಪರಿಸ್ಥಿತಿಯ ಬಗ್ಗೆ ಚುನಾವಣಾ ಆಯುಕ್ತರು ಆಯಾ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಸಾಮಾನ್ಯವಾಗಿ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡುವುದಕ್ಕೂ ಮುನ್ನ ಚುನಾವಣಾ ಆಯೋಗ ತಂಡವು ರಾಜ್ಯಗಳಿಗೆ ಭೇಟಿ ನೀಡುತ್ತದೆ. ಮತದಾನ ಪಟ್ಟಿಯನ್ನು ಪರಿಶೀಲಿಸಿ ನವೀಕರಿಸುವುದು, ಕೋವಿಡ್ ಮಾರ್ಗಸೂಚಿಯ ಅನುಸರಣೆ ಮೊದಲಾದ ವಿಚಾರವನ್ನು ಈ ಚುನಾವಣಾ ಆಯೋಗವು ಪರಿಶೀಲನೆ ಮಾಡಲಿದೆ. ಇನ್ನು ಆಯೋಗವು ಭೇಟಿ ನೀಡುವ ಸಂದರ್ಭದಲ್ಲಿ ವಿವಿಧ ಪಕ್ಷಗಳ ಚುನಾವಣಾ ಪ್ರತಿನಿಧಿಗಳನ್ನೂ ಭೇಟಿ ಮಾಡಬಹುದು.

ಇನ್ನು ಈ ನಡುವೆ ಮುಂದಿನ ತಿಂಗಳು ಚುನಾವಣಾ ಆಯೋಗವು ಉತ್ತರ ಪ್ರದೇಶ ಚುನಾವಣಾ ಘೋಷಣೆಯನ್ನು ಮಾಡುವ ಸಾಧ್ಯತೆ ಇದೆ ಎಂದು ವರದಿಯು ಹೇಳಿದೆ. ಪ್ರಾಯಶಃ ಜನವರಿ ಐದರ ಬಳಿಕ ಉತ್ತರ ಪ್ರದೇಶ ಚುನಾವಣಾ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ನಡೆಸಬಹುದು ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ.
ಉತ್ತರ ಪ್ರದೇಶದಲ್ಲಿ 7-8 ಹಂತಗಳಲ್ಲಿ ಮತದಾನ ಪ್ರಕ್ರಿಯೆ ಸಾಧ್ಯತೆ
"ಈ ವರ್ಷ ಉತ್ತರ ಪ್ರದೇಶದಲ್ಲಿ 7-8 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ," ಎಂದು ಮೂಲಗಳು ಮಾಹಿತಿ ನೀಡಿದೆ. ಇನ್ನು 2017 ರಲ್ಲಿಯೂ ಚುನಾವಣಾ ಆಯೋಗವು ಉತ್ತರ ಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಯನ್ನು ಏಳು ಹಂತಗಳಲ್ಲಿ ನಡೆಸಿತ್ತು. 2017 ರ ಫೆಬ್ರವರಿ 11 ರಿಂದ ಮಾರ್ಚ್ 8 ರವರೆಗೆ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಲಾಗಿತ್ತು.
ಇನ್ನು ಅವಧಿಯ ಲೆಕ್ಕಾಚಾರದಲ್ಲಿ ನೋಡಿದಾಗ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಮೇ ತಿಂಗಳಿಗೆ ಐದು ವರ್ಷಗಳ ಚುನಾವಣಾ ಅವಧಿಯು ಸಂಪೂರ್ಣವಾಗಲಿದೆ. ಹಾಗೆಯೇ ಇನ್ನುಳಿದ ನಾಲ್ಕು ರಾಜ್ಯಗಳಾದ ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡದ ಅಧಿಕಾರ ಅವಧಿಯು ಮುಂದಿನ ವರ್ಷ ಮಾರ್ಚ್‌ನಲ್ಲಿ ಕೊನೆಯಾಗಲಿದೆ.
ದೇಶದಲ್ಲಿ ಅತೀ ಹೆಚ್ಚು ವಿಧಾನ ಸಭೆ ಕ್ಷೇತ್ರವನ್ನು ಉತ್ತರ ಪ್ರದೇಶ ಹೊಂದಿದ್ದು, ಉತ್ತರ ಪ್ರದೇಶವು ಒಟ್ಟು 403 ಸದಸ್ಯರನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿಯು ಭರ್ಜರಿ ಬಹುಮತದಿಂದ ಜಯ ಸಾಧಿಸಿದೆ. ಈ ಬಾರಿ ಮತ್ತೆ ಅಧಿಕಾರವನ್ನು ಏರುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ ಕೂಡಾ ರಾಜ್ಯದಲ್ಲಿ ಭರ್ಜರಿಯಾಗಿ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ವಿರೋಧ ಪಕ್ಷಗಳು ಉತ್ತರ ಪ್ರದೇಶದಲ್ಲಿ ಕೋವಿಡ್ ನಿರ್ವಹಣೆ, ಲಖಿಂಪುರ ಖೇರಿ ಪ್ರಕರಣವನ್ನು ಪ್ರಮುಖವಾಗಿ ಮುನ್ನೆಲೆಗೆ ತಂದು ಪ್ರಚಾರ ಕಾರ್ಯ ನಡೆಸುವ ಸಾಧ್ಯತೆ ಇದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications