ಉತ್ತರ ಪ್ರದೇಶ : ಲಂಚಾವತಾರ, 3 ಸಚಿವರ ಆಪ್ತ ಸಹಾಯಕರ ಬಂಧನ
ಲಕ್ನೋ, ಜನವರಿ 06 : ಕರ್ನಾಟಕದ ವಿಧಾನಸೌಧದ ಆವರಣದಲ್ಲಿ 25 ಲಕ್ಷ ಹಣ ಪತ್ತೆಯಾಗಿತ್ತು. ಇದೇ ಮಾದರಿಯ ಪ್ರಕರಣ ಉತ್ತರ ಪ್ರದೇಶದಲ್ಲಿಯೂ ಈಗ ಬೆಳಕಿಗೆ ಬಂದಿದೆ. ಎಸ್‌ಐಟಿ ಪೊಲೀಸರು ಸಚಿವರ ಮೂವರು ಆಪ್ತ ಸಹಾಯಕರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ವಿಧಾನಸೌಧದಲ್ಲಿ ಲಂಚ ಪಡೆದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಲಂಚ ಪಡೆಯುವ ದೃಶ್ಯಗಳು ಖಾಸಗಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಗಣಿಗಾರಿಕೆ ಮತ್ತು ಅಬಕಾರಿ ಸಚಿವೆ ಅರ್ಚನಾ ಪಾಂಡೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಓಂ ಪ್ರಕಾಶ್ ರಾಜ್‌ಬರ್ ಹಾಗೂ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರ ಆಪ್ತ ಸಹಾಯಕರು.

ಆರೋಪಿಗಳು ಗಣಿಗಾರಿಕೆ ಹಾಗೂ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ 40 ಲಕ್ಷ ರೂ. ಲಂಚ ಪಡೆಯುತ್ತಿದ್ದ ದೃಶ್ಯಗಳನ್ನು ಖಾಸಗಿ ಸುದ್ದಿ ಸಂಸ್ಥೆ ಪ್ರಸಾರ ಮಾಡಿತ್ತು. ಈ ವರದಿ ಬಳಿಕ ಮೂವರನ್ನು ಎಸ್‌ಐಟಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.
ಕುಟುಕು ಕಾರ್ಯಾಚರಣೆ ವರದಿ ಪ್ರಸಾರ ವಾದ ತಕ್ಷಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್‌ಐಟಿ ಹೆಚ್ಚುವರಿ ನಿರ್ದೇಶಕ ರಾಜೀವ್ ಕೃಷ್ಣನ್ ಜೊತೆ ಸಭೆ ನಡೆಸಿದ್ದರು. ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡಿದ್ದರು.
'ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೂವರನ್ನು ಅಮಾನತು ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.












Click it and Unblock the Notifications